ಉಚಿತ ಧಾನ್ಯ ವಿತರಣೆ ಯೋಜನೆಯನ್ನು ನವೆಂಬರ್‌ವರೆಗೆ ವಿಸ್ತರಿಸಿದ ಪ್ರಧಾನಿ

ಮುಂಬರುತ್ತಿರುವ ಸಾಲು ಸಾಲು ಹಬ್ಬಗಳ ಕಾರಣದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದರು ಪ್ರಧಾನಿ ನರೇಂದ್ರ ಮೋದಿ.

ಉಚಿತ ಧಾನ್ಯ ವಿತರಣೆ ಯೋಜನೆಯನ್ನು ನವೆಂಬರ್‌ವರೆಗೆ ವಿಸ್ತರಿಸಿದ ಪ್ರಧಾನಿ

Tuesday June 30, 2020,

2 min Read

ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಂಜೆ 4 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡುತ್ತಾ, ಮುಂಬರುವ ಸಾಲು ಸಾಲು ಹಬ್ಬಗಳನ್ನು ಗಮನದಲ್ಲಿರಿಸಿಕೊಂಡು ಉಚಿತವಾಗಿ ಧಾನ್ಯ ನೀಡುವ ಯೋಜನೆಯನ್ನು ನವೆಂಬರ್‌ವರೆಗೆ ವಿಸ್ತರಿಸುವುದಾಗಿ ಹೇಳಿದರು. ಏಪ್ರಿಲ್‌ ನಲ್ಲಿ ಸರ್ಕಾರ ದೇಶದ 80 ಕೋಟಿ ಜನರಿಗೆ ಉಚಿತವಾಗಿ ಧಾನ್ಯ ನೀಡುವ ಯೋಜನೆಯನ್ನು ಪ್ರಾರಂಭಸಿತ್ತು.


ಈ ಕಾರ್ಯವನ್ನು ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯ ಮೂಲಕ ಅನುಷ್ಠಾನಗೊಳಿಸಲಾಗುವುದು, ಈ ಯೋಜನೆಯ ಮೂಲಕ 5 ಕೆ.ಜಿ. ಗೋಧಿ ಅಥವಾ ಅಕ್ಕಿ ಮತ್ತು 1 ಕೆ.ಜಿ. ಧಾನ್ಯ ವಿತರಿಸಲಾಗುತ್ತದೆ.




ಏಪ್ರಿಲ್‌ನಲ್ಲೆ ಜಾರಿಯಾದ ಈ ಯೋಜನೆಗೆ ಸರ್ಕಾರ ಈಗ 90,000 ಕೋಟಿ ರೂ. ವ್ಯಯಿಸಲಿದ್ದು, ಒಟ್ಟಾರೆ ಯೋಜನೆಯ ಖರ್ಚು ಸುಮಾರು ರೂ. 1.25 ಲಕ್ಷ ಕೋಟಿಯಷ್ಟಾಗಲಿದೆ.


ಈ ಯೋಜನೆಯ ಯಶಸ್ಸಿನ ಶ್ರೇಯಸ್ಸು ದೇಶದ ರೈತರು ಮತ್ತು ಪ್ರಾಮಾಣಿಕವಾಗಿ ಕಂದಾಯ ತುಂಬುವವರಿಗೆ ಸಲ್ಲುತ್ತದೆ ಎಂದರು ಪ್ರಧಾನಿ.


ಸರ್ಕಾರದ ಒಂದು ದೇಶ ಒಂದು ಪಡಿತರ ಚೀಟಿಯ ಅನುಷ್ಠಾನವು ಈ ಯೋಜನೆ ಸಮರ್ಪಕವಾಗಿ ಕಾರ್ಯುನಿರ್ವಹಿಸಲು ಅನುವು ಮಾಡಿಕೊಡಲಿದೆ ಎಂದು ಪ್ರಧಾನಿ ಹೇಳಿದರು.


