ಕ್ಯಾನ್ಸರ್ ನಿಂದ ಬಳಲುತ್ತಿರುವ ಮಕ್ಕಳ ಮುಖದಲ್ಲಿ ನಗು ತರಲು ತನ್ನ ಕೆಲಸವನ್ನೇ ಬಿಟ್ಟ ನೌಕಾಧಿಕಾರಿ

17 ವರ್ಷಗಳ ಕಾಲ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ ನಂತರ, ಕ್ಯಾನ್ಸರ್ ನಿಂದ ಬಳಲುತ್ತಿರುವ ಮಕ್ಕಳಲ್ಲಿ ಸಂತೋಷವನ್ನು ತರುವ ಏಕೈಕ ಉದ್ದೇಶದಿಂದ ಪ್ರವೀಣ್ ತುಲ್ಪುಲೆ ತಮ್ಮ ಕೆಲಸವನ್ನು ತ್ಯಜಿಸಿದರು.

2nd Dec 2019
  • +0
Share on
close
  • +0
Share on
close
Share on
close

ವರ್ಣರಂಜಿತ ಬಟ್ಟೆಗಳು, ವಿಚಿತ್ರ ಪಾದರಕ್ಷೆಗಳು ಮತ್ತು ಕೆಂಪು ಬಣ್ಣದ ಮೂಗಿನಿಂದ ಸಜ್ಜಿತವಾಗುವ 58 ವರ್ಷದ ಪ್ರವೀಣ್ ತುಲ್ಪುಲೆ ಕಳೆದ 17 ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಕ್ಕಳನ್ನು ನಗಿಸಲು ಆಸ್ಪತ್ರೆಗಳಿಗೆ ಹೋಗುತ್ತಿದ್ದಾರೆ. ಹಾಸ್ಯ ಮತ್ತು ಮ್ಯಾಜಿಕ್ ತಂತ್ರಗಳ ಸರಮಾಲೆಯೊಂದಿಗೆ ತೆರಳುವ ಅವರು, ಪ್ರತಿ ಪ್ರದರ್ಶನದಲ್ಲಿ ಸುಮಾರು 60 ನಿಮಿಷಗಳ ಕಾಲ ತಮ್ಮ ಪ್ರೇಕ್ಷಕರನ್ನು ರಂಜಿಸುತ್ತಾರೆ.


ಪ್ರವೀಣ್ ಅವರು ಅನಾರೋಗ್ಯದಿಂದ ಬಳಲುತ್ತಿರುವ ಮಗುವನ್ನು ಸಂತೈಸುತ್ತಿರುವುದು.


ರಾಷ್ಟ್ರಪತಿಗಳಿಂದ ಚಿನ್ನದ ಪದಕ ಪಡೆದ ಪ್ರವೀಣ್, ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ (ಕಮ್ಯುನಿಕೇಷನ್ಸ್ ಸ್ಪೆಷಲಿಸ್ಟ್) ಆಗಿ ವರ್ಷಗಳ ಕಾಲ ಸೇವೆ ಸಲ್ಲಿಸಿದರು, ಈ ಅವಧಿಯಲ್ಲಿ ಅವರು ನೌಕಾ ಅಕಾಡೆಮಿಯಲ್ಲಿ ಬೋಧಕರಾಗಿರುವುದರಿಂದ ಹಿಡಿದು ಐಎನ್‌ಎಸ್‌ ವಿರಾಟ್ ನಲ್ಲಿರುವ ಎಲೆಕ್ಟ್ರಾನಿಕ್ ವಾರ್ ಫೇರ್ ಆಫೀಸರ್ ವರೆಗೆ ವಿವಿಧ ಸವಾಲಿನ ಕೆಲಸಗಳನ್ನು ನಿರ್ವಹಿಸಿದರು.


