ಸೋಷಿಯಲ್‌ ಮೀಡಿಯಾವನ್ನು ಬಿಟ್ಟಿರಲಾಗುತ್ತಿಲ್ಲವೆ? ಹಾಗಿದ್ದರೆ, ನಿಮ್ಮ ಮಾನಸಿಕ ನೆಮ್ಮದಿಯನ್ನು ಕಾಪಾಡಿಕೊಳ್ಳಲು ಇಲ್ಲಿವೆ 5 ಸುಲಭ ಮಾರ್ಗಗಳು

ಸಾಮಾಜಿಕ ಮಾಧ್ಯಮದ ಮೇಲಿನ‌ ವ್ಯಸನವು ಹಲವಾರು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ ಏಕೆಂದರೆ, ಆಗಾಗ ಅಪಲೋಡ್‌ ಆಗುವ ಅವಾಸ್ತವಿಕ ಪೋಸ್ಟ್‌ಗಳು ಬಳಕೆದಾರರಲ್ಲಿ ಸ್ವಾಭಿಮಾನವನ್ನು ಕಡಿಮೆ ಮಾಡುತ್ತವೆ. ನೀವು ಅದೇ ರೀತಿ ಭಾವಿಸುತ್ತಿದ್ದರೆ, ಖಿನ್ನತೆಯ ಬಲೆಗೆ ಬೀಳದಂತೆ ತಡೆಯುವ ಕೆಲವು ಸಲಹೆಗಳು ಇಲ್ಲಿವೆ.

8th Nov 2019
  • +0
Share on
close
  • +0
Share on
close
Share on
close

ನವಪೀಳಿಗೆಯಲ್ಲಿ (Z-ಜೆನರೇಶನ್) ಕಳೆದುಹೋಗುವ ಭಯ (‘ಫೋಮೋ’- ಫಿಯರ್ ಆಫ್ ಮಿಸ್ಸಿಂಗ್ ಔಟ್) ಹೆಚ್ಚಾಗಿ ಇರುತ್ತದೆ. ಇದು ಹೆಚ್ಚಾಗಿ ನಮ್ಮ ನೈಜ ಜೀವನಕ್ಕೆ ಹೊಂದಿಕೆಯಾಗುವ ಅಥವಾ ಹೊಂದಿಕೆಯಾಗದ ಆನ್‌ಲೈನ್ ವ್ಯಕ್ತಿಗಳಾಗಿ ಜೀವಿಸಲು ಆರಂಭಿಸಿದ ಕ್ಷಣದಿಂದ ಆರಂಭವಾಗುತ್ತದೆ. ಹಾಗಾಗಿ, ಆನ್‌ಲೈನ್‌ನಲ್ಲಿ ಹೆಚ್ಚು ಸಮಯ ಕಳೆಯುವುದು, ಟ್ವಿಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಮಿಂಚುವುದು ಸಹ ಸಾಮಾಜಿಕ ಜಾಲತಾಣ ಬಳಕೆದಾರರಲ್ಲಿ ಹಲವಾರು ರೀತಿಯ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತಿದೆ.


ಪ್ರತ್ಯೇಕತೆ, ಒಂಟಿತನ, ಕಡಿಮೆ ಸ್ವಾಭಿಮಾನ ಮತ್ತು ಸ್ವ-ಮೌಲ್ಯ, ಖಿನ್ನತೆ ಹಾಗೂ ಆತ್ಮಹತ್ಯೆ ಕೂಡ ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆ ಮತ್ತು ಅವಲಂಬನೆಯಿಂದಾಗಿ ಬೆಳೆಯುತ್ತಿರುವ ಕೆಲವು ಮಾನಸಿಕ ಆರೋಗ್ಯ ಸಮಸ್ಯೆಗಳಾಗಿವೆ. ನವ ತಂತ್ರಜ್ಞಾನವು ಯಾರಿಗಾದರೂ ಪಠ್ಯ ಸಂದೇಶವನ್ನು ಕಳುಹಿಸುವುದು ಸುಲಭಗೊಳಿಸುವುದರೊಂದಿಗೆ, ಮುಖಾಮುಖಿ ಸಂವಹನಗಳಿಗೆ ಬೇಡಿ ಹಾಕಿದೆ. ಇದು ನಮ್ಮನ್ನು ಒಂಟಿಗೊಳಿಸಿ ಅನ್ಯಲೋಕದ ಪೀಳಿಗೆಯನ್ನೇ‌ ಸೃಷ್ಟಿಸಿದೆ.


