ಭಾರತೀಯ ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ನೀಡುತ್ತಿರುವ ನವೋದ್ಯಮಗಳು

ʻಆನ್‌ಲೈನ್ ಕಲಿಕೆಯುʼ ಶಿಕ್ಷಣದ ವ್ಯಾಪ್ತಿಯನ್ನು ವಿಸ್ತರಿಸಿದೆ ಮತ್ತು ಆಫ್‌ಲೈನ್ ತರಗತಿಯ ಗಡಿಯನ್ನು ಮೀರಿ ಶಿಕ್ಷಾರ್ಥಿಗಳನ್ನು ತಲುಪಿದೆ. ಸ್ಥಳೀಯ ಭಾರತೀಯ ಭಾಷೆಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಮೆಟ್ರೋ ನಗರಗಳನ್ನಷ್ಟೇ ಅಲ್ಲದೆ, ಕಿರು ನಗರಗಳನ್ನೂ ಹಲವಾರು ಶಿಕ್ಷಣ ನವೋದ್ಯಮಗಳು ತಲುಪಿದೆ.

ಭಾರತೀಯ ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ನೀಡುತ್ತಿರುವ ನವೋದ್ಯಮಗಳು

Tuesday March 31, 2020,

3 min Read

ಈ ಎಡ್-ಟೆಕ್‌ ಕಂಪನಿಗಳು ಪ್ರಾರಂಭದಲ್ಲಿ ಉತ್ತಮ ಗುಣಮಟ್ಟದ ಕಂಟೆಂಟ್‌ ಹಾಗೂ ನೇರಪ್ರಸಾರಕ್ಕೆ ಹೆಚ್ಚು ಒತ್ತು ನೀಡಿದ್ದವು. ಹಾಗೂ ಮೊದಲನೇ ಶ್ರೇಣಿಯ ನಗರಗಳನ್ನು ಗುರಿಯಾಗಿಟ್ಟುಕೊಂಡು, ಕೇವಲ ಇಂಗ್ಲೀಷ್‌ನಲ್ಲಿ ಬೋಧಿಸುತ್ತಿದ್ದವು.


ಹಾಗಾಗಿ, ಇಂಗ್ಲೀಷ್‌ ಬಾರದ ವಿದ್ಯಾರ್ಥಿಗಳ ಒಂದು ಬೃಹತ್‌ ವರ್ಗವೇ ಡಿಜಿಟಲ್‌ ಶಿಕ್ಷಣದಿಂದ ಹೊರಗುಳಿಯಿತು. ಇಂದು, ಸ್ಮಾರ್ಟ್‌ಫೋನ್‌ಗಳು ಎಲ್ಲರ ಬಳಕೆಗೂ ಸುಲಭವಾಗಿರುವುದರಿಂದ, ಪ್ರತಿಯೊಂದು ಸ್ಥಳೀಯ ಭಾಷೆಯೂ ಎಲ್ಲ ಸಾಮಾಜಿಕ ಮಾಧ್ಯಮ ಹಾಗೂ ನೆಟ್ವರ್ಕಿಂಗ್‌ ತಾಣಗಳಲ್ಲಿ ಲಭ್ಯವಿವೆ,


ವರದಿಯೊಂದರ ಪ್ರಕಾರ, 2017ರಲ್ಲಿ ಭಾರತದಲ್ಲಿ, 175 ದಶಲಕ್ಷ ಇಂಗ್ಲೀಷ್‌ ಬಳಕೆದಾರರು ಹಾಗೂ 234 ದಶಲಕ್ಷ ಭಾರತೀಯ ಭಾಷೆಯ ಬಳಕೆದಾರರು ಜಾಲತಾಣಗಳನ್ನು ಬಳಸಿದ್ದರು. 2021ರ ಹೊತ್ತಿಗೆ, ಈ ಅಂತರ ಮತ್ತಷ್ಟು ಹೆಚ್ಚಾಗುವ ಸಂಭವವಿದೆ.