ನಂತರ, ಜನರನ್ನು ಸಂತೋಷಪಡಿಸುವ ಏಕೈಕ ಉದ್ದೇಶದಿಂದ ಅವರು ತಮ್ಮ ವೃತ್ತಿಯನ್ನು ತ್ಯಜಿಸಿದರು. ಪಿಂಟೂ ಎಂದು ಪ್ರೀತಿಯಿಂದ ಕರೆಯಲ್ಪಡುವ ಪ್ರವೀಣ್ ಅವರನ್ನು ಜನ ಅವರ ಜೋಕರ್ ಅವತಾರಕ್ಕಾಗಿ ನೆನಪಿಸಿಕೊಳ್ಳುತ್ತಾರೆ.


ನೌಕಾ ಸೇವೆಯಲ್ಲಿನ ನನ್ನ ಕೆಲಸಕ್ಕೆ ನಾನು ರಾಜೀನಾಮೆ ನೀಡಿದಾಗ, ನನ್ನನ್ನು ಜನರು ಅಪಹಾಸ್ಯ ಮಾಡಿದರು. ನನ್ನ ನಿರ್ಧಾರಕ್ಕೆ ಬಹಳಷ್ಟು ಜನರು ಬೆಂಬಲ ನೀಡಲಿಲ್ಲ. ಆದರೆ ನನ್ನ ಜೀವನದ ಉದ್ದೇಶ ಬೇರೆ ಎಂದು ನನಗೆ ತಿಳಿದಿತ್ತು. ನನ್ನ ಪ್ರವೃತ್ತಿಯನ್ನು ಅನುಸರಿಸಲು ನಾನು ಬಯಸಿದೆ. ನಾನು ಇನ್ನೂ ಮೂರು ವರ್ಷಗಳ ಕಾಲ ಕಮಾಂಡರ್ ಆಗಿ ಕೆಲಸ ಮಾಡಿದ್ದರೆ, ನಾನು ಪಿಂಚಣಿ ಪಡೆಯಲು ಅರ್ಹನಾಗಿದ್ದೆ. ಆದರೆ ಆ ಸಮಯದಲ್ಲಿ, ಜನರ ಮುಖಕ್ಕೆ ನಗು ತರುವುದಕ್ಕಿಂತ ಹೆಚ್ಚೇನೂ ನನಗೆ ಮುಖ್ಯವಾಗಿರಲಿಲ್ಲ” ಎಂದು ಪ್ರವೀಣ್ ತುಲ್ಪುಲೆ ಸೋಷಿಯಲ್ ಸ್ಟೋರಿಗೆ ಹೇಳಿದರು.


ಪ್ರವೀಣ್ ಅವರು ಭಾರತೀಯ ನೌಕಾಪಡೆಯ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿ.


ಪ್ರತಿ ವರ್ಷ, ಭಾರತದಲ್ಲಿ ಸುಮಾರು 50,000 ಮಕ್ಕಳು (0 ರಿಂದ 19 ವರ್ಷದ) ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ ಎಂದು ಭಾರತೀಯ ಕ್ಯಾನ್ಸರ್ ಸೊಸೈಟಿ ತಿಳಿಸಿದೆ. ಈ ಮಕ್ಕಳಿಗೆ ಹೆಚ್ಚಿನ ಕಾಳಜಿ ಮತ್ತು ಬೆಂಬಲ ಬೇಕು. ಅಲ್ಪ ಪ್ರಮಾಣದ ಸಕಾರಾತ್ಮಕ ಶಕ್ತಿಯು ಅವರ ಜೀವನಕ್ಕೆ ಮತ್ತು ಅವರ ಕುಟುಂಬ ಸದಸ್ಯರ ಜೀವನಕ್ಕೆ ಸಹಾಯಮಾಡುತ್ತದೆ ಮತ್ತು ಶಕ್ತಿಯನ್ನು ನೀಡುತ್ತದೆ. ಹಾಗೆಯೇ ಇದನ್ನು ಮಾಡಲು ಪ್ರವೀಣ್ ಉತ್ಸುಕರಾಗಿದ್ದರು.


