ಮಸ್ಸೂರಿಯಲ್ಲಿ 15,000 ಪ್ಲ್ಯಾಸ್ಟಿಕ್ ಬಾಟಲ್‌ಗಳಿಂದ ನಿರ್ಮಾಣ ಮಾಡಿದ ವಾಲ್‌ ಆಫ್‌ ಹೋಪ್‌ ಪ್ರವಾಸಿಗರಿಗೆ ಪ್ಲಾಸ್ಟಿಕ್‌ ಮಾಲಿನ್ಯ ತಡೆಯುವಂತೆ ಎಚ್ಚರಿಸುತ್ತಿದೆ

ಗಿರಿಗಳ ರಾಣಿಯ ಗತ ವೈಭವ ಮರಳಿ ಪಡೆಯುವ ಉದ್ದೇಶದಿಂದ, ಮುಂಬೈ ಮೂಲದ ರೆಸಿಟಿ ನೆಟ್ವರ್ಕ್ ಕಂಪೆನಿಯು ಸ್ಕ್ರೆಂಬ್ಲಿಂಗ್ ಅಡ್ವೆಂಚರ್‌, ನೆಸ್ಟ್ಲೆ ಇಂಡಿಯಾ, ಮತ್ತು ಮ್ಯೂಸಿಯಂ ಆಫ್‌ ಗೋವಾ ಫೌಂಡೇಷನ್‌ನ ಸಹಯೋಗದೊಂದಿಗೆ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಿಸುವ ಮತ್ತು ವಿಲೇವಾರಿ ಮಾಡುವ ಕೆಲಸ ಮಾಡುತ್ತಿದೆ. ಅವರ ಪ್ರತಿಷ್ಟಾನದ ಬಲವಾದ ಸಂದೇಶ : ಕಸ ಮಾಡಬೇಡಿ

ಮಸ್ಸೂರಿಯಲ್ಲಿ 15,000 ಪ್ಲ್ಯಾಸ್ಟಿಕ್ ಬಾಟಲ್‌ಗಳಿಂದ ನಿರ್ಮಾಣ ಮಾಡಿದ ವಾಲ್‌ ಆಫ್‌ ಹೋಪ್‌ ಪ್ರವಾಸಿಗರಿಗೆ ಪ್ಲಾಸ್ಟಿಕ್‌ ಮಾಲಿನ್ಯ ತಡೆಯುವಂತೆ ಎಚ್ಚರಿಸುತ್ತಿದೆ

Thursday July 18, 2019,

4 min Read

ಹಿಮಾಲಯದ ಗಡ್ವಾಲ್‌ ಶ್ರೇಣಿಯಲ್ಲಿರುವ ಮಸ್ಸೂರಿಯು ಬ್ರಿಟಿಷರ ಕಾಲದಿಂದಲೂ ಪ್ರಸಿದ್ಧ ತಾಣವಾಗಿದೆ. ಗಿರಿಗಳ ರಾಣಿಯು ಹಚ್ಚ ಹಸಿರು ಮತ್ತು ಶಾಂತಿಯುತ ವಾತಾವರಣದಿಂದ ಪ್ರಸಿದ್ಧಿ ಪಡೆದಿದೆ, ಸುಮಾರು 30,000 ಜನರು ಇಲ್ಲಿ ವಾಸವಾಗಿದ್ದಾರೆ ಮತ್ತು ಪ್ರತಿ ವರ್ಷ ಮೂವತ್ತು ಲಕ್ಷ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.


ಪ್ರವಾಸಿಗರ ಆಗಮನ ಮತ್ತು ಆಧುನಿಕ ಜೀವನದ ಪ್ರಭಾವದಿಂದ ಪ್ಲಾಸ್ಟಿಕ್ ತ್ಜಾಜ್ಯಗಳು, ಬ್ಯಾಗ್‌ಗಳು, ಬಾಟಲ್‌ಗಳು ಇನ್ನಿತರ ಎಸೆದ ವಸ್ತುಗಳು ಉಸಿರುಗಟ್ಟಿಸುವ ಪರಿಸ್ಥಿತಿ ನಿರ್ಮಾಣ ಮಾಡಿದೆ. ಆದರೆ ಗಿರಿಧಾಮದಲ್ಲಿರುವ ಜನರು ಇದರ ವಿರುದ್ಧ ಹೋರಾಟ ನಡೆಸುತ್ತಲೇ ಇದ್ದಾರೆ. 15,000 ಪ್ಲಾಸ್ಟಿಕ್ ಬಾಟಲ್‌ಗಳನ್ನು ಬಳಸಿಕೊಂಡು ಮಸ್ಸೂರಿಯ ಬಳಿ ನಿರ್ಮಿಸಿರುವ ವಾಲ್ ಆಫ್‌ ಹೋಪ್‌ ಅತ್ಯುತ್ತಮ ಸಂದೇಶವನ್ನು ಸಾರುತ್ತದೆ.