ಭಾರತೀಯ ಭಾಷೆಗಳ ಬಳಕೆದಾರರು 534 ದಶಲಕ್ಷಕ್ಕೆ ದ್ವಿಗುಣಗೊಳ್ಳುವ ನಿರೀಕ್ಷೆಯಿದ್ದರೆ, ಇಂಗ್ಲೀಷ್ ಮಾತನಾಡುವ ಬಳಕೆದಾರರು ಕೇವಲ 10 ಪ್ರತಿಶತದಷ್ಟು ಹೆಚ್ಚಾಗಿ 199 ದಶಲಕ್ಷಕ್ಕೆ ಏರಿಕೆಯಾಗಬಹುದು.


ತಂತ್ರಜ್ಞಾನದ ಪ್ರಗತಿಯೊಂದಿಗೆ, ಎರಡು ಮತ್ತು ಮೂರನೇ ಶ್ರೇಣಿಯ ನಗರಗಳ ವಿದ್ಯಾರ್ಥಿಗಳು ಆನ್‌ಲೈನ್ ಎಜುಟೆಕ್ ಪ್ಲಾಟ್‌ಫಾರ್ಮ್‌ಗಳನ್ನು ಅಧ್ಯಯನಕ್ಕಾಗಿ ಹುಡುಕುತ್ತಿದ್ದಾರೆ. ಸ್ಟಾರ್ಟ್ಅಪ್ಗಳ ಒಂದು ಗುಂಪು ಈ ಅವಕಾಶವನ್ನು ಪಡೆದುಕೊಂಡು ಸ್ಥಳೀಯ ಭಾಷೆಗಳಲ್ಲಿ ವಿಷಯವನ್ನು ಬೋಧಿಸಲು ಪ್ರಾರಂಭಿಸಿದೆ.


ಅಂತಹ ಎಜುಟೆಕ್‌ ಪ್ಲಾಟ್‌ಫಾರ್ಮ್‌ಗಳ ಪಟ್ಟಿ ಇಲ್ಲಿದೆ:


ಬ್ರೇನ್ಲಿ

ಮಿಚಲ್ ಬೊರ್ಕೊವ್ಸ್ಕಿ, ಲುಕಾಸ್ ಹಲುಚ್, ಮತ್ತು ತೋಮಾಸ್ ಕ್ರಾಸ್ 2009ರಲ್ಲಿ ಬ್ರೇನ್ಲಿಯನ್ನು ಪ್ರಾರಂಭಿಸಿದರು. ಭಾರತ ಸೇರಿದಂತೆ 35 ದೇಶಗಳಲ್ಲಿನ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ತಮ್ಮ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಜ್ಞಾನ ವಿನಿಮಯಕ್ಕೆ ಅನುಕೂಲವಾಗುವಂತೆ ಬ್ರೇನ್ಲಿಯನ್ನು ಅಭಿವೃದ್ಧಿಪಡಿಸಲಾಗಿದೆ.


ವಿದ್ಯಾರ್ಥಿಗಳೊಂದಿಗೆ ಬ್ರೇನ್ಲಿ ಸಿಇಒ ಹಾಗೂ ಸಹಸ್ಥಾಪಕ ಮಿಚಲ್ ಬೊರ್ಕೊವ್ಸ್ಕಿ.


150 ದಶಲಕ್ಷಕ್ಕೂ ಹೆಚ್ಚಿನ ಮಾಸಿಕ ಅನನ್ಯ ಬಳಕೆದಾರರನ್ನು ಹೊಂದಿರುವ ಬ್ರೇನ್ಲಿ, ಈ ವರ್ಷ ಹಿಂದಿ, ಸಂಸ್ಕೃತ, ಮರಾಠಿ, ತೆಲುಗು, ತಮಿಳು, ಗುಜರಾತಿ, ಕನ್ನಡ, ಮತ್ತು ಬಂಗಾಳಿ ಮುಂತಾದ ಪ್ರಾದೇಶಿಕ ಭಾಷೆಗಳಲ್ಲಿ ಆರಂಭಗೊಂಡು ಎಲ್ಲ ಭಾಷೆಯ ವಿದ್ಯಾರ್ಥಿಗಳನ್ನ್ನೂ ತಲುಪಿ ವೈವಿಧ್ಯಮಯವಾಗಿದೆ.


