ಕೊರೊನವೈರಸ್ ಪರೀಕ್ಷೆಗೆ ಸಿದ್ಧವಾಯ್ತು ಮೈಲಾಬ್ಸ್‌ನ ಅಗ್ಗದ, ವೇಗವಾದ ಭಾರತೀಯ ಕೋವಿಡ್-19 ಕಿಟ್
ಮೈಲ್ಯಾಬ್ಸ್‌ನ ಈ ಕಿಟ್ ರಾಷ್ಟ್ರೀಯ ನಿಯಂತ್ರಕ ಸಂಸ್ಥೆಯಿಂದ ವಾಣಿಜ್ಯ ಅನುಮೋದನೆ ಪಡೆದ ಮೊದಲ ಪರೀಕ್ಷಾ ಕಿಟ್ ಆಗಿದೆ.
ಭಾರತದಲ್ಲಿ ಕೋವಿಡ್-19 ಪ್ರಕರಣಗಳು 700 ದಾಟಿರುವ ಸಮಯದಲ್ಲಿ, ಕಡಿಮೆ ಅವಧಿಯಲ್ಲಿ ಹೆಚ್ಚಿನ ವೈದ್ಯಕೀಯ ಅಗತ್ಯತೆ ಹಾಗೂ ಪರೀಕ್ಷೆ ಮಾಡುವಂತಹ ಸವಲತ್ತುಗಳ ಅನಿವಾರ್ಯತೆ ಎದುರಾಗಿದೆ. ಈ ಸಾಂಕ್ರಾಮಿಕ ರೋಗದ ಮೇಲೆ ಹಿಡಿತ ಸಾಧಿಸುವಂತಹ ಪ್ರಯತ್ನದಲ್ಲಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್‌ಕೊ), ‘ಮೈಲ್ಯಾಬ್ ಡಿಸ್ಕವರಿ ಸೊಲ್ಯೂಷನ್ಸ್’ ನ ಮೇಡ್ ಇನ್ ಇಂಡಿಯಾ ಕೋವಿಡ್-19 ಪರೀಕ್ಷಾ ಕಿಟ್‌ಗಳಿಗೆ ವಾಣಿಜ್ಯ ಅನುಮೋದನೆ ನೀಡಿದೆ.
ಪುಣೆ ಮೂಲದ ಮೊಲಿಕ್ಯೂಲರ್ ಡಯಾಗ್ನೋಸ್ಟಿಕ್ಸ್ ಸ್ಟಾರ್ಟ್‌ಪ್ ಆದ ಮೈಲ್ಯಾಬ್ ಪ್ರಕಾರ, ಮೈಲ್ಯಾಬ್ ಪ್ಯಾಥೋಡೆಟೆಕ್ಟ್ ಕೋವಿಡ್-19 ಕ್ವಾಲಿಟೇಟಿವ್ ಪಿಸಿಆರ್ ಕಿಟ್ ಎಂದು ಹೆಸರಿಸಲಾದ ಈ ಕಿಟ್, ರಾಷ್ಟ್ರೀಯ ನಿಯಂತ್ರಕ ಸಂಸ್ಥೆಯಿಂದ ವಾಣಿಜ್ಯ ಅನುಮೋದನೆ ಪಡೆದ ಮೊದಲ ಪರೀಕ್ಷಾ ಕಿಟ್ ಆಗಿದೆ.
ಪ್ರಸ್ತುತ ಭಾರತ ಸರ್ಕಾರವು ಜರ್ಮನಿ ಹಾಗೂ ಸ್ವಿಟ್ಜರ್ಲ್ಯಾಂಡ್‌ನಿಂದ ಆರ್‌ಟಿ-ಪಿಸಿಆರ್ ಕಿಟ್‌ಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಉಪಕ್ರಮವು ಸರ್ಕಾರದ ವಿದೇಶಿ ಉತ್ಪನ್ನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ ಮತ್ತು ವಿರಳವಾಗಿರುವ ವಿಮಾನಯಾನ ಹಾರಾಟದ ತೊಂದರೆಗಳನ್ನು ತಪ್ಪಿಸುವಲ್ಲಿ ಸಹಾಯ ಮಾಡುತ್ತದೆ.
ಮೈಲ್ಯಾಬ್ ಪ್ಯಾಥೋಡೆಟೆಕ್ಟ್ ಕೋವಿಡ್-19 ಕ್ವಾಲಿಟೇಟಿವ್ ಪಿಸಿಆರ್ ಕಿಟ್‌ನ ಬೆಲೆ ಪ್ರಸ್ತುತ ಖರೀದಿ ವೆಚ್ಚದ ನಾಲ್ಕನೇ ಒಂದು ಭಾಗದಷ್ಟಿರಲಿದೆ ಎಂದು ಈ ಸ್ಟಾರ್ಟ್‌ಪ್ ಹೇಳುತ್ತದೆ.
