ಮಲಹೊರುವ ಪದ್ಧತಿಯನ್ನು ನಿರ್ಮೂಲಣೆ ಮಾಡಬಲ್ಲ ಮ್ಯಾನ್‌ಹೋಲ್-ಕ್ಲೀನಿಂಗ್ ರೋಬೋಟ್

ತಿರುವನಂತಪುರಂನ ಜೆನ್ರೋಬೋಟಿಕ್ಸ್ ಬರಿಗೈಯಲ್ಲಿ ಮಲ ಹೋರುವ ಪದ್ದತಿಯನ್ನು ಕೊನೆಗೊಳಿಸಬಲ್ಲದು. ಈ ರೋಬೋಟ್‌ಗಳನ್ನು ಐದು ರಾಜ್ಯಗಳಲ್ಲಿ ನಿಯೋಜಿಸಲಾಗಿದೆ, ಮತ್ತು ಶೀಘ್ರದಲ್ಲೇ ಮಧ್ಯಪ್ರಾಚ್ಯದಲ್ಲಿ ಕೆಲಸನಿರ್ವಹಿಸಲಿದೆ.

ಮಲಹೊರುವ ಪದ್ಧತಿಯನ್ನು ನಿರ್ಮೂಲಣೆ ಮಾಡಬಲ್ಲ ಮ್ಯಾನ್‌ಹೋಲ್-ಕ್ಲೀನಿಂಗ್ ರೋಬೋಟ್

Tuesday January 21, 2020,

4 min Read

ಇಂದು ಕಾರುಗಳು ಸ್ವಯಂಚಾಲಿತವಾಗಿ ಚಲಿಸಬಹುದು, ಮನೆಗಳು ಸಹ ನಮ್ಮ ಆದೇಶದಂತೆ ನಡೆಯುವ ಸಮಯದಲ್ಲಿ, ಭಾರತದಲ್ಲಿ ಮಾತ್ರ ಇನ್ನೂ ಬರಿಗೈಯಲ್ಲಿ ಮಲ ಹೋರುವ ಪದ್ದತಿ ಜಾರಿಯಲ್ಲಿದ್ದು, ಇದರಿಂದ ಸಾವು-ನೋವುಗಳೊಂದಿಗೆ ಸುದ್ದಿಯಾಗುತ್ತಿರುತ್ತದೆ.


2017 ರಲ್ಲಿ ಕೇಂದ್ರ ಸರ್ಕಾರದ ನೇತೃತ್ವದಲ್ಲಿ ನಡೆದ ಎಣಿಕೆಯ ಪ್ರಕಾರ, ದೇಶದ ಆಯ್ದ 600 ಜಿಲ್ಲೆಗಳ 121 ಸ್ಥಳಗಳಲ್ಲಿ ಬರಿಗೈಯಲ್ಲಿ ಮಲ ಹೋರುವವರ ಸಂಖ್ಯೆ 53,236.


ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಭಾರತದಲ್ಲಿ 300 ಕ್ಕೂ ಹೆಚ್ಚು ಮ್ಯಾನ್‌ಹೋಲ್ ಸಂಬಂಧಿತ ಸಾವುಗಳು ಸಂಭವಿಸಿವೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.


ಹಾಗಾದರೆ, ಮಾನವ ಜೀವಗಳನ್ನು ಉಳಿಸಲು ತಂತ್ರಜ್ಞಾನವು ಸಹಾಯ ಮಾಡದಿದ್ದರೆ ತಂತ್ರಜ್ಞಾನದ ಪ್ರಯೋಜನವೇನು?


ನಾಲ್ಕು ಯುವ ಎಂಜಿನಿಯರಿಂಗ್ ಪದವೀಧರರು ಈ ಸಮಸ್ಯೆಯನ್ನು ಬಗೆಹರಿಸಲು ನಿರ್ಧರಿಸಿ, ತಿರುವನಂತಪುರಂ ಮೂಲದ ಸ್ಟಾರ್ಟಪ್ ಜೆನ್ರೋಬೊಟಿಕ್ಸ್ ಅನ್ನು ಪ್ರಾರಂಭಿಸಿದರು, ಇದೊಂದು ಮ್ಯಾನ್ಹೋಲ್ಗಳನ್ನು ಸ್ವಚ್ಛಗೊಳಿಸುವ ಬ್ಯಾಂಡಿಕೂಟ್-ಜೇಡರ ಆಕಾರದ ರೋಬೋಟ್.


