ನೋವಾದಾಗ, ಒತ್ತಡಕ್ಕೊಳಗಾದಾಗ ಗಿಡಗಳೂ ಕಿರುಚಿಕೊಳ್ಳುತ್ತವೆ: ಸಂಶೋಧನಾ ವರದಿ

ಹೊಸ ಸಂಶೋಧನೆಯೊಂದು, ಗಿಡಗಳೂ ಕಿರುಚಿಕೊಳ್ಳುತ್ತವೆಂದೂ, ಅದು ಕೇವಲ ಇಲಿ ಹಾಗೂ ಬಾವುಲಿಯಂತಹ ಪ್ರಾಣಿಗಳಿಗೆ ಮಾತ್ರ ಕೇಳುತ್ತದೆಂದು ತಿಳಿಸಿದೆ.

ನೋವಾದಾಗ, ಒತ್ತಡಕ್ಕೊಳಗಾದಾಗ ಗಿಡಗಳೂ ಕಿರುಚಿಕೊಳ್ಳುತ್ತವೆ: ಸಂಶೋಧನಾ ವರದಿ

Saturday December 14, 2019,

2 min Read

ಮನುಷ್ಯರಿಗೆ ಕಷ್ಟ ಬರದೆ ಮರಕ್ಕೆ ಕಷ್ಟ ಬರುತ್ತದಾ? ಎಂಬ ರೂಢಿ ಮಾತೊಂದಿದೆ. ಮನುಷ್ಯನಿಗಷ್ಟೇ ಅಲ್ಲ, ಗಿಡಮರಗಳಿಗೂ ಕಷ್ಟ ಬರುತ್ತದೆ ಅದರೆ ಅವುಗಳಿಗೆ ಹೇಳಿಕೊಳ್ಳಲು ಬಾಯಿಯಿಲ್ಲ ಎಂಬ ಮಾತುಗಳೂ ಮುಗಿಯುವ ಕಾಲ ಈಗ ಬಂದಿದೆ.


ಇಂದಿನವರೆಗೂ ಗಿಡ-ಮರಗಳು ಮನುಷ್ಯರು ಭಾವಿಸಿದ್ದಕ್ಕಿಂತ ಹೆಚ್ಚಿನ ಸೂಕ್ಷ್ಮಜೀವಿಗಳು ಎಂಬುದು ತಿಳಿದಿತ್ತು. ಆದರೆ ಈಗ ಇಸ್ರೇಲಿನ ಟೆಲ್‌ ಅವೀವ್‌ ವಿಶ್ವವಿದ್ಯಾಲಯದ ಸಂಶೋಧಕರು ಗಿಡಗಳೂ ಸಹ ಖಿನ್ನತೆಗೆ ಒಳಗಾಗಿ ಅಥವಾ ನೀರಿನಂಶ ಕಡಿಮೆಯಾದ ಸಮಯದಲ್ಲಿ ಕೂಗಿಕೊಳ್ಳುತ್ತವೆಂದು, ಅವು ಹೆಚ್ಚಿನ ಆವರ್ತನವಿರುವ ಶಬ್ದವನ್ನು ಸೃಷ್ಟಿಸುವುದರಿಂದಾಗಿ ಮನುಷ್ಯರ ಕಿವಿಗೆ ಕೇಳುವುದಿಲ್ಲವೆಂದು ಅಧ್ಯಯನದ ವರದಿಯಲ್ಲಿ ತಿಳಿಸಿದ್ದಾರೆ.


ಸಾಂದರ್ಭಿಕ ಚಿತ್ರ




ತಮ್ಮ ಪ್ರಯೋಗದ ಭಾಗವಾಗಿ, ಅವರು ಅಲ್ಟ್ರಾಸಾನಿಕ್ ಆವರ್ತನಗಳನ್ನು ಕಂಡುಹಿಡಿಯುವ ಸಾಮರ್ಥ್ಯವಿರುವ ಮೈಕ್ರೊಫೋನ್ಗಳನ್ನು ಟೊಮೆಟೊ ಮತ್ತು ತಂಬಾಕು ಸಸ್ಯಗಳಿಂದ ನಾಲ್ಕು ಇಂಚುಗಳಷ್ಟು ದೂರದಲ್ಲಿ ಇರಿಸಲಾಗಿತ್ತು. ನೀರಿಲ್ಲದಿದ್ದಾಗ ಅಥವಾ ಅವುಗಳನ್ನು ಕಾಂಡಗಳ ಮೂಲಕ ಕತ್ತರಿಸಿದಾಗ ಗಿಡಗಳು ಕಿರಿಚುವ ರೀತಿಯ ಶಬ್ದವನ್ನು ಮಾಡಿದವೆಂದು ಬಯೋಆರ್‌ಎಕ್ಸ್‌ ನಲ್ಲಿ ಪ್ರಕಟಿಸಿರುವ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.


