ವಲಸಿಗರಿಗೆ ಉಚಿತ ರೇಷನ್‌, ಒಂದು ರಾಷ್ಟ್ರ - ಒಂದು ರೇಷನ್‌ ಕಾರ್ಡ್‌: ನಿರ್ಮಲಾ ಸೀತಾರಾಮನ್‌

ಸರ್ಕಾರದ 20 ಲಕ್ಷ ಕೋಟಿಯ ಪ್ಯಾಕೆಜ್‌ನ ಎರಡನೇ ಹಂತದ ಘೋಷಣೆಯು ವಲಸಿಗರು, ರೈತರು, ಬೀದಿ ವ್ಯಾಪಾರಿಗಳ ಮೇಲೆ ಕೇಂದ್ರಿತವಾಗಿತ್ತು.

ವಲಸಿಗರಿಗೆ ಉಚಿತ ರೇಷನ್‌, ಒಂದು ರಾಷ್ಟ್ರ - ಒಂದು ರೇಷನ್‌ ಕಾರ್ಡ್‌: ನಿರ್ಮಲಾ ಸೀತಾರಾಮನ್‌

Thursday May 14, 2020,

2 min Read

ಕೋವಿಡ್‌-19 ನಿಂದ ಸಂಕಷ್ಟಕ್ಕೆ ಸಿಲುಕಿರುವ ದೇಶಕ್ಕೆ ಚೇತರಿಕೆ ನೀಡಲು ರೂ. 20 ಲಕ್ಷ ಕೋಟಿಯ ವಿಶಿಷ್ಟ ಪ್ಯಾಕೆಜ್‌ನ ಎರಡನೇ ಘೋಷಣೆಯ ವಿವರಗಳನ್ನು ಗುರುವಾರ ನಿರ್ಮಲಾ ಸೀತಾರಾಮನ್‌ ಸಾದರಪಡಿಸಿದರು.


ಪ್ಯಾಕೆಜ್‌ನ ಎರಡನೇ ಹಂತದ ಘೋಷಣೆಯು ವಲಸಿಗರು, ರೈತರು, ಬೀದಿ ವ್ಯಾಪಾರಿಗಳ ಮೇಲೆ ಕೇಂದ್ರಿತವಾಗಿತ್ತು.


ಲಾಕ್‌ಡೌನ್‌ನಿಂದ ವಿವಿಧ ರಾಜ್ಯದಲ್ಲಿ ಸಿಲುಕಿರುವ ವಲಸಿಗರಿಗೆ ಆಹಾರದ ಅವಶ್ಯಕತೆಯಿರುವುದರಿಂದ 2 ತಿಂಗಳವರೆಗೆ ಉಚಿತವಾಗಿ ಆಹಾರ ಧಾನ್ಯಗಳನ್ನು ನೀಡಲು ಸರ್ಕಾರ ಮುಂದಾಗಿದೆ.

ರಾಷ್ಟ್ರೀಯ ಆಹಾರ ಸುರಕ್ಷತಾ ಕಾಯಿದೆಯಡಿ ನೋಂದಾಯಿಸದ (ಎನ್‌ಎಫ್‌ಎಸ್‌ಎ) ಅಥವಾ ರಾಜ್ಯದ ಚೀಟಿಯನ್ನು ಹೊಂದಿರದ ವಲಸಿಗರ ಕುಟುಂಬದ ಪ್ರತಿ ಸದಸ್ಯರಿಗೆ ತಿಂಗಳಿಗೆ 5 ಕೆ.ಜಿ. ಅಕ್ಕಿ/ಗೋಧಿ ಮತ್ತು 1 ಕೆ.ಜಿ. ಬೆಳೆ-ಕಾಳನ್ನು 2 ತಿಂಗಳವರೆಗೆ ನೀಡಲಾಗುವುದು. ಈ ಕ್ರಮವು ೮ ಕೋಟಿ ವಲಸಿಗರಿಗೆ ಸಹಾಯ ಮಾಡಲಿದೆ.


ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌




ರೇಷನ್‌ ನೀಡಲು ತಂತ್ರಜ್ಞಾನವನ್ನು ಬಳಸಲು ಮುಂದಾಗಿರುವ ಸರ್ಕಾರ ‘ಒಂದು ರಾಷ್ಟ್ರ ಒಂದು ರೇಷನ್‌ ಕಾರ್ಡ್‌ʼ ಎಂಬ ಕಲ್ಪನೆಯಡಿಯಲ್ಲಿ ದೇಶದ 20 ರಾಜ್ಯಗಳ ಯಾವುದೇ ನ್ಯಾಯ ಬೆಲೆ ಅಂಗಡಿಯಲ್ಲಿ ಬೇರೆ ರಾಜ್ಯದ ಪಡಿತರ ಚೀಟಿಯನ್ನು ತೋರಿಸಿ ವಲಸಿಗರು ರೇಷನ್‌ ಪಡೆಯುವಂತಹ ಸೌಲಭ್ಯಕ್ಕೆ ಚಾಲನೆ ನೀಡಿದೆ. ಅಗಸ್ಟ್‌ 2020 ರ ಒಳಗೆ 23 ರಾಜ್ಯಗಳಲ್ಲಿ ಈ ಯೋಜನೆ ಜಾರಿಗೆ ಬರಲಿದ್ದು ಮಾರ್ಚ್‌ 2021 ರ ಹೊತ್ತಿಗೆ ಪೂರ್ಣಗೊಳ್ಳಲಿದೆ.


