ಮತ್ತೆ ಬಂತು ಮಾಯವಾದ ರಾಗಿಕಣವೆಂಬ ಹಳೆ ಸಂತೆ

ಬನ್ನೇರುಘಟ್ಟ ಮುಖ್ಯ ರಸ್ತೆಯ ಗೊಟ್ಟಿಗರೆ ಎಂಬಲ್ಲಿ ಸ್ಥಾಪಿಸಲಾದ ರಾಗಿಕಣ ಸಾಂಸ್ಕೃತಿಕ ಕೇಂದ್ರವಾಗಿದ್ದು ಗ್ರಾಮೀಣ ರೈತರನ್ನು ನಗರ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸುತ್ತಿದೆ.

ಮತ್ತೆ ಬಂತು ಮಾಯವಾದ ರಾಗಿಕಣವೆಂಬ ಹಳೆ ಸಂತೆ

Monday November 04, 2019,

3 min Read

21ನೇ ಶತಮಾನದ ಕೆಲವು ಮಹತ್ತರ ಬದಲಾವಣೆಗಳಲ್ಲಿ ಮಾರುಕಟ್ಟೆ ವ್ಯವಸ್ಥೆಯ ಬದಲಾವಣೆಯು ಪ್ರಮುಖವಾದದ್ದು. ನಗರೀಕರಣ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಹಳ್ಳಿಗಳಲ್ಲಿ ನಡೆಯುವ ವಾರದ ಸಂತೆ ಕೇವಲ ಕಲ್ಪನೆಯ ವಿಷಯವಾಗುತ್ತಿದೆ. ಮನೆಯಲ್ಲಿಯೇ ಕುಳಿತು ಆನ್ಲೈನ್ನಲ್ಲಿ ಶಾಪಿಂಗ್ ಮಾಡಿಕೊಂಡು, ತಮ್ಮ ಮನೆಗಳಲ್ಲಿ ಮನುಷ್ಯರಿಗಿಂತ ವಸ್ತುಗಳನ್ನೆ ತುಂಬಿಕೊಳ್ಳುವ ಕೊಳ್ಳುಬಾಕ ಸಂಸ್ಕೃತಿಯ ಮಾರುಕಟ್ಟೆ ನಮ್ಮ ದೇಶಕ್ಕೂ ಲಗ್ಗೆಯಿಟ್ಟಿದೆ.


ನಮ್ಮ ದೇಶದ ಹಳ್ಳಿಗಳಲ್ಲಿ ಇರುವ ವಾರದ ಸಂತೆಯ ಪರಿಕಲ್ಪನೆಯೇ ಅದ್ಭುತವಾದದ್ದು. ಸ್ಥಳೀಯ ರೈತರು ಬೆಳೆದ ತರಕಾರಿಗಳು ಸೊಪ್ಪು, ಸ್ಥಳೀಯ ವ್ಯಾಪಾರಿಗಳು ಮಾರಾಟ ಮಾಡುವ ಮಕ್ಕಳ ಆಟದ ಸಾಮಾನುಗಳು, ಬಣ್ಣಬಣ್ಣದ ಬಟ್ಟೆ ಬರೆಗಳು, ತಾಜಾ ಹಣ್ಣುಗಳು, ಚಪ್ಪಲಿಗಳು, ಕೃಷಿ ಉಪಕರಣಗಳು, ಸ್ಥಳೀಯ ಗುಡಿ ಕೈಗಾರಿಕೆಯಲ್ಲಿ ಮೂಡಿಬಂದ ಕರಕುಶಲ ವಸ್ತುಗಳು, ತಿಂಡಿ-ತಿನಿಸುಗಳು ಒಂದೇ ಎರಡೇ ಇವೆಲ್ಲವೂ ಹಳ್ಳಿಯ ಸೊಗಡನ್ನು ಬಿಂಬಿಸುವದರೊಂದಿಗೆ, ಅಗತ್ಯಕ್ಕೆ ತಕ್ಕಷ್ಟು ಮಾತ್ರ ಖರ್ಚು ಮಾಡಿ ವಸ್ತುಗಳನ್ನು ಖರೀದಿಸಿ ತಮ್ಮ ಮುಂದಿನ ತಲೆಮಾರಿಗೂ ಕಾಪಿಟ್ಟು ವರ್ಗಾಯಿಸುವ ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆಯು ಹೌದು.


