ಫೇಸ್‌ ಮಾಸ್ಕ್‌ಗಳ ಕೊರತೆ ನೀಗಿಸಲು ಮುಂದೆ ಬಂದ ಜೈಲಿನ ಖೈದಿಗಳು

ಮಾರುಕಟ್ಟೆಯಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್‌ಗಳ ಕೊರತೆಯಿಂದಾಗಿ ಮಧ್ಯ ಪ್ರದೇಶದ ಇಂದೋರ್ ಕಾರಾಗೃಹ, ತಿಹಾರ್ ಕಾರಾಗೃಹ, ಕೇರಳ, ಕರ್ನಾಟಕ ರಾಜ್ಯದ ಕಾರಾಗೃಹಗಳಲ್ಲಿ ಖೈದಿಗಳ ಮೂಲಕ ಮಾಸ್ಕ್‌ಗಳನ್ನು ಕಡಿಮೆ ದರದಲ್ಲಿ ತಯಾರಿಸಲಾಗುತ್ತಿದೆ.
3 CLAPS
0

ನೊವೆಲ್ ಕೊರೊನ ವೈರಸ್ ಶಂಕಿತ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದಂತೆ, ಎಲ್ಲೆ ಆಚೆ ಕಡೆ ಹೋಗಬೇಕಂದರೂ ಮಾಸ್ಕ್ ಧರಿಸಿ ನಮ್ಮ ಸುರಕ್ಷತೆಯನ್ನು ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ. ಆದರೆ ಮಾರುಕಟ್ಟೆಯಲ್ಲಿ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ಗಳ ಕೊರತೆ ಕಂಡು ಬರುತ್ತಿದೆ. ಅಲ್ಲದೇ ಮಾಸ್ಕ್‌ಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದನ್ನು ತಡೆಯುವುದಕ್ಕಾಗಿ ಕರ್ನಾಟಕದ ಜೈಲುಗಳಲ್ಲಿ, ಮಧ್ಯ ಪ್ರದೇಶದ ಇಂದೋರ್‌ ಜೈಲು, ತಿಹಾರ್ ಜೈಲು ಹಾಗೂ ಕೇರಳದ ಜೈಲಿನಲ್ಲಿ ಖೈದಿಗಳು ಮಾಸ್ಕ್‌ಗಳು ಹಾಗೂ ಸ್ಯಾನಿಟೈಜರ್‌ಗಳನ್ನು ತಯಾರಿಸುತ್ತಿದ್ದಾರೆ.

ಮಧ್ಯ ಪ್ರದೇಶದ ಇಂದೋರ್ ಸೆಂಟ್ರಲ್ ಜೈಲಿನಲ್ಲಿ ಮಾಸ್ಕ್‌ಗಳ ಕೊರತೆಯನ್ನು ಎದುರಿಸಲು ಖೈದಿಗಳ‌ ಟೈಲರಿಂಗ್ ಘಟಕದಲ್ಲಿ ಮರುಬಳಕೆ ಮಾಡಬಹುದಾದ ಹತ್ತಿಯಿಂದ ತಯಾರಿಸಿದ ಮಾಸ್ಕ್‌ಗಳನ್ನು ತಯಾರಿಸುತ್ತಿದ್ದಾರೆ ಹಾಗೂ ಈ ಮಾಸ್ಕ್‌ನ ಬೆಲೆಯು ಹತ್ತು ರೂಪಾಯಿ ಆಗಿದೆ.

ಇಂದೋರ್ ಕಾರಾಗೃಹದಲ್ಲಿ ಮಾಸ್ಕ್‌ಗಳನ್ನು ತಯಾರಿಸುತ್ತಿರುವ ಖೈದಿಗಳು (ಚಿತ್ರಕೃಪೆ: ಎನ್‌ಡಿಟಿವಿ)ಈ ಉಪಕ್ರಮದ ಕುರಿತಾಗಿ ಎನ್‌ಡಿಟಿವಿಯೊಂದಿಗೆ ಮಾತನಾಡಿದ ಇಂದೋರ್ ಕೇಂದ್ರ ಕಾರಾಗೃಹದ ಅಧೀಕ್ಷಕ ರಾಕೇಶ್ ಭಂಗ್ರೆ,