ಚಿಂತಿಸದಿರಿ, ಸಾಮಾಜಿಕ ಜಾಲತಾಣಗಳ ಅಧಿಪತ್ಯದ ಕಾಲದಲ್ಲಿ ಮಾನಸಿಕ ಸ್ವಾಸ್ಥ್ಯವನ್ನು ಉಳಿಸಿಕೊಳ್ಳುವ ಐದು ವಿಧಾನಗಳನ್ನು ಅನುಸರಿಸಬಹುದು:


ದೂರಸರಿಯುವುದು

‌ಇದೆಲ್ಲ ಫೇಸ್‌ಬುಕ್‌ನಲ್ಲಿ ಒಂದು ವಿಡಿಯೋ ನೋಡುತ್ತ 'ಲೈಕ್' ಮಾಡುವುದರಿಂದ ಶುರುವಾಗುವುದು, ಮತ್ತೆ ನೀವದರಲ್ಲಿ ನಿಮಗೆ ಗೊತ್ತಿಲ್ಲದೆಯೇ 3 ಗಂಟೆ ವ್ಯರ್ಥಮಾಡಿರುತ್ತೀರಿ. ಈ ಸತ್ಯ ನಮಗೆ ಬೇಸರ ಉಂಟುಮಾಡಬಹುದು, ಹಾಗಾಗಿ, ಕೆಲಕಾಲ ಸಾಮಾಜಿಕ ಜಾಲತಾಣದಿಂದ‌ ದೂರ ಉಳಿಯುವುದು ಒಳಿತು. ಇದು ನಮ್ಮ ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿಯಾಗುವುದಲ್ಲದೆ, ನಮ್ಮನ್ನು ಹೆಚ್ಚು ಜಾಗರೂಕರನ್ನಾಗಿ ಮಾಡುತ್ತದೆ ಇದರಿಂದ ನಾವು ವರ್ತಮಾನದಲ್ಲಿ ಜೀವಿಸಬಹುದು ಹಾಗೂ ನಮ್ಮ ಇಂದ್ರಿಯಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.


ಇನ್ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ ಆಪ್ಲಿಕೇಶನ್‌ಗಳಲ್ಲಿ ನಾವು ಕಳೆಯುವ ಸಮಯವನ್ನು ಮಿತಗೊಳಿಸುವ ಆಯ್ಕೆ ಇರುತ್ತದೆ. ಅಲ್ಲಿ ನಾವು ಸಮಯವನ್ನು ನಿಗದಿಪಡಿಸುವ ಮೂಲಕ ಅನಿಯಮಿತ ಸಾಮಾಜಿಕ ಜಾಲತಾಣದ ಬಳಕೆಯನ್ನು ಕಡಿಮೆಮಾಡಬಹುದು.


ಸಾಮಾನ್ಯವಾಗಿ, ನಾವು ಸಾಮಾಜಿಕ ಮಾಧ್ಯಮದಲ್ಲಿ ಎಷ್ಟು ಸಮಯವನ್ನು ಕಳೆಯುತ್ತಿದ್ದೇವೆ ಎಂಬುದನ್ನೂ ವಿಶ್ಲೇಷಿಸಲು ಸಹಾಯ ಮಾಡಲು ಹಲವಾರು ಅಪ್ಲಿಕೇಶನ್‌ಗಳಿವೆ. ಅವುಗಳೆಂದರೆ, ಆಫ್‌ಟೈಮ್, ಫ್ಲಿಪ್ಡ್, ಫ್ರೀಡಮ್ ಮತ್ತು ಬ್ರೇನ್.ಎಫಎಮ್ ಈ ಅಪ್ಲಿಕೇಶನ್‌ಗಳು ನಿಮಗೆ ಎಚ್ಚರಿಕೆ ಸಂದೇಶಗಳನ್ನು ಕಳುಹಿಸುತ್ತದೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅಪ್ರಯೋಜನಕಾರಿ ಸ್ಕ್ರೋಲಿಂಗ್ ತಡೆಯುವಲ್ಲಿ ಸಹಕಾರಿಯಾಗಿವೆ. ಅಷ್ಟೇ ಅಲ್ಲದೇ, ಅತಿಯಾದ ಅವಲಂಬನೆಯಿಂದ ಹೊರಬರುವ ಪ್ರಗತಿಯನ್ನೂ ಸಹ ಸೂಚಿಸುತ್ತದೆ.


