ವಲಸಿಗ ಕಾರ್ಮಿಕರ ಮಕ್ಕಳ ಜೀವನವನ್ನು ಬದಲಾಯಿಸುತ್ತಿದೆ ಈ ಸಂಸ್ಥೆ

ಅಮರ್‌ ಡೇನಿಯಲ್‌ರವರ ಆನಂದ ಸಾಗರ ಸಂಸ್ಥೆಯು, ಬೆಂಗಳೂರಿನಲ್ಲಿರುವ ವಲಸಿಗ ಕಾರ್ಮಿಕರ ಮಕ್ಕಳ ನೈರ್ಮಲ್ಯದ ವೈಯಕ್ತಿಕ ಕಾಳಜಿ ಮತ್ತು ಶಿಕ್ಷಣದಿಂದ ಹಿಡಿದು ಅವರ ಪ್ರತಿಭೆಯನ್ನು ಗುರುತಿಸುವವರೆಗೂ, ಸರ್ವತೋಮುಖ ಬೆಳವಣಿಗೆಯನ್ನು ರೂಪಿಸುವ ಕೆಲಸ ಮಾಡುತ್ತಿದೆ.

ವಲಸಿಗ ಕಾರ್ಮಿಕರ ಮಕ್ಕಳ ಜೀವನವನ್ನು ಬದಲಾಯಿಸುತ್ತಿದೆ ಈ ಸಂಸ್ಥೆ

Friday July 19, 2019,

2 min Read

ನಗರ ಪ್ರದೇಶಗಳಲ್ಲಿ ವಲಸಿಗ ಕಾರ್ಮಿಕರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಹಣ ಸಂಪಾದನೆಯ ಗುರಿಯೊಂದಿಗೆ ಉದ್ಯೋಗ ಅರಸಿ ಅವರು ತಮ್ಮ ಪಟ್ಟಣ ಮತ್ತು ಹಳ್ಳಿಗಳನ್ನು ಬಿಟ್ಟು ಬಂದಿರುತ್ತಾರೆ. ಆದಾಗ್ಯೂ, ಹಲವು ಸಂದರ್ಭಗಳಲ್ಲಿ ಈ ಕಾರ್ಮಿಕರು ತಮ್ಮ ಮಕ್ಕಳನ್ನು ಕೆಲಸ ಮಾಡುವ ಸ್ಥಳದಲ್ಲಿಯೇ ನಿರ್ಲಕ್ಷ್ಯದಿಂದ ಬಿಟ್ಟಿರುತ್ತಾರೆ, ಒಮ್ಮೊಮ್ಮೆ ಹಿರಿಯ ಮಕ್ಕಳಿಗೆ ಇತರ ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವ ಜವಬ್ದಾರಿಯನ್ನು ಕೊಟ್ಟಿರುತ್ತಾರೆ. ಈ ಕಾರಣದಿಂದಾಗಿ ಅವರು ಶಿಕ್ಷಣ ಮತ್ತು ಇತರ ಕಲಿಕೆಯ ಅವಕಾಶದಿಂದ ವಂಚಿತರಾಗುತ್ತಿದ್ದಾರೆ.


ಇಂತಹ ಹಿಂದುಳಿದ ಮಕ್ಕಳ ಕಲ್ಯಾಣಕ್ಕಾಗಿ ಅಮರ್‌ ಡೇನಿಯಲ್‌ರವರು 2014ರಲ್ಲಿ ಆನಂದ ಸಾಗರ ಸಂಸ್ಥೆಯನ್ನು ಹುಟ್ಟುಹಾಕಿದರು.


ಬೆಂಗಳೂರಿನಲ್ಲಿ ಇಂತಹ ಮಕ್ಕಳ ಕಲ್ಯಾಣಕ್ಕಾಗಿ ಸೂಕ್ತವಾದ ವಾತಾವರಣವನ್ನು ಈ ಸಂಸ್ಥೆಯು ಕಲ್ಪಿಸುತ್ತಿದೆ, ಸಧ್ಯ 16-20 ಮಕ್ಕಳಿಗೆ ಅಗತ್ಯ ಸೌಲಭ್ಯ ಒದಗಿಸುವ ಕೆಲಸ ಮಾಡುತ್ತಿದೆ. ವಲಸಿಗ ಕಾರ್ಮಿಕರ ಮಕ್ಕಳಿಗೆ ಮೂಲಭೂತ ಸೌಕರ್ಯಗಳಾದ ಶೌಚಾಲಯಗಳನ್ನು ಮತ್ತು ಅವರಿಗೆ ಎಟುಕದ ಪೌಷ್ಟಿಕ ಆಹಾರಗಳನ್ನು ಒದಗಿಸುವ ಕೆಲಸ ಮಾಡುತ್ತಿದೆ.


Q

ಆಶ್ರಮದ ಮಕ್ಕಳ ಜತೆ ಅಮರ್‌ ಡೇನಿಯಲ್‌ (ಚಿತ್ರ: ಮಿಲಾಪ್)

ಮಿಲಾಪ್‌ನ ಪ್ರಕಾರ, ಸಂಸ್ಥೆಯು ಈ ಮಕ್ಕಳಿಗೆ ಆರೋಗ್ಯಕರ ಜೀವನಭ್ಯಾಸಗಳನ್ನು, ಅಂದರೆ ಎದ್ದ ಕೂಡಲೇ ಹಲ್ಲುಜ್ಜುವುದು, ಊಟ ಮಾಡುವ ಮೊದಲು ಸೋಪ್‌ನಿಂದ ಕೈ ತೊಳೆದುಕೊಳ್ಳುವುದು, ಶೌಚಾಲಯಗಳನ್ನು ಬಳಸುವಾಗ ಶುಚಿತ್ವವನ್ನು ಕಾಪಾಡಿಕೊಳ್ಳುವುದನ್ನು ಕಲಿಸುತ್ತಿದೆ.


