ಆಮ್ಲಜನಕವಿಲ್ಲದೆ ಬದುಕಬಲ್ಲ ಪ್ರಾಣಿಯನ್ನು ಶೋಧಿಸಿದ ವಿಜ್ಞಾನಿಗಳು

ಪ್ರಾಣಿ ಸಂಕುಲದ ಕುರಿತಾದ ವಿಜ್ಞಾನದ ಈವರೆಗಿನ ಊಹೆಗಳನ್ನು ಬುಡಮೇಲು ಮಾಡುವಂತಹ ಘಟನೆಯೊಂದು ಇತ್ತೀಚೆಗೆ ನಡೆದಿದೆ. ವಿಜ್ಞಾನಿಗಳು ಈಚೆಗೆ, ಆಮ್ಲಜನಕವಿಲ್ಲದೆಯೂ ಬದುಕುಳಿಯಬಲ್ಲ ಪ್ರಾಣಿಯೊಂದನ್ನು ಶೋಧಿಸಿದ್ದಾರೆ.

ಆಮ್ಲಜನಕವಿಲ್ಲದೆ ಬದುಕಬಲ್ಲ ಪ್ರಾಣಿಯನ್ನು ಶೋಧಿಸಿದ ವಿಜ್ಞಾನಿಗಳು

Thursday February 27, 2020,

2 min Read

ಸಾಂದರ್ಭಿಕ ಚಿತ್ರ


10ಕ್ಕಿಂತಲೂ ಕಡಿಮೆ ಕೋಶಗಳುಳ್ಳ ಸಣ್ಣ ಪರಾವಲಂಬಿ ಹೆನ್ನೆಗುಯಾ ಸಾಲ್ಮಿನಿಕೋಲಾ ಎಂಬ ಜೀವಿಯು ಸಾಲ್ಮನ್ ಸ್ನಾಯುಗಳಲ್ಲಿ ವಾಸಿಸುತ್ತಿದೆ ಎಂದು ಪಿಎನ್‌ಎಎಸ್‌ ಜರ್ನಲ್ನಲ್ಲಿ ಮಂಗಳವಾರ ಪ್ರಕಟವಾದ ಸಂಶೋಧನೆಯ ಪ್ರಕಾರ ತಿಳಿದುಬಂದಿದೆ.


ಜೆಲ್ಲಿ ಮೀನು ಮತ್ತು ಹವಳಗಳ ಸಂಬಂಧಿಯಾಗಿರುವ ಈ ಜೀವಿಯು ವಿಕಸನಗೊಳ್ಳುತ್ತ ಶಕ್ತಿಯನ್ನು ಉತ್ಪಾದಿಸಲು ಉಸಿರಾಟಕ್ಕೆ ಆಮ್ಲಜನಕವನ್ನು ಸೇವಿಸುವುದನ್ನು ಬಿಟ್ಟುಬಿಟ್ಟಿತು - ಅಥವಾ ಆಮ್ಲಜನಕರಹಿತವಾಯಿತು.


"ಉಸಿರಾಟವು ಪ್ರಾಣಿಗಳಲ್ಲಿ ಸರ್ವತ್ರ ಎಂದು ಭಾವಿಸಲಾಗಿತ್ತು, ಆದರೆ ಈಗ ನಾವು ಇದು ಸರ್ವತ್ರವಲ್ಲ ಎಂದು ದೃಢಪಡಿಸಿದ್ದೇವೆ," ಎಂದು ಇಸ್ರೇಲ್‌ನ ಟೆಲ್ ಅವೀವ್ ವಿಶ್ವವಿದ್ಯಾಲಯದ (ಟಿಎಯು) ಪ್ರಾಧ್ಯಾಪಕ ಡೊರೊಥಿ ಹುಚೋನ್ ಹೇಳಿದ್ದಾರೆ.


