ಗುರುಗ್ರಹದ ಯುರೋಪಾದಲ್ಲಿ ನೀರಿನ ಆವಿ ಇರುವುದನ್ನು ಖಚಿತಪಡಿಸಿದ ನಾಸಾ

ನಾಸಾದ ವಿಜ್ಞಾನಿಗಳು ಯುರೋಪಾ ಮೇಲ್ಮೈ ನಲ್ಲಿ ಮೊದಲ ಬಾರಿಗೆ ನೀರಿನ ಆವಿ ಇರುವುದನ್ನು ಪತ್ತೆ ಮಾಡಿದ್ದಾರೆ, ಇದು ಗುರುಗ್ರಹದ ನೈಸರ್ಗಿಕ ಉಪಗ್ರಹವಾದ ಯುರೋಪಾದ ಮೇಲ್ಮೈ ಅಲ್ಲಿ-ದಪ್ಪದ ಮಂಜುಗಡ್ಡೆಯ ಕೆಳಗೆ ನೀರು ರೂಪುಗೊಳ್ಳುವ ಕಲ್ಪನೆಯನ್ನು ಬೆಂಬಲಿಸುತ್ತದೆ.

ಗುರುಗ್ರಹದ ಯುರೋಪಾದಲ್ಲಿ ನೀರಿನ ಆವಿ ಇರುವುದನ್ನು ಖಚಿತಪಡಿಸಿದ ನಾಸಾ

Friday November 22, 2019,

3 min Read

ಯುರೋಪಾ


ವಾಶಿಂಗ್ಟನ್:‌ ನೇಚರ್ ಅಸ್ಟ್ರೋನೋಮಿ ಜರ್ನಲ್ ನಲ್ಲಿ ಪ್ರಕಟವಾದ ಈ ಅಧ್ಯಯನವು ಯು ಎ ಎಸ್ ನ ಹವಾಯಿಯಲ್ಲಿರುವ ಡಬ್ಲ್ಯೂ. ಎಂ. ಕೆಕ್ ಅಬ್ಸರ್ವೇಟರಿಯಿಂದ ಯುರೋಪಾ ತೀಕ್ಷ್ಣವಾಗಿ ಗಮನಿಸುವ ಮೂಲಕ ನೀರಿನ ಆವಿಯನ್ನು ಪತ್ತೆಮಾಡಿದೆ ಎಂದು ತಿಳಿಸಿದೆ.


ಹೊರಗಿನ ಸೌರಮಂಡಲದ ಕಾರ್ಯಾಚರಣೆಗಳು ಯುರೋಪಾ ಬಗ್ಗೆ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿವೆ, ಇದು ನಾಸಾದ ಜೀವರಾಶಿಯ ಹುಡುಕಾಟದಲ್ಲಿ ಹೆಚ್ಚಿನ ಆದ್ಯತೆಯ ತನಿಖೆಯಾಗಿದೆ.


ಈ ಅಧ್ಯಯನದಿಂದ ಯುರೋಪಾವು ಜೀವರಾಶಿಗೆ ಬೇಕಾದ ಎಲ್ಲಾ ಪದಾರ್ಥಗಳನ್ನು ಹೊಂದಿರಬಹುದು ಎಂದು ನಾಸಾದ ಗೊಡ್ಡಾರ್ಡ್ ಬಾಹ್ಯಾಕಾಶ ಹಾರಾಟ ಕೇಂದ್ರದ ಸಂಶೋಧಕರು ಹೇಳಿದ್ದಾರೆ.


ಜೀವನಾವಶ್ಯಕ ಪದಾರ್ಥಗಳಲ್ಲಿ ಒಂದಾದ ದ್ರವ ನೀರು ಯುರೋಪಾದ ಹಿಮಾವೃತ ಮೇಲ್ಮೈಯಲ್ಲಿದೆ ಮತ್ತು ಕೆಲವೊಮ್ಮೆ ಇದು ಬೃಹತ್ ಬುಗ್ಗೆಗಳಿಂದ ಬಾಹ್ಯಾಕಾಶಕ್ಕೆ ಚಿಮ್ಮಬಹುದು ಎಂಬುದಕ್ಕೆ ವಿಜ್ಞಾನಿಗಳಲ್ಲಿ ಪುರಾವೆಗಳಿವೆ.


