ಸಮುದ್ರದಲ್ಲಿ ನಾಪತ್ತೆಯಾಗಿದ್ದ ಮೀನುಗಾರರನ್ನು ಡ್ರೋನ್‌ ಬಳಸಿ ರಕ್ಷಿಸಿದ 19ರ ಯುವಕ

ಬೆಂಗಳೂರಿನ ಕ್ರೈಸ್ಟ್‌ ಯುನಿವರ್ಸಿಟಿಯ ವಿದ್ಯಾರ್ಥಿ ದೇವಾಂಗ್‌ ಸುಬಿಲ್‌ ಅರೇಬಿಯನ್‌ ಸಮುದ್ರದಲ್ಲಿ ಸಿಲುಕಿದ್ದ 4 ಜನರನ್ನು ತಮ್ಮ ಡ್ರೋನ್‌ ಮೂಲಕ ರಕ್ಷಿಸಿದ್ದಾರೆ.

ಸಮುದ್ರದಲ್ಲಿ ನಾಪತ್ತೆಯಾಗಿದ್ದ ಮೀನುಗಾರರನ್ನು ಡ್ರೋನ್‌ ಬಳಸಿ ರಕ್ಷಿಸಿದ 19ರ ಯುವಕ

Thursday January 07, 2021,

1 min Read

ನಮ್ಮ ಜೀವನದಲ್ಲಿ ತಂತ್ರಜ್ಞಾನದಿಂದ ಆಗುತ್ತಿರುವ ಬದಲಾವಣೆಗಳಿಗೆ ಸ್ಪಂದಿಸುತ್ತ ಹಲವರು ಅದರ ಹೊಸ ಸಾಧ್ಯತೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ದೋಣಿ ಮುಳುಗಿ ಅರೇಬಿಯನ್‌ ಸಮುದ್ರದಲ್ಲಿ ನಾಪತ್ತೆಯಾಗಿದ್ದ 4 ಮೀನುಗಾರರನ್ನು 19 ರ ಯುವಕ ಡ್ರೋನ್‌ ಬಳಸಿ ಪತ್ತೆಮಾಡಿದ್ದಾರೆ.


ಬೆಂಗಳೂರಿನ ಕ್ರೈಸ್ಟ್‌ ವಿಶ್ವವಿದ್ಯಾಲಯದಲ್ಲಿ ಇಂಜಿನೀಯರಿಂಗ್‌ ಓದುತ್ತಿರುವ ದೇವಾಂಗ್‌ ಸುಬಿಲ್‌ ಕೊರೊನಾ ಕಾರಣ ಕಾಲೇಜುಗಳು ಮುಚ್ಚಿರುವುದರಿಂದ ತಮ್ಮ ಊರಾದ ಕೇರಳದ ತ್ರಿಸ್ಸೂರಿಗೆ ಹೋಗಿದ್ದರು. ನಗರದ ನತ್ತಿಕಾ ಬೀಚ್‌ನಿಂದ ದೋಣಿಯೊಂದು ನಾಪತ್ತೆಯಾಗಿರುವುದು ಇವರಿಗೆ ತಿಳಿಯಿತು. ರಕ್ಷಣಾ ಕಾರ್ಯಕರ್ತರು ಇದರ ಬಗ್ಗೆ ತುಂಬಾ ತಲೆಕೆಡಿಸಕೊಂಡಿದ್ದರು.


ಸುಬಿಲ್‌ ತಮ್ಮ ಡ್ರೋನ್‌ ಬಳಸಿ ಅವರನ್ನು ರಕ್ಷಿಸಬಹುದು ಎಂದು ಕೇಳಿದಾಗ, ಇದೇನು ಮಕ್ಕಳ ಆಟವೇ ಎಂದು ಜನರು ಅವರನ್ನು ಕಡೆಗಣಿಸಿದ್ದರು. ನತ್ತಿಕಾದ ಶಾಸಕರಾದ ಗೀತಾ ಗೋಪಿ ಇದನ್ನು ಕೇಳಿ ಸುಬಿಲ್‌ ಅವರಿಗೊಂದು ರಕ್ಷಣಾ ದೋಣಿಯ ವ್ಯವಸ್ಥೆ ಮಾಡಿಕೊಟ್ಟರು.