"ನಮ್ಮ ಆವಿಷ್ಕಾರವು, ವಿಕಸನವು ಅಪರಿಚಿತ ದಿಕ್ಕುಗಳಲ್ಲಿ ಹೋಗಬಹುದು ಎಂದು ತೋರಿಸುತ್ತದೆ. ಏರೋಬಿಕ್ ಉಸಿರಾಟವು (ಆಮ್ಲಜನಕವನ್ನು ಬಳಸಿ ನಡೆಯುವ ಉಸಿರಾಟ ಪ್ರಕ್ರಿಯೆ) ಶಕ್ತಿಯ ಪ್ರಮುಖ ಮೂಲವಾಗಿದೆ, ಆದರೆ ಈ ನಿರ್ಣಾಯಕ ಮಾರ್ಗವನ್ನು ಬಿಟ್ಟುಕೊಟ್ಟ ಪ್ರಾಣಿಯನ್ನು ನಾವು ಈಗ ಕಂಡುಕೊಂಡಿದ್ದೇವೆ," ಎಂದು ಹುಚೋನ್ ಹೇಳಿದರು.


ಆಮ್ಲಜನಕರಹಿತ ಪರಿಸರದಲ್ಲಿನ ಶಿಲೀಂಧ್ರಗಳು, ಅಮೀಬಾ ಅಥವಾ ಸಿಲಿಯೇಟ್ ವಂಶಾವಳಿಯಂತಹ ಇತರ ಕೆಲವು ಜೀವಿಗಳು ಕಾಲಾನಂತರದಲ್ಲಿ ಉಸಿರಾಡುವ ಸಾಮರ್ಥ್ಯವನ್ನು ಕಳೆದುಕೊಂಡಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.


ಹೊಸ ಅಧ್ಯಯನವು ಪ್ರಾಣಿಗಳಲ್ಲೂ ಇದು ಸಂಭವಿಸಬಹುದು ಎಂದು ತೋರಿಸುತ್ತದೆ - ಬಹುಶಃ ಪರಾವಲಂಬಿಗಳು ಆಮ್ಲಜನಕರಹಿತ ವಾತಾವರಣದಲ್ಲಿ ವಾಸಿಸುತ್ತಿರುವುದೇ ಇದಕ್ಕೆ ಕಾರಣವಾಗಿರಬಹುದು ಎಂದು ಅವರು ಹೇಳಿದರು.


ಪರಾವಲಂಬಿಯ ಆಮ್ಲಜನಕರಹಿತ ಸ್ವರೂಪವು ಆಕಸ್ಮಿಕ ಆವಿಷ್ಕಾರವಾಗಿದೆ ಎಂದು ಸಂಶೋಧಕರು ಗಮನಿಸಿದ್ದಾರೆ.


ಹೆನ್ನೆಗುಯಾ ಜೀನೋಮ್ ಅನ್ನು ಜೋಡಿಸುವಾಗ, ಹುಚೋನ್ ಇದು ಮೈಟೊಕಾಂಡ್ರಿಯಾದ ಜೀನೋಮ್ ಅನ್ನು ಒಳಗೊಂಡಿಲ್ಲ ಎಂದು ಕಂಡುಕೊಂಡರು.


ಮೈಟೊಕಾಂಡ್ರಿಯಾ ಜೀವಕೋಶದ ಶಕ್ತಿಕೇಂದ್ರವಾಗಿದ್ದು, ಅಲ್ಲಿ ಶಕ್ತಿಯನ್ನು ಉತ್ಪಾದಿಸಲು ಆಮ್ಲಜನಕವನ್ನು ಸೆರೆಹಿಡಿಯಲಾಗುತ್ತದೆ, ಆದ್ದರಿಂದ ಅದರ ಅನುಪಸ್ಥಿತಿಯು ಪ್ರಾಣಿಯು ಆಮ್ಲಜನಕವನ್ನು ಉಸಿರಾಡುತ್ತಿಲ್ಲ ಎಂಬುದನ್ನು ಸೂಚಿಸುತ್ತದೆ.


ಈ ಹೊಸ ಆವಿಷ್ಕಾರವಾಗುವವರೆಗೂ, ಪ್ರಾಣಿ ಸಾಮ್ರಾಜ್ಯಕ್ಕೆ ಸೇರಿದ ಜೀವಿಗಳು ಆಮ್ಲಜನಕರಹಿತ ಪರಿಸರದಲ್ಲಿ ಬದುಕುವ ಸಾಧ್ಯತೆಯ ಬಗ್ಗೆ ಚರ್ಚೆ ನಡೆಯುತ್ತಿತ್ತು ಎಂದು ಸಂಶೋಧಕರು ತಿಳಿಸಿದ್ದಾರೆ.


