ಹಳೆಯ ಸೈನ್ಯದ ಸಮವಸ್ತ್ರವನ್ನು ಟ್ರೆಂಡಿ ಬ್ಯಾಗ್ ಗಳಾಗಿ ಪರಿವರ್ತಿಸುತ್ತಿರುವ ಈ ಜೋಡಿ

ಮುಂಬೈ ಮೂಲದ ಸ್ಟಾರ್ಟ್ಅಪ್ ಸಿಪೊಯಿ, ಬಳಸಿದ ಸೈನ್ಯದ ಸಮವಸ್ತ್ರಗಳನ್ನು ಚೀಲಗಳಾಗಿ ಪರಿವರ್ತಿಸುವ ಮೂಲಕ ಸುಸ್ಥಿರ ಜೀವನವನ್ನು ಉತ್ತೇಜಿಸಲು ಮತ್ತು ಭಾರತೀಯ ಸೇನೆಯ ಹೆಮ್ಮೆಯನ್ನು ಕಾಪಾಡಲು ಪ್ರಯತ್ನಿಸುತ್ತಿದೆ.

ಹಳೆಯ ಸೈನ್ಯದ ಸಮವಸ್ತ್ರವನ್ನು ಟ್ರೆಂಡಿ ಬ್ಯಾಗ್ ಗಳಾಗಿ ಪರಿವರ್ತಿಸುತ್ತಿರುವ ಈ ಜೋಡಿ

Friday November 15, 2019,

4 min Read

ಭಾರತದ ಯಾವುದೇ ನಗರ ಪ್ರದೇಶಗಳಲ್ಲಿ ನೀವು ರಸ್ತೆಯ ಜಂಕ್ಷನ್‌ನಲ್ಲಿ ನಡೆದು ಹೋದರೆ, ನೀವು ಕಸದ ಗುಡ್ಡೆಗಳನ್ನು ಕಾಣುವ ಸಾಧ್ಯತೆಯಿದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಪ್ರಕಾರ, ಭಾರತವು ಪ್ರತಿದಿನ 1.5 ಲಕ್ಷ ಮೆಟ್ರಿಕ್ ಟನ್ (ಎಂಟಿ) ಘನತ್ಯಾಜ್ಯವನ್ನು ಉತ್ಪಾದಿಸುತ್ತದೆ, ಅದರಲ್ಲಿ ಕೇವಲ 54 ಪ್ರತಿಶತವನ್ನು ಮಾತ್ರ ವೈಜ್ಞಾನಿಕವಾಗಿ ಸಂಸ್ಕರಿಸಲಾಗುತ್ತದೆ. ಉಳಿದವು ಸುಟ್ಟುಹೋಗುತ್ತವೆ ಅಥವಾ ಭೂಮಿಯೊಳಗೆ ಸೇರುತ್ತದೆ ಮತ್ತು ಸ್ಕ್ರ್ಯಾಪ್ ಅಂಗಡಿಗಳ ಪಾಲಾಗುತ್ತದೆ.


ಅನೇಕ ಬಾರಿ, ಹೆಚ್ಚಿನ ಮೌಲ್ಯವನ್ನು ಹೊಂದಿರುವ ವಸ್ತುಗಳು ಕಸದ ಗುಂಡಿಯನ್ನು ಸೇರುತ್ತವೆ. ಸೈನ್ಯದ ಸಮವಸ್ತ್ರವನ್ನು ಇತರ ವಿಚಿತ್ರ ಕಸದ ರಾಶಿಯಲ್ಲಿ ಹಾಕುವುದನ್ನು ಕಲ್ಪಿಸಿಕೊಳ್ಳಿ - ಇದು ಸಶಸ್ತ್ರ ಪಡೆಗಳ ಘನತೆಯನ್ನು ಹಾಳುಮಾಡುವುದಲ್ಲದೆ, ಅವರ ಪರಂಪರೆ, ಚೇತನ ಮತ್ತು ಶೌರ್ಯವನ್ನು ದೂರ ಮಾಡುತ್ತದೆ.


