ಕೇರಳದ ಬುಡಕಟ್ಟು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ ಈ ಪೊಲೀಸ್‌ ಅಧಿಕಾರಿಗಳು

ವಿಥುರಾ ಪೊಲೀಸ್‌ ಠಾಣೆಯ ಸಿಬ್ಬಂದಿಗಳು ದಟ್ಟ ಕಣಿವೆ, ಗುಡ್ಡಗಳ ಮೂಲಕ ಹಾದು ಹೋಗಿ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.

ಕೇರಳದ ಬುಡಕಟ್ಟು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ ಈ ಪೊಲೀಸ್‌ ಅಧಿಕಾರಿಗಳು

Friday August 07, 2020,

2 min Read

ಕೊರೊನಾವೈರಸ್‌ ಭಾರತದಾದ್ಯಂತ ಪಸರಿಸಲು ಪ್ರಾರಂಭವಾದಾಗಿನಿಂದ ಪೊಲೀಸರು ಕಾನೂನು ಕಾಪಾಡಲು ಶ್ರಮವಹಿಸಿ ಕೆಲಸಮಾಡುತ್ತಿದ್ದಾರೆ. ಲಾಕ್‌ಡೌನ್‌ನಲ್ಲಿ ಅಗತ್ಯವಿದ್ದರಿಗೆ ಮೂಲವಸ್ತುಗಳನ್ನು ತಲುಪಿಸಿದ್ದು, ಹಲವರು ಹುಟ್ಟು ಹಬ್ಬ ಆಚರಿಸಲು ಸಹಾಯ ಮಾಡಿದ್ದು, ಇಂತಹ ಅನೇಕ ಘಟನೆಗಳನ್ನು ನಾವು ಇತ್ತೀಚೆಗೆ ಕೇಳಿದ್ದೇವೆ.


ಇಂತಹದ್ದೆ ಒಂದು ವಿಶಿಷ್ಟ ಘಟನೆಗೆ ಸಾಕ್ಷಿಯಾಗಿದೆ ಕೇರಳ. ಕೇರಳದ ತಿರುವನಂಥಪುರಂ ಜಿಲ್ಲೆಯ ವಿಥುರಾ ಪೊಲೀಸ್‌ ಠಾಣೆಯ ಅಧಿಕಾರಿಗಳು ಸಮೀಪದ ಕಾಡೊಂದರಲ್ಲಿರುವ ಬುಡಕಟ್ಟು ಹಳ್ಳಿಯ ಮಕ್ಕಳಿಗೆ ಪಾಠ ಮಾಡುತ್ತ ಗಮನ ಸೆಳೆದಿದ್ದಾರೆ.


ಮಕ್ಕಳಿಗೆ ಪಾಠ ಮಾಡುತ್ತಿರುವ ಪೊಲೀಸ್‌ ಅಧಿಕಾರಿಗಳು




ದಿ ನ್ಯೂಸ್‌ ಮಿನಿಟ್‌ ವರದಿಯ ಪ್ರಕಾರ ಪೊಲೀಸ್‌ ಸಿಬ್ಬಂದಿಗಳು ದಟ್ಟ ಕಣಿವೆ, ಗುಡ್ಡಗಳ ಮೂಲಕ ಹಾದು ಹೋಗಿ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.


ಕೆಲವು ದಿನಗಳ ಹಿಂದೆ ವಿಥುರಾದ ಒಂದು ಪೊಲೀಸ್‌ ಠಾಣೆಯನ್ನು ಮಕ್ಕಳ ಸ್ನೇಹಿ ಸ್ಥಳವಾಗಿ ಮಾರ್ಪಡಿಸಲಾಗಿತ್ತು, ಇದನ್ನು ಕೇರಳ ಪೊಲೀಸ್ ಮಹಾನಿರ್ದೇಶಕ ಲೋಕನಾಥ್ ಬೆಹರಾ ಉದ್ಘಾಟಿಸಿದ್ದರು. ಇ-ಕಲಿಕೆ ಮತ್ತು ಆನ್‌ಲೈನ್‌ ಶಿಕ್ಷಣಕ್ಕೆ ಬೇಕಾದ ಎಲ್ಲ ಸೌಲಭ್ಯಗಳು ವಿಷೇಶವಾಗಿ ಕಲ್ಲೂಪ್ಪಾರಾ ಬುಡಕಟ್ಟು ಹಳ್ಳಿಯ ಮಕ್ಕಳಿಗಾಗಿ ಅಲ್ಲಿ ಸಿದ್ಧವಾಗಿತ್ತು.