ಸುಳ್ಳನ್ನು ಗುರುತಿಸುವುದು

ಸಾಮಾಜಿಕ ಮಾಧ್ಯಮವು ನೈಜ ಪ್ರಪಂಚವಲ್ಲ ಎಂಬುದನ್ನು ನಾವು ಗುರುತಿಸುವುದು ಬಹಳ ಮುಖ್ಯವಾಗಿದೆ. ಕೆಲವೊಂದು ಬಾರಿ ಸಾಮಾಜಿಕ ಜಾಲತಾಣದ ಸಂಪರ್ಕಗಳನ್ನು ನಾವು ನಿಜವಾದ ಸ್ನೇಹವೆಂದು ನಂಬುತ್ತೇವೆ.


ಸಾಮಾನ್ಯವಾಗಿ, ನೈಜ ಸಂಬಂಧಗಳು ಹಾಗೂ ಸಂಪರ್ಕಗಳು ವೈಯಕ್ತಿಕವಾಗಿ ಹಲವು ಬಾರಿ ಭೇಟಿ‌ ಮಾಡಿದ‌ ನಂತರದಲ್ಲಿ‌ ಮಾತ್ರ ಬಲಗೊಳ್ಳುತ್ತವೆ. ಇಬ್ಬರ ನಡುವೆ ಹಿತಾಸಕ್ತಿಗಳು ಹಂಚಿಕೆಯಾಗಲು, ವೈಯಕ್ತಿಕ ಇತಿಮಿತಿಗಳನ್ನು ಗೌರವಿಸಲು, ಆಳವಾದ ಹಾಗೂ ಅರ್ಥಪೂರ್ಣ ವಿಚಾರಧಾರೆಗಳು ಹೊರಹೊಮ್ಮಲು ಸಾಕಷ್ಟು ಸಮಯವೇ ಬೇಕು. ಇದು ಖಂಡಿತವಾಗಿಯೂ ಸಾಮಾಜಿಕ ತಾಣಗಳಲ್ಲಿ ಬೆಳೆಯಲು ಸಾಧ್ಯವಿಲ್ಲ


ಆದ್ದರಿಂದ, ನಮ್ಮ ಸಾಮಾಜಿಕ ಜಾಲತಾಣಗಳ ನಿರ್ವಹಣೆ ಹೊರತುಪಡಿಸಿ, ನೈಜ ಜೀವನಕ್ಕೆ ಬೆಂಬಲ ವ್ಯವಸ್ಥೆ ಬಹಳ ಮುಖ್ಯ. ಅಂದರೆ, ನಾವು ಅತ್ತಾಗ ಕಣ್ಣೀರು ಒರೆಸಲು ಸಾಮಾಜಿಕ‌ ಜಾಲತಾಣ ನಿಜವಾಗಿಯೂ ಸಹಾಯ ಮಾಡುವುದಿಲ್ಲ. ನಮ್ಮೊಂದಿಗೆ ಬೆಳೆದ ನೈಜ ಸ್ನೇಹಸಂಬಂಧಗಳು ಮಾತ್ರ ನಮ್ಮನ್ನು ಉತ್ತಮ‌ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂಬುದನ್ನು ಅರಿತುಕೊಳ್ಳಬೇಕು.ಹೋಲಿಕೆ ಮಾಡಬೇಡಿ, ಮಾಡಿ ತಲೆಕೆಡಿಸಿಕೊಳ್ಳಬೇಡಿ