“ಕರಾವಳಿಯಿಂದ 11 ನಾಟಿಕಲ್‌ ಮೈಲಿ ದೂರದಲ್ಲಿ ದೋಣಿ ತಲುಪಿದಾಗ ನಾನು ಡ್ರೋನ್‌ ಬಟನ್‌ ಒತ್ತಿದೆ, ಕೇವಲ ಹತ್ತೆ ನಿಮಿಷದಲ್ಲಿ ನನ್ನ ಮೊಬೈಲ್‌ನಲ್ಲಿ ಸಮುದ್ರದಲ್ಲಿ ಒಬ್ಬರು ತೇಲುತ್ತಿರುವ ದೃಶ್ಯ ಕಂಡಿತು. ಮೀನುಗಾರರು ಮತ್ತು ಪೊಲೀಸರು ಅವರ ಬಳಿ ದೋಣಿಯನ್ನು ಒಯ್ದರು, ಅಲ್ಲಿಂದ 200 ಮೀಟರ್‌ ದೂರದಲ್ಲಿ ಇನ್ನೂ ಇಬ್ಬರು ಮೀನುಗಾರರು ಸಿಕ್ಕರು,” ಎಂದು ಸುಬಿಲ್‌ ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ಹೇಳಿದರು.


“ದಡಕ್ಕೆ ಸಮೀಪಿದಲ್ಲಿ ಈಜುತ್ತಿದ್ದರಿಂದ ನಾಲ್ಕನೇ ಮೀನುಗಾರನನ್ನು ಕಂಡುಹಿಡಿಯಲು ಸ್ವಲ್ಪ ಸಮಯ ಬೇಕಾಯಿತು. ಒಬ್ಬ ಮೀನುಗಾರನನ್ನು ನೋಡಿದಾಗ ಅವರು ಮುಳುಗುವ ಸ್ಥಿತಿಯಲ್ಲಿದ್ದರು. ಅವರನ್ನು ರಕ್ಷಿಸಿದ ಬೆನ್ನಲ್ಲೆ ಪ್ರಜ್ಞೆ ಕಳೆದುಕೊಂಡರು,” ಎನ್ನುತ್ತಾರೆ ಸುಬಿಲ್‌.

ಸ್ಥಳೀಯರು ಸುಬಿಲ್‌ ಅವರನ್ನು ಪ್ರಶಂಸಿಸುತ್ತಿರುವುದು (ಚಿತ್ರಕೃಪೆ: ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌)


ತ್ರಿಸ್ಸೂರನ ಆಸ್ಪತ್ರೆಯಲ್ಲಿ ನಾಲ್ಕು ಮೀನುಗಾರರಿಗೆ ಈಗ ಚಿಕಿತ್ಸೆ ನೀಡಲಾಗುತ್ತಿದೆ.

“ಸಮಯಕ್ಕೆ ಸರಿಯಾಗಿ ಜೀವ ಉಳಿಸಿದ ಯುವಕನಿಗೆ ಸಲಾಂ. ಹೇಗೆ ತಂತ್ರಜ್ಞಾನ ಜೀವ ಉಳಿಸಬಲ್ಲದು ಎಂದು ಅವರು ತೋರಿಸಿದ್ದಾರೆ. ಅವರಿಗೆ ಗೌರವ ಅರ್ಪಿಸುವ ಸಲುವಾಗಿ ನಾನು ಈಗಾಗಲೆ ಸರ್ಕಾರಕ್ಕೆ ಸೂಚಿಸಿದ್ದೇನೆ,” ಎಂದು ಶಾಸಕರಾದ ಗೀತಾ ಗೋಪಿ ಹಿಂದೂಸ್ತಾನ್‌ ಟೈಮ್ಸ್‌ಗೆ ಹೇಳಿದರು.