ಬಂಗಲೆ ಕಿ ಕಂಡಿ ಹಳ್ಳಿಯಲ್ಲಿರುವ ಈ ಗೋಡೆಯು 150 ಅಡಿ ಉದ್ದ ಮತ್ತು 12 ಅಡಿ ಎತ್ತರವಿದ್ದು, ಜೂನ್‌ನಲ್ಲಿ ಅನಾವರಣಗೊಂಡಿದೆ. ಹಿಲ್‌ದಾರಿ ಪ್ರಾಜೆಕ್ಟ್ ಭಾಗವಾಗಿ ಈ ವಾಲ್ ನಿರ್ಮಾಣವಾಗಿದ್ದು, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಮತ್ತು ಪ್ಲಾಸ್ಟಿಕ್ ಮುಕ್ತ ಪರಿಸರದ ಗುರಿ ಹೊಂದಿದೆ.


HillDari

ಜೂನ್‌ನಲ್ಲಿ ಅನಾವರಣಗೊಂಡಿರುವ ವಾಲ್‌ ಆಫ್‌ ಹೋಪ್‌ ಹಿಲ್‌ದಾರಿ ಪ್ರಾಜೆಕ್ಟ್ ಭಾಗವಾಗಿ ನಿರ್ಮಾಣವಾಗಿದ್ದು, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ ಅರಿವು ಮೂಡಿಸುವ ಗುರಿ ಹೊಂದಿದೆ

ಗಿರಿಯ ಗತ ವೈಭವವನ್ನು ಪುನಃ ಸ್ಥಾಪಿಸುವ ಉದ್ದೇಶದಿಂದ ರೆಸಿಟಿ ನೆಟ್ವರ್ಕ್‌ ಮತ್ತು ನೆಸ್ಟ್ಲೆ ಇಂಡಿಯಾ ಒಟ್ಟಾಗಿ ಹಿಲ್ದಾರಿ ಪ್ರಾಜೆಕ್ಟ್‌ನ್ನು ಆರಂಭಿಸಿವೆ, ಇದು ಮಸ್ಸೂರಿಯನ್ನು ದೇಶದ ಒಂದು ಸ್ವಚ್ಛ ಗಿರಿಧಾಮವನ್ನಾಗಿಸುವ ಗುರಿ ಹೊಂದಿದೆ. ಈ ಉಪಕ್ರಮದ ಹಿಂದಿನ ಉದ್ದೇಶ “ಕರ್ತವ್ಯ ಪ್ರಜ್ಞೆ ಬೆಳೆಸುವುದು ಮತ್ತು ಉತ್ತಮ ತ್ಯಾಜ್ಯ ನಿರ್ವಹಣೆಯನ್ನು ರೂಪಿಸುವುದು”


ದಿ ವಾಲ್‌ ಆಫ್‌ ಹೋಪ್‌


ಈ ಯೋಜನೆಯನ್ನು ಕೈಗೆತ್ತಿಕೊಡಿದ್ದ ಮ್ಯೂಸಿಯಂ ಆಫ್‌ ಗೋವಾದ ಸಹಯೋಗದೊಂದಿಗೆ, ಹಿಲ್ದಾರಿ ತಂಡವು ಮಸ್ಸೂರಿಯಾದ್ಯಂತ ಇಲ್ಲಿಯವರೆಗೆ ನಿರಂತರವಾಗಿ ಸ್ವಚ್ಛತಾ ಡ್ರೈವ್‌ಗಳನ್ನು ನಡೆಸುತ್ತಲೇ ಬಂದಿದೆ. ಗಿರಿಧಾಮದ ಸುತ್ತ ಮುತ್ತಲಿನ 50ಕ್ಕೂ ಹೆಚ್ಚು ಶಾಲಾ ಕಾಲೇಜು ವಿದ್ಯಾರ್ಥಿಗಳು ಈ ಗೋಡೆಯ ನಿರ್ಮಾಣಕ್ಕೆ ಎರಡು ತಿಂಗಳುಗಳ ಕಾಲ ಶ್ರಮಧಾನ ಮಾಡಿದ್ದಾರೆ.