ಆದಾಗ್ಯೂ, ನೀರಿನ ಅಣುವನ್ನು ನೇರವಾಗಿ ಅಳೆಯುವ ಮೂಲಕ ಈ ಪ್ಲುಮ್‌ಗಳಲ್ಲಿ ನೀರಿನ ಇರುವಿಕೆಯನ್ನು ಯಾರೂ ದೃಢೀಕರಿಸಲು ಸಾಧ್ಯವಾಗಿಲ್ಲ ಎಂದು ನಾಸಾ ಹೇಳಿಕೆಯಲ್ಲಿ ತಿಳಿಸಿದೆ.


ಯುರೋಪಾದ ಮೇಲೆ ನೀರಿನ ಆವಿ ಇದೆ ಎಂಬ ಸಂಶೋಧನೆಯು ವಿಜ್ಞಾನಿಗಳಿಗೆ ಉಪಗ್ರಹದ ಆಂತರಿಕ ಕಾರ್ಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಯು ಎ ಎಸ್ ನ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.




ಉದಾಹರಣೆಗೆ ವಿಜ್ಞಾನಿಗಳು ದೃಢವಾಗಿ ನಂಬಿರುವ ಸಂಗತಿಯಾದ ಭೂಮಿಯ ಸಮುದ್ರಕ್ಕಿಂತ ಎರಡು ಪಟ್ಟು ದೊಡ್ಡದಾದ ದ್ರವರೂಪದ ನೀರಿನ ಸಮುದ್ರವು ಮೈಲಿಗಟ್ಟಲೆ ದಪ್ಪವಾದ ಹಿಮಚ್ಚಾದಿತ ಯುರೋಪಾದ ಒಡಲೊಳಗೆ ಇದೆ ಎಂಬುದಕ್ಕೆ ನೀರಿನ ಆವಿಯ ಅನ್ವೇಷಣೆ ಪುಷ್ಠಿ ನೀಡುತ್ತದೆ ಎಂದು ನಾಸಾ ಹೇಳಿದೆ.


ಯುರೋಪಾದ ಮೇಲ್ಮೈನಿಂದ ತುಸು ಕೆಳಗಿರುವ ಕರಗಿದ ನೀರು-ಮಂಜುಗಡ್ಡೆಯ ಆಳವಿಲ್ಲದ ಜಲಾಶಯಗಳು ಪ್ಲುಮ್‌ಗಳಿಗೆ ಮತ್ತೊಂದು ನೀರಿನ ಮೂಲವಾಗಿರಬಹುದೆಂದು ಕೆಲವು ವಿಜ್ಞಾನಿಗಳು ಶಂಕಿಸಿದ್ದಾರೆ.


ಗುರುಗ್ರಹದ ಬಲವಾದ ವಿಕಿರಣ ಕ್ಷೇತ್ರವು ಯುರೋಪಾದ ಮಂಜುಗಡ್ಡೆಯ ಕವಚದಿಂದ ನೀರಿನ ಕಣಗಳನ್ನು ಹೊರತೆಗೆಯುತ್ತಿರುವ ಸಾಧ್ಯತೆಯೂ ಇದೆ, ಆದರೂ ಇತ್ತೀಚಿನ ತನಿಖೆಯು ನೀರಿನ ಮೂಲವನ್ನು ಗಮನಿಸಿ ಈ ಕಾರ್ಯವಿಧಾನದ ವಿರುದ್ಧ ವಾದಿಸಿತು.


