ಕೇವಲ ಒಬ್ಬಳು ವಿದ್ಯಾರ್ಥಿನಿಗಾಗಿ ತೆರೆದಿರುತ್ತದೆ ಬಿಹಾರನ ಶಾಲೆ

ಬೇರೆ ತರಗತಿಗೆ ಕೆಲವು ವಿದ್ಯಾರ್ಥಿಗಳು ದಾಖಲಾಗಿದ್ದರು, ತಪ್ಪದೆ ದಿನವೂ ಶಾಲೆಗೆ ಹಾಜರಿರುವ 1 ನೇ ತರಗತಿಯ ಜಾಹ್ನವಿಗಾಗಿ ಶಾಲೆಯು ಇನ್ನು ನಡೆಯುತ್ತಿದೆ.

ಕೇವಲ ಒಬ್ಬಳು ವಿದ್ಯಾರ್ಥಿನಿಗಾಗಿ ತೆರೆದಿರುತ್ತದೆ ಬಿಹಾರನ ಶಾಲೆ

Friday January 24, 2020,

2 min Read

ದೇಶದ ದೂರದ ಪ್ರದೇಶಗಳಲ್ಲಿ ಅಥವಾ ಹಳ್ಳಿಗಾಡುಗಳಲ್ಲಿ ಶಿಕ್ಷಣವು ಸರಿಯಾಗಿ ಲಭಿಸುತ್ತಿಲ್ಲ ಮತ್ತು ಗಲಾಟೆ, ದೊಂಬಿಗಳಿಂದ ಕೂಡಿರುವ ಪ್ರದೇಶಗಳಾದರೆ ಶಾಲೆಗಳಲ್ಲಿ ಹಾಜರಾತಿಯೂ ಬಹಳ ಕಡಿಮೆ. ಆದರೆ ಬಿಹಾರದ ಗಯಾ ಜಿಲ್ಲೆಯ ಮಾವೋವಾದಿ ಪೀಡಿತ ಸ್ಥಳದಲ್ಲಿನ ಈ ಶಾಲೆ ವಿಭಿನ್ನ. ಜಾಹ್ನವಿ ಕುಮಾರಿ ಎಂಬ ವಿದ್ಯಾರ್ಥಿನಿಯು ನಿಯಮಿತವಾಗಿ ಒಂದನೇ ತರಗತಿಗೆ ಹಾಜರಾಗುವುದರಿಂದ ಶಾಲೆಯನ್ನು ಇನ್ನು ನಡೆಸಲಾಗುತ್ತಿದೆ.


ಹವಾಮಾನ ಪರಿಸ್ಥಿತಿ ಎಷ್ಟು ಪ್ರತಿಕೂಲವಾಗಿದ್ದರೂ ಅಥವಾ ಪರಿಸ್ಥಿತಿಗಳು ಸರಿಯಿಲ್ಲದಿದ್ದರೂ ಅವಳಿಗೆ ಕಲಿಸಲು ಇಬ್ಬರು ಶಿಕ್ಷಕರನ್ನು ನಿಯೋಜಿಸಲಾಗಿದೆ.


ಶಿಕ್ಷಕಿಯೊಂದಿಗೆ ಜಾಹ್ನವಿ ಕುಮಾರಿ (ಚಿತ್ರಕೃಪೆ: ದಿ ಲಾಜಿಕಲ್ ಇಂಡಿಯನ್)


ದಿ ಲಾಜಿಕಲ್ ಇಂಡಿಯನ್ ಜೊತೆ ಮಾತನಾಡಿದ ಶಾಲೆಯ ಶಿಕ್ಷಕಿ ಪ್ರಿಯಾಂಕಾ ಕುಮಾರಿ,


"ಒಂದು ಹೆಣ್ಣು ಮಗುವಿಗೆ ಕಲಿಸುವುದು ನಮ್ಮ ಮೊದಲ ಮತ್ತು ಪ್ರಮುಖ ಆದ್ಯತೆಯಾಗಿದೆ. ನಮ್ಮ ಶಾಲೆಗೆ ಬರುವ ಏಕೈಕ ಹುಡುಗಿ ಅವಳು. ಅದೇನು ಸಾಧನೆಯಂತ ನಮಗನಿಸುವುದಿಲ್ಲ,” ಎನ್ನುತ್ತಾರೆ.


1972 ರಿಂದ ನಡೆಯುತ್ತಿರುವ ಈ ಶಾಲೆಯಲ್ಲಿ ಸಾಕಷ್ಟು ಮೂಲಸೌಕರ್ಯ ಮತ್ತು ಯೋಗ್ಯ ಸಂಪನ್ಮೂಲಗಳ ಕೊರತೆಯಿದೆ. ಅಲ್ಲದೇ, ಅನೇಕ ವಿದ್ಯಾರ್ಥಿಗಳು ಸಹ ಈ ಶಾಲೆಯಲ್ಲಿ ಕಾಣ ಸಿಗುವುದಿಲ್ಲ. ಏಕೆಂದರೆ ಗ್ರಾಮಸ್ಥರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸಲು ಇಷ್ಟಪಡುತ್ತಾರೆ.