ಯುವಕರು ಸ್ವಾಭಿಮಾನ ವಿಚಾರವಾಗಿ ತಲೆಕೆಡಿಸಿಕೊಳ್ಳುವುದು, ಖಿನ್ನತೆಗೆ ಒಳಗಾಗುವುದು ಹಾಗೂ ವ್ಯಕ್ತಿತ್ವದ ಬಗ್ಗೆ ಚಿಂತಿಸುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿನ ಅವಾಸ್ತವಿಕ‌ ಪೋಸ್ಟ್‌ಗಳೇ ಮೂಲ ಕಾರಣ. ಜನರು ತಮ್ಮಲ್ಲಿನ ಉತ್ತಮ‌ ಅಂಶಗಳನ್ನು, ಅದರಲ್ಲೂ ಜನರು ಏನನ್ನು ನೋಡಬೇಕೆಂದು ಬಯಸುತ್ತಾರೋ ಅದನ್ನು ಮಾತ್ರ ಸಾಮಾಜಿಕ‌‌ ಜಾಲತಾಣಗಳು ಪ್ರತಿಬಿಂಬಿಸುತ್ತವೆ. ಆದರೆ, ವಾಸ್ತವಾಂಶ ಸಂಪೂರ್ಣ ಬೇರೆಯಾಗಿರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಎಡಿಟ್ ಮಾಡಿರುವ ಅಂದ-ಚೆಂದದ ಚಿತ್ರಗಳನ್ನು ಮಾತ್ರ ಕಾಣುತ್ತೇವೆ ಆದರೆ, ಯಾರೋಬ್ಬರೂ ತಮ್ಮ ಜೀವನದ ಕೆಟ್ಟ ದಿನಗಳನ್ನೋ, ಹೋರಾಟಗಳನ್ನು ತೋರ್ಪಡಿಸುವುದಿಲ್ಲ. ಆದ್ದರಿಂದ ಆನ್‌ಲೈನ್‌ನಲ್ಲಿ‌ ನಾವು ಕಾಣುವುದು ಒಬ್ಬರ ದಿನನಿತ್ಯ ಜೀವನದ ನೈಜತೆಯಲ್ಲ ಎಂಬುದನ್ನು ತಿಳಿದುಕೊಳ್ಳಬೇಕು.


ಇದಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಇತರರ ಜೀವನವನ್ನು ನೋಡುತ್ತೇವೆ ಹಾಗೂ ನಮ್ಮನ್ನು ಗೆಳೆಯರೊಂದಿಗೆ ಹೋಲಿಸಿಕೊಳ್ಳುತ್ತೇವೆ. ತದನಂತರ ಅವರಿಗೆ ಅನುಗುಣವಾಗಿ‌ ನಮ್ಮನ್ನು ಹೊಂದಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಆದರೆ, ಸ್ವಂತಿಕೆಯು ಬಹಳ ಮುಖ್ಯವಾದದ್ದು. ಕೆಲವರು ತಮ್ಮ ನೈಜ ವ್ಯಕ್ತಿತ್ವ, ಇಷ್ಟ- ಕಷ್ಟಗಳನ್ನು ಹೊರತುಪಡಿಸಿ ಕೇವಲ, ತೋರ್ಪಡಿಕೆಗಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಾರೆ.


ಪರದೆ ಹಾಕಿಕೊಂಡು ಜೀವಿಸುವುದನ್ನು ನಿಲ್ಲಿಸುವುದು ಬಹಳ ಮುಖ್ಯ. ಹಾಗಾಗಿ, ನಾವು ಆನ್‌ಲೈನ್‌ನಲ್ಲಿ‌ ಕಂಡಿದ್ದನ್ನು ಪ್ರಶ್ನಿಸುವುದು ಹಾಗೂ ಎಲ್ಲರಲ್ಲಿಯೂ ನ್ಯೂನತೆಗಳಿವೆ ಎಂಬುದನ್ನು ತಿಳಿದುಕೊಳ್ಳುವ‌ ಮೂಲಕ ಪರದೆಯ ಜೀವನದಿಂದ‌ ದೂರಸರಿಯಬಹುದು. ಜೀವನದಲ್ಲಿ ಸಾಮಾಜಿಕ ಜಾಲತಾಣಗಳ ಸ್ಥಾನಗಳನ್ನು ಬದಲಾಯಿಸುವುದು ಕಷ್ಟವಾದಲ್ಲಿ, ಫೋನ್‌ಗಳಲ್ಲಿನ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿ, ಟಾಬ್ಲೆಟ್ ಅಥವಾ ಲಾಪ್‌ಟಾಪ್‌ಗಳಲ್ಲಿ ಮಾತ್ರ ಇವುಗಳನ್ನು ಬಳಸುವುದರಿಂದ ಅನಾವಶ್ಯಕ ಸಂದೇಶಗಳು ಹಾಗೂ ಚಿತ್ರಗಳು ನಿಮ್ಮ ಮನಸ್ಸನ್ನು ಇನ್ನೊಬ್ಬರಿಗೆ ಹೋಲಿಕೆ ಮಾಡುವಂತೆ ಪ್ರಚೋಧಿಸುವಿಕೆಗೆ ಕಡಿವಾಣ ಹಾಕಬಹುದು.