ಮುಂಬೈ ಮೂಲದ ಸ್ಟಾರ್ಟ್ಅಪ್ ಸಿಪೊಯಿ ಹಳೆಯ ಮತ್ತು ಅನುಪಯುಕ್ತವಾದ ಸೈನ್ಯದ ಸಮವಸ್ತ್ರವನ್ನು ಚೀಲಗಳಾಗಿ ತಯಾರಿಸುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ. ದಂಪತಿಗಳಾದ ಸಿದ್ಧಾರ್ಥ್ ಜೈಸ್ವಾಲ್ (34) ಮತ್ತು ಸುಚಿ ಜೈಸ್ವಾಲ್ (33) ಅವರು 2018 ರಲ್ಲಿ ಸ್ಥಾಪಿಸಿದ ಈ ಸಂಸ್ಥೆಯು ಬಳಸಿದ ಸೈನ್ಯದ ಸಮವಸ್ತ್ರಗಳನ್ನು ಸಂಗ್ರಹಿಸಿ ಅವುಗಳನ್ನು ಗ್ರಾಮೀಣ ಮಹಿಳೆಯರು ಮತ್ತು ಕುಶಲಕರ್ಮಿಗಳ ಸಹಾಯದಿಂದ ಟ್ರೆಂಡಿ ಡಿಸೈನರ್ ಲ್ಯಾಪ್‌ಟಾಪ್ ಬ್ಯಾಗ್, ಬ್ಯಾಕ್‌ಪ್ಯಾಕ್ ಮತ್ತು ಕೈಚೀಲಗಳಾಗಿ ಪರಿವರ್ತಿಸುತ್ತದೆ.


ಸಿಪೊಯಿ ಸಹ-ಸಂಸ್ಥಾಪಕರಾದ ಸಿದ್ಧಾರ್ಥ್ ಜೈಸ್ವಾಲ್ ಮತ್ತು ಸುಚಿ ಜೈಸ್ವಾಲ್




ಬರೀ, ನಾಲ್ವರ ತಂಡವಿದ್ದರೂ, ಸಿಪೊಯಿ ಕಳೆದ ಒಂದು ವರ್ಷದಲ್ಲಿ 110 ಕ್ಕೂ ಹೆಚ್ಚು ಚೀಲಗಳನ್ನು ಮಾರಾಟ ಮಾಡಿದೆ ಮತ್ತು ಅನೇಕ ಸೇನಾ ಸಮವಸ್ತ್ರಗಳನ್ನು ಕಸದ ರಾಶಿಗೆ ತಲುಪದಂತೆ ಕಾಪಾಡಿದೆ.


ಇಂದಿನ ಜಗತ್ತಿನಲ್ಲಿ ಸಂಪನ್ಮೂಲಗಳು ಬಹಳ ಸೀಮಿತವಾಗಿವೆ. ಆದ್ದರಿಂದ, ಬಳಕೆಯಾಗದ ಅಥವಾ ಕಸಕ್ಕೆ ಹಾಕಿದ ವಸ್ತುಗಳನ್ನು ಮರುಶೋಧಿಸುವ ಮತ್ತು ಅವುಗಳನ್ನು ಹೊಚ್ಚ ಹೊಸ ವಸ್ತುವಾಗಿ ಪರಿವರ್ತಿಸುವ ಅಭ್ಯಾಸವು ಮುಖ್ಯವಾಗಿದೆ. ಇದು ವ್ಯರ್ಥವಾಗುವುದನ್ನು ಕಡಿಮೆ ಮಾಡುತ್ತದೆ ಮತ್ತು ಅಂತಿಮವಾಗಿ ಪರಿಸರವನ್ನು ಸಂರಕ್ಷಿಸುತ್ತದೆ. ಸಿಪೊಯಿಯ ಸೇನಾ ಸಮವಸ್ತ್ರವನ್ನು ಚೀಲಗಳಾಗಿ ಪರಿವರ್ತಿಸುವ ಕಲ್ಪನೆಯು ಇದನ್ನು ಆಧರಿಸಿದೆ” ಎಂದು ಸೋಷಿಯಲ್‌ಸ್ಟೋರಿಯೊಂದಿಗೆ ಮಾತನಾಡಿದ ಸಿಪೊಯಿ ಸಹ ಸಂಸ್ಥಾಪಕ ಸಿದ್ಧಾರ್ಥ್ ಹೇಳುತ್ತಾರೆ.


