ಕೇರಳದಲ್ಲಿ ವಲಸೆ ಕಾರ್ಮಿಕರ ಭರವಸೆಯಾಗಿದ್ದಾರೆ ಈ ಮಹಿಳೆ

ವಲಸೆ ಕಾರ್ಮಿಕರಿಗಾಗಿ ಸ್ಥಾಪಿಸಲಾದ ಸಹಾಯವಾಣಿಯಲ್ಲಿ ಕೋವಿಡ್-19 ಬಗ್ಗೆ ಮಾಹಿತಿ ನೀಡಲು ಒಡಿಶಾದ ಸುಪ್ರಿಯಾ ದೇಬ್ನಾಥ್ ಅವರಿಗೆ ರಾಷ್ಟ್ರ ಆರೋಗ್ಯ ಮಿಷನ್ ತರಬೇತಿ ನೀಡಿದೆ.

ಕೇರಳದಲ್ಲಿ ವಲಸೆ ಕಾರ್ಮಿಕರ ಭರವಸೆಯಾಗಿದ್ದಾರೆ ಈ ಮಹಿಳೆ

Thursday April 09, 2020,

2 min Read

ಮಾರ್ಚ್ 24 ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಲಾಕ್ ಡೌನ್ ಘೋಷಿಸಿದಾಗಿನಿಂದಲೂ, ವೈರಸ್ ಮತ್ತು ಲಾಕ್ ಡೌನ್ ಎರಡರ ಪರಿಣಾಮಗಳನ್ನು ಕೇರಳ ಎದುರಿಸಬೇಕಿತ್ತು.


ಸಿವಿಲ್ ಸ್ಟೇಷನ್ನಲ್ಲಿ ವಲಸೆ ಕಾರ್ಮಿಕರಿಗೆ ಅನುಮಾನ ಮತ್ತು ತೊಂದರೆಗಳನ್ನು ಬಗೆಹರಿಸಲು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. ಕೇರಳ ರಾಜ್ಯದ ವಲಸೆ ಕಾರ್ಮಿಕರಿಗೆ ಕೊರೋನಾ ವೈರಸ್‌ಗೆ ಸಂಬಂಧಿಸಿದ ಮಾಹಿತಿಯನ್ನು ನೀಡಲು ಸುಮಾರು 11 ವಲಸೆ ಕಾರ್ಮಿಕರಿಗೆ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ತರಬೇತಿ ನೀಡಿದೆ.


ಅವರಲ್ಲಿ ಒಬ್ಬರು ಸುಪ್ರಿಯಾ ದೇಬ್ನಾಥ್. ಬಂಗಾಳಿ, ಅಸ್ಸಾಮೀಸ್, ಒಡಿಯಾ, ಹಿಂದಿ, ಮತ್ತು ಮಲಯಾಳಂ- ಐದು ಭಾರತೀಯ ಭಾಷೆಗಳಲ್ಲಿ ಅವರು ನಿರರ್ಗಳವಾಗಿ ಮಾತನಾಡುತ್ತಾರೆ ಮತ್ತು ನಿಯಂತ್ರಣ ಕೊಠಡಿಯಲ್ಲಿ ಪ್ರತಿದಿನ ನೂರಾರು ಕರೆಗಳಿಗೆ ಸ್ಪಂದಿಸುತ್ತಾರೆ.


“ವಲಸೆ ಕಾರ್ಮಿಕರು ಕಂಟ್ರೋಲ್ ರೂಂಗೆ ಕರೆ ಮಾಡಿ ತಮ್ಮ ಉದ್ಯೋಗದ ಬಗ್ಗೆ ಮತ್ತು ಅವರು ಮನೆಗೆ ಮರಳಲು ಸಾಧ್ಯವಾಗುತ್ತದೆಯೇ ಎಂಬುದರ ಚಿಂತಿತರಾಗಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ,” ಎಂದು ಸುಪ್ರಿಯಾ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.


ಭಯಭೀತರಾಗಿರುವ ವಲಸೆ ಕಾರ್ಮಿಕರಿಗೆ ತಮ್ಮದೇ ಭಾಷೆಯಲ್ಲಿ ಸಹಾಯ ಸಿಕ್ಕಾಗ ಸಮಾಧಾನದ ನಿಟ್ಟುಸಿರನ್ನು ಬಿಡುತ್ತಾರೆ.