ಇಂದಿನ ಆನ್ಲೈನ್ ಶಾಪಿಂಗ್, ಸೋಕಾಲ್ಡ್ ಸೊಫೆಸ್ಟಿಕೇಟೆಡ್ ಮಾಲ್ ಸಂಸ್ಕೃತಿಯ ಮಧ್ಯೆ ಮತ್ತೆ ಪುನಃ ಈ ವಾರದ ಸಂತೆಯ ಪರಿಕಲ್ಪನೆಗೆ ಜೀವ ಕೊಟ್ಟು ಬಣ್ಣ ತುಂಬಿ ಇಂದಿನ ತಲೆಮಾರಿಗೆ ನಮ್ಮ ಸಂಸ್ಕೃತಿಯೂಂದಿಗೆ ಪರಿಸರ ರಕ್ಷಣೆಯ ಪಾಠ ಹೇಳುತ್ತಿದೆ ರಾಗಿಕಣ.


ಮಾರಾಟಕ್ಕಿಟ್ಟ ಸಾವಯವ ತರಕಾರಿಗಳು (ಚಿತ್ರ ಕೃಪೆ: ಫೇಸ್ ಬುಕ್)


ರಾಗಿಕಣ ಹುಟ್ಟಿದ ಬಗೆ

"ರಾಗಿ ಕಣ" ಹುಟ್ಟಿದ್ದು ಹೆಚ್ಚುತ್ತಿರುವ ಕೊಳ್ಳುಬಾಕತನ, ಇಂದು ಏರುತ್ತಿರುವ ಜಾಗತಿಕ ತಾಪಮಾನ ಕಾಡುತ್ತಿರುವ ತ್ಯಾಜ್ಯ ನಿರ್ವಹಣೆಯ ಸಮಸ್ಯೆ ನಶಿಸುತ್ತಿರುವ ಸ್ವದೇಶಿ ವಸ್ತುಗಳು, ಶೋಷಣೆಗೆ ಒಳಪಡುತ್ತಿರುವ ರೈತರು ಇವರೆಲ್ಲರ ಮಧ್ಯೆ. "ರಾಗಿಕಣ", 70 ವರ್ಷದ ಗಾಂಧಿವಾದಿ ನಾಟಕ ನಿರ್ದೇಶಕ ಮತ್ತು ಹೆಗ್ಗೋಡುವಿನ ಪ್ರಸನ್ನ ಇದನ್ನು ಮೇ 2017 ರಲ್ಲಿ ಗ್ರಾಮ ಸೇವಾ ಸಂಘದ ನೆರವಿನೊಂದಿಗೆ ಪ್ರಾರಂಭಿಸಿದರು. ಇದು ಬನ್ನೇರುಘಟ್ಟ ಮುಖ್ಯ ರಸ್ತೆಯ ಗೊಟ್ಟಿಗರೆ ಎಂಬಲ್ಲಿ ಸ್ಥಾಪಿಸಲಾದ ಸಾಂಸ್ಕೃತಿಕ ಕೇಂದ್ರವಾಗಿದ್ದು, ಪ್ರಸ್ತುತ ಗ್ರಾಮ ಸೇವಾ ಸಂಘ ಮತ್ತು ಗುರುಕುಲ್ ಟ್ರಸ್ಟ್‌ನ ಜಂಟಿ ಪ್ರಯತ್ನದಲ್ಲಿ ಮೂಡಿಬರುತ್ತಿದೆ. ಸಂಘವು ಮುಖ್ಯವಾಗಿ ರಾಗಿ ಕಣದ ಕಾರ್ಯಾಚರಣೆಯ ಕಡೆಗೆ ಗಮನಹರಿಸಿದರೆ, ಟ್ರಸ್ಟ್ ಜಾಗವನ್ನು ನೀಡಿದೆ, ಅಂದರೆ, ಶಾಲೆಯ ರಾಮಕೃಷ್ಣ ಸಮಗ್ರ ಕೇಂದ್ರವು ಪ್ರತಿ ಭಾನುವಾರ ‘ಸಂತೆಯ’ ಆತಿಥ್ಯವನ್ನು ವಹಿಸಿಕೊಳ್ಳುತ್ತದೆ. ಇದು ಗ್ರಾಮೀಣ ಮಾರುಕಟ್ಟೆಗೆ ಸೇವೆ ಸಲ್ಲಿಸುತ್ತಿದೆ. ರಾಗಿ ಕಣ ಕೇವಲ ಮಾರುಕಟ್ಟೆಯಲ್ಲ ಇದು ಸಾಂಸ್ಕೃತಿಕ ಕೇಂದ್ರವಾಗಿದೆ, ಯುಗಗಳಿಂದ ನಮ್ಮನ್ನು ಉಳಿಸಿಕೊಂಡ ಬೇರುಗಳಿಗೆ ಮರಳುವ ಕರೆ.