ಆರಂಭಿಕ ಹಂತ

ಸಿದ್ಧಾರ್ಥ್ ಮತ್ತು ಸುಚಿ ಇಬ್ಬರೂ ತಮ್ಮ ಎಂಬಿಎ ಪೂರ್ಣಗೊಳಿಸಿದರು ಮತ್ತು ತಮ್ಮದೇ ಸ್ವಂತ ಕಂಪನಿಯನ್ನು ತೆರೆಯುವ ಮೊದಲು ಕಾರ್ಪೊರೇಟ್ ಜಗತ್ತಿನಲ್ಲಿ ಸ್ವಲ್ಪ ಅನುಭವವನ್ನು ಪಡೆದರು. ಸಿದ್ಧಾರ್ಥ್ ಹಣಕಾಸು ನಿರ್ವಹಣೆಯಲ್ಲಿ ಪಳಗಿದರೆ, ಸುಚಿ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ನೈಪುನ್ಯತೆಯನ್ನು ಪಡೆದರು.


2016ರಲ್ಲಿ ಪಠಾಣ್‌ಕೋಟ್-ಜಲಂಧರ್ ರಾಷ್ಟ್ರೀಯ ರಸ್ತೆಯಲ್ಲಿ ಸೇನೆಯ ಸಮವಸ್ತ್ರದಲ್ಲಿ ವೇಷ ಧರಿಸಿ ಆಟವಾಡುತ್ತಿದ್ದ ನಾಲ್ಕು ಜನರನ್ನು ಬಂಧಿಸಲಾಗಿದೆ ಎಂಬ ಸುದ್ದಿಯು ಅವರ ಜೀವನದಲ್ಲಿ ಮಹತ್ವದ ತಿರುವು ನೀಡಿತು.


ಹಳೆಯ ಸೈನ್ಯದ ಸಮವಸ್ತ್ರವನ್ನು ಬಳಸಿ ತಯಾರಿಸಿದ ಸಿಪೊಯಿ ಚೀಲ


ಕಾನೂನುಬಾಹಿರ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಸೇನಾ ಸಮವಸ್ತ್ರವನ್ನು ದುರುಪಯೋಗಪಡಿಸಿಕೊಳ್ಳುವ ಸುತ್ತಲಿನ ಸಮಸ್ಯೆಗಳನ್ನು ಈ ಘಟನೆ ಎತ್ತಿ ತೋರಿಸಿದೆ ಎಂದು ಸಿದ್ಧಾರ್ಥ್ ನೆನಪಿಸಿಕೊಳ್ಳುತ್ತಾರೆ.


ನಾವು ಅದರ ಬಗ್ಗೆ ಓದಿದ ಕೂಡಲೇ, ಸೈನ್ಯದ ಸಮವಸ್ತ್ರವನ್ನು ಡಂಪಿಂಗ್ ಮೈದಾನ ಮತ್ತು ಸ್ಕ್ರ್ಯಾಪ್ ಮಾರುಕಟ್ಟೆಗಳಲ್ಲಿ ನಾವು ಕಂಡುಕೊಂಡ ಎಲ್ಲಾ ನಿದರ್ಶನಗಳನ್ನು ನಾವು ನೆನಪಿಸಿಕೊಳ್ಳಲಾರಂಭಿಸಿದೆವು. ಇದು ಈಗಾಗಲೇ ಅಸ್ತಿತ್ವದಲ್ಲಿರುವ ತ್ಯಾಜ್ಯ ರಾಶಿಗೆ ಸೇರ್ಪಡೆಯಾಗುವುದಲ್ಲದೆ, ಜನರು ಮತ್ತಷ್ಟು ಸೇನಾ ಉಡುಪುಗಳನ್ನು ದುರುಪಯೋಗ ಮಾಡಿಕೊಳ್ಳಲು ದಾರಿ ಮಾಡಿಕೊಡುತ್ತದೆ. ಮತ್ತು, ನಾವು ಸಿಪೊಯಿ ಎಂಬ ಪರಿಕಲ್ಪನೆಯು ಸೈನಿಕ ಎಂಬರ್ಥದ ಸಿಪಾಯಿ ಪದದಿಂದ ಬಂದಿದೆ.”


