100 ದಶಲಕ್ಷ ವರ್ಷಗಳ ಹಿಂದೆ ಕಾಲುಗಳು, ಕೆನ್ನೆಯ ಮೂಳೆಗಳನ್ನು ಹೊಂದಿದ್ದ ಹಾವುಗಳು

100 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಹಾವುಗಳ ಪಳೆಯುಳಿಕೆಯು ಉತ್ತರ ಪ್ಯಾಟಗೋನಿಯಾದಲ್ಲಿ ಕಂಡುಬಂದಿವೆ. ಇದು ಹಾವುಗಳ ವಿಕಸನದ ಬಗ್ಗೆ ಬೆಳಕು ಚೆಲ್ಲಿದೆ.

100 ದಶಲಕ್ಷ ವರ್ಷಗಳ ಹಿಂದೆ ಕಾಲುಗಳು, ಕೆನ್ನೆಯ ಮೂಳೆಗಳನ್ನು ಹೊಂದಿದ್ದ ಹಾವುಗಳು

Friday November 22, 2019,

2 min Read

ಸುಮಾರು 100 ದಶಲಕ್ಷ ವರ್ಷಗಳ ಹಿಂದೆ ವಾಸಿಸುತ್ತಿದ್ದ ಹಾವಿನ ಪೂರ್ವಜರು ಕಾಲುಗಳು ಮತ್ತು ಕೆನ್ನೆಯ ಮೂಳೆಯನ್ನು ಹೊಂದಿದ್ದರು, ಅದು ಅವರ ಆಧುನಿಕ ವಂಶಸ್ಥರಲ್ಲಿ ಸಂಪೂರ್ಣವಾಗಿ ಕಣ್ಮರೆಯಾಗಿದೆ ಎಂದು ನಜಾಶ್ ರಿಯೊನೆಗ್ರಿನಾ ಎಂಬ ಹಳೆಯ ಸರೀಸೃಪದ ಪಳೆಯುಳಿಕೆಗಳನ್ನು ಪರೀಕ್ಷಿಸಿದ ಅಧ್ಯಯನವೊಂದು ತಿಳಿಸಿದೆ.


ಸೈನ್ಸ್ ಅಡ್ವಾನ್ಸಸ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ವಿಕಾಸದ ಮೊದಲ 70 ದಶಲಕ್ಷ ವರ್ಷಗಳಲ್ಲಿ ಹಾವುಗಳು ಹಿಂಗಾಲುಗಳನ್ನು ಹೊಂದಿದ್ದವು ಮತ್ತು ಜುಗಲ್ ಮೂಳೆ ಎಂದೂ ಕರೆಯುವ ಮೂಳೆಗಳನ್ನು ಹೊಂದಿದ್ದವು ಎಂದು ಪ್ರಸ್ತಾಪಿಸಲಾಗಿದೆ.


ಕೆನಡಾದ ಆಲ್ಬರ್ಟಾ ವಿಶ್ವವಿದ್ಯಾಲಯದ ಸಂಶೋಧಕರು ಸೇರಿದಂತೆ ಸಂಶೋಧಕರು ಸುಲಭವಾಗಿ ಬಾಗುವ ಪ್ರಾಚೀನ ಹಾವಿನ ತಲೆಬುರುಡೆಯು ಹೇಗೆ ತಮ್ಮ ಪೂರ್ವಜರಾದ ಹಲ್ಲಿಯಿಂದ ವಿಕಸನಗೊಂಡಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ.


ಇಲ್ಲಿಯವರೆಗೆ, ಪಳೆಯುಳಿಕೆ ದಾಖಲೆಗಳು ಲಭ್ಯವಿಲ್ಲದ ಕಾರಣ ಆರಂಭಿಕ ಹಾವುಗಳ ವಿಕಸನೀಯ ಇತಿಹಾಸದ ಅಧ್ಯಯನ ಕಷ್ಟವಾಗಿತ್ತು ಎಂದು ಅವರು ಹೇಳಿದರು.


ಸುಮಾರು 100 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಹಾವುಗಳ ಪಳೆಯುಳಿಕೆಯು ಉತ್ತರ ಪ್ಯಾಟಗೋನಿಯಾದಲ್ಲಿ ಕಂಡುಬಂದಿವೆ - ಇದು ದಕ್ಷಿಣ ಅಮೆರಿಕಾದ ತಳದಲ್ಲಿರುವ ಅರ್ಜೆಂಟೀನಾ ಮತ್ತು ಚಿಲಿಯ ಕೆಳಭಾಗಗಳನ್ನು ಕೂಡ ವ್ಯಾಪಿಸಿದೆ ಎಂದು ಅವರು ಹೇಳಿದರು.