50-ಕೆಜಿ, ನ್ಯೂಮ್ಯಾಟಿಕ್-ಚಾಲಿತ, ರಿಮೋಟ್-ಕಂಟ್ರೋಲ್ ಹೊಂದಿರುವ ರೋಬೋಟ್ ಅನ್ನು ಮ್ಯಾನ್ಹೋಲ್ ಕೆಳಗೆ ಕಳುಹಿಸಬಹುದು, ಅಲ್ಲಿ ಅದು ತನ್ನ ಕಾಲುಗಳನ್ನು ಹರಡಿ, ಒಳಚರಂಡಿಯಲ್ಲಿನ ತ್ಯಾಜ್ಯವನ್ನು ತೆಗೆದುಹಾಕುತ್ತದೆ. ಮ್ಯಾನ್‌ಹೋಲ್ ಗುಂಡಿಯನ್ನು ಗುಡಿಸಲು ಮತ್ತು ಹೊಲಸು ಸಂಗ್ರಹಿಸಲು 360 ಡಿಗ್ರಿ ಚಲನೆಯನ್ನು ಬಳಸುವ ಈ ರೋಬೋಟ್ ಭಾರತದಲ್ಲಿ ಬರಿಗೈಯಿಂದ ಮಲಹೋರುವ ಪದ್ದತಿಯನ್ನು ಕೊನೆಗೊಳಿಸಬಹುದು.


ಬ್ಯಾಂಡಿಕೂಟ್ ನೊಂದಿಗೆ ಕೆಲಸ ನಿರ್ವಹಿಸುತ್ತಿರುವ ತಂಡ


ರೋಬೋಟ್ ನಿರ್ಮಿಸುವುದು

ವಿಮಲ್ ಗೋವಿಂದ್ ಎಂ.ಕೆ, ಅರುಣ್ ಜಾರ್ಜ್, ನಿಖಿಲ್ ಎನ್.ಪಿ, ಮತ್ತು ರಶೀದ್ ಬಿನ್ ಅಬ್ದುಲ್ಲಾ ಖಾನ್ ಅವರು ವಿಜ್ಞಾನ ಮತ್ತು ಐರನ್ ಮ್ಯಾನ್ ಮೇಲಿನ ಪ್ರೀತಿಯನ್ನು ಜೆನ್‌ರೋಬೊಟಿಕ್ಸ್‌ನೊಂದಿಗೆ ಹೊಸ ಮಟ್ಟಕ್ಕೆ ಕೊಂಡೊಯ್ದು ಇದನ್ನು 2015 ರಲ್ಲಿ ಪ್ರಾರಂಭಿಸಿದರು.


ಇದು ಈ ಎಮ್ ಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್, ಕ್ಯಾಲಿಕಟ್‌ನ ಒಂದು ಯೋಜನೆಯಾಗಿ ಮೊದಲು ಪ್ರಾರಂಭಗೊಂಡಿತು.


“ಕಾಲೇಜಿನಲ್ಲಿ, ನಾವು ವಿಭಿನ್ನ ಸಾಮಾಜಿಕ ಘಟನೆಗಳು ಮತ್ತು ಚಟುವಟಿಕೆಗಳ ಭಾಗವಾಗಿದ್ದರಿಂದ ವಿಜ್ಞಾನ ಮತ್ತು ಎಂಜಿನಿಯರಿಂಗ್‌ನ ಕಲ್ಪನೆಯು ಮಾನವಕುಲಕ್ಕೆ ಸಹಾಯ ಮಾಡುವ ಬಗೆ ಹೇಗೆ ಎಂದು ಯೋಚಿಸಲು ಪ್ರಾರಂಭಿಸಿದೆವು. ವಿಭಿನ್ನ ಸಾಮಾಜಿಕ ಸಮಸ್ಯೆಗಳಿಗೆ ತಾಂತ್ರಿಕ ಅಂಶವನ್ನು ತರುವ ಅಗತ್ಯವಿದೆ ಎಂದು ನಾವು ಭಾವಿಸಿದ್ದೇವೆ,” ಎಂದು ವಿಮಲ್ ಹೇಳುತ್ತಾರೆ.


