ಕಸದಿಂದ ಉಸಿರುಗಟ್ಟಿದ್ದ ಸಾಬರಮತಿ ನದಿ ತೀರವನ್ನು ಪುನರುಜ್ಜೀವನಗೊಳಿಸಿದ ಸಾಮಾಜಿಕ ಕಾರ್ಯಕರ್ತ

ಸಾಮಾಜಿಕ ಕಾರ್ಯಕರ್ತರಾದ ಮಾಜಿ ಪತ್ರಕರ್ತ ದಿನೇಶ್ ಕುಮಾರ್ ಗೌತಮ್ ನದಿ ಸ್ವಚ್ಚತಾ ಕಾರ್ಯವನ್ನು ಮುನ್ನಡೆಸಿ ತಮ್ಮ ಕಾರ್ಯಕರ್ತರೊಂದಿಗೆ ಸೇರಿ ಎರಡು ತಿಂಗಳಲ್ಲಿ ಮೂರು ಟನ್ ಕಸವನ್ನು ನದಿ ತಳದಿಂದ ಹೊರತೆಗೆದಿದ್ದಾರೆ.
0 CLAPS
0

ಗಂಗಾ ಹಾಗೂ ಯಮುನಾ ಅಲ್ಲದೆ ಸಾಬರಮತಿ ನದಿಯನ್ನೂ ಸಹ ಅತ್ಯಂತ ಕಲುಷಿತ ನದಿ ಎಂದು ಪರಿಗಣಿಸಲಾಗಿದೆ. ಸರಕಾರವಿನ್ನೂ ಇದನ್ನು ಎದುರಿಸುವ ನಿಟ್ಟಿನಲ್ಲಿ ಸಮಿತಿಗಳನ್ನು ರಚಿಸುವಲ್ಲಿ ನಿರತರಾಗಿರುವಾಗ ಸಾಮಾಜಿಕ ಕಾರ್ಯಕರ್ತ, ಮಾಜಿ ಪತ್ರಕರ್ತ ದಿನೇಶ್ ನದಿ ಸ್ವಚ್ಚತಾ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ.

ಗುಜರಾತಿನ ಅಹಮದಾಬಾದ್ ಹಾಗೂ ಗಾಂಧಿನಗರದ ಮೂಲಕ ಹರಿಯುವ ನದಿ ಸಂಸ್ಕರಿಸದ ನೀರಿನಿಂದ ಹಾಗೂ ವಿಷಕಾರಿ ದ್ರವ ತ್ಯಾಜ್ಯದಿಂದ ಕೂಡಿ ಕಲುಷಿತಗೊಂಡಿದೆ. ನದಿಗೆ ಒದಗಿರುವ ಈ ದುಸ್ಥಿತಿಯನ್ನು ಹಾಗೂ ಅವನತಿಗೆ ಸಾಗುತ್ತಿರುವ ಅದರ ಪರಿಸರ ವ್ಯವಸ್ಥೆಯನ್ನು ಕಂಡು ಗೌತಮ್ ನದಿಯ ಒಂದು ಪಾತ್ರವನ್ನು ಅವರ ದೃಷ್ಟಿ ಟ್ರಸ್ಟ್ ಫೌಂಡೇಷನ್ ಮೂಲಕ 2017 ರಲ್ಲಿ ದತ್ತು ತೆಗೆದುಕೊಂಡರು.

ಸಾಬರಮತಿ ನದಿಯ ಸ್ವಚ್ಚತಾ ಕಾರ್ಯ(ಮೂಲ : ಯೂತ್ ಕಿ ಅವಾಜ್)

2018 ರ ಅಕ್ಟೋಬರ್‌‌ನಲ್ಲಿ ಶುರುವಾದ ನದಿ ಸ್ವಚ್ಚಗೊಳಿಸುವ ಉಪಕ್ರಮದಲ್ಲಿ, ಗೌತಮ್ 1,000 ಸ್ವಯಂಸೇವಕರೊಂದಿಗೆ ಸೇರಿ ಮೂರು ಟನ್‌ಗಳಷ್ಟು ಕಸವನ್ನು ತೆಗೆದು ನದಿಯನ್ನು ಸ್ವಚ್ಚಗೊಳಿಸಿದರು.

