ಅಂಗಾಂಗ ದಾನದ ಮೂಲಕ 5 ಜೀವಗಳನ್ನು ಉಳಿಸಿದ 20 ತಿಂಗಳ ಹಸುಗೂಸು

ವೈದ್ಯರು ಮಗುವಿನ ಮೆದುಳು ಸ್ಥಗಿತಗೊಂಡಿದೆ ಎಂದು ತಿಳಿಸಿದ ನಂತರ ಪೋಷಕರು ಆ ಮಗುವಿನ ಅಂಗಾಂಗಗಳನ್ನು ದಾನಮಾಡಿ ಇತರರ ಜೀವ ಉಳಿಸಲು ನಿರ್ಧರಿಸಿದರು.

ಅಂಗಾಂಗ ದಾನದ ಮೂಲಕ 5 ಜೀವಗಳನ್ನು ಉಳಿಸಿದ 20 ತಿಂಗಳ ಹಸುಗೂಸು

Tuesday January 19, 2021,

1 min Read

ಜನೇವರಿ 8 ರಂದು 20 ತಿಂಗಳ ಮಗು ಧನಿಷ್ಥಾ ಆಟವಾಡುವಾಗ ಮೊದಲ ಮಹಡಿಯ ಬಾಲ್ಕನಿಯಿಂದ ಕೆಳಗೆ ಬಿದ್ದಳು. ಮಗುವನ್ನು ತಕ್ಷಣವೇ ದೆಹಲಿಯ ಶ್ರೀ ಗಂಗಾರಾಂ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.


ಜನೇವರಿ 11 ರಂದು ಧನಿಷ್ಥಾ ತನ್ನ ಕೊನೆಯುಸಿರೆಳೆದಳು. ಅವಳ ಮೆದುಳು ಸ್ಥಗಿತಗೊಂಡಿದೆ ಎಂದು ವೈದ್ಯರು ತಿಳಿಸಿದರು. ಈ ಘಟನೆಯ ನಂತರ ಅವಳ ಪೋಷಕರು ಆ ಮಗುವಿನ ಅಂಗಾಂಗಗಳನ್ನು ದಾನಮಾಡಿ ಇತರರ ಜೀವ ಉಳಿಸಲು ನಿರ್ಧರಿಸಿದರು.


“ನಾವು ಆಸ್ಪತ್ರೆಯಲ್ಲಿರಬೇಕಾದರೆ ಅಂಗಾಂಗಗಳ ಅವಷ್ಯಕತೆಯಿದ್ದ ಹಲವರನ್ನು ಭೇಟಿಯಾದೆವು. ನಮ್ಮ ಮಗಳು ಈಗ ಬದುಕಿರದಿದ್ದರೂ ಅವಳು ಇನ್ನೊಬ್ಬರಿಗೆ ಜೀವ ನೀಡಿ ಅವರಲ್ಲಿ ಜೀವಿಸುತ್ತಿದ್ದಾಳೆ,” ಎಂದು ಮಗುವಿನ ತಂದೆ ಆಶಿಶ್‌ ಕುಮಾರ್‌ ಇಂಡಿಯಾ ಟುಡೇಗೆ ಹೇಳಿದರು.


ತಮ್ಮ ಮಗಳು ಬದುಕುವುದಿಲ್ಲವೆಂದು ವೈದ್ಯರು ತಿಳಿಸಿದಾಗ ಪೋಷಕರು ಇನ್ನೊಬ್ಬರ ಜೀವ ಉಳಿಸಲು ಅವಳ ಅಂಗಾಂಗಗಳು ಉಪಯೋಗವಾಗುತ್ತವೆಯೆ ಎಂದು ಕೇಳಿದ್ದಾರೆ. ಧನಿಷ್ಥಾಳ ಅಂಗಾಂಗಗಳು ಉತ್ತಮ ಸ್ಥಿತಿಯಲ್ಲಿದ್ದದ್ದರಿಂದ ಅಂಗಾಂಗ ಕಸಿಗೆ ಮುಂದಾದರು.


ಧನಿಷ್ಥಾಳ ಹೃದಯ, ಯಕೃತ್ತು, ಎರಡೂ ಮೂತ್ರಪಿಂಡಗಳು ಮತ್ತು ಎರಡೂ ಕಾರ್ನಿಯಾಗಳನ್ನು ಸರ್‌ ಗಂಗಾ ರಾಮ್‌ ಆಸ್ಪತ್ರೆಯಲ್ಲಿ ತೆಗೆದು 5 ರೋಗಿಗಳಿಗೆ ನೀಡಲಾಯಿತು.

ಚಿತ್ರಕೃಪೆ: ಎಎನ್‌ಐ


ಈ ರೋಗಿಗಳಲ್ಲಿ ಮೂತ್ರಪಿಂಡ ವಯಸ್ಕರರಿಗೆ ಹೋದರೆ ಹೃದಯ ಮತ್ತು ಯಕೃತ್ತು ಇಬ್ಬರು ಮಕ್ಕಳಿಗೆ ಸಿಕ್ಕಿದೆ. ಕಾರ್ನಿಯಾ ಅನ್ನು ಸಂಗ್ರಹಿಸಿ ಇಡಲಾಗಿದೆ.


ಈ ಅಂಗಾಂಗ ದಾನದಿಂದ ಮಗು ಧನಿಷ್ಥಾ ಭಾರತದ ಮೊದಲ ಕಿರಿಯ ಕ್ಯಾಡಾವೆರ್‌ ಡೊನರ್‌ ಆಗಿದ್ದಾಳೆ.

ಅವಳ ಪೋಷಕರ ನಿರ್ಧಾರವನ್ನು ಶ್ಲಾಘಿಸುತ್ತಾ ಸರ್‌ ಗಂಗಾ ರಾಮ್‌ ಆಸ್ಪತ್ರೆಯ ವೈದ್ಯರಾದ ರಾಣಾ ಪ್ರತಿ ವರ್ಷ 5 ಲಕ್ಷ ಭಾರತೀಯರು ಅಂಗಾಂಗಗಳಿಲ್ಲದೆ ಸಾಯುತ್ತಾರೆ. ಈ ಕುಟುಂಬದ ಕೆಲಸ ಹೊಗಳುವಂಥದ್ದು, ಬೇರೆಯವರಿಗೆ ಪ್ರೇರಣೆ ನೀಡುವಂತದ್ದು. ಹತ್ತು ಲಕ್ಷಕ್ಕೆ 0.26 ರಂತೆ ಭಾರತ ಅಂಗಾಂಗ ದಾನದಲ್ಲಿ ತೀರಾ ಹಿಂದುಳಿದಿದೆ. ಸರಾಸರಿಯಾಗಿ ಭಾರತದಲ್ಲಿ ಪ್ರತಿ ವರ್ಷ 5 ಲಕ್ಷ ಜನರು ಅಂಗಾಂಗಗಳ ಕೊರತೆಯಿಂದ ಕೊನೆಯುಸಿರೆಳೆಯುತ್ತಾರೆ,” ಎಂದು ಎಎನ್‌ಐಗೆ ತಿಳಿಸಿದರು.