ಎಲ್ಲಾ ಪ್ರಾಣಿಗಳು ಆಮ್ಲಜನಕವನ್ನು ಉಸಿರಾಡುತ್ತಿವೆ ಎಂಬ ವಿಷಯವು ಪ್ರಾಣಿಗಳು ಬಹುಕೋಶೀಯ, ಹೆಚ್ಚು ಅಭಿವೃದ್ಧಿ ಹೊಂದಿದ ಜೀವಿಗಳು ಎಂಬ ಅಂಶವನ್ನು ಆಧರಿಸಿದೆ, ಇದು ಆಮ್ಲಜನಕದ ಮಟ್ಟ ಏರಿದಾಗ ಭೂಮಿಯ ಮೇಲೆ ಮೊದಲು ಕಾಣಿಸಿಕೊಂಡಿತು ಎಂದು ಅವರು ಹೇಳಿದರು.


"ಪರಾವಲಂಬಿ ಜೀವಿಯು ಹೇಗೆ ಶಕ್ತಿಯನ್ನು ಉತ್ಪಾದಿಸುತ್ತದೆ ಎಂಬುದು ನಮಗಿನ್ನೂ ಸ್ಪಷ್ಟವಾಗಿಲ್ಲ," ಎಂದು ಹುಚೋನ್ ಹೇಳಿದರು.


"ಇದು ಸುತ್ತಮುತ್ತಲಿನ ಮೀನಿನ ಕೋಶಗಳಿಂದ ಶಕ್ತಿಯನ್ನು ಸೆಳೆಯುತ್ತಿರಬಹುದು, ಅಥವಾ ಇದು ಆಮ್ಲಜನಕ ಮುಕ್ತ ಉಸಿರಾಟದಂತಹ ವಿಭಿನ್ನ ರೀತಿಯ ಉಸಿರಾ ಪ್ರಕ್ರಿಯೆಯನ್ನು ಹೊಂದಿರಬಹುದು, ಇದು ಸಾಮಾನ್ಯವಾಗಿ ಆಮ್ಲಜನಕರಹಿತ ಪ್ರಾಣಿ-ಅಲ್ಲದ ಜೀವಿಗಳನ್ನು ನಿರೂಪಿಸುತ್ತದೆ," ಎಂದು ಅವರು ಹೇಳಿದರು.


ಹುಚೋನ್ ಪ್ರಕಾರ, ಆವಿಷ್ಕಾರವು ವಿಕಸನೀಯ ಸಂಶೋಧನೆಗೆ ಅಗಾಧ ಮಹತ್ವವನ್ನು ಹೊಂದಿದೆ.


"ವಿಕಾಸದ ಸಮಯದಲ್ಲಿ, ಜೀವಿಗಳು ಹೆಚ್ಚು ಹೆಚ್ಚು ಸಂಕೀರ್ಣವಾಗುತ್ತಾ ಹೋದವು, ಸರಳ ಏಕಕೋಶೀಯ ಅಥವಾ ಕೆಲವು ಕೋಶಗಳ ಜೀವಿಗಳು ಸಂಕೀರ್ಣ ಜೀವಿಗಳ ಪೂರ್ವಜರು ಎಂದು ಸಾಮಾನ್ಯವಾಗಿ ಭಾವಿಸಲಾಗಿದೆ," ಎಂದು ಅವರು ಹೇಳಿದರು.

"ಆದರೆ ಇಲ್ಲಿ, ನಮ್ಮ ಕಣ್ಣ ಮುಂದೆಯೇ ಒಂದು ಜೀವಿಯಿದ್ದು ಅದರ ವಿಕಸನ ಪ್ರಕ್ರಿಯೆಯು ತದ್ವಿರುದ್ಧವಾಗಿದೆ. ಆಮ್ಲಜನಕವಿಲ್ಲದ ವಾತಾವರಣದಲ್ಲಿ ವಾಸಿಸುವ ಇದು ಏರೋಬಿಕ್ ಉಸಿರಾಟಕ್ಕೆ ಕಾರಣವಾದ ಅನಗತ್ಯ ವಂಶವಾಹಿಗಳನ್ನು ತೊರೆದು ಮತ್ತು ಇನ್ನೂ ಸರಳವಾದ ಜೀವಿಯಾಗಿದೆ," ಎಂದು ಹುಚೋನ್ ಹೇಳಿದರು.