"ಈ ಪರೀಕ್ಷೆಯು ಸೂಕ್ಷ್ಮ ಪಿಸಿಆರ್ ತಂತ್ರಜ್ಞಾನವನ್ನು ಆಧರಿಸಿರುವುದರಿಂದ ಆರಂಭಿಕ ಹಂತದ ಸೋಂಕನ್ನು ಸಹ ಹೆಚ್ಚಿನ ನಿಖರತೆಯಿಂದ ಕಂಡು ಹಿಡಿಯಬಹುದೆಂದು ಐಸಿಎಂಆರ್‌ನಲ್ಲಿನ ಪರೀಕ್ಷಾ ಸಮಯದಲ್ಲಿ ಸಾಬೀತಾಗಿದೆ. ಐಸಿಎಂಆರ್ ಮತ್ತು ಸಿಡಿಎಸ್‌ಕೋ ಅನುಮೋದಿತ ಈ ಕಿಟ್ ವೈರಸ್‌ಅನ್ನು ವೇಗವಾಗಿ ಪತ್ತೆ ಹಚ್ಚುತ್ತದೆ," ಎಂದು ಮೈಲ್ಯಾಬ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಶೈಲೇಂದ್ರ ಕವಾಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಂಪನಿಯ ಪ್ರಕಾರ, ಕೋವಿಡ್-19 ಕ್ವಾಲಿಟೇಟಿವ್ ಕಿಟ್ ತಯಾರಿಸಲು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ (ಡಿಸಿಜಿಐ) ಅನುಮತಿಯನ್ನು ಪಡೆದಿದೆ ಮತ್ತು ಇದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಲ್ಲಿ (ಐಸಿಎಂಆರ್) ಮೌಲ್ಯಮಾಪನ ಮಾಡಲಾಗಿದೆ.
ಕಿಟ್ ಹೇಗೆ ಕಾರ್ಯ ನಿರ್ವಹಿಸುತ್ತದೆ?
ಯುವರ್‌ಸ್ಟೋರಿಯೊಂದಿಗೆ ಮಾತನಾಡಿದ ಮೈಲ್ಯಾಬ್‌ನ ವೈದ್ಯಕೀಯ ವ್ಯವಹಾರಗಳ ನಿರ್ದೇಶಕರಾದ ಡಾ.ಗೌತಮ್ ವಾಂಖೆಡೆ, ಈ ಕಿಟ್‌ಗಳು ಆರ್‌ಟಿ(ರಿಯಲ್ ಟೈಮ್) ಪಿಸಿಆರ್ ಎಂಬ ತಂತ್ರಜ್ಞಾನವನ್ನು ಆಧರಿಸಿದ್ದು, ಹೀಗಾಗಿ ಪರೀಕ್ಷೆ ಮಾಡಲು ಬಯಸುವ ಯಾವುದೇ ಪ್ರಯೋಗಾಲಯದಲ್ಲಿ ಈ ಆರ್‌ಟಿ ಪಿಸಿಆರ್ ಉಪಕರಣವನ್ನು ಬಳಸಿ ಪರೀಕ್ಷಿಸಬಹುದಾಗಿದೆ ಎಂದು ಹೇಳಿದರು.
"ಭಾರತದ ವಿವಿಧ ಪ್ರಯೋಗಾಲಯಗಳಲ್ಲಿ ಸುಮಾರು 5,000 ಇಂತಹ ಉಪಕರಣಗಳು ಲಭ್ಯವಿವೆ. ಅದರಲ್ಲಿ ಕೆಲವು ಕೇವಲ ರೋಗಿಗಳ ರೋಗ ನಿರ್ಣಯದಲ್ಲಿ ಭಾಗಿಯಾಗದೆ ಸಂಶೋಧನಾ ಪ್ರಯೋಗಾಲಯದಲ್ಲಿ ಭಾಗಿಯಾಗಿರಬಹುದು. ಆದರೆ, ಇಂತಹ ಉಪಕರಣಗಳು ದೇಶಾದ್ಯಂತ ಪ್ರಯೋಗಾಲಯದಲ್ಲಿ ಗಣನೀಯ ಪ್ರಮಾಣದಲ್ಲಿವೆ. ಆದರೆ ಟೆಸ್ಟ್ ಕಿಟ್ ಬಳಸಲು ಅಗತ್ಯವಿರುವ ಏಕೈಕ ಸಾಧನ ಇದು," ಎಂದು ವಾಂಖೆಡೆ ವಿವರಿಸಿದರು.
ಕಂಪನಿಯ ಪ್ರಕಾರ, ಒಂದು ಕಿಟ್‌ನಿಂದ ಸುಮಾರು 100 ರೋಗಿಗಳನ್ನು ಪರೀಕ್ಷಿಸಬಹುದಾಗಿದೆ. ಈ ಕಿಟ್ ಎರಡೂವರೆ ಗಂಟೆಯಲ್ಲಿ ಕೋವಿಡ್-19 ಸೋಂಕನ್ನು ಪರೀಕ್ಷೆ ಮಾಡಿ, ಪತ್ತೆ ಮಾಡುತ್ತದೆ. ಇದು ಪ್ರಸ್ತುತ ಪರೀಕ್ಷೆ ಮಾಡುವ ಸಮಯಕ್ಕೆ ತೆಗೆದುಕೊಳ್ಳುವ ಅವಧಿಗೆ ಹೋಲಿಸಿದರೆ ಕಡಿಮೆಯಿದೆ. ವೇಗವಾದ ಪರೀಕ್ಷಾ ಸಮಯದಿಂದ ಪ್ರಯೋಗಾಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ಮಾಡಬಹುದಾಗಿದೆ.
ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಉತ್ಪಾದನೆಗಳನ್ನು ಹೆಚ್ಚಿಸುತ್ತಿರುವ ಮೈಲ್ಯಾಬ್
2012ರಲ್ಲಿ ಸ್ಥಾಪನೆಯಾದ ಮೈಲ್ಯಾಬ್ ಲೈಫ್ ಸೊಲ್ಯೂಷನ್ಸ್ ಉದ್ಯಮಗಳಿಗೆ ತಮ್ಮ ಪ್ರಸ್ತುತ ಕಾರ್ಯಾಚರಣೆಗಳನ್ನು ಸಮರ್ಥ ಮತ್ತು ಅಗ್ಗದ ರೀತಿಯಲ್ಲಿ ಪರಿಹರಿಸಲು ಸಹಾಯ ಮಾಡುವ ಆಶಯವನ್ನು ಹೊಂದಿದೆ.
ವಿಶ್ವ ಸಂಸ್ಥೆಯ ಮಾರ್ಗಸೂಚಿಗಳನ್ನು ಅನುಸರಿಸಿ ಆರು ವಾರಗಳ ದಾಖಲೆಯ ಸಮಯದಲ್ಲಿ ಕೋವಿಡ್-19ಗಾಗಿ ಪರೀಕ್ಷಾ ಕಿಟ್ ಅನ್ನು ಅಭಿವೃದ್ಧಿ ಪಡಿಸಿದೆ ಎಂದು ಕಂಪನಿ ಹೇಳುತ್ತದೆ.
ಕಂಪನಿಯ ಪ್ರಕಾರ, ಒಂದು ವಾರದಲ್ಲಿ ಒಂದು ಲಕ್ಷ ಪರೀಕ್ಷಾ ಕಿಟ್‌ಗಳನ್ನು ತಯಾರಿಸಬಹುದು. ಅಗತ್ಯವಿದ್ದಲ್ಲಿ ಅದನ್ನು ಮತ್ತಷ್ಟು ಹೆಚ್ಚಿಸಬಹುದು ಎನ್ನುತ್ತದೆ.
ಪ್ರಯೋಗಾಲಯದಲ್ಲಿ ಈ ಕಿಟ್‌ಗಳು ಲಭ್ಯವಾಗುತ್ತವೆಯೇ ಎಂಬುದರ ಬಗ್ಗೆ ಕೇಳಿದಾಗ, "ದಿನದ ಕಡೆಯವರೆಗೂ ನಮ್ಮ ತಂಡವು ಉತ್ಪಾದನೆ ಕೆಲಸದಲ್ಲಿ ತೊಡಗಿಕೊಂಡಿದೆ, ಕೆಲವು ಕಿಟ್‌ಗಳನ್ನು ನಾವು ರವಾನಿಸಿದ್ದೇವೆ," ಎಂದು ವಾಂಖೆಡೆ ಹೇಳುತ್ತಾರೆ.
ಪೂರ್ಣ ಸಾಮರ್ಥ್ಯಕ್ಕೆ ಪ್ರವೇಶಿಸಿದ ನಂತರ ಕಂಪನಿಯ ಸಾಮರ್ಥ್ಯವು ದಿನಕ್ಕೆ 15,000 ಪರೀಕ್ಷೆಗಳನ್ನು ನಡೆಸಲು ಅನುವು ಮಾಡಿ ಕೊಡುತ್ತದೆ ಎಂದು ಅವರು ಹೇಳಿದರು.
"ಈಗ ದಿನಕ್ಕೆ 15,000 ರೋಗಿಗಳ ಪರೀಕ್ಷೆ ಮಾಡಬಹುದಾಗಿದೆ. ಇದೀಗ ದೇಶದ್ಯಾಂತ ನಾಲ್ಕರಿಂದ 5000 ಪಿಸಿಆರ್ ಉಪಕರಣಗಳು ಲಭ್ಯವಿವೆ ಮತ್ತು ಇದೀಗ ಪ್ರತಿ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲು ಅನುಮತಿ ನೀಡಿದರೆ, ನಾವು ಹೆಚ್ಚಿನ ಕಿಟ್‌ಗಳನ್ನು ಒದಗಿಸುತ್ತೇವೆ. ಅದರಿಂದ ದಿನಕ್ಕೆ ಮೂರು ಅಥವಾ ನಾಲ್ಕು ಲಕ್ಷ ಪರೀಕ್ಷೆಗಳಿಗೆ ಮಾಡಬಹುದಾಗಿದೆ," ಎಂದು ವಾಂಖೆಡೆ ಹೇಳಿದರು.