ರೆಸಿಟಿ ನೆಟ್ವರ್ಕ್‌ನ ಮೆನೇಜರ್ ಮತ್ತು ಹಿಲ್ದಾರಿ ಪ್ರಾಜೆಕ್ಟ್‌ನ ಸದಸ್ಯರಾಗಿರುವ ಮಯಂಕ ತಾಂಡನ್‌ ಹೇಳುತ್ತಾರೆ,


“ಮಸ್ಸೂರಿಗೆ ಭೇಟಿ ನೀಡುವ ಜನರ ವರ್ತನೆಗಳಲ್ಲಿ ಬದಲಾವಣೆಯಾಗಬೇಕಿದೆ. ಈ ಉದ್ದೇಶದಿಂದ ಅತ್ಯುತ್ತಮ ಸಂದೇಶ ಸಾರುವ ಗೋಡೆ ನಿರ್ಮಿಸಲಾಗಿದೆ. ಗಿರಿಧಾಮವನ್ನು ಹಾಳುಮಾಡುತ್ತಿರುವ ಪ್ರವಾಸಿಗರಿಗೆ ಇದು ನಿರಂತರವಾಗಿ ಎಚ್ಚರಿಕೆ ಘಂಟೆಯಂತೆ ಕೆಲಸ ಮಾಡುತ್ತದೆ. ಇದು ಪ್ರವಾಸಿಗರಿಗೆ ಜವಬ್ದಾರಿಯ ಅರಿವನ್ನು ಮೂಡಿಸುತ್ತದೆಂಬ ಭರವಸೆ ನಮಗಿದೆ”


ಮುಂದುವರಿದು ಮಾತನಾಡುತ್ತಾ ಗೋಡೆಯ ಬಗ್ಗೆ ಹೀಗೆ ಹೇಳುತ್ತಾರೆ, “ನಮಗೆ ಪ್ಲಾಸ್ಟಿಕ್‌ ಬಾಟಲ್‌ಗಳನ್ನು ಸಂಗ್ರಹಿಸಲು ತುಂಬಾ ಸಮಯ ಬೇಕಾಯಿತು. ಅವನ್ನು ಮೂರು ರೀತಿಯಲ್ಲಿ ಸಂಗ್ರಹಿಸಿದ್ದೇವೆ. ಮಸ್ಸೂರಿಯ ಸುತ್ತಮುತ್ತ ಇರುವ 16 ಹೋಟೆಲ್‌ಗಳಿಂದ ಬಾಟಲ್‌ಗಳನ್ನು ಸಂಗ್ರಹಿಸಿದೆವು. ಕೆಲವನ್ನು ಆರು ಮಂದಿ ಚಿಂದಿ ಆಯುವವರ ಬಳಿ 20 ರೂಪಾಯಿ ಕಿಲೋನಂತೆ ಕೊಂಡೆವು, ಅವರು ಸಾಮಾನ್ಯವಾಗಿ ಕಿಲೋಗೆ 30ರೂ. ನಂತೆ ಮಾರಾಟ ಮಾಡುತ್ತಾರೆ. ಹಾಗೂ ಸ್ವಚ್ಛತಾ ಡ್ರೈವ್‌ಗಳ ಮೂಲಕ ಇನ್ನಷ್ಟನ್ನು ಸಂಗ್ರಹಿಸಿದೆವು”


ಶಂಕುವಿನಾಕಾರದ ಬಾಟಲ್‌ಗಳು ಯೋಜಿತ ವಿನ್ಯಾಸಕ್ಕೆ ಉಪಯೋಗಕ್ಕೆ ಬಾರದಿರುವುದರಿಂದ ಅಂತಹವುಗಳನ್ನು ಸಂಗ್ರಹಿಸದಿರಲು ತಂಡವು ಮುಂಚಿತವಾಗಿಯೇ ನಿರ್ಧರಿಸಿತ್ತು.