ಲೈಫ್ ಬಿಯಾಂಡ್ ನಂಬರ್ಸ್‌ನೊಂದಿಗೆ ಮಾತನಾಡುತ್ತಾ, ಗೌತಮ್,

"ನಾನು ಪ್ರತಿನಿತ್ಯ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ರ ತನಕ ಕಾರ್ಯಕರ್ತರೊಂದಿಗೆ ಕೂಡಿ ಪರಿಸರವನ್ನು ಸಂರಕ್ಷಿಸಿ ಹಾಗೂ ಜನರನ್ನು ತ್ಯಾಜ್ಯ ವಿಲೇವಾರಿ ಮಾಡುವ ಬಗ್ಗೆ ಸಂವೇದನಾಶೀಲರನ್ನಾಗಿಸಲು ಕೆಲಸ ಮಾಡುತ್ತೇನೆ. ನನ್ನ ಹತ್ತು ವರ್ಷದ ಮಗಳು ಸಹ ಈ ಕೆಲಸದಲ್ಲಿ ಭಾಗಿಯಾಗಿದ್ದಾಳೆ,"ಎಂದರು‌.

ಅದರೊಂದಿಗೆ, ಅವರು,

"ನಾವು ಸಬರಮತಿ ನದಿಯ ಮೇಲ್ಭಾಗದ ಪ್ರದೇಶವನ್ನು (ಅವಳಿ ನಗರಗಳಾದ ಗಾಂಧಿನಗರ ಮತ್ತು ಅಹಮದಾಬಾದ್ ನಡುವಿನ ಪ್ರದೇಶ) ಕೇಂದ್ರೀಕರಿಸುತ್ತೇವೆ ಹಾಗೂ ಐದು ಕಿ.ಮೀ ಭಾಗವನ್ನು ಅಳವಡಿಸಿಕೊಂಡಿದ್ದೇವೆ. ತೇಲಿಹೋಗುವ ಕಸವು ಇನ್ನೆಂದೂ ನದಿಯ ಮುಂಭಾಗಕ್ಕೆ ಬರುವುದಿಲ್ಲ. ನಾವು ಕೇವಲ ಎರಡು ತಿಂಗಳಲ್ಲಿ ನದಿಯಿಂದ ಮೂರು ಟನ್‌ಗಳಷ್ಟು ಕಸವನ್ನು ಹೊರ ತೆಗೆದಿದ್ದೇವೆ."

ಸಂಗ್ರಹಿಸಿದ ಕಸ(ಮೂಲ: ದೃಷ್ಟಿ ಟ್ರಸ್ಟ್‌ ‌ಫೌಂಡೇಷನ್)

ಗೌತಮ್‌ ಅವರಿಗೆ ಸ್ಥಳೀಯ ಪೌರಾಡಳಿತದ, ನೀರಾವರಿ ಇಲಾಖೆಯ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಸಾಥ್ ನೀಡಿ ಅವರ ಉಪಕ್ರಮವನ್ನು ಸರಾಗಗೊಳಿಸಿದ್ದಾರೆ. ಈಗ ಜನರು ಒಣ ಹಾಗೂ ಹಸಿ ಕಸವನ್ನು ವಿಂಗಡಿಸುವುದರಿಂದ ಸ್ಥಳೀಯ ಪೌರ ಅಡಳಿತಕ್ಕೆ ಕಸ ತೆಗೆದುಕೊಳ್ಳುವ ಕಾರ್ಯ ಸರಾಗವಾಗುತ್ತದೆ.