ಕ್ಲಾಸ್‌ಪ್ಲಸ್‌

ನೋಯ್ಡಾ ಮೂಲದ ಕ್ಲಾಸ್‌ಪ್ಲಸ್ ಆರಂಭವಾದದ್ದು, ಶಿಕ್ಷಕರು ದೇಶದಲ್ಲಿ ಕೋಚಿಂಗ್ ಸಂಸ್ಥೆಗಳನ್ನು ಹೇಗೆ ನಡೆಸುತ್ತಾರೆ ಎಂಬುದನ್ನು ಮರು ವ್ಯಾಖ್ಯಾನಿಸಲು ಸ್ಥಾಪಕರು ತೋರಿದ ಹಂಬಲದಿಂದ. ಮುಕುಲ್ ರುಸ್ತಗಿ ಮತ್ತು ಭಸ್ವತ್ ಅಗರ್ವಾಲ್ ಅವರು 2018 ರಲ್ಲಿ ಪ್ರಾರಂಭಿಸಿದ ಕ್ಲಾಸ್‌ಪ್ಲಸ್ ಮೊಬೈಲ್ ಪ್ಲಾಟ್‌ಫಾರ್ಮ್ ಆಗಿದ್ದು, ಖಾಸಗಿ ಕೋಚಿಂಗ್ ಸಂಸ್ಥೆಗಳು ಮತ್ತು ಅವರ ಬೋಧಕರಿಗೆ ತಮ್ಮ ವಿಷಯಯ ವಿತರಣೆ, ಪಾವತಿ, ಸಂವಹನ ಮತ್ತು ಆನ್‌ಲೈನ್ ಮೌಲ್ಯಮಾಪನಗಳನ್ನು ಅಪ್ಲಿಕೇಶನ್ ಮೂಲಕ ಸುವ್ಯವಸ್ಥಿತಗೊಳಿಸಲು ಅನುವು ಮಾಡಿಕೊಡುತ್ತದೆ.


(ಎಡದಿಂದ ಬಲಕ್ಕೆ) ಭಾಸ್ವತ್ ಅಗರ್ವಾಲ್ ಮತ್ತು ಮುಕುಲ್ ರುಸ್ತಗಿ, ಸಿಇಒ- ಸಂಸ್ಥಾಪಕರು, ಕ್ಲಾಸ್‌ಪ್ಲಸ್


ಪ್ರಾರಂಭವಾದ 15 ತಿಂಗಳಲ್ಲಿ, ಕಂಪನಿಯು 50+ ಭಾರತೀಯ ನಗರಗಳಲ್ಲಿ 1,200 ಕ್ಕೂ ಹೆಚ್ಚು ಕೋಚಿಂಗ್ ಕೇಂದ್ರಗಳನ್ನು ತನ್ನ ಗ್ರಾಹಕರಾಗಿ ನಿರ್ಮಿಸಿದೆ. ಇದು ಕಾನ್ಪುರ್, ಭೋಪಾಲ್, ಗ್ವಾಲಿಯರ್, ಮತ್ತು ಶ್ರೀನಗರದಂತಹ ನಗರಗಳಲ್ಲಿ ಶಾಖೆಗಳನ್ನು ಹೊಂದಿದೆ ಹಾಗೂ ವಿದ್ಯಾರ್ಥಿ ಮತ್ತು ಪೋಷಕರ ಸಂವಹನ, ಮಲ್ಟಿಮೀಡಿಯಾ ವಿಷಯ ವಿತರಣೆ, ಪಾವತಿಗಳು ಮತ್ತು ಆನ್‌ಲೈನ್ ಪರೀಕ್ಷೆಗಳನ್ನು ಒಂದೇ ವೇದಿಕೆಯಲ್ಲಿ ಸುಗಮಗೊಳಿಸುತ್ತದೆ.