"ಹೆಚ್ಚುತ್ತಿರುವ ಬೇಡಿಕೆ ಹಾಗೂ ಪೂರೈಕೆಯ ಕೊರತೆಯಿಂದಾಗಿ,‌ ಮಾಸ್ಕ್‌ಗಳ ಬೆಲೆ ಹೆಚ್ಚಿದೆ. ಉತ್ತಮ ಗುಣಮಟ್ಟದ ಮಾಸ್ಕ್‌ಗಳು ಹೆಚ್ಚಿನ ಬೆಲೆಯನ್ನು ಹೊಂದಿವೆ. ನಾವು ಕಡಿಮೆ ದರದಲ್ಲಿ ಹತ್ತು ರೂಪಾಯಿಯಲ್ಲಿ ಜನರಿಗೆ ಮಾಸ್ಕ್‌ಗಳನ್ನು ತಲುಪಿಸುವುದು ನಮ್ಮ‌ ಉದ್ದೇಶವಾಗಿದೆ. ಮಾಸ್ಕ್‌ಗಳನ್ನು ಮೂರು ಲೇಯರ್‌ನಿಂದ ಕೂಡಿದ ಹತ್ತಿ ಬಟ್ಟೆಯಿಂದ ತಯಾರಿಸಲಾಗುತ್ತಿದೆ, ಈ ಮಾಸ್ಕ್‌ಗಳನ್ನು ಮರುಬಳಕೆ ಮಾಡಬಹುದಾಗಿದೆ. ಜೈಲಿನ 15 ಖೈದಿಗಳು ಇವುಗಳನ್ನು ಹೊಲಿಯುವಂತಹ ತರಬೇತಿ ಪಡೆದಿದ್ದಾರೆ. ದಿನಕ್ಕೆ ಕನಿಷ್ಟ 200 ಮಾಸ್ಕ್‌ಗಳನ್ನು ತಯಾರಿಸಬಹುದು," ಎಂದರು.

ಕರ್ನಾಟಕದ 8 ಕಾರಾಗೃಹಗಳಲ್ಲಿಯೂ ಮಾಸ್ಕ್‌ಗಳ ತಯಾರಿ ಜೋರಾಗಿ ನಡೆದಿದೆ. ದಿನಕ್ಕೆ 5,000 ಮಾಸ್ಕ್‌ಗಳನ್ನು ತಯಾರಿಸಲಾಗುತ್ತಿದ್ದು ಬೆಂಗಳೂರಿನ ಪರಪ್ಪನ್‌ ಅಗ್ರಹಾರ ಒಂದರಲ್ಲೆ ದಿನಕ್ಕೆ 2,000 ಮಾಸ್ಕ್‌ಗಳು ತಯಾರಾಗುತ್ತಿವೆ. ಒಂದು ಮಾಸ್ಕ್‌ನ ಬೆಲೆ 6 ರೂ. ಇದ್ದು ಪ್ಯಾಕಿಂಗ್‌ ಮಾಡುವ ಮೊದಲು ಸೋಂಕುರಹಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ.

ಇದೇ ರೀತಿಯಾಗಿ ಕೇರಳ ರಾಜ್ಯದ ಜೈಲುಗಳಲ್ಲಿಯೂ ಸಹ ಮಾಸ್ಕ್‌ಗಳು ಕೊರತೆಯನ್ನು ಪರಿಹರಿಸಲು ಮಾಸ್ಕ್ ಹಾಗೂ ಸ್ಯಾನಿಟೈಸರ್ ಅನ್ನು ತಯಾರಿಸಲಾಗುತ್ತದೆ. ಇದನ್ನು ಕೇರಳದ ಸಿಎಂ ಪಿನರಾಯಿ ವಿಜಯನ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಕೇರಳದ ಸಿಎಂ ಪಿನರಾಯಿ ವಿಜಯನ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ

"#COVID-19 | ಮಾಸ್ಕ್‌ಗಳ ಸಮಸ್ಯೆಯನ್ನು ಪರಿಹರಿಸುವುದು

ಮಾಸ್ಕ್‌ಗಳ ಕೊರತೆಯ ನಡುವೆ ಮಾಸ್ಕ್‌ಗಳನ್ನು ತಯಾರಿಸಲು ರಾಜ್ಯದ ಕಾರಾಗೃಹಗಳನ್ನು ತೊಡಗಿಸಲು ನಿರ್ದೇಶನಗಳನ್ನು ನೀಡಲಾಯಿತು. ತಿರುವನಂತಪುರಂ ಜೈಲಿನ ಅಧಿಕಾರಿಗಳು‌ ಮೊದಲ ಬ್ಯಾಚ್‌ ಅನ್ನು ಹಸ್ತಾಂತರಿಸಿದ್ದಾರೆ ಎಂದು ಟ್ವಿಟ್ ಮಾಡಿದ್ದಾರೆ."

ಮಾಸ್ಕ್‌ಗಳ ಕೊರತೆಯನ್ನು‌ ನೀಗಿಸುವಿಕೆ ಎಂಬ ತಲೆಬರಹದೊಂದಿಗೆ ವಿಜಯನ್ ಅವರು ನೀಲಿ ಬಣ್ಣದ ಮಾಸ್ಕ್‌‌ನ ಕಟ್ಟಿನೊಂದಿಗಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಈ ನಿರ್ಧಾರವು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಶಂಸೆಗೆ ಒಳಗಾಗಿದೆ.

Latest

Updates from around the world