ಆದಾಗ್ಯೂ ಗೌತಮ್ ಅವರಿಗೆ ಸ್ವಚ್ಚತಾ ಕಾರ್ಯ ಆರಂಭಿಸುವುದು ಸುಲಭದ ಮಾತಾಗಿರಲಿಲ್ಲ. ಆರಂಭದಲ್ಲಿ ತಮ್ಮ ಕಾರ್ಯಕರ್ತರ ಸೈನ್ಯದೊಂದಿಗೆ ಸ್ಥಳೀಯ ಜನರಿಗೆ ನದಿ ಸ್ವಚ್ಛತೆಯ ಹಾಗೂ ಅದರ ವ್ಯವಸ್ಥೆಯ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಯೂತ್ ಕಿ ಆವಾಝ್‌ನ ಪ್ರಕಾರ, ಗೌತಮ್ ಅಹಮದಾಬಾದ್ ಪೌರ ಆಡಳಿತದೊಂದಿಗೆ ಸೇರಿ ಹಳ್ಳಿಗರಿಗೆ ತ್ಯಾಜ್ಯವನ್ನು ನದಿಗೆ ಎಸೆಯದಂತೆ ಒತ್ತಾಯಿಸುತ್ತಿದ್ದಾರೆ.

ದಿನೇಶ್ ಕುಮಾರ್ ಗೌತಮ್

ಗೌತಮ್ ಸ್ವಚ್ಚತಾ ಕಾರ್ಯ ಕೈಗೊಂಡ ಭಾಗವು ಸಂಪೂರ್ಣವಾಗಿ ಸ್ವಚ್ಚಗೊಂಡಿದ್ದರಿಂದ ಅಲ್ಲಿಯ ಪರಿಸರ ವ್ಯವಸ್ಥೆಯು ಮತ್ತೆ ಹಸಿರಿನಿಂದ ತುಂಬಿಕೊಂಡು ವಲಸೆ ಹಕ್ಕಿಗಳು ಮತ್ತೆ ಭೇಟಿ ನೀಡುತ್ತಿವೆ.

ವಿಸ್ತಾರವಾಗಿ ಹೇಳುತ್ತಾ,

"ನಾವೆಲ್ಲ ಕೂಡಿ ಕೆಲಸಮಾಡಿದರೆ ನದಿಗೆ ಮರುಜೀವ ನೀಡಿ ಅದರ ಮೂಲ‌ ಸ್ಥಿತಿಗೆ ಮರಳಿಸಬಹುದು. ಇದು ಅದನ್ನು ದೊಡ್ಡ ಪ್ರಮಾಣದಲ್ಲಿ ಮಾಡುವ ಸಮಯವಾಗಿದೆ," ಎಂದರು‌

ದೇಶಾದ್ಯಂತ ಜನರು ಗೌತಮ್ ಅವರ ನದಿ ಪುನರುಜ್ಜೀವನ ಕಾರ್ಯವನ್ನು ಶ್ಲಾಘಿಸಿದ್ದಷ್ಟೇ ಅಲ್ಲದೆ, ಸ್ಥಳೀಯ ಪರಿಸರವನ್ನು ಸಂರಕ್ಷಿಸುವ ಸಲುವಾಗಿ ಎರಡು ಲಕ್ಷ ಗಿಡಗಳನ್ನು ನೆಟ್ಟಿದ್ದಕ್ಕೂ ಶ್ಲಾಘನೆ ನೀಡಿದ್ದಾರೆ‌.

ನದಿಗಳನ್ನು ಉಳಿಸುವುದಷ್ಟೇ ಅಲ್ಲದೆ ಗೌತಮ್, ತಮ್ಮ ಎನ್‌ಜಿಒ ಮೂಲಕ ದಂತ ನೈರ್ಮಲ್ಯತೆ ಹಾಗೂ ಬಾಯಿ ಕ್ಯಾನ್ಸರ್ ಬಗ್ಗೆಯೂ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮಗಳನ್ನು ದೇಶಾದ್ಯಂತ ನಡೆಸುತ್ತಿದ್ದಾರೆ.

Latest

Updates from around the world