ಸಿದ್ಧಾರ್ಥ್ ಮತ್ತು ಸುಚಿ ಸುಮಾರು ಒಂದು ವರ್ಷ ಈ ಆಲೋಚನೆಯನ್ನು ಹೊರತರಲು ಮತ್ತು ಮಾರುಕಟ್ಟೆಯನ್ನು ಅಳೆಯಲು ಪ್ರಾಯೋಗಿಕ ಯೋಜನೆಗಳನ್ನು ನಡೆಸಿದರು. ಅವರು ತಮ್ಮ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಪರಿಚಯಸ್ಥರಿಂದ ಹಳೆಯ ಸೈನ್ಯದ ಸಮವಸ್ತ್ರವನ್ನು ಸಂಗ್ರಹಿಸಿ ನಂತರ ಚೀಲಗಳನ್ನು ತಯಾರಿಸಲು ಬಟ್ಟೆಯನ್ನು ವಿನ್ಯಾಸಗೊಳಿಸಿ ಸಂಸ್ಕರಿಸುವ ಮೂಲಕ ಪ್ರಾರಂಭಿಸಿದರು. ಚೀಲಗಳನ್ನು ವಿನ್ಯಾಸಗೊಳಿಸಲು ಇವರಿಬ್ಬರು ಸೃಜನಶೀಲ ತಜ್ಞರನ್ನು ಸಂಪರ್ಕಿಸಿದರು ಮತ್ತು ನಂತರ ಉತ್ಪಾದನೆಯನ್ನು ಬಾಹ್ಯ ಕಂಪನಿಗೆ ಹೊರಗುತ್ತಿಗೆ ನೀಡಿದರು. ಅವರ ಕಲ್ಪನೆಗೆ ಸಕಾರಾತ್ಮಕ ಪ್ರತಿಕ್ರಿಯೆ ಬಂದ ನಂತರ, ಅವರು ಮುಂದೆ ಹೋಗಿ ಸಿಪೊಯಿ ಸ್ಥಾಪಿಸಿದರು.


ಚೀಲಗಳನ್ನು ತಯಾರಿಸಲು ಸೇನೆಯ ಸಮವಸ್ತ್ರವನ್ನು ಸಂಸ್ಕರಿಸುತ್ತಿರುವುದು.




ಈ ಅವಧಿಯಲ್ಲಿ, ಹಳೆಯ ಸಮವಸ್ತ್ರಗಳ ಸಂಗ್ರಹವನ್ನು ಅಧಿಕೃತವಾಗಿ ಸುವ್ಯವಸ್ಥಿತಗೊಳಿಸಲು, ನಾವು ಸಿಪೊಯಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಭಾರತೀಯ ಮಿಲಿಟರಿ ಸಂಘವನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೇವೆ. ಆದಾಗ್ಯೂ, ಕೆಲ ಕಾರಣಗಳಿಂದ ಅದು ಕಾರ್ಯರೂಪಕ್ಕೆ ಬರಲಿಲ್ಲ” ಎಂದು ಸಿದ್ಧಾರ್ಥ್ ಹೇಳುತ್ತಾರೆ.