ಸಾಮಾಜಿಕ ವಲಯಕ್ಕೆ ವಿಭಿನ್ನ ಉತ್ಪನ್ನಗಳನ್ನು ನಿರ್ಮಿಸುವ ಎಂಜಿನಿಯರ್‌ಗಳ ಗುಂಪಾದ ಜೆನ್‌ರೋಬೊಟಿಕ್ಸ್ ಅನ್ನು ರಚಿಸಲು ತಂಡವು ನಿರ್ಧರಿಸಿತು. ಅವರು "ಐರನ್ ಮ್ಯಾನ್ ಸೂಟ್" ಅನ್ನು ಸ್ವಲ್ಪ ವ್ಯತ್ಯಾಸದೊಂದಿಗೆ ನಿರ್ಮಿಸುವ ಮೂಲಕ ಪ್ರಾರಂಭಿಸಿದರು.


“ರಕ್ಷಣಾ ಮತ್ತು ನಿರ್ಮಾಣ ಕ್ಷೇತ್ರಗಳಲ್ಲಿ ಅನೇಕ ಜನರು ಭಾರವನ್ನು ಹೊತ್ತುಕೊಳ್ಳಬೇಕಾಗುತ್ತದೆ. ಸೈನಿಕರು 70 ರಿಂದ 80 ಕೆಜಿ ತೂಕವನ್ನು ಹೊತ್ತುಕೊಂಡು ಹೆಚ್ಚು ದೂರ ಸಾಗಬೇಕು. ನಾವು ರೋಬೋಟಿಕ್ ಐರನ್ ಮ್ಯಾನ್ ಸೂಟ್‌ನ ಮೂಲಮಾದರಿಯನ್ನು ವಿನ್ಯಾಸಗೊಳಿಸಿದ್ದೇವೆ ಮತ್ತು ನಿರ್ಮಿಸಿದ್ದೇವೆ. ಇದನ್ನು ತೊಟ್ಟರೆ, ಹೆಚ್ಚಿನ ತೂಕವನ್ನು ಕಡಿಮೆಗೊಳಿಸುತ್ತದೆ ಮತ್ತು ಸಾಗಿಸಲು ಸುಲಭವಾಗಿಸುತ್ತದೆ," ಎಂದು ವಿಮಲ್ ಹೇಳುತ್ತಾರೆ,


ಜೆನ್‌ರೋಬೋಟಿಕ್ಸ್‌ನ ‘ಐರನ್ ಮ್ಯಾನ್' ಸೂಟ್


ಮೂಲಮಾದರಿಯನ್ನು ವಿವಿಧ ಉತ್ಸವಗಳಲ್ಲಿ ಪ್ರದರ್ಶಿಸಲಾಯಿತು ಮತ್ತು ಸಿಂಗಾಪುರದ ಅಮೇರಿಕನ್ ಸೊಸೈಟಿ ಆಫ್ ರಿಸರ್ಚ್‌ನಲ್ಲಿ ಹಲವಾರು ದೇಶಗಳಿಗೆ ಪ್ರಸ್ತುತಪಡಿಸಲಾಯಿತು.


ಸ್ವಲ್ಪ ಸಮಯದ ನಂತರ, ಕೇರಳ ಸ್ಟಾರ್ಟ್ಅಪ್ ಮಿಷನ್ ಜೆನ್ರೋಬೊಟಿಕ್ಸ್ ಅನ್ನು ತಮ್ಮ ಇಂಕ್ಯುಬೇಷನ್ ಕಾರ್ಯಕ್ರಮದ ಭಾಗವಾಗಿರಲು ಆಹ್ವಾನಿಸಿತು ಮತ್ತು ಸ್ಟಾರ್ಟಪ್‌ ತಿರುವನಂತಪುರಂನಲ್ಲಿ ಪ್ರಾಯೋಗಿಕವಾಗಿ ರೂಪುಗೊಂಡಿತು.