ಪ್ರವೀಣ್ ಭಾರತದಾದ್ಯಂತದ ಅನಾಥಾಶ್ರಮಗಳು, ಕೊಳೆಗೇರಿಗಳು, ಆಶ್ರಯ ಮನೆಗಳು ಮತ್ತು ಆಸ್ಪತ್ರೆಗಳಲ್ಲಿ ಅತ್ಯಂತ ದುರ್ಬಲ ಮಕ್ಕಳಿಗಾಗಿ ಮನರಂಜನಾ ಕಾರ್ಯಕ್ರಮಗಳನ್ನು ನೀಡಿದ್ದಾರೆ.


ಈ ಸ್ಥಳಗಳಲ್ಲಿ ಸಮಯ ಕಳೆಯುವ ಜನರು ಬಹಳ ನೋವನ್ನು ಅನುಭವಿಸುತ್ತಿರುತ್ತಾರೆ. ಕೆಲವು ನಿಮಿಷಗಳವರೆಗೆ ಅವರು ನೋವನ್ನು ಮರೆತುಹೋಗುವಂತೆ ಮಾಡಲು ನನಗೆ ಸಾಧ್ಯವಾದರೆ, ನಾನು ಯಶಸ್ವಿಯಾಗಿದ್ದೇನೆ ಎಂದರ್ಥ. ಇದರಿಂದ ನನಗೆ ಸಿಗುವ ತೃಪ್ತಿಯನ್ನು ವಿವರಿಸಲಾಗದದು,” ಎಂದು ಅವರು ಹೇಳುತ್ತಾರೆ.


ಮಹತ್ವದ ಘಟ್ಟ


ಸಾರ್ವಜನಿಕ ಪ್ರದರ್ಶನಗಳಲ್ಲಿ ಜಾದೂ ಪ್ರದರ್ಶಿಸುತ್ತಿರುವುದನ್ನು ನೋಡಿದ ಪ್ರವೀಣ್ 14 ವರ್ಷವಿದ್ದಾಗ ಜಾದೂ ಮಾಡಲು ಆರಂಭಿಸಿದರು. ಅವರು ಕಾರ್ಡ್ ತಂತ್ರಗಳನ್ನು ಅಭ್ಯಾಸ ಮಾಡುವ ಮೂಲಕ ಪ್ರಾರಂಭಿಸಿದರು ಮತ್ತು ನಂತರ ಬೇರೆ ವಸ್ತುಗಳನ್ನು ಸಹ ಸೇರಿಸಿದರು. 15 ನೇ ವಯಸ್ಸಿನಲ್ಲಿ, ಪ್ರವೀಣ್ ತಮ್ಮ ಮೊದಲ ಪ್ರದರ್ಶನವನ್ನು ತಮ್ಮ ಕುಟುಂಬದ ಮುಂದೆ ಒಬ್ಬ ವ್ಯಕ್ತಿಗೆ 25 ಪೈಸೆಯಂತೆ ಮನೆಯಲ್ಲಿ ಪ್ರದರ್ಶಿಸಿದರು. ಅಂದಿನಿಂದ, ಜಾದೂ ಮಾಡುವುದು ಅವರ ಜೀವನದ ಒಂದು ಭಾಗವಾಯಿತು.


ಪುಣೆಯ ಸರ್ ಪರಶುರಾಂಭೌ ಕಾಲೇಜಿನಿಂದ ಪದವಿ ಮುಗಿಸಿದ ನಂತರ ಪ್ರವೀಣ್ ಪೂರ್ಣ ಸಮಯದ ಜಾದೂಗಾರನಾಗಲು ಬಯಸಿದರು ಆದರೆ ನಿರ್ಧಾರ ಬೇರೆಯಾಗಿತ್ತು.


ಪ್ರವೀಣ್ ಮಕ್ಕಳಿಗೆ ಜೋಕರ್ ವೇಷ ಧರಿಸಿ ಪ್ರದರ್ಶನವನ್ನು ನೀಡುತ್ತಿರುವುದು.