"ನಜಾಶ್ (ಅಳಿದುಹೋದ ಹಾವಿನ ತಳಿ) ಯಾವುದೇ ಪ್ರಾಚೀನ ಹಾವಿನ ಸಂಪೂರ್ಣ, ಮೂರು ಆಯಾಮದ ಸಂರಕ್ಷಿತ ತಲೆಬುರುಡೆಯನ್ನು ಹೊಂದಿದೆ ಮತ್ತು ಇದು ಹಾವುಗಳ ತಲೆ ಹೇಗೆ ವಿಕಸನಗೊಂಡಿತು ಎಂಬುದರ ಕುರಿತು ಅದ್ಭುತವಾದ ಹೊಸ ಮಾಹಿತಿಯನ್ನು ಒದಗಿಸುತ್ತಿದೆ. ಇದು ಕೆಲವು ಕೀಲುಗಳನ್ನು ಹೊಂದಿದೆ, ಆದರೆ ಆಧುನಿಕ ಹಾವುಗಳ ತಲೆಬುರುಡೆಯಲ್ಲಿ ಕಂಡುಬರುವ ಬಾಗುವ ಎಲ್ಲಾ ಕೀಲುಗಳಿಲ್ಲ" ಎಂದು ಆಸ್ಟ್ರೇಲಿಯಾದ ಫ್ಲಿಂಡರ್ಸ್ ವಿಶ್ವವಿದ್ಯಾಲಯದ ಅಧ್ಯಯನದ ಸಹ ಲೇಖಕ ಅಲೆಸ್ಸಾಂಡ್ರೊ ಪಾಲ್ಸಿ ಹೇಳಿದ್ದಾರೆ.


ಪ್ರಸ್ತುತ ಅಧ್ಯಯನದಲ್ಲಿ, ಅವರು ನಜಾಶ್‌ನ ಸಂರಕ್ಷಿತ ತಲೆಬುರುಡೆಗಳ ಹೆಚ್ಚಿನ ರೆಸಲ್ಯೂಶನ್ ಸ್ಕ್ಯಾನಿಂಗ್ ಮತ್ತು ಲೈಟ್ ಮೈಕ್ರೋಸ್ಕೋಪಿಯನ್ನು ನಡೆಸಿದರು, ಹಾವುಗಳ ಆರಂಭಿಕ ವಿಕಾಸದ ಬಗ್ಗೆ ಹೊಸ ಅಂಗರಚನಾಶಾಸ್ತ್ರದ ಮಾಹಿತಿಯನ್ನು ಬಹಿರಂಗಪಡಿಸಿದರು.


ಅಧ್ಯಯನದ ಪ್ರಕಾರ, ನಜಾಶ್ ಭೂಮಿಯ ಪ್ರಾಚೀನ ಖಂಡಗಳಲ್ಲಿ ಒಂದಾದ ಗೋಂಡ್ವಾನಾದ ದಕ್ಷಿಣ ಗೋಳಾರ್ಧದಲ್ಲಿ ವಾಸವಿದ್ದ ಪ್ರಾಚೀನ ಹಾವುಗಳಿಗೆ ನಿಕಟ ಸಂಬಂಧ ಹೊಂದಿದೆ ಮತ್ತು ಇದು ಆಧುನಿಕ ಹಾವುಗಳಲ್ಲಿ ಕೆಲ ಹಾವುಗಳಿಗೆ ಮಾತ್ರ ಸಂಬಂಧಿಸಿರಬಹುದು.


"ಆಧುನಿಕ ಹಾವುಗಳ ಪೂರ್ವಜರು ದೊಡ್ಡ ದೇಹ ಮತ್ತು ದೊಡ್ಡ-ಬಾಯಿಯನ್ನು ಹೊಂದಿದ್ದರು ಎಂಬ ಕಲ್ಪನೆಯನ್ನು ನಮ್ಮ ಸಂಶೋಧನೆಗಳು ಬೆಂಬಲಿಸುತ್ತವೆ – ಇದು ನಾವು ಹಿಂದೆ ಯೋಚಿಸಿದಂತೆ ಸಣ್ಣ ಬಿಲಗಳನ್ನು ಮಾಡುವ ಪ್ರಾಣಿಗಳ ರೂಪಗಳೆಂದುಕೊಂಡದ್ದನ್ನು ಸುಳ್ಳಾಗಿಸಿದೆ" ಎಂದು ಅರ್ಜೆಂಟೀನಾದ ಯೂನಿವರ್ಸಿಡಾಡ್ ಮೈಮೋನೈಡ್ಸ್ನ ಅಧ್ಯಯನದ ಪ್ರಮುಖ ಲೇಖಕ ಫರ್ನಾಂಡೊ ಗಾರ್ಬೆರೋಗ್ಲಿಯೊ ಹೇಳಿದ್ದಾರೆ.