ಒಂದು ಪ್ರಸಿದ್ಧ ಮಾತಿನಂತೆ " ನಮ್ಮ‌ ತೆರೆಮರೆಯ ಜೀವನವನ್ನು, ಬೇರೆಯವರ ಹೈಲೈಟ್ ರೀಲ್‌ಗಳೊಂದಿಗೆ ಹೋಲಿಸಿಕೊಳ್ಳುವುದರಿಂದ ನಮ್ಮಲ್ಲಿ ಅಭದ್ರತೆ ಮನೆ ಮಾಡುತ್ತದೆ"


ಆಗಾಗ್ಗೆ ನಮ್ಮನ್ನು ಪರೀಕ್ಷಿಸುವುದು

ಸ್ವಲ್ಪ‌ ವಿಶ್ರಮಿಸಿ, ನಂತರ ನಮಗೆ ಹೇಗೆ ಅನಿಸುತ್ತದೆ ಎಂದು ನಮ್ಮನ್ನೇ ಕೇಳಿಕೊಳ್ಳುವುದು ಮಾನಸಿಕ ಆರೋಗ್ಯವನ್ನು ಪರೀಕ್ಷಿಸುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಸಾಮಾಜಿಕ ಜಾಲತಾಣಗಳು ನಮ್ಮ ಮನಸ್ಥಿತಿ ಹಾಗೂ ನಡವಳಿಕೆಯ ಬದಲಾವಣೆಗಳ ಮೇಲೆ ಸಾಕಷ್ಟು ಪರಿಣಾಮ ಬೀರಿರುತ್ತದೆ. ಹಾಗಾಗಿ, ನೀವು ಆನ್‌ಲೈನ್‌ನಲ್ಲಿ ಅನಾವಶ್ಯಕ ಸಮಯವನ್ನು ಕಳೆಯುತ್ತಿದ್ದೇವೆ ಎನಿಸುತ್ತಿದ್ದು, ಅದು ನಿಮ್ಮ ಆಲೋಚನೆಗಳು ಹಾಗೂ ಭಾವನೆಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ ಎಂಬುದನ್ನು ಮೊದಲು ನೀವು ಅರಿತಿದ್ದರೆ ಅದಕ್ಕೆ ಬೇರೆಯಾವುದೇ ಪರ್ಯಾಯ ಮಾರ್ಗ ಅನುಸರಿಸುವಲ್ಲಿ ಸಿದ್ಧರಿರಬೇಕು.


ನಿಮ್ಮ ಇನ್ಸ್ಟಾಗ್ರಾಮ್ ಫೀಡ್‌ನಲ್ಲಿ ಕೇವಲ‌ ಕೆಲವೇ ಮುಖಗಳೊಂದಿಗೆ ನೀಲಿ, ಬೂದು ಬಣ್ಣ ಹಾಗೂ ಕಡುಬಣ್ಣದ ಫೋಟೋಗಳಿದ್ದರೆ ನೀವು ಖಿನ್ನತೆಗೆ ಒಳಗಾಗಿದ್ದೀರಿ ಎಂದು ಪ್ರತಿನಿಧಿಸುತ್ತೆಂದು ಅಧ್ಯಯನವೊಂದು ತಿಳಿಸಿದೆ.


ನಿಮ್ಮ ಜೀವಿಸುವಿಕೆಯ ಬಗ್ಗೆ ಅರಿಯಲು ದಿನದಲ್ಲಿ ಕೆಲವು ಕ್ಷಣಗಳನ್ನು ಮೀಸಲಿಡಿ. ವಾಸ್ತವಿಕತೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ ಹಾಗೂ ನಿಮಗೆ ಹೇಗೆ ಅನಿಸುತ್ತದೆಂದು ನೋಡಿ, ಒಂದು ವೇಳೆ ನೀವು ಹತಾಶರು, ನಿರಾಶರೆಂದು ಅನಿಸಿದರೆ ಮಾನಸಿಕ ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಿ ಅಥವಾ ನಿಮ್ಮ ಪ್ರೀತಿಪಾತ್ರರಾದ ಸ್ನೇಹಿತ, ಸಂಗಾತಿ ಅಥವಾ ಪೋಷಕರೊಂದಿಗೆ ಮಾತನಾಡಿ ಏಕೆಂದರೆ, ನೈಜ ಜೀವನದಲ್ಲಿ ನೀವು ಬೆಳೆಸಿಕೊಳ್ಳುವ ಸ್ನೇಹ ಸದಾ ನಿಮ್ಮ ರಕ್ಷಣೆಗೆ ಬರುತ್ತದೆ.