Hilldari

ಗಿರಿಧಾಮದ ಸುತ್ತ ಮುತ್ತಲಿನ 50ಕ್ಕೂ ಹೆಚ್ಚು ಶಾಲಾ ಕಾಲೇಜುಗಳ ಸ್ವಯಂ ಸೇವಕರು ವಾಲ್‌ ಆಫ್‌ ಹೋಪ್‌ ನಿರ್ಮಾಣ ಮಾಡಲು ಎರಡು ತಿಂಗಳುಗಳ ಕಾಲ ಶ್ರಮಧಾನ ಮಾಡಿದ್ದಾರೆ.

ತಂಡದ ಕುರಿತು ಮಾತನಾಡುತ್ತಾ ಮಯಂಕ್‌ರವರು ಹೇಳುತ್ತಾರೆ, “ಹಿಲ್ದಾರಿ ಪ್ರಾಜೆಕ್ಟ್‌ನ ನಾಲ್ಕೇ ಸದಸ್ಯರು ಇದ್ದೇವೆ, ಹೆಚ್ಚಿನ ಪ್ರಮಾಣದ ಕೆಲಸವನ್ನು 50ಕ್ಕೂ ಹೆಚ್ಚು ಸ್ವಯಂ ಸೇವಕರು ಮಾಡಿದ್ದಾರೆ. ಈ ಪ್ರಾಜೆಕ್ಟ್‌ನ ಉಸ್ತುವಾರಿಯನ್ನು ವಹಿಸಿಕೊಳ್ಳಲು ನಮ್ಮ ಜೊತೆ ಆಶ್ವರ್ಯವೆಂಬಂತೆ ಇಬ್ಬರು ಮುಂಬೈನ ಸ್ವಯಂ ಸೇವಕರಿದ್ದರು.


ಇಬ್ಬರು ಡಿಸೈನಿಂಗ್‌ ಮಾಡುವ ಸ್ವಯಂ ಸೇವಕರನ್ನು ಸರಿಯಾದ ವಿನ್ಯಾಸ ರೂಪಿಸಲು ನಿಗಧಿಪಡಿಸಿದ್ದೆವು, ಉಳಿದ ವಿದ್ಯಾರ್ಥಿಗಳು ಸಂಗ್ರಹಿಸಿದ್ದ ಬಾಟಲ್‌ಗಳನ್ನು ಕಟ್‌ ಮಾಡುವ ಮತ್ತು ಪೇಂಟಿಂಗ್‌ ಮಾಡುವ ಕೆಲಸ ಮಾಡುತ್ತಿದ್ದರು. ವಿದ್ಯಾರ್ಥಿಗಳಷ್ಟೇ ಅಲ್ಲದೇ ಬಂಗಲೆ ಕಿ ಕಂಡಿ ಹಳ್ಳಿಯ ಹಲವಾರು ಜನ ಈ ಯೋಜನೆಯನ್ನು ಬೆಂಬಲಿಸಲು ಮುಂದೆ ಬಂದರು. ನಗರ ಪಾಲಿಕೆ ಮತ್ತು ಗ್ರಾಮ ಪಂಚಾಯತಿಗಳು ತಂಡಕ್ಕೆ ಅತ್ಯಗತ್ಯ ಕೊಡುಗೆಯನ್ನು ನೀಡಿದವು.


HillDari

ವಾಲ್‌ ಆಫ್‌ ಹೋಪ್‌ ನಿರ್ಮಿಸಲು ಸಂಗ್ರಹಿಸಿರುವ ಬಾಟಲ್‌ಗಳಲ್ಲಿ ನಿರುಪಯುಕ್ತವಾದವುಗಳನ್ನು ಆರಿಸಿ ತೆಗೆಯಲು ಮಹಿಳಾ ಸಮುದಾಯದವರು ನೆರವಾದರು