ಅಗತ್ಯವಾದ ರಾಸಾಯನಿಕ ಅಂಶಗಳು (ಇಂಗಾಲ, ಹೈಡ್ರೋಜನ್, ಆಮ್ಲಜನಕ, ಸಾರಜನಕ, ರಂಜಕ ಮತ್ತು ಗಂಧಕ) ಮತ್ತು ಶಕ್ತಿಯ ಮೂಲಗಳು, ಜೀವನಕ್ಕೆ ಬೇಕಾದ ಮೂರು ಅವಶ್ಯಕತೆಗಳಲ್ಲಿ ಎರಡು ಸೌರಮಂಡಲದಲ್ಲಿ ಕಂಡುಬರುತ್ತವೆ. ಆದರೆ ಮೂರನೇಯದಾದ - ದ್ರವ ನೀರು ಭೂಮಿಯನ್ನು ಬಿಟ್ಟು ಬೇರೆಡೆ ಸಿಗುವುದು ತುಂಬಾ ಕಷ್ಟ” ಎಂದು ನೀರು ಪತ್ತೆ ತನಿಖೆಯ ನೇತೃತ್ವ ವಹಿಸಿದ್ದ ನಾಸಾ ಗ್ರಹ ವಿಜ್ಞಾನಿ ಲ್ಯೂಕಾಸ್ ಪಗಾನಿನಿ ಹೇಳಿದರು.


"ವಿಜ್ಞಾನಿಗಳು ಇನ್ನೂ ದ್ರವ ನೀರನ್ನು ನೇರವಾಗಿ ಪತ್ತೆ ಮಾಡಿಲ್ಲವಾದರೂ, ದೊಡ್ಡದೆನನ್ನೋ ಕಂಡುಕೊಂಡಿದ್ದಾರೆ" ಎಂದು ಪಗಾನಿನ್ ಹೇಳಿದರು.


ಒಲಿಂಪಿಕ್ ಗಾತ್ರದ ಈಜುಕೊಳವನ್ನು ನಿಮಿಷಗಳಲ್ಲಿ ತುಂಬುವಷ್ಟು (ಸೆಕೆಂಡಿಗೆ 2,360 ಕಿಲೋ ಗ್ರಾಂಗಳಷ್ಟು) ಯುರೋಪಾದಿಂದ ಬಿಡುಗಡೆಯಾಗುವ ನೀರನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ.


ಭೂಮಿಯಿಂದ ಯುರೋಪಾದಲ್ಲಿ ಇತರ ಅಂಶಗಳನ್ನು ಪತ್ತೆಹಚ್ಚುವ ಸಂಧರ್ಭದಲ್ಲಿ, ವಿಜ್ಞಾನಿಗಳಿಗೆ ನೀರು ಅಪರೂಪವಾಗಿ ಮಾತ್ರ ಕಾಣಿಸಿಕೊಳ್ಳುತ್ತದೆ, ಆದರೆ ಅದು ಭೂಮಿಯಿಂದ ಗುರುತಿಸಬಹುದಾದಷ್ಟು ಪ್ರಮಾಣದಲ್ಲಿರುತ್ತದೆ.


"ನನ್ನ ಮಟ್ಟಿಗೆ, ಈ ಕೆಲಸದ ಕುತೂಹಲಕಾರಿ ಸಂಗತಿಯೆಂದರೆ ಮೊದಲಬಾರಿಗೆ ಯುರೋಪಾದ ಮೇಲಿನ ನೀರಿನ ನೇರ ಪತ್ತೆಹಚ್ಚುವಿಕೆ ಮಾತ್ರವಲ್ಲ, ಆದರೆ ನಮ್ಮ ಪತ್ತೆ ವಿಧಾನದ ಮಿತಿಯೊಳಗಿನ ಕೊರತೆಯೂ ಸಹ" ಎಂದು ಪಗಾನಿನಿ ಹೇಳಿದರು.