ಪರೀಕ್ಷಾ

ʻಪರೀಕ್ಷಾʼ ಆನ್‌ಲೈನ್ ಸ್ಥಳೀಯ ಪರೀಕ್ಷಾ ತಯಾರಿಗೆ ವೇದಿಕೆಯಾಗಿದ್ದು, ಇದು ಅಭ್ಯರ್ಥಿಗಳಿಗೆ ಸರ್ಕಾರದ ವಿವಿಧ ಪರೀಕ್ಷೆಗಳಿಗೆ ತಯಾರಾಗಲು ಸಹಾಯ ಮಾಡುತ್ತದೆ. ವೇದಿಕೆಯಲ್ಲಿ ಲಭ್ಯವಿರುವ ಭಾಷೆಗಳಲ್ಲಿ ಹಿಂದಿ, ಮರಾಠಿ, ತಮಿಳು, ಬಂಗಾಳಿ, ಕನ್ನಡ ಮತ್ತು ಇಂಗ್ಲೀಷ್ ಸೇರಿವೆ.


ʻಪರೀಕ್ಷಾʼ ಸಂಸ್ಥಾಪಕರು



2015 ರಲ್ಲಿ ದೀಪಕ್ ಚೌಧರಿ, ಕರಣ್ವೀರ್ ಸಿಂಗ್ ಶೇಖಾವತ್, ಉತ್ಕರ್ಶ್ ಬಾಗ್ರಿ ಮತ್ತು ವಿಕ್ರಮ್ ಶೇಖಾವತ್ ಸ್ಥಾಪಿಸಿದ ಪುಣೆ ಮೂಲದ ಈ ಸ್ಟಾರ್ಟ್ಅಪ್ 11 ರಾಜ್ಯಗಳಲ್ಲಿ ತನ್ನ ಸೇವೆಗಳನ್ನು ಪ್ರಾರಂಭಿಸಿದೆ. ಇದು ಪ್ರಸ್ತುತ ಸುಮಾರು 2 ಮಿಲಿಯನ್ ಬಳಕೆದಾರರನ್ನು ಹೊಂದಿದೆ ಎಂದು ಹೇಳಿಕೊಂಡಿದೆ, ಅದರ ಪ್ಲಾಟ್‌ಫಾರ್ಮ್‌ನಲ್ಲಿ 60,000 ಪಾವತಿಸಿದ ಚಂದಾದಾರರು ಇದ್ದಾರೆ.


ಎಂಟ್ರಿ

ಕೊಚ್ಚಿ ಮೂಲದ ʻಎಂಟ್ರಿʼ ಸ್ಥಳೀಯ ಭಾಷಾ ಕಲಿಕೆಯ ಅಪ್ಲಿಕೇಶನ್‌ ಆಗಿದ್ದು, ಇದು ಉದ್ಯೋಗ ಆಕಾಂಕ್ಷಿಗಳಿಗಾಗಿ ಸ್ಥಳೀಯ ಭಾಷೆಗಳಲ್ಲಿ ಅಣಕು/ಅಭ್ಯಾಸ ಪರೀಕ್ಷೆಗಳು, ಫ್ಲ್ಯಾಷ್‌ಕಾರ್ಡ್‌ಗಳು ಮತ್ತು ವೀಡಿಯೊ ಪಾಠಗಳಂತಹ ವಿವಿಧ ರೀತಿಯ ಕಲಿಕೆಯ ವಿಷಯವನ್ನು ಒದಗಿಸುತ್ತದೆ.


ಮೊಹಮದ್‌ ಹಿಸಾಮುದ್ದೀನ್‌ ಹಾಗೂ ರಾಹುಲ್‌ ರಮೇಶ್‌. ಸಂಸ್ಥಾಪಕರು, ಎಂಟ್ರಿ.


2017ರಲ್ಲಿ ಮೊಹಮದ್‌ ಹಿಸಾಮುದ್ದೀನ್‌ ಹಾಗೂ ರಾಹುಲ್‌ ರಮೇಶ್‌ ಸ್ಥಾಪಿಸಿದ “ಎಂಟ್ರಿ”, ಬೋಸ್ಟನ್‌ ಮೂಲದ ಲರ್ನ್‌ಲಾಂಚ್‌ ಎಂಬ ಎಡ್‌ಟೆಕ್‌ ಆಕ್ಸೆಲೆರೇಟರ್‌ನ ಭಾಗವಾಗಿದೆ. ಕೇರಳದಲ್ಲಿ ಆರಂಭವಾದ ಇದು, ಮೊದಲು ಕೇವಲ ಮಲಯಾಳಂ ಭಾಷೆಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಈಗ ಕನ್ನಡ, ತಮಿಳು, ಹಿಂದಿ ಹಾಗೂ ತೆಲುಗು ಭಾಷೆಗಳಲ್ಲಿಯೂ ಕಾರ್ಯಾರಂಭ ಮಾಡಿದೆ.