ತಂಡವು ಸೂಟ್‌ನ ಹೊಸ ಮಾದರಿಯನ್ನು ತಯಾರಿಸಲು ಮುಂದಾಯಿತು. ಆದರೆ ಎಲ್ಲಾ ಸ್ಟಾರ್ಟಪ್‌ಗಳು ಎದುರಿಸುವಂತಹ ಬಂಡವಾಳದ ಸಮಸ್ಯೆಯನ್ನು ಇದ ಎದುರಿಸಿತು. "ಉತ್ಪಾದನೆ, ಮೂಲಮಾದರಿ ಮತ್ತು ಪರೀಕ್ಷೆಗೆ ಬಂದಾಗ ಹಣದ ಅವಶ್ಯಕತೆಯಿದೆ. ಕಚ್ಚಾ ವಸ್ತುಗಳನ್ನು ಪಡೆಯಲು ಅಥವಾ ಉತ್ಪನ್ನವನ್ನು ರಚಿಸಲು ಮತ್ತು ಪರೀಕ್ಷಿಸಲು ನಮಗೆ ಬೇಕಾದ ಹಣ ನಮಗೆ ಸಿಗಲಿಲ್ಲ,” ಎಂದು ವಿಮಲ್ ಹೇಳುತ್ತಾರೆ.


ಅವರು ತಮ್ಮ ಕೆಲಸವನ್ನು ಕೈಬಿಟ್ಟು ಮತ್ತೆ ತಮ್ಮ ಈ ಪ್ರಾಜೆಕ್ಟ್ ಅಭಿವೃದ್ಧಿ ಪಡಿಸಲು ನಿರ್ಧರಿಸಿದರು. ಕೆಲವು ತಿಂಗಳುಗಳ ನಂತರ, 2015 ರಲ್ಲಿ, ಕೊಜಿಕೋಡ್‌ನಲ್ಲಿ ನಡೆದ ಒಂದು ಘಟನೆಯು ಅವರಿಗೆ ಮತ್ತೊಂದು ತಿರುವು ನೀಡಿತ್ತು. 32 ವರ್ಷದ ಆಟೋರಿಕ್ಷಾ ಚಾಲಕನು ಮಲ ಹೋರುವವರನ್ನು ಗುಂಡಿಯಿಂದ ರಕ್ಷಿಸಲು ಪ್ರಯತ್ನಿಸುತ್ತಾ ಪ್ರಾಣ ಕಳೆದುಕೊಂಡನು; ಮೂವರು ಮ್ಯಾನ್‌ಹೋಲ್‌ನಲ್ಲಿ 30 ನಿಮಿಷಗಳ ಕಾಲ ಸಿಲುಕಿಕೊಂಡರು ಮತ್ತು ಯಾರಿಗೂ ಸಹಾಯ ಮಾಡಲಾಗಲಿಲ್ಲ.


ಆಗ ಕೇರಳ ಸರ್ಕಾರ ಈ ನಾಲ್ಕು ಎಂಜಿನಿಯರ್‌ಗಳನ್ನು ಸಂಪರ್ಕಿಸಿ ಮಲ ಹೋರುವುದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಉತ್ಪನ್ನವನ್ನು ನಿರ್ಮಿಸಬಹುದೇ ಎಂದು ಕೇಳಿದರು.