ಮ್ಯೂಸಿಯಮ್‌ ಆಫ್ ಗೋವಾದ ಸ್ಥಾಪಕ ಸುಬೋಧ್ ಕೇರ್ಕರ್ ಹೀಗೆ ಹೇಳುತ್ತಾರೆ,


“ನೆಲದಲ್ಲಿ ಎರಡು ಅಡಿ ಆಳಕ್ಕೆ ಸ್ಟೀಲ್‌ ಪಿಲ್ಲರ್‌ಗಳನ್ನು ಅಳವಡಿಸುವ ಮೂಲಕ ಈ ವಿನ್ಯಾಸಕ್ಕೆ ರಚನಾತ್ಮಕ ಬಲವನ್ನು ಒದಗಿಸಲಾಗಿದೆ. ನಾವು ಇದೇ ಮಾದರಿಯನ್ನು ಗೋವಾದಲ್ಲಿ ನಿರ್ಮಿಸಿದ್ದೇವೆ, ಈ ವಿನ್ಯಾಸವು ಸಂಪೂರ್ಣವಾಗಿ ಮಳೆ ಮತ್ತು ಗಾಳಿಯನ್ನು ನಿರೋಧಿಸುವ ಶಕ್ತಿ ಹೊಂದಿದೆ”. ಪ್ರಶಾಂತವಾಗಿರುವ ಗಿರಿಗೆ ಪೂರಕವಾಗಿ ಈ ವಿನ್ಯಾಸವನ್ನು ರೂಪಿಸಲಾಗಿದೆಯೆಂದು ಅವರು ಹೇಳುತ್ತಾರೆ.


ಜನರ ಪ್ರತಿಕ್ರಿಯೆಯ ಕುರಿತಾಗಿ ಹೇಳುತ್ತಾ ಮಯಂಕ್‌ ಅವರು ಹೀಗೆ ಹೇಳುತ್ತಾರೆ,


“ಪ್ಲಾಸ್ಟಿಕ್‌ ನಿಂದ ರಚಿಸುತ್ತಿರುವ ಸುಂದರ ವಿನ್ಯಾಸವನ್ನು ಕಣ್ತುಂಬಿಕೊಳ್ಳಲು ಪ್ರತಿಯೊಬ್ಬರೂ ಕಾತುರರಾಗಿದ್ದರು, ಹಲವರು ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲ ತಾಣಗಳಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದರು”.


ಗಿರಿಯ ಸ್ವಚ್ಛತೆ


ಹಿಲ್ದಾರಿ ಯೋಜನೆಯ ಕಲ್ಪನೆ ಮೊಳಕೆಯೊಡೆದಿದ್ದು ಆರು ತಿಂಗಳ ಹಿಂದೆ. ಇಲ್ಲಿಯವರೆಗೆ ತಂಡವು ನಗರದ ಆರು ವಾರ್ಡ್‌ಗಳಲ್ಲಿ ಶೇಕಡಾ 90 ರಷ್ಟು ತ್ಯಾಜ್ಯ ವಿಂಗಡಣೆಯನ್ನು ಮಾಡಿದೆ. ಈ ಕೆಲಸಕ್ಕೆ ತಂಡವು ನಗರ ಪಾಲಿಕೆ ಪರಿಷತ್, ಪೌರ ಕಾರ್ಮಿಕರು, ನಾಗರಿಕ ಗುಂಪುಗಳು, ಸ್ಥಳೀಯ ಮಾಧ್ಯಮಗಳು ಮತ್ತು ಕೀನ್‌ (KEEN) & ಸ್ಕ್ರೆಂಬ್ಲಿಂಗ್ ಅಡ್ವೆಂಚರ್‌ಗಳಂತಹ ಎನ್‌ಜಿಓಗಳ ಸಹಕಾರವನ್ನು ಪಡೆದುಕೊಂಡಿದೆ.


ಸ್ವಚ್ಛತಾ ಡ್ರೈವ್‌ಗಳನ್ನು ತಿಂಗಳಿಗೆ ಒಂದು ಅಥವಾ ಎರಡು ಬಾರಿ ನಡೆಸಲಾಗುತ್ತದೆ. ಈ ಉಪಕ್ರಮವು ಇಲ್ಲಿಯವರೆಗೆ 18 ಸ್ವಚ್ಛತಾ ಡ್ರೈವ್‌ಗಳನ್ನು ನಡೆಸಿದೆ, ಮತ್ತು ಪ್ರತಿ ಬಾರಿಯೂ 60 ಕಿಲೋ ತ್ಯಾಜ್ಯವನ್ನು ಸಂಗ್ರಹಿಸಲಾಗಿದೆ.


