75 ವರ್ಷಗಳಿಂದ ಮರದ ಕೆಳಗೆ ಉಚಿತವಾಗಿ ಪಾಠ ಮಾಡುತ್ತಿರುವ ವೃದ್ಧ

ಒಡಿಶಾದ ಜೈಪುರದ ನಂದಾ ಪ್ರಾಸ್ಟಿ ಅವರು ಕಳೆದ 75 ವರ್ಷದಿಂದ 4 ನೇ ತರಗತಿಯವರೆಗೆ ಯಾವುದೇ ಶುಲ್ಕ ಪಡೆಯದೆ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.

75 ವರ್ಷಗಳಿಂದ ಮರದ ಕೆಳಗೆ ಉಚಿತವಾಗಿ ಪಾಠ ಮಾಡುತ್ತಿರುವ ವೃದ್ಧ

Tuesday September 29, 2020,

1 min Read

ಕೊರೊನಾವೈರಸ್‌ ಸಾಂಕ್ರಾಮಿಕದ ರುದ್ರ ನರ್ತನ ಶುರುವಾದಾಗಿನಿಂದಲೂ ಹಲವು ಹಿರಿಯರು ಮಾಸ್ಕ್‌, ಸ್ಯಾನಿಟೈಸರ್‌ ಮತ್ತು ಪಿಪಿಇ ಕಿಟ್‌ಗಳನ್ನು ಬಡವರಿಗೆ ನೀಡುತ್ತಾ ಮಾನವೀಯತೆಯನ್ನು ಮೆರೆದಿದ್ದಾರೆ.


ಹಾಗೆಯೆ ಇಲ್ಲೊಬ್ಬರು ವೃದ್ಧರು ಚಿಕ್ಕ ಮಕ್ಕಳಿಗೆ ಮರದ ಕೆಳಗೆ ಉಚಿತವಾಗಿ ಪಾಠ ಮಾಡುತ್ತಿದ್ದಾರೆ. ಇದು ಲಾಕ್‌ಡೌನ್‌ ಜಾರಿಯಾದ ಮೇಲೆ ಶುರುವಾದದ್ದಲ್ಲ, ಕಳೆದ 75 ವರ್ಷಗಳಿಂದ ಹಲವು ಕಷ್ಟದ ಪರಿಸ್ಥಿತಿಯಲ್ಲಿಯೂ ಅವರ ಈ ಸೇವೆ ನಿರಂತರವಾಗಿ ಸಾಗಿ ಬಂದಿದೆ.


ಈ ಕೆಲಸದ ಹಿಂದಿರುವ ವೃದ್ಧರ ಹೆಸರು ನಂದಾ ಪ್ರಾಸ್ಟಿ, ಬರ್ತಾಂಡಾ ಹಳ್ಳಿಯವರಾದ ಇವರು ಜೈಪುರದಲ್ಲಿ ಮಕ್ಕಳಿಗೆ ಪಾಠ ಮಾಡುತ್ತಾರೆ. 4 ನೇ ತರಗತಿಯವರೆಗೆ ಪಾಠ ಮಾಡುವ ಇವರು ನಂತರ ಮಕ್ಕಳಿಗೆ ಶಾಲೆಗೆ ಸೇರಿಕೊಂಡು ಅಭ್ಯಾಸವನ್ನು ಮುಂದುವರೆಸಬೇಕೆಂದು ಹೇಳುತ್ತಾರೆ. ಸಂಜೆಯ ಹೊತ್ತು ಇವರು ಹಿರಿಯರಿಗೂ ಪಾಠ ಮಾಡುತ್ತಾರೆ.


“ನಾನು ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿರುವಾಗ ನಮ್ಮ ಹಳ್ಳಿಯ ಹಲವು ಅನಕ್ಷರಸ್ತರನ್ನು ನೋಡಿದೆ. ಅವರಿಗೆ ಸಹಿ ಮಾಡಲು ಬರದೆ ಹೆಬ್ಬೆರೆಳು ಒತ್ತುತ್ತಿದ್ದರು. ಸಹಿ ಮಾಡುವುದನ್ನು ಹೇಳಿಕೊಡಲು ಅವರನ್ನು ಕರೆದೆ, ಆದರೆ ಹಲವರು ಆಸಕ್ತಿ ವಹಿಸಿ ಭಗವದ್‌ ಗೀತೆ ಓದಲು ಶುರುಮಾಡಿದರು. ನಾನೀಗ ನನ್ನ ಮೊದಲ ಬ್ಯಾಚ್‌ನ ಮರಿ ಮೊಮ್ಮಕ್ಕಳಿಗೆ ಪಾಠ ಮಾಡುತ್ತಿದ್ದೇನೆ,” ಎಂದು ನಂದಾ ಎಎನ್‌ಐಗೆ ಹೇಳಿದರು.

ನಂದಾ ಪ್ರಾಸ್ಟಿ (ಚಿತ್ರಕೃಪೆ: ಎಎನ್‌ಐ)


ಹಳ್ಳಿಯ ಮುಖ್ಯಸ್ಥರು ಅವರಿಗೆ ಪಾಠ ಮಾಡಲು ಉತ್ತಮ ಸೌಲಭ್ಯ ಒದಗಿಸಲು ಸಿದ್ಧರಿದ್ದರು, ಇವರು ಅದೆಲ್ಲವನ್ನೂ ನಿರಾಕರಿಸಿ ಮರದ ಕೆಳಗೆ ಕೂತು ಪಾಠ ಮಾಡುತ್ತಾರೆ.


“ಕಳೆದ 75 ವರ್ಷಗಳಿಂದ ಇವರು ಪಾಠ ಮಾಡುತ್ತಿದ್ದಾರೆ. ಕಲಿಸುವುದು ಅವರ ಇಷ್ಟದ ಕೆಲಸವಾಗಿರುವುದರಿಂದ ಸರ್ಕಾರದ ಯಾವುದೇ ಸಹಾಯವನ್ನು ಇವರು ಪಡೆದಿಲ್ಲ. ಆದರೆ ಅವರಿಗೆ ನಾವು ಪಾಠ ಮಾಡಲು ಉತ್ತಮ ಸೌಲಭ್ಯವನ್ನು ಒದಗಿಸಬೇಕೆಂದು ತಿರ್ಮಾನಿಸಿದ್ದೇವೆ,” ಎನ್ನುತ್ತಾರೆ ಬರ್ಟಾಂಡಾದ ಮುಖ್ಯಸ್ಥ, ವರದಿ ಹಿಂದೂಸ್ತಾನ್‌ ಟೈಮ್ಸ್‌.


ಹೊರಗೆ ಕೂತು ಪಾಠ ಮಾಡುವುದರಲ್ಲಿ ಹಲವು ತೊಂದರೆಗಳಿದ್ದರೂ ನಂದಾ ಪಾಸ್ಟಿಯವರು ಗಾಳಿ, ಮಳೆ, ಬಿಸಿಲಿಗೆ ಜಗ್ಗದೆ ತಮ್ಮ ಪಾಠವನ್ನು ಮುಂದುವರೆಸಿದ್ದಾರೆ ಎನ್ನುತ್ತಾರೆ ಅವರು.