ಗ್ರಾಮೀಣ ರೈತರನ್ನು ನಗರ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿದ್ದು, ರಾಗಿ ಕಣ ಗ್ರಾಮೀಣ ರೈತರು ಮತ್ತು ಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ನಗರ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ವೇದಿಕೆಯನ್ನು ಒದಗಿಸುತ್ತದೆ. ಅದಕ್ಕಿಂತ ಮುಖ್ಯವಾಗಿ, ಇಲ್ಲಿ ಮಾರಾಟವನ್ನು ಯಾವ ಬೆಲೆಗೆ ಎಂದು ರೈತರು ಮತ್ತು ಕುಶಲಕರ್ಮಿಗಳೇ ನಿಗದಿಪಡಿಸುತ್ತಾರೆ. ಹಾಗೆ ಮಾಡುವಾಗ, ಗ್ರಾಮೀಣ ರೈತರು ಎದುರಿಸುತ್ತಿರುವ ದೊಡ್ಡ ಸವಾಲುಗಳಲ್ಲಿ ಒಂದಾದ - ಮಧ್ಯವರ್ತಿಗಳು ಸಮಸ್ಯೆಗೆ ಪರಿಹಾರ ದೊರೆತಂತಾಗುತ್ತದೆ.


ಕತಾ ಕಮ್ಮಟ (ಚಿತ್ರ ಕೃಪೆ: ಫೇಸ್ ಬುಕ್)


ರಾಗಿಕಣದಲ್ಲಿ ಸುತ್ತಮುತ್ತಲಿನ ರೈತರು ತಾವುಬೆಳೆದ ಸಾವಯವ ಹಣ್ಣು ತರಕಾರಿ ಸೊಪ್ಪುಗಳನ್ನು ತಂದು ಮಾರುತ್ತಾರೆ. ಕೈಮಗ್ಗದ ಸ್ವದೇಶಿ ಬಟ್ಟೆಗಳು, ಜೀವಭೂಮಿಯ ತೈಲಗಳು, ರುಚಿಕರ ತಿಂಡಿ ತಿನಿಸುಗಳು, ಕುರುಕಲು ತಿಂಡಿಗಳು, ಕರಕುಶಲ ವಸ್ತುಗಳು, ಬ್ಯಾಗ್, ಪೆನ್ ಸ್ಟ್ಯಾಂಡ್, ಬಿದಿರಿನ ಡಬ್ಬಗಳು, ಕೃಷಿ ಉಪಕರಣಗಳು, ಮರದಲ್ಲಿ ಮಾಡಿದ ಮಕ್ಕಳ ಆಟದ ಸಾಮನು, ಸಾಹಿತ್ಯ ಕೃತಿಗಳು…..ಇವೆಲ್ಲವೂ ಇಲ್ಲಿ ಲಭ್ಯ. ಆದ್ರೆ ಇದೆಲ್ಲವನ್ನು ಕೊಂಡುಹೋಗಲು ಬಟ್ಟೆಯ ಕೈಚೀಲವನ್ನು ಮಾತ್ರ ನೀವೇ ತರಬೇಕು.