ಸಂಗ್ರಹಿಸಿರುವ ತ್ಯಾಜ್ಯಗಳನ್ನು ಕೀನ್‌ ಮೂಲಕ ಸಂಸ್ಕರಿಸಲಾಗುತ್ತಿದೆ, ಇದು ಕಳೆದ 25 ವರ್ಷಗಳಿಂದ ತ್ಯಾಜ್ಯ ಸಂಸ್ಕರಣಾ ಕೆಲಸವನ್ನು ಮಾಡುತ್ತಿದೆ. ಸಂಸ್ಥೆಯು ಪ್ರತ್ಯೇಕಗೊಳಿಸಿದ ತ್ಯಾಜ್ಯಗಳನ್ನು ವಿಭಿನ್ನ ಕಂಟೇನರ್‌ಗಳಲ್ಲಿ ಸಂಗ್ರಹಿಸಿಡುತ್ತದೆ, ಮತ್ತು ಸಾಧ್ಯವಾದಷ್ಟು ಮರುಬಳಕೆ ಮಾಡಲಾಗುತ್ತದೆ.


ಭವಿಷ್ಯವನ್ನು ಹಸಿರಾಗಿಸುವತ್ತ


ಮಸ್ಸೂರಿಗೆ ಆಗಮಿಸುವ ಪ್ರವಾಸಿಗರು ತ್ಯಾಜ್ಯವನ್ನು ಸರಿಯಾದ ಸ್ಥಳದಲ್ಲಿ ಹಾಕುವಂತೆ ವ್ಯವಸ್ಥೆ ರೂಪಿಸಲು ತಂಡವು ಉತ್ತರ ಖಂಡ ಸರ್ಕಾರದೊಂದಿಗೆ ಮಾತು ಕತೆ ನಡೆಸಿದೆ.


ಸೂಕ್ತವಾದ ತ್ಯಾಜ್ಯ ನಿರ್ವಹಣೆಯ ಅವಶ್ಯಕತೆಯನ್ನು ಗಮನಿಸಿರುವ ನೆಸ್ಟ್ಲೆ ಇಂಡಿಯಾವು ಗತಿ ಫೌಂಡೇಷನ್‌ ಮತ್ತು ಡೆಹರಾಡೂನ್‌ ಮೂಲದ ಪರಿಸರ ಕ್ರಿಯೆ ಮತ್ತು ಕಾನೂನು ಗ್ರೂಪ್‌ನ ಸಹಯೋಗದೊಂದಿಗೆ, ಮೇ ತಿಂಗಳಲ್ಲಿ ಡೆಹರಾಡೂನ್‌ ಮತ್ತು ಮಸ್ಸೂರಿನಲ್ಲಿ ಯೋಜನೆಯನ್ನು ಪ್ರಾರಂಭಿಸಿದೆ.


ಪ್ಲಾಸ್ಟಿಕ್‌ ಎಕ್ಸ್‌ಪ್ರೆಸ್‌ ಟ್ರಾವೆಲ್ಸ್‌ ಹೆಸರಿನ ಮೊಬೈಲ್‌ ವ್ಯಾನ್‌ ನಗರದಾದ್ಯಂತ ಸಂಚರಿಸಿ, ಹಲವಾರು ಮ್ಯಾಗಿ ಪಾಯಿಂಟ್‌ಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಸಂಗ್ರಹಿಸುತ್ತಿದೆ. ಒಂದು ವರ್ಷದ ಈ ಯೋಜನೆಯು ಗಿರಿಯ ನಗರದ ಅಂದಾಜು 200 ಅಂಗಡಿಗಳನ್ನು ಸಂಪರ್ಕಿಸಿ ತ್ಯಾಜ್ಯಗಳನ್ನು ಸಂಗ್ರಹಿಸಿ ಜವಬ್ದಾರಿಯುತವಾಗಿ ವಿಲೇವಾರಿ ಮಾಡುವ ಕೆಲಸ ಮಾಡುವ ಗುರಿ ಹೊಂದಿದೆ.