"ನಾವು ಸಂಶೋಧನೆ ಪ್ರಾರಂಭಿಸಿ, ಸಮಸ್ಯೆ ಎಷ್ಟು ಆಳವಾಗಿದೆ ಎಂದು ಅರ್ಥಮಾಡಿಕೊಂಡೇವು. ಇದು ಕೇವಲ ನೈರ್ಮಲ್ಯ ಅಥವಾ ಸಾಮಾಜಿಕ ಸಮಸ್ಯೆ ಅಲ್ಲ; ಇದು ಅನೇಕ ಜೀವಗಳನ್ನು ತೆಗೆದುಕೊಳ್ಳುತ್ತಿದೆ. ಅದಕ್ಕೆ ನಾವು ಬ್ಯಾಂಡಿಕೂಟ್ ಕಲ್ಪನೆಯ ಪರಿಹಾರದೊಂದಿಗೆ ಬಂದೆವು,” ಎನ್ನುತ್ತಾರೆ ವಿಮಲ್.


ತಂತ್ರಜ್ಞಾನದಿಂದ ಸಮಸ್ಯೆಯನ್ನು ಪರಿಹರಿಸಬಹುದೆಂದು ನಾಲ್ಕು ಎಂಜಿನಿಯರ್‌ಗಳು ಅರಿತುಕೊಂಡರು. ಐಟಿ ಕಂಪನಿಗಳಲ್ಲಿ, ಕೆಲಸಮಾಡುತ್ತಿದ್ದ ಎಲ್ಲರೂ ಆಯಾ ಉದ್ಯೋಗಗಳನ್ನು ತ್ಯಜಿಸಿ, ಕೇರಳ ಸ್ಟಾರ್ಟ್ಅಪ್ ಮಿಷನ್‌ಗೆ ಮರಳಿದರು ಮತ್ತು ಜೆನ್ರೋಬೊಟಿಕ್ಸ್ ಅನ್ನು ಪುನರಾರಂಭಿಸಿದರು.


ಆದರೆ ಈ ಕಾರ್ಯ ಸುಲಭವಾಗಿರಲಿಲ್ಲ. ಇಂತಹದನ್ನು ನಿರ್ಮಿಸಬಹುದೇ ಎಂದು ನೋಡಲು ತಂಡವು ವಿವಿಧ ರೀತಿಯ ಪರೀಕ್ಷೆಗಳನ್ನು ಮಾಡಬೇಕಾಗಿತ್ತು. ಜೊತೆಗೆ, ಅವರು ಕಚೇರಿಯನ್ನು ಸ್ಥಾಪಿಸಿ ನೊಂದಾಯಿಸಬೇಕಿತ್ತು ಮತ್ತು ತಂಡವನ್ನು ನಿರ್ಮಿಸಬೇಕಿತ್ತು.


ಆರಂಭದಲ್ಲಿ ಸ್ನೇಹಿತರು ಮತ್ತು ಕಾಲೇಜು ಇಂಟರ್ನ್ಸ್‌ಗಳೊಂದಿಗೆ ಕೆಲಸ ಮಾಡಿದರು. ಶೀಘ್ರದಲ್ಲೇ, ಅವರು ಒಂದು ಮೂಲಮಾದರಿಯನ್ನು ನಿರ್ಮಿಸಿ, ಅದನ್ನು ಪರೀಕ್ಷಿಸಿದರು ಮತ್ತು ನಂತರ ಬೀಟಾ ಉತ್ಪನ್ನವನ್ನು ತಯಾರಿಸಿ, ಅದನ್ನು ಕೆಲವು ಪ್ರದೇಶಗಳಲ್ಲಿ ನಿಯೋಜಿಸಿದರು.


ಬ್ಯಾಂಡಿಕೂಟ್ ಅನ್ನು ಮ್ಯಾನ್‌ಹೋಲ್‌ಗಳಲ್ಲಿ ಇಳಿಸಬಹುದು ಮತ್ತು ಕಸವನ್ನು ತೆಗೆಯಬಹುದು, ನಂತರ ಅದನ್ನು ತ್ಯಾಜ್ಯದ ಡಂಪ್‌ಗಳಿಗೆ ಸಾಗಿಸಲಾಗುತ್ತದೆ. ಬೋಟ್‌ನಂತೆ ಕೆಲಸ ಮಾಡುವ ಇದು, ಮಷಿನ್‌ ಲರ್ನಿಂಗ್ ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿ ಎಷ್ಟು ಕಸವನ್ನು ಹೊರತೆಗೆಯಬೇಕೆಂದು ನಿರ್ಧರಿಸುತ್ತದೆ.


