ಓದುಗರ ಗಮನ ಸೆಳೆಯುತ್ತಿದೆ ಅರುಣಾಚಲ ಪ್ರದೇಶದ ರಸ್ತೆಬದಿಯ ಉಚಿತ ಗ್ರಂಥಾಲಯ

ಗ್ರಂಥಾಲಯ 10 ವರ್ಷದ ಕೆಳಗಿನ ಚಿಕ್ಕಮಕ್ಕಳನ್ನು ಮತ್ತು ಕೆಲಸ ಮಾಡುವ ಮಹಿಳೆಯರನ್ನು ಆಕರ್ಷಿಸುತ್ತಿದ್ದು, ವಿವಿಧ ವಿಷಯಗಳ ಬಗೆಗಿನ 80 ಪುಸ್ತಕಗಳು ಅಲ್ಲಿವೆ.

ಓದುಗರ ಗಮನ ಸೆಳೆಯುತ್ತಿದೆ ಅರುಣಾಚಲ ಪ್ರದೇಶದ ರಸ್ತೆಬದಿಯ ಉಚಿತ ಗ್ರಂಥಾಲಯ

Wednesday September 16, 2020,

2 min Read

ಕೊರೊನಾ ಸೋಂಕು ಮತ್ತು ಅದರಿಂದ ಜಾರಿಯಾದ ಲಾಕ್‌ಡೌನ್‌ ಹಲವರಿಗೆ ವಿಭಿನ್ನವಾಗಿ ಯೋಚಿಸುವಂತೆ ಮಾಡಿದೆ. ಸಾಂಕ್ರಾಮಿಕದ ನಡುವೆ ತಮ್ಮ ಸಮಯವನ್ನು ಸದುಪಯೋಗ ಮಾಡಿಕೊಂಡ ಹಲವರಿದ್ದಾರೆ. ಈ ಪಟ್ಟಿಗೆ ಸೇರುತ್ತಾರೆ ನ್ಗುರಾಂಗ್ ಮೀನಾ. ಅರುಣಾಚಲ ಪ್ರದೇಶದದ ನಿರ್ಜುಲಿ ಪಟ್ಟಣದವರಾದ ಇವರು ಜನರಲ್ಲಿ ಓದಿನ ಹವ್ಯಾಸವನ್ನು ಬೆಳೆಸಲು ಉಚಿತವಾದ ರಸ್ತೆ ಬದಿ ಗ್ರಂಥಾಲಯವನ್ನು ಸ್ಥಾಪಿಸಿದ್ದಾರೆ.


“ಗ್ರಂಥಾಲಯವನ್ನು ಸ್ತಾಪಿಸಿ ಈಗ 10 ದಿನಗಳಾಗಿದೆ, ಅದಕ್ಕೆ ಓದುಗರಿಂದ ಅದ್ಭುತವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈವರೆಗೂ ತೆರೆದ ಕಪಾಟುಗಳಿಂದ ಯಾವ ಪುಸ್ತಕವು ಕಳುವಾಗಿಲ್ಲ, ಹಾಗೂ ಪುಸ್ತಕ ಕಳುವಾದರೂ ಅದರಿಂದ ಕಳ್ಳನಿಗೆ ಉಪಯೋಗವಾದರೆ ಅದರಿಂದ ನನಗೆ ಖುಷಿಯಾಗುತ್ತದೆ. ಪುಸ್ತಕ ಓದುವುದನ್ನು ಬಿಟ್ಟರೆ ಅದರಿಂದ ಬೇರೆ ಏನಾದರೂ ಉಪಯೋಗವಿದೆಯೆ?,” ಎಂದು ಗ್ರಂಥಾಲಯದ ಸಂಸ್ಥಾಪಕಿ ಮತ್ತು ಸರ್ಕಾರಿ ಶಾಲಾ ಶಿಕ್ಷಕಿ ನ್ಗುರಾಂಗ್ ಮೀನಾ ನಾರ್ಥ್‌ ಈಸ್ಟ್‌ ಟುಡೇಗೆ ಹೇಳಿದರು.