ನೆಸ್ಟ್ಲೆಯ ಬೆಂಬಲದೊಂದಿಗೆ ತಂಡವು ಇಲ್ಲಿಯವರೆಗೆ ಅಂದಾಜು 6ಟನ್‌ ಕಡಿಮೆ ಮೌಲ್ಯದ ಪ್ಲಾಸ್ಟಿಕ್‌ಗಳನ್ನು ಚೀಪ್ಸ್‌ ಮತ್ತು ನೂಡಲ್ಸ್ ಪ್ಯಾಕ್‌ ಮಾಡಲು ದೆಹಲಿಗೆ ಕಳುಹಿಸಿದೆ. ಮರುಬಳಕೆ ಮಾಡಲಾಗದಂತಹ ಪ್ಲಾಸ್ಟಿಕ್‌ಗಳನ್ನು ವಿಲೇವಾರಿ ಮಾಡುವ ಜವಬ್ದಾರಿಯನ್ನು ನೆಸ್ಟ್ಲೆ ತೆಗೆದುಕೊಂಡಿದೆ.


ಪೌರ ಕಾರ್ಮಿಕರ ಕೆಲಸದ ಮುಖ್ಯಾಂಶಗಳು


ವಿವೇಚನೆಯಿಲ್ಲದೇ ಮಾಡುವ ಪ್ಲಾಸ್ಟಿಕ್‌ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಸ್ಚಚ್ಛತಾ ಡ್ರೈವ್‌ಗಳ ಉಪಕ್ರಮದ ಹೊರತಾಗಿಯೂ, ಹಲವರು ಪೌರ ಕಾರ್ಮಿಕರ ಮತ್ತು ಚಿಂದಿ ಆಯುವವರ ಶ್ರಮವನ್ನು ನಿರ್ಲ್ಯಕ್ಷ ಮಾಡುತ್ತಿದ್ದಾರೆ. ನಾವು ಅಸ್ತವ್ಯಸ್ತವಾಗಿ ಎಸೆಯುವ ವಸ್ತುಗಳನ್ನು ಇವರು ದಣಿವರಿಯದೇ ಸಂಗ್ರಹಿಸಿ ವಿಂಗಡಿಸುತ್ತಾರೆ, ಆದರೂ ನಮ್ಮ ಮನೆಯ ಎದುರು ಅಥವಾ ತೆರೆದ ಸ್ಥಳಗಳು ತ್ಯಾಜ್ಯಗಳಿಂದ ಮುಕ್ತಿ ಪಡೆಯುವುದೇ ಇಲ್ಲ.


ಈ ಕಾರ್ಮಿಕರಿಗೆ ಸೂಕ್ತ ಗೌರವ ಸಲ್ಲಿಸುವ ಉದ್ದೇಶದಿಂದ ಮ್ಯೂಸಿಯಂ ಆಫ್‌ ಗೋವಾದ ಕಲಾಕಾರನೊಬ್ಬ ದೀವಾರೋನ್‌ ಪರ್‌ ದಸ್ತಕ್‌ (ಗೋಡೆಯನ್ನು ಬಡಿಯಿರಿ) ಎನ್ನುವ ಪ್ರಾಜೆಕ್ಟ್‌ನಡಿ ಬೃಹತ್‌ ಗೀಚು ಬರಹವನ್ನು ಬರೆದಿದ್ದಾನೆ.

“ಈ ಸ್ವಚ್ಛತಾ ಪ್ರಕ್ರಿಯೆಯಲ್ಲಿ ನೈರ್ಮಲ್ಯ ಕೆಲಸಗಾರರಿಂದ ಹಿಡಿದು ಪುರಸಭೆಯ ಕಾರ್ಮಿಕರವರೆಗೆ ಹಲವಾರು ಬಗೆಯ ಕಾರ್ಮಿಕರು ಭಾಗವಹಿಸಿದ್ದಾರೆ, ಅವರಿಗಾಗಿ ಕೆಲವು ಉಪಕರಣಗಳನ್ನು ಪರಿಚಯಿಸುವ ಮೂಲಕ ಅವರ ಜೀವನವನ್ನು ಸುಧಾರಣೆಗೊಳಿಸುವ ಗುರಿ ಹೊಂದಿದ್ದೇವೆ” ಎಂದು ಮಯಂಕ್‌ರವರು ಹೇಳುತ್ತಾರೆ.