ಮೂರು ನಾಲ್ಕು ಗಂಟೆಗಳ ಕಾಲ ಕೈಯಾರೆ ಮಾಡಿದಾಗ ತೆಗೆದುಕೊಳ್ಳುವ ಕೆಲಸವನ್ನು ಬ್ಯಾಂಡಿಕೂಟ್ 45 ನಿಮಿಷಗಳಲ್ಲೆ ಪೂರ್ಣಗೊಳಿಸುತ್ತದೆ.


ಉದ್ಯೋಗಗಳನ್ನು ಕಳೆದುಕೊಂಡವರ ಬಗ್ಗೆ ಏನು?

ಜೆನ್‌ರೋಬೊಟಿಕ್ಸ್‌ನ ಮೊದಲ ಸವಾಲು ಉದ್ಯೋಗವಾಗಿತ್ತು. "ಬರಿಗೈಯಿಂದ ಮ್ಯಾನ್‌ಹೋಲ್ ಸ್ವಚ್ಛ ಪಡಿಸುವ ಪದ್ಧತಿ ಸಾಮಾಜಿಕ ರಚನೆಯ ಭಾಗವಾಗಿರಬೇಕಾದ ವಿಷಯವಲ್ಲವಾದರೂ, ಇದು ಅನೇಕ ಮನೆಗಳಿಗೆ ಆದಾಯದ ಮೂಲವಾಗಿದೆ. ಆದ್ದರಿಂದ ನಾವು ಈ ಜನರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಯೋಚಿಸಿದ್ದೇವೆ,” ಎಂದು ವಿಮಲ್ ಹೇಳುತ್ತಾರೆ.


ಬ್ಯಾಂಡಿಕೂಟ್‌ಗಳನ್ನು ನಿರ್ವಹಿಸುವಲ್ಲಿ ಮನುಷ್ಯರನ್ನು ಬಳಸಿಕೊಳ್ಳಬೇಕೆಂದು ನಿರ್ಧರಿಸಿದೇವು ಎಂದು ಅವರು ಹೇಳುತ್ತಾರೆ.


“ನಾವು ನಿರ್ಮಿಸಿದ ಮುಂದಿನ ಆವೃತ್ತಿ ಅರ್ಥಮಾಡಿಕೊಳ್ಳಲು ಮತ್ತು ನಿರ್ವಹಿಸಲು ಸುಲಭವಾಗಿತ್ತು. ಶೂನ್ಯ ತಾಂತ್ರಿಕ ಜ್ಞಾನವಿರುವವರು ಬ್ಯಾಂಡಿಕೂಟ್ ಅನ್ನು ನಿರ್ವಹಿಸಬಹುದು. ರೋಬೋಟ್ ಬಳಸುವ ಬಗ್ಗೆ ನಾವು ಈ ಪುರುಷರಿಗೆ ತರಬೇತಿ ನೀಡುತ್ತೇವೆ,” ಎಂದು ವಿಮಲ್ ಹೇಳುತ್ತಾರೆ.


ಈವರೆಗೆ 100 ಕ್ಕೂ ಹೆಚ್ಚು ಮಲ ಹೋರುವವರಿಗೆ ಪುನರ್ವಸತಿ ಕಲ್ಪಿಸಲಾಗಿದೆ ಎಂದು ತಂಡ ಹೇಳಿಕೊಂಡಿದೆ.


ಮುಂದಿನ ಭವಿಷ್ಯ

ಜೆನ್ರೋಬೋಟಿಕ್ಸ್‌ ತಿರುವನಂತಪುರಂನಲ್ಲಿ ಉತ್ಪಾದನಾ ಘಟಕ ಹೊಂದಿದ್ದು, ಶೀಘ್ರದಲ್ಲೇ ಪುಣೆಯಲ್ಲಿ ಇನ್ನೊಂದನ್ನು ಸ್ಥಾಪಿಸಲಿದೆ. ಕಚ್ಚಾ ವಸ್ತುಗಳನ್ನು ಪ್ರಸ್ತುತ ಚೀನಾ ಮತ್ತು ಭಾರತದ ಮೂಲ ಉಪಕರಣ ತಯಾರಕರಿಂದ ಪಡೆಯಲಾಗುತ್ತದೆ.