ಕಳೆದ ವರ್ಷ ಮಿಜೊರಾಂನಲ್ಲಿ ಪ್ರಾರಂಭವಾದ ರಸ್ತೆ ಬದಿಯ ಗ್ರಂಥಾಲಯಗಳಿಂದ ನ್ಗುರಾಂಗ್ ಮೀನಾ ಅವರಿಗೆ ಪ್ರೇರಣೆ ಸಿಕ್ಕಿದೆ. ಅವರ ಸ್ನೇಹಿತೆ ದಿವಾಂಗ್‌ ಹೊಸಾಯಿ ಜತೆ ಸೇರಿ ತಮ್ಮ ಊರಿನಲ್ಲೂ ಆ ಥರಹದ ಗ್ರಂಥಾಲಯ ತೆರೆಯುವ ಯೋಚನೆ ಮೂಡಿದೆ.


ಅವರ ದಿವಂಗತ ತಂದೆಯ ನೆನಪಿನಲ್ಲಿ, ಜೆಎನ್‌ಯು ನಲ್ಲಿ ಪಿಎಚ್‌ಡಿ ಪಡೆದಿರುವ ಸೋದರಿ ನ್ಗುರಾಂಗ್ ರೀನಾ ಜತೆಗೂಡಿ 2014 ರಲ್ಲಿ ನ್ಗುರಾಂಗ್ ಲರ್ನಿಂಗ್‌ ಇನ್ಸ್ಟಿಟ್ಯೂಟ್‌(ಎನ್‌ಐಎಲ್‌) ಸ್ಥಾಪಿಸಿದರು. ಕಳೆದ ಆರು ವರ್ಷಗಳಿಂದ ಹಲವು ಕೌಶಲ್ಯ ಬೆಳವಣಿಗೆಯ ತರಬೇತಿ ಕಾರ್ಯಕ್ರಮಗಳಿಂದ ಎನ್‌ಐಎಲ್‌ ಸಾವಿರಾರು ಜನರಿಗೆ ಓದಲು, ಬರೆಯಲು ಕಲಿಸಿ ಘನತೆಯಿಂದ ಬದುಕಲು ಸಹಾಯಮಾಡಿದೆ.


ನ್ಗುರಾಂಗ್ ಮೀನಾ (ಚಿತ್ರಕೃಪೆ: ಲೈಫ್‌ ಬಿಯಾಂಡ್‌ ನಂಬರ್ಸ್)‌


ಕೊರೊನಾ ಸೋಂಕಿನ ನಡುವೆ ತಮ್ಮ ಬಿಡುವಿನ ಸಮಯವನ್ನು ಒಳ್ಳೆಯ ಕಾರ್ಯಕ್ಕೆ ಬಳಸಲು ನಿರ್ಧರಿಸಿದ ಅವರು ಗ್ರಂಥಾಲಯ ಸ್ಥಾಪಿಸಿ, ಅಲ್ಲಿ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲುವ 70-80 ಪುಸ್ತಕಗಳನ್ನಿಟ್ಟಿದ್ದಾರೆ.


ಅವರು ಪುಸ್ತಕ ಕೊಳ್ಳಲು 10,000 ರೂ ಮತ್ತು ಕಪಾಟು ಮಾಡಲು 10,000 ರೂ. ವ್ಯಯಿಸಿದ್ದಾರೆ. ಗ್ರಂಥಾಲಯಕ್ಕೆ ಬರುವ ಮಕ್ಕಳಿಗೆ ಸಿಹಿಯನ್ನು ಇವರು ನೀಡುತ್ತಿದ್ದಾರೆ. 10 ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು ಕೆಲಸ ಮಾಡುವ ಮಹಿಳೆಯರು ಅಲ್ಲಿಗೆ ಜಾಸ್ತಿ ಭೇಟಿ ನೀಡುತ್ತಿದ್ದಾರೆ.


