ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತ ಸ್ಥಳೀಯ ಸಮುದಾಯಗಳಿಗೆ ನೆರವಾಗುತ್ತಿರುವ ಮಹಾರಾಷ್ಟ್ರದ ಸಂಸ್ಥೆ

ಮಹಾರಾಷ್ಟ್ರದ ರಾಯ್ಗಡ್ ಜಿಲ್ಲೆಯಲ್ಲಿರುವ ಕಾಲಿಂಜೆ ಪರಿಸರ ಪ್ರವಾಸೋದ್ಯಮವು ಪರಿಸರ-ಪ್ರವಾಸೋದ್ಯಮ ಉಪಕ್ರಮದಲ್ಲಿ ಸ್ಥಳೀಯ ಸಮುದಾಯಗಳನ್ನು ಸೇರಿಸುವ ಮೂಲಕ ಅವರನ್ನು ಉನ್ನತೀಕರಿಸಲು ಬಯಸಿದೆ.

ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತ ಸ್ಥಳೀಯ ಸಮುದಾಯಗಳಿಗೆ ನೆರವಾಗುತ್ತಿರುವ ಮಹಾರಾಷ್ಟ್ರದ ಸಂಸ್ಥೆ

Thursday February 27, 2020,

2 min Read

ದೇಶಾದ್ಯಂತ ಶೀಘ್ರ ಅಭಿವೃದ್ಧಿ ನಡೆಯುತ್ತಿರುವುದರಿಂದ ನಮ್ಮ ಜೀವವೈವಿಧ್ಯತೆಯ ಮೇಲೆ ಪರಿಣಾಮ ಬೀರಿ ಭಾರಿ ನಷ್ಟವಾಗುತ್ತಿದೆ. ಇದಕ್ಕೆ ಉದಾಹರಣೆಯಂತೆ ಮೆಟ್ರೊ ಶೆಡ್ ನಿರ್ಮಾಣದ ಕಾರಣದಿಂದಾಗಿ ಮುಂಬೈನ ಆರೆಯ್ ಅರಣ್ಯವನ್ನು ಕಡೆಯಲು ಮುಂದಾದದ್ದು ಅಥವಾ ಮಾನವ ಹಸ್ತಕ್ಷೇಪದಿಂದಾಗಿ ಅಮೆಜಾನ್ ಅರಣ್ಯವನ್ನು ಸುಟ್ಟಿದ್ದು ಪರಿಸರಕ್ಕೆ ಎದುರಾಗಲಿರುವ ಹಾನಿಯನ್ನು ಎತ್ತಿತೋರಿಸುವಂತಿದೆ.


ಪರಿಸರ ಮತ್ತು ಪರಿಸರ ವ್ಯವಸ್ಥೆಯನ್ನು ಉಳಿಸುವುದು ವಿಶ್ವದಾದ್ಯಂತದ ನಾಗರಿಕರಿಗೆ ಆದ್ಯತೆಯ ವಿಷಯವಾಗಿದೆ. ಮಹಾರಾಷ್ಟ್ರ ಮೂಲದ ಕಾಲಿಂಜೆ ಪರಿಸರ ಪ್ರವಾಸೋದ್ಯಮವು ಸ್ಥಳೀಯ ಸಮುದಾಯಗಳ ಉನ್ನತಿಯೆಡೆಗೆ ಗಮನ ಹರಿಸುತ್ತಿದೆ. ಅದೇ ಸಮಯದಲ್ಲಿ ಪ್ರವಾಸಿಗರಿಗೆ ಮತ್ತು ಪ್ರಯಾಣಿಕರಿಗೆ ಸಮುದ್ರ ಜೀವವೈವಿಧ್ಯ ಸಂರಕ್ಷಣೆಯ ಬಗ್ಗೆ ಅರಿವನ್ನು ಮೂಡಿಸುತ್ತಿದೆ.


ಕಾಲಿಂಜೆ ಪರಿಸರ ಪ್ರವಾಸೋದ್ಯಮವು ಮಹಾರಾಷ್ಟ್ರದ ಅರಣ್ಯ ಇಲಾಖೆಯ ಮ್ಯಾಂಗ್ರೋವ್ ಮತ್ತು ಸಾಗರ ಜೀವವೈವಿಧ್ಯ ಸಂರಕ್ಷಣಾ ಪ್ರತಿಷ್ಠಾನದ ಸಮುದಾಯ ಆಧಾರಿತ ಸಂರಕ್ಷಣಾ ಉಪಕ್ರಮದ ಒಂದು ಭಾಗವಾಗಿದೆ. ಮಹಾರಾಷ್ಟ್ರದ ರಾಯ್ಗಡ್ ಜಿಲ್ಲೆಯ ಶ್ರೀವರ್ಧನ್ ತಾಲ್ಲೂಕಿನಲ್ಲಿರುವ ಕಾಲಿಂಜೆ ವಿವಿಧ ಜಾತಿಯ ಸಸ್ಯಗಳನ್ನು ಹೊಂದಿದೆ ಮತ್ತು ಅಮೂಲ್ಯ ಜೀವವೈವಿಧ್ಯತೆಯನ್ನು ಹೊಂದಿದೆ.