1.6 ದಶಲಕ್ಷ ಬಳಕೆದಾರರನ್ನು ಈಗಾಗಲೇ ಹೊಂದಿದ್ದು, ಪ್ರತಿನಿತ್ಯ 6000 ಬಳಕೆದಾರರು ಹೆಚ್ಚಾಗುತ್ತಿದ್ದಾರೆ ಎಂದು ನವೋದ್ಯಮವು ಹೇಳಿಕೊಂಡಿದೆ


ಡೌಟ್‌ನಟ್‌

ಐಐಟಿ-ದೆಹಲಿ ಹಳೆಯ ವಿದ್ಯಾರ್ಥಿಗಳಾದ, ತನುಶ್ರೀ ನಾಗೋರಿ ಮತ್ತು ಆದಿತ್ಯ ಶಂಕರ್ ಅಕ್ಟೋಬರ್ 2017 ರಲ್ಲಿ ಸ್ಥಾಪಿಸಿದ ಡೌಟ್‌ನಟ್‌ ಸಣ್ಣ ನಗರಗಳಲ್ಲಿನ ವಿದ್ಯಾರ್ಥಿಗಳನ್ನು 12 ಸ್ಥಳೀಯ ಭಾಷೆಗಳಲ್ಲಿ ತಲುಪುತ್ತಿದೆ. ಇದು ಕಡಿಮೆ ಅವಧಿಯಲ್ಲಿ ದೊಡ್ಡ ಬಳಕೆದಾರರ ನೆಲೆಯನ್ನು ನಿರ್ಮಿಸಲು ಅನುವು ಮಾಡಿಕೊಟ್ಟಿದೆ. ಅಪ್ಲಿಕೇಶನ್ 11 ಭಾರತೀಯ ಭಾಷೆಗಳಲ್ಲಿ ಮತ್ತು ಇಂಗ್ಲೀಷ್‌ನಲ್ಲಿ ಪ್ರಶ್ನೆಗಳನ್ನು ಕೇಳಲು ಅನುವು ಮಾಡಿಕೊಟ್ಟಿದೆ.


ಐಐಟಿ ದೆಹಲಿಯ ಹಳೆಯ ವಿದ್ಯಾರ್ಥಿಗಳು ಮತ್ತು ದಂಪತಿಗಳಾಗಿರುವ ಆದಿತ್ಯ ಶಂಕರ್ ಮತ್ತು ತನುಶ್ರೀ ನಾಗೋರಿ ಅವರು 2017 ರಲ್ಲಿ ಡೌಟ್‌ನಟ್‌ಅನ್ನು ಸ್ಥಾಪಿಸಿದರು.

“ಡೌಟ್‌ನಟ್‌” ಸಂವಾದಾತ್ಮಕ ಬಹುಭಾಷಾ ಆನ್‌ಲೈನ್ ಬೋಧನಾ ವೇದಿಕೆಯಾಗಿದ್ದು, ಗಣಿತದ ಪ್ರಶ್ನೆಗಳಿಗೆ ಪರಿಹಾರಗಳನ್ನು ಒದಗಿಸಲು ಕೃತಕ ಬುದ್ಧಿಮತ್ತೆ (ಎಐ)ಯನ್ನು ಚಿತ್ರ ಗುರುತಿಸುವಿಕೆಗಾಗಿ ಬಳಸಲಾಗುತ್ತದೆ. ಗುರುಗ್ರಾಮ್ ಮೂಲದ ಸ್ಟಾರ್ಟ್ಅಪ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಪ್ರತಿದಿನ 1.2 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿದೆ ಎಂದು ಹೇಳಿಕೊಂಡಿದೆ.