ಆರಂಭದಲ್ಲಿ ಬೂಟ್‌ಸ್ಟ್ರಾಪ್ಡ್ ಆಗಿಯೇ ಕಾರ್ಯನಿರ್ವಹಿಸಿದರು, ಸಹ-ಸಂಸ್ಥಾಪಕರು ತಮ್ಮ ಕಾರ್ಯಾಚರಣೆಯನ್ನು ಅಳೆಯುವ ಉದ್ದೇಶದಿಂದ ಕ್ರೌಡ್‌ಸೋರ್ಸಿಂಗ್ ಅಭಿಯಾನವನ್ನು ಪ್ರಾರಂಭಿಸಿದರು. ಫ್ಯುಯೆಲ್ ಎ ಡ್ರೀಮ್ ಪ್ಲಾಟ್‌ಫಾರ್ಮ್‌ಗೆ ಅವರು ಹಾಕಿರುವ 1,00,000 ರೂಗಳಲ್ಲಿ, ಈ ಜೋಡಿ ಈಗಾಗಲೇ 20,000 ರೂ ಮರಳಿ ಪಡೆದಿದೆ.


ಕಲ್ಪನೆಯಿಂದ ಉತ್ಪನ್ನಕ್ಕೆ

ಸಿಪೊಯಿ ಉತ್ಪನ್ನಗಳು ಚರ್ಮ ಮತ್ತು ಮಿಲಿಟರಿ ವಸ್ತ್ರಗಳ ಸಂಯೋಜನೆಯಿಂದ ತಯಾರಿಸಿದ ಸಂಪೂರ್ಣ ಶ್ರೇಣಿಯ ಚೀಲಗಳನ್ನು ಒಳಗೊಂಡಿದೆ. ಹಳೆಯ ಸೈನ್ಯದ ಸಮವಸ್ತ್ರಗಳನ್ನು ಸಂಗ್ರಹಿಸಲು ಸಿದ್ಧಾರ್ಥ್ ಮತ್ತು ಸುಚಿ ವಿಭಿನ್ನ ಯೋಜನೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಅವುಗಳನ್ನು ಸ್ಕ್ರ್ಯಾಪ್ ಮಾರುಕಟ್ಟೆಗಳಲ್ಲಿ ಸಂಗ್ರಹಿಸುವುದರಿಂದ ಮತ್ತು ಕುಟುಂಬ ಮತ್ತು ಸ್ನೇಹಿತರ ಮೂಲಕ, ರವಾನೆಗಾಗಿ ವಿಳಾಸದೊಂದಿಗೆ ಆರಂಭಿಕ ವೆಬ್‌ಸೈಟ್‌ನಲ್ಲಿ ದೇಣಿಗೆ ಚಾಲನೆ ಮಾಡುವುದು ಕೂಡ ಅದರಲ್ಲಿ ಸೇರಿದೆ.


ಸಿಪೊಯಿ ತಯಾರಿಸಿದ ಚೀಲಗಳಲ್ಲಿ ಮಿಲಿಟರಿ ವಸ್ತ್ರಗಳು ಮತ್ತು ಚರ್ಮ ಸೇರಿವೆ.


“ಸಮವಸ್ತ್ರವನ್ನು ಸಂಗ್ರಹಿಸಿದ ನಂತರ, ಸಿಪೊಯಿನ ವಿನ್ಯಾಸಕರು ವಸ್ತುಗಳ ಪ್ರಮಾಣವನ್ನು ಅವಲಂಬಿಸಿ ಚೀಲಗಳನ್ನು ತಯಾರಿಸಲು ಕೆಲವು ವಿನ್ಯಾಸಗಳನ್ನು ಹಾಕುತ್ತಾರೆ. ಫ್ಯಾಷನ್ ಪರಿಕರಗಳು ಮತ್ತು ಕರಕುಶಲ ವಸ್ತುಗಳನ್ನು ರಚಿಸಲು ಮತ್ತು ಸಣ್ಣ ಕೆಲಸಗಳನ್ನು ಮಾಡಲು ಕುಶಲಕರ್ಮಿಗಳೊಂದಿಗೆ ತೊಡಗಿಸಿಕೊಳ್ಳುವ ಇಂದೋರ್ ಮೂಲದ ಪಲ್ಪಿ ಪಪ್ಪಾಯಾ ಸ್ಟಾರ್ಟ್‌ ಅಪ್‌ ಗೆ ನಾವು ಚೀಲಗಳ ಉತ್ಪಾದನೆಯನ್ನು ಹೊರಗುತ್ತಿಗೆ ನೀಡಿದ್ದೇವೆ ಮತ್ತು ವಿನ್ಯಾಸಗಳನ್ನು ನೇರವಾಗಿ ಅವರಿಗೆ ಕಳುಹಿಸಲಾಗುತ್ತದೆ” ಎಂದು ಸಿದ್ಧಾರ್ಥ್ ವಿವರಿಸುತ್ತಾರೆ,