ಆಗ, ಯಾರೂ ಜಾದೂ ಮಾಡುವುದನ್ನು ಪೂರ್ಣ ಸಮಯದ ವೃತ್ತಿಯಾಗಿ ನೋಡುತ್ತಿರಲಿಲ್ಲ. ಆದ್ದರಿಂದ, ನಾನು ಆಲೋಚನೆಯನ್ನು ಕೈಬಿಟ್ಟು ಅದನ್ನು ಹವ್ಯಾಸವಾಗಿ ಮುಂದುವರಿಸಿದೆ. ನನ್ನ ಸೋದರ ಮಾವ ಸಶಸ್ತ್ರ ಪಡೆಗಳಿಗೆ ಸೇರುವ ಮೂಲಕ ದೇಶದ ಸೇವೆ ಮಾಡಲು ನನ್ನನ್ನು ಪ್ರೇರೇಪಿಸಿದರು ಆದ್ದರಿಂದ, ನಾನು ನೌಕಾಪಡೆಗೆ ಸೇರಿಕೊಂಡೆ” ಎಂದು ಪ್ರವೀಣ್ ನೆನಪಿಸಿಕೊಳ್ಳುತ್ತಾರೆ.


ತಮ್ಮ ನೌಕಾ ಅಧಿಕಾರಾವಧಿಯಲ್ಲಿ ಸಹ, ತಮ್ಮ ಸಹೋದ್ಯೋಗಿಗಳನ್ನು ಜಾದೂ ಮಾಡಿ ಮನರಂಜಿಸುತ್ತಿದ್ದರು.


2000 ನೇ ಇಸವಿಯು ಪ್ರವೀಣ್ ಅವರ ಜೀವನದಲ್ಲಿ ಒಂದು ನಿರ್ಣಾಯಕ ವರ್ಷವಾಯಿತು. ಅವರ ಸ್ನೇಹಿತರೊಬ್ಬರ ಕೋರಿಕೆಯ ಮೇರೆಗೆ, ಅವರು ಮುಂಬೈಯಲ್ಲಿ ಮಕ್ಕಳಿಗೆ ವೇಷ ಧರಿಸಿ ಪ್ರದರ್ಶನ ನೀಡಿದರು. ಆದರೆ, ಅವರು ಆ ಪ್ರದರ್ಶನದ ಸ್ಥಳ ತಲುಪುವವರೆಗೂ ತಮ್ಮ ಪ್ರೇಕ್ಷಕರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂಬುದು ಅವರಿಗೆ ತಿಳಿದಿರಲಿಲ್ಲ.


ಮುಂಬೈನ ಸೇಂಟ್ ಜೂಡ್ ಹೋಮ್ ಫಾರ್ ಚಿಲ್ಡ್ರನ್ ನಲ್ಲಿ ಪ್ರದರ್ಶನದ ನಂತರ ಪ್ರವೀಣ್.


ಪ್ರವೀಣ್ ಪ್ರದರ್ಶನ ನೀಡುತ್ತಿರುವಾಗ, ಒಂದು ಪುಟ್ಟ ಹುಡುಗ ಕಾರ್ಯಕ್ರಮದ ಅಂತ್ಯದವರೆಗೂ ಅವರೊಂದಿಗೆ ಆಟವಾಡುತ್ತಲೇ ಇದ್ದ. ಕೆಲವು ದಿನಗಳ ನಂತರ, ಪತ್ರಿಕೆಯಲ್ಲಿ ಪುಟ್ಟ ಹುಡುಗನೊಂದಿಗಿನ ತಮ್ಮ ಫೋಟೋವನ್ನು ಕಂಡು ಪ್ರವೀಣ್ ಆಶ್ಚರ್ಯಚಕಿತರಾದರು. ಆದರೆ ಆ ಹುಡುಗ ಬದುಕುಳಿಯಲಿಲ್ಲ ಎಂದು ಪ್ರವೀಣ್ ಸ್ನೇಹಿತ ಅವರಿಗೆ ನಂತರ ತಿಳಿಸಿದರು.