ಸಂಶೋಧಕರ ಪ್ರಕಾರ, ಹಲ್ಲಿ ಮಾದರಿಯ ಸರೀಸೃಪಗಳನ್ನು ಹೊರತುಪಡಿಸಿ ಹಾವುಗಳಲ್ಲಿರುವ ಒಂದು ವೈಶಿಷ್ಟ್ಯವೆಂದರೆ ಅವುಗಳ ಚರವಾದ ತಲೆಬುರುಡೆ, ಇದು ದೊಡ್ಡ ಜೀವಿಗಳನ್ನು ನುಂಗಲು ಅನುವು ಮಾಡಿಕೊಡುತ್ತದೆ.


ಹಲ್ಲಿಯ ಕಟ್ಟುನಿಟ್ಟಿನ ತಲೆಬುರುಡೆಯಿಂದ ಹಾವುಗಳ ಸೂಪರ್ ಫ್ಲೆಕ್ಸಿಬಲ್ ತಲೆಬುರುಡೆಗೆ ಹೀಗೆ ಪರಿವರ್ತನೆಯಾಗಿದ್ದು ಎಂಬುದರ ಕುರಿತು ಮಾಹಿತಿಯ ಕೊರತೆಯಿತ್ತು ಎಂದು ಪಾಲ್ಸಿ ಹೇಳುತ್ತಾರೆ.


ನಜಾಶ್‌ನ ಮಧ್ಯ ಕಿವಿಯ ರಚನೆಯು ಹಲ್ಲಿಗಳು ಮತ್ತು ಈಗಿರುವ ಹಾವುಗಳ ನಡುಘಟ್ಟದ ರಚನೆ ಎಂದು ಅಧ್ಯಯನವು ಹೇಳುತ್ತದೆ.


ಎಲ್ಲಾ ಹಾವುಗಳಿಗಿಂತ ಭಿನ್ನವಾಗಿ, ಪೂರ್ವಜರ ಸರೀಸೃಪವು ಹಲ್ಲಿಗಳಲ್ಲಿರುವಂತಹ ಚೆನ್ನಾಗಿ ಅಭಿವೃದ್ಧಿ ಹೊಂದಿದ ಕೆನ್ನೆಯ ಮೂಳೆಯನ್ನು ಉಳಿಸಿಕೊಂಡಿವೆ.


ಆಧುನಿಕ ಹಾವುಗಳ ಹುಟ್ಟಿನ ಮೊದಲೇ ಹಳೆಯ ಹಾವುಗಳು ತಮ್ಮ ಹಿಂಗಾಲನ್ನು ದೀರ್ಘಕಾಲದವರೆಗೆ ಉಳಿಸಿಕೊಂಡಿದ್ದವು ಎಂದು ಅಧ್ಯಯನವು ಬಹಿರಂಗಪಡಿಸುತ್ತದೆ, ಆದರೆ ಆಧುನಿಕ ಹಾವುಗಳ ಹಿಂಗಾಲುಗಳು ಬಹುಪಾಲು, ಸಂಪೂರ್ಣವಾಗಿ ದುರ್ಬಲವಾಗಿವೆ" ಎಂದು ಗಾರ್ಬೆರೋಗ್ಲಿಯೊ ಹೇಳುತ್ತಾರೆ.

"ಚಿಕ್ಕ ಕಾಲುಗಳ ಈ ಹಳೆಯ ಹಾವುಗಳು ಬರೀ ಕ್ಷಣಿಕ ವಿಕಸನದ ಹಂತದಲ್ಲಿರಲಿಲ್ಲ ಬದಲಾಗಿ ಅದಕ್ಕಿಂತ ಮಹತ್ತರವಾದುದರ ದಾರಿಯಲ್ಲಿದ್ದವು. ಹಾಗೂ, ಅವುಗಳು ಅತ್ಯಂತ ಯಶಸ್ವಿ ದೇಹದ ಯೋಜನೆಯನ್ನು ಹೊಂದಿದ್ದು ಅದು ಹಲವು ದಶಲಕ್ಷ ವರ್ಷಗಳಿಂದಲೂ ಮುಂದುವರೆದು, ಭೂಮಿಯ, ಬಿಲ ಮತ್ತು ಜಲಚರಗಳ ವ್ಯಾಪ್ತಿಯಲ್ಲಿ ವೈವಿಧ್ಯಮಯವಾಗಿದೆ” ಎಂದು ಫ್ಲಿಂಡರ್ಸ್ ವಿಶ್ವವಿದ್ಯಾಲಯದ ಅಧ್ಯಯನದ ಸಹ ಲೇಖಕ ಮೈಕ್ ಲೀ ಹೇಳಿದರು.