ರಂಗಕರ್ಮಿ ಪ್ರಸನ್ನ ಅವರ ಪ್ರಕಾರ "ಇದು ಎಚ್ಚೆತ್ತ ಗ್ರಾಹಕರು ಇಂದು ಹೆಚ್ಚುತ್ತಿರುವ ಕೊಳ್ಳುಬಾಕತನ, ಪರಿಸರಮಾಲಿನ್ಯಕ್ಕೆ ತಾವೇ ಪರಿಹಾರವನ್ನು ಕಂಡುಕೊಳ್ಳುತ್ತಿರುವ ಬಗೆ. ಯಾವಾಗ ಗ್ರಾಹಕರು ಎಚ್ಚೆತ್ತು ವ್ಯವಹರಿಸುತ್ತಾರೋ ಆವಾಗ ಬದಲಾವಣೆ ಸಾಧ್ಯ."


ಅನುಪಯುಕ್ತ ತ್ಯಾಜ್ಯ ವಸ್ತುಗಳನ್ನು ಆದಷ್ಟು ಕಡಿಮೆಮಾಡಲು, ಜನರಲ್ಲಿ ಸುಸ್ಥಿರ ಅಭಿವೃದ್ಧಿಯ ಕುರಿತು ಜಾಗೃತಿ ಮೂಡಿಸಲು, ಜನರನ್ನು ಕೊಳ್ಳುಬಾಕತನದಿಂದ ರಕ್ಷಿಸಲು ರಾಗಿಕಣ ಈ ಮೂಲಕ ಒಂದು ದಿಟ್ಟಹೆಜ್ಜೆಯನ್ನು ಇಟ್ಟಿದೆ ಎಂದರೆ ತಪ್ಪಾಗಲಾರದು.


ಮರದ ಆಟದ ಸಾಮಾನು (ಚಿತ್ರ ಕೃಪೆ: ಫೇಸ್ ಬುಕ್)


ಸಾಂಸ್ಕೃತಿಕ ಕೇಂದ್ರವಾಗಿ ರಾಗಿಕಣ

ಪ್ರತಿ ಭಾನುವಾರದಂದು ವ್ಯಾಪಾರ ವಹಿವಾಟಿನ ನಡುವೆ ಚಿಂತನ ಮಂಥನ ಕಾರ್ಯಕ್ರಮವು ಇಲ್ಲಿ ಜರುಗುತ್ತದೆ. ಎಲ್ಲಾ ವರ್ಗದ ಎಲ್ಲಾ ವಯೋಮಾನದವರಿಗೂ ಒಂದಲ್ಲಾ ಒಂದು ರೀತಿಯಲ್ಲಿ ಮನರಂಜನೆಯೊಂದಿಗೆ ಜ್ಞಾನಾರ್ಜನೆಗೂ ಪೂರಕವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.


ಸೊಪ್ಪಿನ ಮಹತ್ವದ ಬಗ್ಗೆ ಮಾತನಾಡುತ್ತಿರುವ ಎಲ್. ಮುರಳೀಧರ (ಚಿತ್ರ ಕೃಪೆ: ಫೇಸ್ ಬುಕ್)


ಕೆಲವು ತಿಂಗಳ ಹಿಂದೆ ಸುಬ್ರಮಣ್ಯಂ ಅವರ ಮಗ ಪಿಟೀಲು ವಾದಕ ಅಂಬಿ ಸುಬ್ರಮಣ್ಯಂ ಅವರ ಗಾಯನವನ್ನು ಆಯೋಜಿಸಲಾಗಿತ್ತು ಮತ್ತು ರಾಮಚಂದ್ರ ಗುಹಾ, ಸುಸ್ಥಿರ ಅಭಿವೃದ್ಧಿಯ ಕುರಿತು ಡಾ. ಪದ್ಮಿನಿ ರಾವ್, ನೀರಿನ ಸಂರಕ್ಷೆಣೆಯ ಕುರಿತು ಡಾ. ಭಕ್ತಿ ದೇವಿ, ಸೊಪ್ಪುಗಳ ಮಹತ್ವದ ಕುರಿತು ಎಲ್. ಮುರುಳೀಧರ್, ಮಕ್ಕಳಿಗೆ ಹಕ್ಕಿಗೂಡಿನ ರಚನೆಯ ಕುರಿತು ಪ್ರಾತ್ಯಕ್ಷಿಕೆ, ಹೀಗೆ ಮೊದಲಾದ ಉತ್ತಮ ಕಾರ್ಯಕ್ರಮಗಳನ್ನು ಶ್ರೇಷ್ಠ ಸಂಪನ್ಮೂಲ ವ್ಯಕ್ತಿಗಳಿಂದ ಸಹಭಾಗಿತ್ವದಲ್ಲಿ ರಾಗಿಕಣ ಹಮ್ಮಿಕೊಳ್ಳುತ್ತಾ ಬಂದಿದೆ.