“ನನ್ನ ಕುಟುಂಬದಲ್ಲಿ ಉನ್ನತ ಪದವಿ ಪಡೆದವರಲ್ಲಿ ನಾನೇ ಮೊದಲಿಗಳು. ಗಡಿ ರಾಜ್ಯದಲ್ಲಿ ಬೆಳೆದ ಬುಡಕಟ್ಟು ಹುಡುಗಿಯಾದ ನನಗೆ ಪುಸ್ತಕ ಮತ್ತು ಗ್ರಂಥಾಲಯದ ಸೌಲಭ್ಯ ಹೆಚ್ಚಾಗಿರಲಿಲ್ಲ. ಬರೆಯುವುದು ಮತ್ತು ಓದುವುದು ಪಠ್ಯ ಪುಸ್ತಕಗಳಿಗೆ ಮಾತ್ರ ಸೀಮಿತವಾಗಿತ್ತು. ನಮ್ಮ ರಾಜ್ಯದಲ್ಲಿ ಕೆಲವು ಸರ್ಕಾರಿ ಗ್ರಂಥಾಲಯಗಳಿದ್ದರೂ ನನಗೆ ಮತ್ತು ನನ್ನ ಒಡಹುಟ್ಟಿದವರಿಗೆ ಚಿಕ್ಕಂದಿನಲ್ಲಿ ಅಲ್ಲಿಗೆ ಭೇಟಿ ನೀಡುವ ಅವಕಾಶವೆ ಸಿಗಲಿಲ್ಲ,” ಎಂದು ಮೀನಾ ದಿ ಲಾಜಿಕಲ್‌ ಇಂಡಿಯನ್‌ ಗೆ ಹೇಳಿದರು.


ಜನರ ಮೇಲೆ ಗ್ರಂಥಾಲಯ ಮಾಡುವ ಸಕಾರಾತ್ಮಕ ಪರಿಣಾಮಗಳನ್ನು ಪರಿಗಣಿಸಿ ಹಲವರು ಈ ಉಪಕ್ರಮವನ್ನು ಬೆಂಬಲಿಸಿದ್ದಾರೆ ಮತ್ತು ಹೆಚ್ಚು ಪುಸ್ತಕ ಕೊಳ್ಳಲು ಧನಸಹಾಯ ಮಾಡುತ್ತಿದ್ದಾರೆ.


“ನಾನು ಮಿಜೊರಾಂನಿಂದ ಪ್ರೇರಣೆಗೊಂಡಿದ್ದರು, ಅರುಣಾಚಲ ತುಂಬಾ ಭಿನ್ನವಾಗಿದೆ ಎಂದು ನನಗೆ ಅರಿವಿದೆ. ಇಲ್ಲಿನ ಮಕ್ಕಳಲ್ಲಿ ಬರವಣಿಗೆಯ ಕೌಶಲ್ಯ ಕಡಿಮೆ. 9 ರಿಂದ 12 ನೇ ತರಗತಿ ವಿದ್ಯಾರ್ಥಿಗಳು ಜಾಸ್ತಿ ಓದಿ ತಮ್ಮ ಬರವಣಿಗೆಯನ್ನು ಉತ್ತಮವಾಗಿಸಿಕೊಳ್ಳಬೇಕೆಂಬುದು ನನ್ನ ಬಯಕೆ,” ಎನ್ನುತ್ತಾರೆ ಅವರು.


ಈ ಗ್ರಂಥಾಲಯದಿಂದ ಇತರರು ಪ್ರೇರೆಪಿತರಾಗಿ ಬೇರೆ ಸ್ಥಳಗಳಲ್ಲಿ ಇಂತಹದೆ ಚಟುವಟಿಕೆಗಳನ್ನು ಪ್ರಾರಂಭ ಮಾಡಬೇಕು ಎಂಬ ಆಶಯ ಹೊಂದಿದ್ದಾರೆ ಇವರು.