ಈ ಕಂಪನಿಯು ದೇಶಾದ್ಯಂತದ ಕುಶಲಕರ್ಮಿಗಳನ್ನು ಚೀಲಗಳನ್ನು ತಯಾರಿಸಲು ಬಳಸಿಕೊಳ್ಳುತ್ತದೆ. ಎಲ್ಲಾ ಚೀಲಗಳು ಕೈಯಿಂದ ಮಾಡಲ್ಪಟ್ಟಿದ್ದು ಮತ್ತು ಅದಕ್ಕೆ 1,000 ರಿಂದ 3,000 ರೂ ಗಳವರೆಗೆ ಬೆಲೆಯಿದೆ. ಒಮ್ಮೆ ಸಂಸ್ಕರಿಸಿದ ನಂತರ, ಸಿದ್ಧಪಡಿಸಿದ ಉತ್ಪನ್ನಗಳನ್ನು ಸಿಪೊಯಿಯ ಕೇಂದ್ರಕ್ಕೆ ಕಳುಹಿಸಲಾಗುತ್ತದೆ, ಅಲ್ಲಿ ಅವುಗಳನ್ನು ಮರುಬಳಕೆಯ ವಸ್ತುಗಳಿಂದ ತಯಾರಿಸಿದ ಕ್ಯಾರಿ ಬ್ಯಾಗ್‌ಗಳೊಂದಿಗೆ ಪ್ಯಾಕ್ ಮಾಡಲಾಗುತ್ತದೆ. ಈ ಮರುಬಳಕೆ ಮಾಡಬಹುದಾದ ಚೀಲಗಳನ್ನು ಪ್ಲ್ಯಾಸ್ಟಿಕ್ ಮತ್ತು ಕಾಗದದ ತ್ಯಾಜ್ಯವನ್ನು ಬಳಸಿಕೊಂಡು ಶಕ್ತಿಶಾಲಿ ಮಹಿಳಾ ಸಂಗಥನ್ ಸಮಿತಿ (ಎಸ್‌ಎಂಎಂಎಸ್) ಎಂಬ ಎನ್‌ಜಿಒಗೆ ಸಂಬಂಧಿಸಿದ ಮಹಿಳೆಯರು ತಯಾರಿಸುತ್ತಾರೆ.


ಸಿಪೊಯಿ ಅವರ ವೆಬ್‌ಸೈಟ್‌ನ ಒಂದು ಇಣುಕು ನೋಟ.


ಚೀಲಗಳನ್ನು ಮಾಡಲು ಸೈನ್ಯದ ಸಮವಸ್ತ್ರವನ್ನು ಬಳಸುವುದು ಒಂದು ಅದ್ಭುತ ಯೋಜನೆಯಾಗಿದೆ. ಚೀಲಗಳು ಭಾರತೀಯ ಸೇನೆಯ ಸಾಧನೆಗಳು ಮತ್ತು ಧೈರ್ಯವನ್ನು ನನಗೆ ನೆನಪಿಸುತ್ತಲೇ ಇರುತ್ತವೆ. ಇದಲ್ಲದೆ, ಉತ್ಪನ್ನಗಳನ್ನು ಪರಿಸರ ಸ್ನೇಹಿ ರೀತಿಯಲ್ಲಿ ತಯಾರಿಸಲಾಗುತ್ತದೆ ಎಂಬ ಅಂಶವನ್ನು ನಾನು ಪ್ರೀತಿಸುತ್ತೇನೆ. ಇದು ಹೆಚ್ಚಿನ ವಸ್ತುವನ್ನು ಖರೀದಿಸಲು ಪ್ರೋತ್ಸಾಹಿಸುತ್ತದೆ” ಎಂದು ಸಿಪೊಯಿ ಗ್ರಾಹಕ ವಿಶಾಲ್ ಹೇಳುತ್ತಾರೆ.