ನಾನು ಇದರಿಂದ ಸಾಕಷ್ಟು ಖಿನ್ನತೆಗೆ ಒಳಗಾಗಿದ್ದೆ, ಆದರೆ ಆ ಹುಡುಗನ ಕೊನೆಯ ಆಶಯಗಳಲ್ಲಿ ಒಂದು ಜೋಕರ್ ನನ್ನು ಭೇಟಿಯಾಗುವುದು ಎಂದು ನಾನು ತಿಳಿದಾಗ ಬಹಳ ಸಮಾಧಾನವಾಯಿತು. ನಾನು ಅವನ ಕೊನೆಯ ಆಸೆಯನ್ನು ಪೂರೈಸಿದೆ ಎಂದು ನನಗೆ ಸಂತೋಷವಾಯಿತು. ಆ ದಿನದಿಂದ, ಜನರಲ್ಲಿ ಸಂತೋಷವನ್ನು ಹರಡುವುದು ನನ್ನ ಜೀವನದ ಧ್ಯೇಯವಾಗಿದೆ. ನಂತರ ಆಸ್ಪತ್ರೆಗಳು, ಅನಾಥಾಶ್ರಮಗಳು ಮತ್ತು ವೃದ್ಧಾಶ್ರಮಗಳಲ್ಲಿ ನಾನು ಉಚಿತವಾಗಿ ಪ್ರದರ್ಶನ ನೀಡಲು ಪ್ರಾರಂಭಿಸಿದೆ” ಎಂದು ಪ್ರವೀಣ್ ಹೇಳುತ್ತಾರೆ.


ಜನರಲ್ಲಿ ಸಂತೋಷ ಹರಡುವ ಸಲುವಾಗಿ ಜೋಕರ್ ವೇಷ


ಪ್ರವೀಣ್ ಅವರು ಹೆಚ್ಚಿನ ಪ್ರದರ್ಶನಗಳನ್ನು ಸಂಪೂರ್ಣ ಉಚಿತವಾಗಿ ನೀಡುತ್ತಾರೆ. ಕಾರ್ಪೊರೇಟ್ ಪ್ರದರ್ಶನಗಳು ಮತ್ತು ಕಾರ್ಯಾಗಾರಗಳಂತಹ ವಾಣಿಜ್ಯ ಕಾರ್ಯಕ್ರಮಗಳಿಂದ ಅವರು ತಮ್ಮ ಜೀವನೋಪಾಯಕ್ಕಾಗಿ ಹಣವನ್ನು ಸಂಪಾದಿಸುತ್ತಾರೆ. ಆದಾಗ್ಯೂ, ಟಾಯ್‌ಬ್ಯಾಂಕ್, ಸೇಫ್‌ಕಿಡ್ಸ್, ಆಕ್ಸೆಸ್ ಲೈಫ್ ಅಸಿಸ್ಟೆನ್ಸ್ ಫೌಂಡೇಶನ್, ಬಿಎಂಸಿ ಶಾಲೆಗಳು ಮತ್ತು ಅಂಗನವಾಡಿಗಳು, ಮದರ್ ತೆರೇಸಾ ಅವರ ಜೀವನ್ ಜ್ಯೋತಿ ಹೋಮ್, ಶ್ರೀ ಸಾಯಿಬಾಬಾ ಫೌಂಡೇಶನ್ ಮಕ್ಕಳ ಆಸ್ಪತ್ರೆ, ವಾಡಿಯಾ ಆಸ್ಪತ್ರೆ ಸೇರಿದಂತೆ ಎನ್‌ಜಿಒಗಳು, ಆಸ್ಪತ್ರೆಗಳು, ಶಾಲೆಗಳು ಮತ್ತು ಆಶ್ರಯ ಮನೆಗಳಿಗಾಗಿ ಅವರು ತಮ್ಮ ಬಹುಪಾಲು ಪ್ರದರ್ಶನವನ್ನು ನೀಡುತ್ತಾರೆ.


ಅವರ ಜೋಕರ್ ವೇಷದ ಮ್ಯಾಜಿಕ್ ಸಾವಿರಾರು ಜನರಿಗೆ, ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಸಂತೋಷದ ದೊಡ್ಡ ಮೂಲವೆಂದು ಸಾಬೀತಾಗಿದೆ. ಪ್ರವೀಣ್ ಅವರ ಮಗ ಮತ್ತು ಮಗಳು ಸಹ ಅವರ ಕೆಲವು ಪ್ರದರ್ಶನಗಳಿಗೆ ಸಾಕ್ಷಿಯಾಗಿದ್ದಾರೆ ಮತ್ತು ಅವರು ಮಾಡುವ ವಿನೋದವನ್ನು ಆನಂದಿಸುತ್ತಾರೆ.