ವಲಸಿಗರಿಗೆ ಅಗ್ಗದ ದರದಲ್ಲಿ ಬಾಡಿಗೆ ಮನೆಯ ಸೌಲಭ್ಯವನ್ನು ನೀಡಲು ಸರ್ಕಾರ ಮುಂದಾಗಿದ್ದು, ಪ್ರಧಾನ ಮಂತ್ರಿ ಆವಾಸ ಯೋಜನೆಯ ಅಡಿಯಲ್ಲಿ, ಪಿಪಿಪಿ ಮಾದರಿಯಲ್ಲಿ ವಿವಿಧ ಉಪಕ್ರಮಗಳೊಂದಿಗೆ ಸರ್ಕಾರಿ ಬಂಡವಾಳ ಹೊಂದಿರುವ ನಗರದ ಕಟ್ಟಡಗಳನ್ನು ಅಗ್ಗದ ಬಾಡಿಗೆ ಮನೆ ಸಂಕೀರ್ಣ (ಎಆರ್‌ಎಚ್‌ಸಿ) ಗಳಾಗಿ ಪರಿವರ್ತಿಸಲಿದೆ.


ಕೋವಿಡ್‌-19 ಲಾಕ್‌ಡೌನ್‌ನಿಂದ ಬೀದಿ ವ್ಯಾಪಾರಿಗಳಲ್ಲೆವು ಕಳೆದೆರೆಡು ತಿಂಗಳಿಂದ ಮುಚ್ಚಿವೆ. ಅವುಗಳಿಗೆ ಬಲ ನೀಡಲು ಸರ್ಕಾರ 50 ಸಾವಿರ ಕೋಟಿ ವಿಶೇಷ ಸಾಲ ಸೌಲಭ್ಯವನ್ನು ನೀಡಲು ಮುಂದಾಗಿದ್ದು, 50 ಲಕ್ಷ ಬೀದಿ ವ್ಯಾಪಾರಿಗಳಿಗೆ ಇದು ಸಹಕಾರಿಯಾಗಲಿದೆ. ಪ್ರಾರಂಭದಲ್ಲಿ ಉದ್ಯಮದ ಬಂಡವಾಳವಾಗಿ 10 ಸಾವಿರ ರೂ. ಸಿಗಲಿದ್ದು, ಡಿಜಿಟಲ್‌ ಪಾವತಿಗಳನ್ನು ಅನುಸರಿಸಿದ್ದಲ್ಲಿ ಸರ್ಕಾರದಿಂದ ವಿಶೇಷ ಪುರಸ್ಕಾರಗಳು ಸಿಗಲಿವೆ.


6 ರಿಂದ 18 ಲಕ್ಷ ಆದಾಯವಿರುವ ಮಧ್ಯಮ ವರ್ಗದ ಜನರಿಗೆ ಮನೆ ಕಟ್ಟಲು ಸಬ್ಸಿಡಿ ಸಿಗುತ್ತಿದ್ದ ಸಿಎಲ್‌ಎಸ್‌ಎಸ್‌ ಯೋಜನೆಯನ್ನು ಮಾರ್ಚ್‌ 2021 ರವರೆಗೂ ವಿಸ್ತರಿಸಲಾಗುತ್ತಿದ್ದು ಇದರಿಂದ 2.5 ಲಕ್ಷ ಕುಟುಂಬಗಳಿಗೆ ಸಹಾಯವಾಗಲಿದೆ. ಇದಕ್ಕಾಗಿ ಸರ್ಕಾರ 70 ಸಾವಿರ ಕೋಟಿ ರೂ.ಯನ್ನು ವಿನಿಯೋಗಿಸುತ್ತಿದ್ದು, ಸ್ಟೀಲ್‌, ಸಿಮೆಂಟ್‌, ಸಾರಿಗೆ ಮತ್ತು ಇತರ ಕಟ್ಟಡ ಸರಕುಗಳಿಗೆ ಬೇಡಿಕೆಯುಂಟಾಗಿ ಹಲವು ಉದ್ಯೋಗಗಳು ಸೃಷ್ಟಿಯಾಗಲಿವೆ.


ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರಕ್ಕೆ 6 ಸಾವಿರ ಕೋಟಿ ರೂ.ಯನ್ನು ವಿನಿಯೋಗಿಸಲು ಸರ್ಕಾರ ಯೋಚನೆ ನಡೆಸಿದ್ದು, ಇದು ನಗರ ಮತ್ತು ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸುತ್ತದೆ ಮತ್ತು ಬುಡಕಟ್ಟು ಮತ್ತು ಆದಿವಾಸಿ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುತ್ತದೆ.


ಕೃಷಿ ಮತ್ತು ಸಂಬಂಧಿತ ಚಟುವಟಿಕೆಯಲ್ಲಿ ತೊಡಗಿರುವವರಿಗಾಗಿ, ನಬಾರ್ಡ್‌ಗೆ ಹೆಚ್ಚುವರಿಯಾಗಿ 30,000 ಕೋಟಿ ರೂ.ಗಳ ಕಾರ್ಯನಿರತ ಬಂಡವಾಳ ನಿಧಿಯನ್ನು ಒದಗಿಸಲಾಗುವುದು ಹಾಗೂ ಇದನ್ನು ವಿವಿಧ ಹಣಕಾಸು ಸಂಸ್ಥೆಗಳ ಮೂಲಕ ವಿತರಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಈಗ ಮೀನುಗಾರಿಕೆ ಮತ್ತು ಪಶುಸಂಗೋಪನೆಯಲ್ಲಿ ತೊಡಗಿರುವವರಿಗೆ ನೀಡಲಿದ್ದಾರೆ.