ಇಷ್ಟೆಲ್ಲ ಸೌಲಭ್ಯಗಳ ನಡುವೆಯೂ ಶಾಲೆಗೆ ಬರಬೇಕಿದ್ದ 9 ಮಕ್ಕಳು ಆ ಸ್ಥಳ 6 ಕಿ.ಮೀ. ದೂರವಿರುವ ಕಾರಣದಿಂದ ಬರಲಾಗಲಿಲ್ಲ.


ಆಗ ಪೊಲೀಸರು ಮಕ್ಕಳ ಮನೆಯ ಸಮೀಪವಿರುವ ಸ್ಥಳದಲ್ಲೆ ವಿದ್ಯಾ ಕೇಂದ್ರವನ್ನು ಸ್ಥಾಪಿಸಬಯಸಿದರು. ದಿ ಲಾಜಿಕಲ್‌ ಇಂಡಿಯನ್‌ ಪ್ರಕಾರ ಸಬ್‌ ಇನ್ಸ್ಪೆಕ್ಟರ್‌ ಎಸ್‌ ಎಲ್‌ ಸುಧೀಶ್‌, ಬುಡಕಟ್ಟು ಹೋರಾಟಗಾರ ಧ್ಯಾನಾ ರಾಮನ್‌ ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮನೋಜ್ ಅಬ್ರಹಾಂ ಸೇರಿ ಆ ಬುಡಕಟ್ಟು ಹಳ್ಳಿಯಲ್ಲಿಯೆ ವಿದ್ಯಾ ಕೇಂದ್ರವನ್ನು ಪ್ರಾಯೋಜಿಸಿದರು.


ಪ್ರೊಜೆಕ್ಟರ್, ಟಿವಿ, ಟ್ಯಾಬ್ಲೆಟ್‌ಗಳು, ಕುರ್ಚಿಗಳು ಮತ್ತು ಬೋರ್ಡ್‌ಗಳಂತಹ ತರಗತಿಗಳನ್ನು ನಡೆಸಲು ಬೇಕಾದ ಎಲ್ಲಾ ಸಂಪನ್ಮೂಲಗಳನ್ನು ಡಿಜಿಪಿ ಲೋಕನಾಥ್ ಬೆಹೆರಾ ಅವರ ಸಹಾಯದಿಂದ ಸಂಗ್ರಹಿಸಲಾಯಿತು. ವಿದ್ಯಾರ್ಥಿ ಪೊಲೀಸ್ ಕೆಡೆಟ್‌ಗಳು (ಎಸ್‌ಪಿಸಿ) ಹಾಗೂ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕೆಲಸ ಮಾಡುವ ಶಿಕ್ಷಕರು ಸಹ ಸಹಾಯ ಮಾಡಿದರು.


"ಇವರೆಲ್ಲರ ಬೆಂಬಲದೊಂದಿಗೆ, ನಾವು ಉಪಕರಣಗಳನ್ನು ವ್ಯವಸ್ಥೆಗೊಳಿಸಿದ್ದೇವೆ ಮತ್ತು ಸ್ಥಳೀಯರು 300 ಚದರ ಅಡಿಯ ತರಗತಿಯನ್ನು ರೀಡ್ಸ್ ಮತ್ತು ಬಿದಿರಿನೊಂದಿಗೆ ಸೀಮಿತ ಸಮಯದಲ್ಲಿ ನಿರ್ಮಿಸಿದರು,” ಎಂದು ವಿಥುರಾ ಸ್ಟೇಷನ್ ಹೌಸ್ ಅಧಿಕಾರಿ ಎಸ್.ಶ್ರೀಜಿತ್ ಹೇಳಿದರು.


“ಠಾಣೆಯ ಕೆಲವು ಅಧಿಕಾರಿಗಳು ಮತ್ತು ಎಚ್‌ಎಸ್‌ಎಸ್‌ನ ಕೆಲವು ಶಿಕ್ಷಕರು ನಿಯಮಿತವಾಗಿ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ. ಮಕ್ಕಳೊಂದಿಗೆ ಸಮಯ ಕಳೆಯಲು ನಮಗೂ ಇಷ್ಟ, ನಮ್ಮೊಂದಿಗೆ ಸಮಯ ಕಳೆಯಲು ಮಕ್ಕಳೂ ತುಂಬಾ ಇಷ್ಟ ಪಡುತ್ತಾರೆ,” ಎಂದರು ಅವರು.