ಪ್ರವೀಣ್ ಅವರು ಒಂದು ಶಾಲೆಯಲ್ಲಿ ಕೆಲವು ಮಕ್ಕಳೊಂದಿಗೆ ಸಂವಾದ ನಡೆಸುತ್ತಿರುವುದು.


ನಾನು ಮಕ್ಕಳನ್ನು ಭೇಟಿಯಾಗಿ ಶುಭಾಶಯ ಕೋರಿದಾಗ ಅಪಾರವಾದ ಸಂತೋಷವನ್ನು ಪಡೆಯುತ್ತೇನೆ. ನಾನು ಮಕ್ಕಳ ಕ್ಯಾನ್ಸರ್ ವಾರ್ಡ್‌ಗೆ ಪ್ರವೇಶಿಸಿದ ನಂತರ, ಕೆಲವು ಮ್ಯಾಜಿಕ್ ತಂತ್ರಗಳನ್ನು ಮಾಡುವ ಮೂಲಕ, ಜೋಕ್‌ಗಳನ್ನು ಹೇಳುವ ಮೂಲಕ ಮತ್ತು ಆಟಿಕೆಗಳು ಮತ್ತು ಆಕಾಶಬುಟ್ಟಿಗಳನ್ನು ವಿತರಿಸುವ ಮೂಲಕ ಸಕಾರಾತ್ಮಕತೆಯ ಭಾವವನ್ನು ತುಂಬಲು ಪ್ರಯತ್ನಿಸುತ್ತೇನೆ. ಆಸ್ಪತ್ರೆಯ ಆವರಣದಿಂದ ಹೊರಡುವ ಮೊದಲು ಐಸಿಯುನಲ್ಲಿರುವ ಮಕ್ಕಳಿಗೆ ನನ್ನ ಮುಖವನ್ನು ತೋರಿಸುತ್ತೇನೆ” ಎಂದು ಅವರು ಹೇಳುತ್ತಾರೆ.


ಪ್ರವೀಣ್ ಮಕ್ಕಳನ್ನು ನಗಿಸಲು ಮಾತ್ರವಲ್ಲದೆ ಅವರ ಜೀವವನ್ನೂ ಉಳಿಸಲು ಬಯಸುತ್ತಾರೆ. ಕ್ಯಾನ್ಸರ್ ನಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗೆ ಧನಸಹಾಯ ನೀಡಲು ಅವರು ಮಿಲಾಪ್ನಲ್ಲಿ 10 ಲಕ್ಷ ರೂ. ಗಳ ಕ್ರೌಡ್ ಫಂಡಿಂಗ್ ಅಭಿಯಾನವನ್ನು ಪ್ರಾರಂಭಿಸಿದರು.


ಅವರು ತಮ್ಮ ಪ್ರಾಣ ಉಳಿಸಿಕೊಳ್ಳಲು ಹೋರಾಡುತ್ತಿರುವ ಸಮಯ ದಲ್ಲಿ ಅವರು ನಗುವುದನ್ನು ನೋಡುವುದು ಬಹಳ ಅಮುಲ್ಯವಾದದ್ದು. ನನ್ನ ಕೆಲಸವನ್ನು ತ್ಯಜಿಸಿದ್ದು ಎಲ್ಲಕ್ಕಿಂತಲೂ ಯೋಗ್ಯವಾದ ನಿರ್ಧಾರ ಎಂದು ನಾನು ಊಹಿಸುತ್ತೇನೆ” ಎಂದು ಪ್ರವೀಣ್ ಹೇಳುತ್ತಾರೆ.
  • +0
Share on
close
  • +0
Share on
close
Share on
close
Report an issue
Authors

Related Tags

Our Partner Events

Hustle across India