ಹವ್ಯಾಸಗಳಿಗೆ ನಿಮ್ಮ ಸಮಯ ಮೀಸಲಿಡಿ

ಸಾಮಾಜಿಕ ಜಾಲತಾಣದಲ್ಲಿ ಸಮಯವನ್ನು ಕಳೆಯುವುದು ಬಿಟ್ಟು, ನಿಮ್ಮ ಮನಸ್ಸು ಮತ್ತು ದೇಹದ ಕಡೆ ಗಮನಹರಿಸುವುದು ಅತ್ಯಂತ ಅವಶ್ಯಕ. ನಿರಂತರ ವ್ಯಾಯಾಮಗಳಿಂದ ಖಿನ್ನತೆ ಮತ್ತು ಆತಂಕವನ್ನು ಎದುರಿಸಿ ಉತ್ತಮ ಭಾವನೆ ಬೆಳೆಸಿಕೊಳ್ಳಬಹುದು ಎಂದು ಆಧ್ಯಯನಗಳಿಂದ ತಿಳಿದುಬಂದಿದೆ. ವಾರದಲ್ಲಿ ಕೆಲವು ಬಾರಿ ಯೋಗದ ಜೊತೆಗೆ ನಿಯಮಿತ ಓಟ ಅಥವಾ ಝುಂಬ ತರಗತಿಗೆ ಸೇರಿಕೊಳ್ಳುವುದು ಉತ್ತಮ‌ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಬಹಳ ಮುಖ್ಯವಾಗಿದೆ.


ನಿಮ್ಮ ಆಸಕ್ತಿಗಳನ್ನು ಅನ್ವೇಷಿಸುವಲ್ಲಿ ಹಾಗೂ ಹವ್ಯಾಸವನ್ನು ರೂಢಿಸಿಕೊಳ್ಳುವಲ್ಲಿ ಸಮಯ ನೀಡಿ. ಹೊಸ ಭಾಷೆ ಕಲಿಯುವುದು, ವಾದ್ಯವನ್ನು ಕಲಿಯುವುದು, ತೋಟಗಾರಿಕೆ ಅಥವಾ ಚಿತ್ರಕಲೆ ಮಾಡುವುದು ನಿಮಗೆ ಹೊಸದನ್ನು ಕಲಿಯಲು ಮತ್ತು ಆನಂದಿಸಲು ಸಹಾಯ ಮಾಡುತ್ತದೆ. ನಿಮ್ಮ ಸೃಜನಶೀಲತೆಯನ್ನು ಅನ್ವೇಷಿಸುವುದು ನಿಮ್ಮ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ ಹಾಗೂ ನಿಮ್ಮ ಸಾಮಾಜಿಕ ಜೀವನ ಸೇರಿದಂತೆ, ಇತರ ಕ್ಷೇತ್ರಗಳಲ್ಲಿ ನೀವು ನಿಮ್ಮ ಆಸಕ್ತಿಗೆ ಹೊಂದಿಕೆಯಾಗುವ ಜನರನ್ನು ಭೇಟಿಮಾಡುವಲ್ಲಿ ಪ್ರಯೋಜನವಾಗುತ್ತದೆ.


ನಿಯಮಿತ ವ್ಯಾಯಾಮ ಮತ್ತು ಉತ್ತಮ ಹವ್ಯಾಸಗಳು ನಿಮ್ಮ ಮನಸ್ಸನ್ನು ಸರಿಯಾದ ವಿಷಯಗಳ ಮೇಲೆ ಕೇಂದ್ರೀಕರಿಸುತ್ತವೆ, ಇದರಿಂದ ನೀವು ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಕೇವಲ ಸ್ವಲ್ಪ ಸಮಯವನ್ನು ಕಳೆದರೂ ಸಹ ನಿಮಗೆ ಉಪಯೋಗವಾಗುವ ಪೋಸ್ಟ್‌ಗಳನ್ನು ಸ್ಲೈಡ್ ಮಾಡಲು ಸಾಧ್ಯವಾಗುತ್ತದೆ. ಉತ್ತಮ ತಾಲೀಮು ನಿಮಗೆ ಆರಾಮವಾಗಿ ಮಗುವಿನಂತೆ ನಿದ್ರಿಸಲು ಸಹಾಯ ಮಾಡಿದರೇ, ಹೊಸತನ್ನು ಕಲಿಯುವುದರಿಂದ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ.

  • +0
Share on
close
  • +0
Share on
close
Share on
close
Report an issue
Authors

Related Tags

ಸೈನ್ ಅಪ್ ನಮ್ಮ ದೈನಂದಿನ ಸುದ್ದಿಪತ್ರಕ್ಕಾಗಿ

Our Partner Events

Hustle across India