ದೇಶದಲ್ಲಿ ಲಾಕ್‌ಡೌನ್‌ ಘೋಷಣೆಯಾದಾಗಿನಿಂದಲೂ ಸರ್ಕಾರ ಸಮಯೋಚಿತ ನಿರ್ಧಾರವನ್ನು ಕೈಗೊಂಡಿದೆ ಎಂದು ಹೇಳಿದ ಪ್ರಧಾನಿ, “ಯಾರೂ ಹಸಿವಿನಿಂದ ಬಳಲಬಾರದು” ಎಂದು ಒತ್ತಿ ಹೇಳಿದರು.


ದೇಶದಲ್ಲಿ ಕೊರೊನಾವೈರಸ್‌ ತಡೆಗಾಗಿ ಸರ್ಕಾರ ಆಗಲೇ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಜನ್‌ಧನ್‌ ಖಾತೆಗೆ ನೇರವಾಗಿ 20,000 ಕೋಟಿ ರೂ. ವರ್ಗಾವಣೆ ಮತ್ತು ರೈತರು ಮತ್ತು ಗ್ರಾಮೀಣ ಅಭಿವೃದ್ಧಿಗೆ ಕೈಗೊಂಡ ಕ್ರಮಗಳು ಸೇರಿವೆ.


ಅದೇ ಸಮಯದಲ್ಲಿ ದೇಶವಾಸಿಗಳು ಕೊರೊನಾವೈರಸ್‌ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕು ಎಂದರು.


"ಪ್ರತಿಯೊಬ್ಬರು ತಮ್ನ ತಮ್ಮ ಕಾಳಜಿ ವಹಿಸಿಕೊಳ್ಳಬೇಕು" ಎಂದು ಪ್ರಧಾನಿ ಮೋದಿ ವಿನಂತಿಸಿಕೊಂಡರು.


ಪ್ರಪಂಚದಾದ್ಯಂತದ ಬೇರೆ ರಾಷ್ಟ್ರಗಳೊಂದಿಗೆ ಹೋಲಿಸಿದಾಗ, ಪ್ರಕರಣಗಳು ಅಥವಾ ಸಾವಿನ ಪ್ರಮಾಣದಲ್ಲಿ ಭಾರತದ ಸಾಧನೆ ಉತ್ತಮವಾಗಿದ್ದು, "ಸಮಯೋಚಿತ ಲಾಕ್‌ಡೌನ್ ಲಕ್ಷಾಂತರ ಜೀವಗಳನ್ನು ಉಳಿಸಿದೆ," ಎಂದು ಪ್ರಧಾನಿ ಒತ್ತಿ ಹೇಳಿದರು.


ಅದೇ ಸಮಯಕ್ಕೆ ಅನ್‌ಲಾಕ್ 1.0 ಪ್ರಾರಂಭವಾದಾಗಿನಿಂದ ಜನರ ನಿಯಮ ಉಲ್ಲಂಘನೆ ಅಥವಾ ತಾತ್ಸಾರದ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದರು. "ನಾವು ಮೊದಲಿನಂತೆ ಕಠಿಣತೆಯ ರೀತಿಯಿಂದ ಕೆಲಸ ಮಾಡಬೇಕಾಗುತ್ತದೆ. ಯಾರೂ ಕಾನೂನಿಗಿಂತ ದೊಡ್ಡವರಲ್ಲ ಎಂಬುದನ್ನು ಜನರು ಅರಿತುಕೊಳ್ಳಬೇಕು,” ಎಂದು ಪ್ರಧಾನಿ ಹೇಳಿದರು.


ಕರೋನವೈರಸ್ ವಿರುದ್ಧದ ಹೋರಾಟದಲ್ಲಿ ದೇಶದ ನಾಗರಿಕರು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು, ಮುಖಗವಸುಗಳನ್ನು ಧರಿಸಬೇಕು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.