"ನಾವು ಟೊಮೆಟೊ ಮತ್ತು ತಂಬಾಕು ಸಸ್ಯಗಳಿಂದ 10 ಸೆಂ.ಮೀ. ನಷ್ಟು ದೂರದಿಂದ ~ 65 ಡಿಬಿಎಸ್ಪಿಎಲ್ ಅಲ್ಟ್ರಾಸಾನಿಕ್ ಶಬ್ದಗಳನ್ನು ದಾಖಲಿಸಿದ್ದೇವೆ, ಈ ಶಬ್ದಗಳನ್ನು ಕೆಲವು ಜೀವಿಗಳು ಹಲವಾರು ಮೀಟರ್ ದೂರದಿಂದ ಕಂಡುಹಿಡಿಯಬಹುದು ಎಂದು ಸಂಶೋಧನೆ ಸೂಚಿಸುತ್ತದೆ,” ಎನ್ನುತ್ತಾರೆ ಸಂಶೋಧಕ ಇಟ್ಜಾಕ್ ಖೈತ್.


ಮುಂದುವರೆದು ಅವರು,


"ನಾವು 35 ಮಶೀನ್‌ ಲರ್ನಿಂಗ್ ಮಾದರಿಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಅವು ಸಸ್ಯದ ಶಬ್ದಗಳು ಮತ್ತು ಸಾಮಾನ್ಯ ಶಬ್ದಗಳ ನಡುವಿನ ವ್ಯತ್ಯಾಸವನ್ನು ಮತ್ತು ಸಸ್ಯಗಳ ಸ್ಥಿತಿಯನ್ನು ಗುರುತಿಸುತ್ತವೆ - ಶುಷ್ಕ, ಕತ್ತರಿಸಿದ ಅಥವಾ ಸಾಮಾನ್ಯವಾಗಿ ಹೊರಸೂಸುವ ಶಬ್ದಗಳ ಆಧಾರದ ಮೇಲೆ ಗುರುತಿಸುವ ಸಾಮರ್ಥ್ಯವನ್ನು ಮಶೀನ್ ಲರ್ನಿಂಗ್ ಮಾದರಿಗಳು ಹೊಂದಿವೆ. ‘ನಮ್ಮ ಫಲಿತಾಂಶವು ಪ್ರಾಣಿಗಳು, ಮಾನವರು ಮತ್ತು ಇತರೆ ಸಸ್ಯಗಳು ಸಹ, ಸಸ್ಯಗಳು ಹೊರಸೂಸುವ ಶಬ್ದಗಳನ್ನು ಆಧರಿಸಿ, ಸಸ್ಯದ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ಬಳಸಬಹುದು' ಎಂಬುದನ್ನು ಸೂಚಿಸುತ್ತದೆ,” ಎಂದರು


ಸಸ್ಯಗಳು ಈ ಶಬ್ದಗಳನ್ನು ಹೇಗೆ ಉತ್ಪತ್ತಿ ಮಾಡುತ್ತವೆ ಎಂದು ಸಂಶೋಧಕರಿಗೆ ಇನ್ನೂ ಖಚಿತವಾಗಿಲ್ಲವಾದರೂ, ಖೈತ್ ಮತ್ತು ಅವರ ಸಹೋದ್ಯೋಗಿಗಳು ತಮ್ಮ ವರದಿಯಲ್ಲಿ ಒಂದು ಸಾಧ್ಯತೆಯನ್ನು ಪ್ರಸ್ತಾಪಿಸಿದ್ದಾರೆ. ಸಸ್ಯಗಳ ಕ್ಸೈಲೆಮ್ ಟ್ಯೂಬ್‌ಗಳ ಮೂಲಕ ನೀರು ಚಲಿಸುವಾಗ, ಅವು ಜಲೀಕರಣಗೊಂಡಿರುವಂತೆ ಇರಲು ಕ್ಸೈಲಮ್‌ ಟ್ಯೂಬ್ ಸಹಾಯ ಮಾಡುತ್ತದೆ,‌ ಇದರ ಪರಿಣಾಮವಾಗಿ ಗಾಳಿಯ ಗುಳ್ಳೆಗಳು ರೂಪುಗೊಂಡು ಸ್ಫೋಟಗೊಳ್ಳುತ್ತವೆ, ಅವು ಸಣ್ಣ ಕಂಪನಗಳನ್ನು ಉಂಟುಮಾಡುತ್ತವೆ.

ಕತ್ತರಿಸಿದ ಒಂದು ಗಂಟೆಯೊಳಗೆ ತಂಬಾಕು ಸಸ್ಯವು ಸರಾಸರಿ 15 ಶಬ್ದಗಳನ್ನು ಹೊರಸೂಸುತ್ತದೆ ಮತ್ತು ಟೊಮೆಟೊ ಸಸ್ಯವು 25 ಶಬ್ದಗಳನ್ನು ಹೊರಸೂಸುತ್ತದೆ. ಹತ್ತು ದಿನಗಳವರೆಗೆ ನೀರಿನಿಂದ ಹೊರಗುಳಿಯುವ ಮೂಲಕ ಒತ್ತಡಕ್ಕೊಳಗಾದಾಗ, ತಂಬಾಕು ಸಸ್ಯವು ಗಂಟೆಗೆ 11 ಬಾರಿ ಮತ್ತು ಟೊಮೆಟೊ ಸಸ್ಯವು ಗಂಟೆಗೆ 20 ಬಾರಿ ಕಿರುಚುತ್ತವೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.