ಸುಪ್ರಿಯಾ ದೇಬ್ನಾಥ್ (ಚಿತ್ರಕೃಪೆ: ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌)



ವಾಸ್ತವವಾಗಿ, ಸುಪ್ರಿಯಾ ಸ್ವಲ್ಪ ದಿನಗಳ ಕಾಲ ಒಡಿಶಾಗೆ ಹಿಂದಿರುಗಬೇಕಾಗಿತ್ತು. ಆದರೆ ಬದಲಾಗಿ ಅವರು ರಾಜ್ಯದಾದ್ಯಂತದ ವಲಸೆ ಕಾರ್ಮಿಕರ ತೊಂದರೆಗಳಿಗೆ ಸ್ಪಂದಿಸುವ ನಿರ್ಧಾರವನ್ನು ತೆಗೆದುಕೊಂಡರು. ಅವರು ಉತ್ತರಿಸಿದ ಹೆಚ್ಚಿನ ಕರೆಗಳಲ್ಲಿ ಜನರು ಸಾಮಾನ್ಯವಾಗಿ ಶಿಬಿರಗಳಲ್ಲಿನ ಆಹಾರ ವಿತರಣೆಯ ಬಗ್ಗೆ ಮತ್ತು ವೈರಸ್‌ನಿಂದ ಸುರಕ್ಷಿತವಾಗಿರಲು ತೆಗೆದುಕೊಳ್ಳಬೇಕಾದ ಇತರ ಕ್ರಮಗಳ ಬಗ್ಗೆ ಕೇಳುತ್ತಾರೆ.


“ಈಗ, ಅವರು ಈ ವಿಷಯದ ಬಗ್ಗೆ ಎಲ್ಲವನ್ನು ತಿಳಿದಿದ್ದಾರೆ ಮತ್ತು ಪ್ರತಿದಿನ ಪರಿಸ್ಥಿತಿಯ ಬಗ್ಗೆ ವಾಟ್ಸಾಪ್ ಸಂದೇಶಗಳ ಮೂಲಕ ನನ್ನನ್ನು ಕೇಳುತ್ತಲೇ ಇರುತ್ತಾರೆ,” ಎಂದು ಅವರು ದಿ ಹಿಂದೂಗೆ ಹೇಳಿದ್ದಾರೆ.


ಐದು ವರ್ಷಗಳ ಹಿಂದೆ ಸುಪ್ರಿಯಾ ಪತಿ ಪ್ರಶಾಂತ್ ಕುಮಾರ್ ಅವರೊಂದಿಗೆ ಕೇರಳಕ್ಕೆ ಬಂದರು. ಅವರಿಬ್ಬರೂ ಒಡಿಶಾದ ಕೇಂದ್ರಪರಾ ಜಿಲ್ಲೆಯವರು. ಅಂತಿಮವಾಗಿ, ಅವರು ಮಲೈದಮತುರುತು ಜಿಎಲ್‌ಪಿ ಶಾಲೆಯಲ್ಲಿ ಶಿಕ್ಷಕರ ಕೆಲಸವನ್ನು ಆರಂಭಿಸಿದರು. ಅಷ್ಟೇ ಅಲ್ಲ, ವಲಸೆ ಮಕ್ಕಳ ಶಿಕ್ಷಣವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ರಾಜ್ಯದ ರೋಶಿನಿ ಯೋಜನೆಯಲ್ಲಿ ಶಿಕ್ಷಣ ಸ್ವಯಂಸೇವಕರ ಪಾತ್ರವನ್ನೂ ಸುಪ್ರಿಯಾ ವಹಿಸಿಕೊಂಡಿದ್ದಾರೆ. ಈಗ ಸುಪ್ರಿಯಾ ಮತ್ತು ಪ್ರಶಾಂತ್ ಅವರಿಗೆ ನಾಲ್ಕು ವರ್ಷದ ಶುಭಸ್ಮಿತಾ ಎಂಬ ಮಗಳಿದ್ದಾರೆ.


ನಾವು ಕೇರಳಕ್ಕೆ ಬಂದಾಗ ನಮ್ಮ ಬಳಿ ಇದ್ದ ಏಕೈಕ ಹತೋಟಿಯೆಂದರೆ ಅಧ್ಯಯನ ಮಾಡುವ ಆಸಕ್ತಿ ಮತ್ತು ಉತ್ತಮ ಜೀವನ ಹೊಂದುವ ಕನಸು ಎಂದು ಸುಪ್ರಿಯಾ ಹೇಳುತ್ತಾರೆ.