ಮಕ್ಕಳ ಗುಂಪು ಕವಡೆ ಆಟದಲ್ಲಿ ಮಗ್ನವಾಗಿರುವುದು (ಚಿತ್ರ ಕೃಪೆ: ಫೇಸ್ ಬುಕ್)


ಇಂದಿನ ಮಕ್ಕಳಿಗೆ ನಮ್ಮ ಪಾರಂಪರಿಕ ಆಟಗಳನ್ನು ಪರಿಚಯಿಸುವ ಸಲುವಾಗಿ ರಾಗಿಕಣ ಪಾರಂಪರಿಕ ಆಟಗಳತ್ತ ಹೊರಡೋಣ ಎಂಬ ಕಾರ್ಯಕ್ರಮವನ್ನು ಆಯೋಜಿಸಿತ್ತು. ಅಲ್ಲಿ ಪುಟ್ಟ ಮಕ್ಕಳೂ ಚೆನ್ನೆಮಣೆ, ಪಗಡೆ, ಮೊದಲಾದ ತೆರೆಮರೆಗೆ ಸರಿದ ಆಟಗಳನ್ನು ಆಡಿ ಖುಷಿಪಟ್ಟರು. ಮೊಬೈಲ್ ಒಂದೇ ಪ್ರಪಂಚವಾಗುತ್ತಿರುವ ಸಮಯದಲ್ಲಿ ಈ ಮಕ್ಕಳು, ಕೈಮಗ್ಗ ಬಟ್ಟೆಗಳನ್ನು, ಚಿತ್ರ ಪಟಗಳನ್ನು, ತಮ್ಮ ಬೆರಗು ಕಣ್ಣುಗಳಿಂದ ನೋಡಿತ್ತಾ ಕತೆಹೇಳುವ ಕಮ್ಮಟ ದಲ್ಲಿ, ಮಣ್ಣಿನಿಂದ ಗೊಂಬೆ ಮಾಡುವ ಪ್ರಕ್ರಿಯೆಲ್ಲಿ ತಮ್ಮನ್ನು ಲವಲವಿಕೆಯಿಂದ ತೊಡಗಿಸಿಕೊಳ್ಳುತ್ತಾರೆ.


"ಚಿಂತನಶೀಲ, ಬದ್ಧ ನಾಗರಿಕರ ಒಂದು ಸಣ್ಣ ಗುಂಪು ಜಗತ್ತನ್ನು ಬದಲಾಯಿಸಬಲ್ಲದು ಎಂಬುದರಲ್ಲಿ ಎಂದಿಗೂ ಅನುಮಾನವಿಲ್ಲ" ಎಂಬ ಮಾರ್ಗರೇಟ್ ಮೀಡ್ ರವರ ಮಾತು ನಿಜಕ್ಕೂ ಅರ್ಥಪೂರ್ಣ. ರಾಗಿಕಣದ ಈ ಪ್ರಯತ್ನ ದೇಶದೆಲ್ಲೆಡೆ ತನ್ನ ಕವಲನ್ನು ಚಾಚಲಿ. ಸಾಧ್ಯವಾದರೆ ನೀವು ಕೂಡ ಒನ್ಲೈನ್ ಶಾಪಿಂಗ್, ಮಾಲ್ಗಳಿಗೆ ವಿಶ್ರಾಂತಿಕೊಟ್ಟು ವಾರಾಂತ್ಯಕ್ಕೆ ರಾಗಿಕಣಕ್ಕೆ ಭೇಟಿಕೊಟ್ಟು ಸಂತೆ ಮುಗಿಸಿಕೊಂಡು ಬರಬಹುದಲ್ಲವೇ? ಏನಂತೀರಾ…!