ಪ್ರಸ್ತುತ, ಶಾಲೆಯಲ್ಲಿ ಇತರ ವಿದ್ಯಾರ್ಥಿಗಳೂ ಸೇರಿದ್ದಾರೆ, ಗಲ್ಫ್ ನ್ಯೂಸ್ ಪ್ರಕಾರ, ಐದನೇ ಮತ್ತು ಮೊದಲನೇ ತರಗತಿಯಲ್ಲಿ ತಲಾ ಇಬ್ಬರು ವಿದ್ಯಾರ್ಥಿಗಳು, ನಾಲ್ಕನೇ ತರಗತಿಯಲ್ಲಿ ನಾಲ್ಕು ವಿದ್ಯಾರ್ಥಿಗಳು ಇದ್ದಾರೆ, ಇನ್ನು ಮೂರನೇ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಇದ್ದಾನೆ.


ಈ ಸಂಖ್ಯೆಗಳ ಹೊರತಾಗಿಯೂ, 1 ನೇ ತರಗತಿಯ ಜಾಹ್ನವಿ ಮಾತ್ರ ನಿಯಮಿತವಾಗಿ ಶಾಲೆಗೆ ಹೋಗುತ್ತಾಳೆ.


“ಶಾಲೆಯಲ್ಲಿ ಕಲಿಸಲು ನಮಗೆ ಒಬ್ಬ ವಿದ್ಯಾರ್ಥಿನಿ ಮಾತ್ರ ಇರುವುದರಿಂದ ನಮಗೆ ಬಹಳ ಬೇಜಾರಾಗುತ್ತದೆ. ಆದರೂ, ನಮ್ಮನ್ನು ನಾವು ಕಾರ್ಯನಿರತವಾಗಿರಿಸಲು ಪ್ರತಿದಿನ ಅವಳು ಶಾಲೆಗೆ ಬರುವುದನ್ನು ನಾವು ಕುತೂಹಲದಿಂದ ಕಾಯುತ್ತೇವೆ. ಅವಳು ಶಾಲೆಗೆ ಬರದೇ ಇರುವ ದಿನ ನಮಗೆ ಯಾವುದೇ ಕೆಲಸವಿರುವುದಿಲ್ಲ,” ಎನ್ನುತ್ತಾರೆ ಶಿಕ್ಷಕಿ ಪ್ರೀಯಾಂಕಾ, ವರದಿ ಗಲ್ಫ್ ನ್ಯೂಸ್.


ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟವನ್ನು ತಯಾರಿಸುವ ಅವಕಾಶವಿದೆ, ಆದರೆ ಈಗ ಇದನ್ನು ಬರೀ ಜಾಹ್ನವಿಗಾಗಿ ಮಾತ್ರ ತಯಾರಿಸಲಾಗುತ್ತದೆ. ಶಾಲೆಯಲ್ಲಿ ಆಹಾರವನ್ನು ತಯಾರಿಸಲು ಸಾಧ್ಯವಾಗದಿದ್ದರೆ, ಅದನ್ನು ಅವಳಿಗೆ ಹತ್ತಿರದ ಹೊಟೆಲ್‌ನಿಂದ ಖರೀದಿಸಿ ನೀಡಲಾಗುತ್ತದೆ ಎಂದು ಮುಖ್ಯೋಪಾಧ್ಯಾಯ ಸತ್ಯೇಂದ್ರ ಪ್ರಸಾದ್ ಹೇಳುತ್ತಾರೆ.


ಅವಳು ಪ್ರತಿದಿನ ಶಾಲೆಗೆ ಹಾಜರಾಗುತ್ತಿರುವುದರಿಂದ ಅವಳಿಗೆ ಶಿಕ್ಷಣದ ಮೇಲಿರುವ ಪ್ರೀತಿ ತಿಳಿಯುತ್ತದೆ. ಶಿಕ್ಷಣದ ಬಗ್ಗೆ ಅವಳ ಕಾಳಜಿ ನಮ್ಮ ಸ್ಥೈರ್ಯವನ್ನು ಹೆಚ್ಚಿಸಿದೆ. ಅವಳು ನಮಗೆ ಬಹಳ ವಿಶೇಷವಾದ ವ್ಯಕ್ತಿ ಎಂದು ಶಿಕ್ಷಕರು ಹೇಳುತ್ತಾರೆ, ವರದಿ ದಿ ಲಾಜಿಕಲ್ ಇಂಡಿಯನ್.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.