ಪ್ರವಾಸಿಗರ ಗುಂಪನ್ನು ಮುನ್ನಡೆಸುತ್ತಿರುವ ಬುಡಕಟ್ಟು ಮಹಿಳೆ (ಚಿತ್ರಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್‌)




ಇಲ್ಲಿಯವರೆಗೆ 10 ಗ್ರಾಮಗಳು ಪರಿಸರ-ಪ್ರವಾಸೋದ್ಯಮ ಸರ್ಕ್ಯೂಟ್ನ ಭಾಗವಾಗಿದ್ದರೆ, ಕಾಲಿಂಜೆಯನ್ನು ಹೊರತುಪಡಿಸಿ ಈ ಉಪಕ್ರಮದಲ್ಲಿ ಭಾಗವಹಿಸಲು 30 ಹಳ್ಳಿಗಳು ಆಸಕ್ತಿ ತೋರಿಸಿವೆ. ಈ ಸಂಸ್ಥೆ ಜೀವವೈವಿಧ್ಯತೆಯೊಂದಿಗೆ ಪರಿಚಿತರಾಗಿರುವ ಸ್ಥಳೀಯ ಜನರನ್ನೆ ಕೆಲಸಕ್ಕೆ ನೇಮಿಸಿದೆ.


ಉದಾಹರಣೆಗೆ, ಪರಿಸರ-ಪ್ರವಾಸೋದ್ಯಮ ಗುಂಪನ್ನು ಮುನ್ನಡೆಸುವ ಶ್ರುತಿ ತೋಡಂಕರ್ ಅವರು ಎಲ್ಲಾ 11 ಬಗೆಯ ಮ್ಯಾಂಗ್ರೋವ್‌ಗಳ ಸಸ್ಯಶಾಸ್ತ್ರೀಯ ಹೆಸರುಗಳನ್ನು ತಿಳಿದಿದ್ದಾರೆ ಮತ್ತು ಅವುಗಳನ್ನು ಹೇಗೆ ಗುರುತಿಸಬೇಕು ಎಂಬುದನ್ನು ಅರಿತಿದ್ದಾರೆ. ಇವರಿಂದ ಸಸ್ಯದ ವಿಶೇಷತೆಯ ಬಗ್ಗೆ ಮಾಹಿತಿಯನ್ನು ಪಡೆಯಬಹುದಾಗಿದೆ, ವರದಿ ದಿ ಲಾಜಿಕಲ್ ಇಂಡಿಯನ್.


ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಫೌಂಡೇಶನ್‌ನ ತರಬೇತುದಾರರಲ್ಲಿ ಒಬ್ಬರಾದ ಸಂದೇಶ್ ಅಂಬೋರ್,


"ಅನೇಕ ಗ್ರಾಮಸ್ಥರು ದೊಡ್ಡ ಮನೆಗಳನ್ನು ಮತ್ತು ಬಿಡಿ ಕೊಠಡಿಗಳನ್ನು ಹೊಂದಿದ್ದಾರೆ. ಅವರು ಮನೆಗಳನ್ನು ವಾಸ್ತವ್ಯಕ್ಕಾಗಿ ಒದಗಿಸಲು ಸಿದ್ಧರಿದ್ದಾರೆ. ಅನೇಕ ಗ್ರಾಮಸ್ಥರು ತಮ್ಮ ಮನೆಗಳಲ್ಲಿ ಪ್ರವಾಸಿಗರು ಉಳಿದುಕೊಳ್ಳಲು ಅನುಮತಿ ನೀಡಿದ್ದಾರೆ. ಪ್ರಸ್ತುತ, ಅವರು ಆರಂಭಿಕ ಪ್ರತಿಕ್ರಿಯೆಯನ್ನು ನೋಡಲು ಕಾಯುತ್ತಿದ್ದಾರೆ," ಎಂದರು.

ಒಂದು ದಿನ ಪ್ರವಾಸಿಗರು ತಂಗಲು 500 ರೂ ಶುಲ್ಕ ತೆರಬೇಕಾಗುತ್ತದೆ, ಮತ್ತು ಸ್ಥಳೀಯ ಅನಿಯಮಿತ ಊಟಕ್ಕೆ 125 ರೂ(ಸಸ್ಯಾಹಾರಿ) ಮತ್ತು 175 ರೂ(ಮಾಂಸಾಹಾರಿ) ಬೆಲೆಯಿದೆ.


ಸಣ್ಣ ಚಟುವಟಿಕೆಗಳಾದ ಪಕ್ಷಿ ವೀಕ್ಷಣೆ ಮತ್ತು ಸಾಂಪ್ರದಾಯಿಕ ಮೀನುಗಾರಿಕೆಗೆ ತಗಲುವ ವೆಚ್ಚ 100 ರಿಂದ 250 ರೂ. ಮತ್ತು ಈ ಶುಲ್ಕವನ್ನು ಗುಂಪಿನ ಜನರ ಸಂಖ್ಯೆಗೆ ಅನುಗುಣವಾಗಿ ನಿಗದಿ ಮಾಡುತ್ತಾರೆ.


ಉತ್ತಮ ಸಂಪರ್ಕ ಮತ್ತು ಸೌಲಭ್ಯಗಳನ್ನು ತರುವ ಉದ್ದೇಶದಿಂದ ಜಿಲ್ಲೆಯ ಸುಮಾರು 350 ಸ್ಥಳಗಳಿಗೆ ಈ ಉಪಕ್ರಮವನ್ನು ವಿಸ್ತರಿಸಲಾಗುತ್ತಿದೆ. ಶೀಘ್ರದಲ್ಲೇ ಸ್ಥಳೀಯರ ಆದಾಯವನ್ನು ಹೆಚ್ಚಿಸಲು ಸಲುವಾಗಿ ದೋಣಿ ಸವಾರಿಯನ್ನು ಶುರುಮಾಡಲಿದ್ದಾರೆ.