2016 ಮತ್ತು 2017 ರ ನಡುವಿನ 17 ರಾತ್ರಿಗಳನ್ನು ಅವಲೋಕಿಸಿದಾಗ ಕೇವಲ ಒಂದು ಬಾರಿ ನೀರಿನ ಆವಿಯ ಮಸುಕಾದ ಮತ್ತು ವಿಭಿನ್ನವಾದ ಸಂಕೇತವನ್ನು ತಂಡವು ಪತ್ತೆ ಮಾಡಿದೆ.


ಕೆಕ್ ಅಬ್ಸರ್ವೇಟರಿಯಿಂದ ಉಪಗ್ರಹವನ್ನು ನೋಡುವಾಗ, ವಿಜ್ಞಾನಿಗಳು ಯುರೋಪಾದ ಪ್ರಮುಖ ಗೋಳಾರ್ಧದಲ್ಲಿ ಅಥವಾ ಗುರುಗ್ರಹದ ಸುತ್ತಲಿನ ಉಪಗ್ರಹದ ಕಕ್ಷೆಯ ದಿಕ್ಕಿನಲ್ಲಿ ಯಾವಾಗಲೂ ಎದುರಿಸುತ್ತಿರುವ ಉಪಗ್ರಹದ ಬದಿಯಲ್ಲಿ ನೀರಿನ ಅಣುಗಳನ್ನು ನೋಡಿದರು.


ಅವರು ಕೆಕ್ ಅಬ್ಸರ್ವೇಟರಿಯ ನಿಯರ್-ಇನ್ಫ್ರಾರೆಡ್ ಸ್ಪೆಕ್ಟ್ರೋಗ್ರಾಫ್ (ಎನ್ ಐ ಆರ್‌ ಎಸ್‌ ಪಿ ಇ ಸಿ) ಯನ್ನು ಬಳಸಿದರು, ಇದು ಗ್ರಹಗಳ ವಾತಾವರಣದ ರಾಸಾಯನಿಕ ಸಂಯೋಜನೆಯನ್ನು ಅವರು ಹೊರಸೂಸುವ ಅಥವಾ ಹೀರಿಕೊಳ್ಳುವ ಅತಿಗೆಂಪು ಬೆಳಕಿನ ಮೂಲಕ ಅಳೆಯುತ್ತದೆ.


ನೀರಿನಂತಹ ಅಣುಗಳು ಸೌರ ವಿಕಿರಣದೊಂದಿಗೆ ಸಂವಹನ ನಡೆಸುವಾಗ ಅತಿಗೆಂಪು ಬೆಳಕಿನ ನಿರ್ದಿಷ್ಟ ಆವರ್ತನಗಳನ್ನು ಪ್ರತಿಬಿಂಬಿಸುತ್ತವೆ.

"ಯುರೋಪಾದಲ್ಲಿನ ನೀರಿನ ಆವಿಯ ಮೊದಲ ನೇರ ಗುರುತಿಸುವಿಕೆಯು ಪರಮಾಣು ಪ್ರಭೇದಗಳ ನಮ್ಮ ಮೂಲ ಪತ್ತೆಹಚ್ಚುವಿಕೆಯನ್ನು ಧೃಡೀಕರಿಸುತ್ತದೆ ಮತ್ತು ಇದು ಈ ಹಿಮಾವೃತ ಜಗತ್ತಿನಲ್ಲಿ ದೊಡ್ಡ ಪ್ಲುಮ್‌ಗಳ ಸ್ಪಷ್ಟ ವಿರಳತೆಯನ್ನು ಎತ್ತಿ ತೋರಿಸುತ್ತದೆ" ಎಂದು ಕೆಟಿಎಚ್ ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಖಗೋಳ ವಿಜ್ಞಾನಿ ಮತ್ತು ಭೌತಶಾಸ್ತ್ರಜ್ಞ ಸ್ವೀಡನ್ ನ ಸಂಶೋಧನೆಯ ಸಹ ಲೇಖಕ ಲೊರೆನ್ಜ್ ರಾತ್ ಹೇಳಿದ್ದಾರೆ.