ಸಿಪೊಯಿ ಉತ್ಪನ್ನಗಳನ್ನು ಅದರ ಇಕಾಮರ್ಸ್ ಸೈಟ್ ಮೂಲಕ ಜಗತ್ತಿನಾದ್ಯಂತ ಮಾರಾಟ ಮಾಡಲಾಗುತ್ತದೆ ಮತ್ತು ಕಂಪನಿಯು ವಸ್ತುಗಳ ಸಾಗಣಿಕೆಗಾಗಿ ದೆಹಲಿಯ ಕಂಪನಿಯೊಂದಿಗೆ ಪಾಲುದಾರಿಕೆ ಹೊಂದಿದೆ.


ಸುಸ್ಥಿರ ಭವಿಷ್ಯವನ್ನು ಉತ್ತೇಜಿಸುವುದು

ಬಟ್ಟೆಗಳನ್ನು ಚೀಲಗಳಾಗಿ ತಯಾರಿಸುವ ಮೂಲಕ, ಇತರ ಸಂಸ್ಥೆಗಳು ಹೊಸ ಯೋಜನೆಯನ್ನು ಮಾಡಲು ಇದು ದಾರಿ ತೋರಿಸುತ್ತಿದೆ ಎಂದು ಸಿಪೊಯ್ ನಂಬಿದೆ.


ಸಿಪಾಯಿ ತಯಾರಿಸಿದ ಬ್ಯಾಗ್ ಪ್ಯಾಕ್.


ವಸ್ತುಗಳ ಉನ್ನತೀಕರಣವು ಹಲವಾರು ಪ್ರಯೋಜನಗಳನ್ನು ಹೊಂದಿದೆ ಎಂದು ಪರಿಗಣಿಸಿ, ಹೆಚ್ಚಿನ ಸಂಸ್ಥೆಗಳು ಅದನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸುವ ಸಮಯವಿದು. ಇನ್ನು ಸಿಪೊಯಿಗೆ ಬಂದಾಗ, ಗುರಿ ಯಾವಾಗಲೂ ಎರಡು ಪಟ್ಟು ಹೆಚ್ಚಾಗಿದೆ - ಸೃಜನಶೀಲ ಮರುಬಳಕೆಯ ಮೂಲಕ ಪರಿಸರ ಮತ್ತು ಅದರ ಸಂಪನ್ಮೂಲಗಳನ್ನು ಕಾಪಾಡುವುದು ಮತ್ತು ಸೈನ್ಯದ ಸಮವಸ್ತ್ರವನ್ನು ಕಸದ ತೊಟ್ಟಿಗಳನ್ನು ತಲುಪದಂತೆ ತಡೆಯುವ ಮೂಲಕ ರಾಷ್ಟ್ರದ ಹೆಮ್ಮೆಯನ್ನು ಕಾಪಾಡುವುದು” ಎಂದು ಸಿದ್ಧಾರ್ಥ್ ಹೇಳುತ್ತಾರೆ.


ಸಿದ್ಧಾರ್ಥ್ ಮತ್ತು ಸುಚಿ ಮುಂದಿನ ಕೆಲವು ತಿಂಗಳುಗಳಲ್ಲಿ ಅಗ್ನಿಶಾಮಕ ದಳದ ಸಮವಸ್ತ್ರದ ಮೂಲಕ ಚೀಲ ತಯಾರಿಕೆಯನ್ನು ಆರಂಭಿಸುವ ಮೂಲಕ ತಮ್ಮ ಯೋಜನೆಗಳನ್ನು ವಿಸ್ತರಿಸಲು ಯೋಜಿಸುತ್ತಿದ್ದಾರೆ.