ಈ ತಂಡವು ಯುಎಸ್, ಯುಕೆ ಮತ್ತು ಜರ್ಮನಿಯಿಂದ ತಂತ್ರಜ್ಞಾನಕ್ಕಾಗಿ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ ಮತ್ತು ಚೀನಾದಲ್ಲಿನ ಇತರ ಉತ್ಪಾದಕರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಹ ನೋಡುತ್ತಿದೆ.


ಬ್ಯಾಂಡಿಕೂಟ್‌ನ ಬೆಲೆ 15 ಲಕ್ಷದಿಂದ 35 ಲಕ್ಷ ರೂ ವರೆಗಿದೆ. ತಂಡವು ಪುರಸಭೆಯ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತದೆ ಮತ್ತು ಸದ್ಯಕ್ಕೆ ಮಾರಾಟ ಮಾಡುವುದು ಮತ್ತು ಬಾಡಿಗೆ ನೀಡುವುದು - ಎರಡು ಮಾದರಿಗಳನ್ನು ಹೊಂದಿದೆ. ಮಾರಾಟದ ಮಾದರಿಗಾಗಿ, ತಂಡವು ರೋಬೋಟ್ ಅನ್ನು ಮಾರಾಟ ಮಾಡುತ್ತದೆ ಮತ್ತು ನಿಗಮಕ್ಕೆ ತರಬೇತಿ ಶಿಬಿರವನ್ನು ಆಯೋಜಿಸುತ್ತದೆ. ಇದು ರೋಬೋಟ್ ಅನ್ನು ಬಾಡಿಗೆಗೆ ಪಡೆಯುವ ಮತ್ತು ತರಬೇತಿಯನ್ನು ಪಡೆಯುವ ಆಯ್ಕೆಯು ಇದೆ.


ಪ್ರಸ್ತುತ, ಗುಜರಾತ್‌ನಲ್ಲಿ ಬ್ಯಾಂಡಿಕೂಟ್‌ಗಳನ್ನು ನಿಯೋಜಿಸಲು ವಿಮಲ್ ಮತ್ತು ಜೆನ್‌ರೋಬೋಟಿಕ್ಸ್‌ನ ಪ್ರಮುಖ ತಂಡ ವಡೋದರಾದಲ್ಲಿ ಕಾರ್ಯಪ್ರವೃತ್ತರಾಗಿದೆ. ರೋಬೋಟ್‌ಗಳನ್ನು - ಅವುಗಳಲ್ಲಿ 15 - ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಹರಿಯಾಣ ಮತ್ತು ಈಗ ಗುಜರಾತ್ ಎಂಬ ಐದು ರಾಜ್ಯಗಳಲ್ಲಿ ನಿಯೋಜಿಸಲಾಗಿದೆ. ಜೆನ್‌ರೋಬೋಟಿಕ್ಸ್ ದುಬೈ ಪುರಸಭೆ, ಶಾರ್ಜಾ ಮತ್ತು ಕತಾರ್‌ನೊಂದಿಗೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದೆ. “ನಾವು ಉತ್ಪನ್ನದ ಮುಂದಿನ ಆವೃತ್ತಿಯ ಮೇಲೆ ಕೆಲಸ ಮಾಡುತ್ತಿದ್ದೇವೆ. ಮತ್ತು ಹೆಚ್ಚಿನ ರಾಜ್ಯಗಳು ಮತ್ತು ಪುರಸಭೆಯ ಸಂಸ್ಥೆಗಳಿಗೆ ಸಹಿ ಹಾಕುತ್ತಿದ್ದಾರೆ,” ಎಂದು ವಿಮಲ್ ಹೇಳುತ್ತಾರೆ.