ವೈಯಕ್ತಿಕ ಆರೋಗ್ಯದ ಕುರಿತಾಗಿ ಅಷ್ಟೇ ಅಲ್ಲದೇ, ಅಗತ್ಯವಿದ್ದಾಗ ಇತರರೊಂದಿಗೆ ಹಂಚಿಕೊಳ್ಳುವ ಮತ್ತು ದಯೆ ತೋರುವ ಗುಣದ ಮಹತ್ವದ ಕುರಿತು ಕಲಿಸಲಾಗುತ್ತದೆ. ಅವರಿಗೆ ಓದುವುದು ಮತ್ತು ಬರೆಯುವುದನ್ನೂ ಕಲಿಸಲಾಗುತ್ತದೆ, ಹಾಗೆಯೇ ಆ ಮಕ್ಕಳು ಕನ್ನಡದಲ್ಲಿ ನಿರರ್ಗಳವಾಗಿ ಓದಲು ಮತ್ತು ಬರೆಯಲು ಸಾಧ್ಯವಾಗುವಂತೆ ಮಾಡಲು ಸಂಸ್ಥೆ ಪ್ರಯತ್ನ ಮಾಡುತ್ತಿದೆ.


ಇತರೆಲ್ಲ ಶಾಲೆಗಳಂತೆಯೇ ಅವರಿಗೆ ಹಾಡುವುದು, ನೃತ್ಯ ಮಾಡುವುದು ಮತ್ತು ಕವಿತೆಗಳನ್ನ ಬಾಯಿಪಾಠ ಮಾಡುವುದನ್ನು ಕಲಿಸಲಾಗುತ್ತದೆ. ಅಮರ್‌ರವರು ಹೇಳುವಂತೆ ದೈಹಿಕ ಶಿಕ್ಷಣ ಅತ್ಯಂತ ಮುಖ್ಯವಾದದ್ದು, ಇದಕ್ಕೆಂದೇ ಆಶ್ರಮದಲ್ಲಿ ಆಟದ ಮೈದಾನವಿದ್ದು ಜಂಗಲ್‌ ಜಿಮ್‌, ಮಲ್ಲಕಂಬ, ಹಗ್ಗ ಏರುವುದು ಮತ್ತು ಜಿಗ್ಸಾ ಪಜಲ್‌ಗಳಂತಹ ಸೌಲಭ್ಯಗಳು ಇದರಲ್ಲಿವೆ. ಮೈದಾನವನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ಸಲುವಾಗಿ ಅಮರ್‌ರವರು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ.


ಕ

ಗ್ರಂಥಾಲಯ (ಚಿತ್ರ: ಮಿಲಾಪ್‌)

ಈ ಸಂಸ್ಥೆಯನ್ನು ಸ್ಥಾಪಿಸುವ ಮುನ್ನ ಅಮರ್‌ ಸಾಫ್ಟ್‌ವೇರ್ ಕಂಪೆನಿಯೊಂದನ್ನು ನಡೆಸುತ್ತಿದ್ದರು, ವೈಯಕ್ತಿಕ ಸಮಸ್ಯೆಯಿಂದ ಅದನ್ನು ಮಾರಬೇಕಾಗಿ ಬಂತು, ಅದು ಕೊನೆಯಲ್ಲಿ ಹಿಂದುಳಿದ ಮಕ್ಕಳ ಕಲ್ಯಾಣಕ್ಕಾಗಿ ದುಡಿಯುವತ್ತ ಪ್ರೇರೇಪಿಸಿತು.


ಅಮರ್‌ರವರು ತಮ್ಮ ವ್ಯವಹಾರದಲ್ಲಿ ಸಾಕಷ್ಟು ಯಶಸ್ಸನ್ನು ಕಂಡರಾದರೂ, ಕೆಲವು ದುರದೃಷ್ಟಕರ ಸನ್ನಿವೇಶದಿಂದಾಗಿ ಎಲ್ಲವನ್ನೂ ಕಳೆದುಕೊಂಡು ಅಕ್ಷರಶಃ ನಿರ್ಗತಿಕರಾದರು.


ಇದರಿಂದ ಖಿನ್ನತೆಗೆ ಒಳಗಾದ ಅಮರ್‌ರವರು ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮಾಡಿದ್ದರು. ಕೊನೆಯಲ್ಲಿ ದೇವರ ಮೇಲೆ ಎಲ್ಲ ಭಾರವನ್ನು ಹಾಕಲು ನಿರ್ಧರಿಸಿ ಖಿನ್ನತೆಯಿಂದ ಹೊರಬಂದು, ಹಿಂದುಳಿದ ಮಕ್ಕಳ ಕಲ್ಯಾಣದ ಉದ್ದೇಶದೊಂದಿಗೆ ಆನಂದ ಸಾಗರವನ್ನು ಸ್ಥಾಪಿಸುತ್ತಾರೆ. ಇದರ ಬಗ್ಗೆ ಪ್ರತಿಕ್ರಿಯೆಯನ್ನು ನೀಡುತ್ತಾ, ಅವರು ಹೀಗೆ ಹೇಳುತ್ತಾರೆ

“ನಾನು ಒಂದು ಮಗುವಿನ ಜೀವನವನ್ನು ಸುಧಾರಿಸಿದರೂ ಸಹ ನನ್ನ ಜೀವನದ ಗುರಿಯನ್ನು ತಲುಪಿದಂತಾಗುತ್ತದೆ” ವರದಿಗಾರರು ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