ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ಕಂಡುಹಿಡಿಯಲು ಕಡಿಮೆ ವೆಚ್ಚದ ವಿಧಾನವನ್ನು ಅಭಿವೃದ್ಧಿಪಡಿಸಿದ ಮಂಗಳೂರಿನ 19 ವರ್ಷದ ಯುವಕ

ಹನ್ನೆರಡನೇ ತರಗತಿಯ ವಿದ್ಯಾರ್ಥಿ ಮೊಹಮ್ಮದ್ ಸುಹೇಲ್ ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ಪತ್ತೆಹಚ್ಚಲು ಹೊಸ ವಿಧಾನವನ್ನು ಕಂಡುಹಿಡಿದಿದ್ದು, ಈ ಸಾಧನೆಗಾಗಿ ಅವರಿಗೆ ಅಧ್ಯಕ್ಷ ರಾಮ್ ನಾಥ್ ಕೋವಿಂದ್ ಅವರು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ಕಂಡುಹಿಡಿಯಲು ಕಡಿಮೆ ವೆಚ್ಚದ ವಿಧಾನವನ್ನು ಅಭಿವೃದ್ಧಿಪಡಿಸಿದ ಮಂಗಳೂರಿನ 19 ವರ್ಷದ ಯುವಕ

Monday February 24, 2020,

4 min Read

ಹೆಚ್ಚಿನ ಯುವಕರು ತಮ್ಮ ಭವಿಷ್ಯ ರೂಪಿಸುವಲ್ಲಿ, ಉತ್ತಮ ಕಾಲೇಜುಗಳನ್ನು ಸೇರುವುದಕ್ಕೆ ಹರಸಾಹಸ ಮಾಡುತ್ತಿದ್ದ ಸಮಯದಲ್ಲಿ, ಈ 19 ವರ್ಷದ ಮೊಹಮ್ಮದ್ ಸುಹೇಲ್ ವಿಶಾಲವಾದ ಲೋಕೊಪಯೋಗಿ ಯೋಚನೆಗೆ ತಮ್ಮ ಸಮಯವನ್ನು ನೀಡುತ್ತಿದ್ದರು.


ಸುಹೇಲ್‌ರವರ ಅನ್ವೇಷಣೆ ಮಾಡುವ ಗುಣವು ಕೇವಲ ಒಂದು ಕಾಗದವನ್ನು ಬಳಸಿ ಅಪೌಷ್ಟಿಕತೆಯನ್ನು ಪತ್ತೆಹಚ್ಚುವಂತಹ ವಿಧಾನವನ್ನು ಅಭಿವೃದ್ಧಿಪಡಿಸುವಂತೆ ಮಾಡಿತು. ಇದಕ್ಕಾಗಿಯೇ 2019 ರಲ್ಲಿ ಭಾರತದ ಗೌರವಾನ್ವಿತ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಪ್ರತಿಷ್ಠಿತ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಯನ್ನು ನೀಡಿ ಅವರನ್ನು ಗೌರವಿಸಿದ್ದಾರೆ.


ಸುಹೇಲ್ ಅವರಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ನೀಡುತ್ತಿರುವುದು




ಕರ್ನಾಟಕದ ಬಂದರು ನಗರವಾದ ಮಂಗಳೂರಿನಲ್ಲಿ ಜನಿಸಿದ ಸುಹೇಲ್ ಅವರ ಬಾಲ್ಯವು ಸಂತೋಷ ಮತ್ತು ಸಮೃದ್ಧವಾಗಿತ್ತು. ಪುಸ್ತಕಗಳನ್ನು ಓದಲು ಮತ್ತು ಪ್ರಯೋಗಗಳನ್ನು ನಡೆಸಲು ಅವರು ಶಾಲಾ ತರಗತಿಗಳಿಗೆ ಹೋಗದೆ ಮನೆಯಲ್ಲಿಯೇ ಇರುತ್ತಿದ್ದರು. ಈ ಕಾರಣಗಳು ಅವರ ಶಿಕ್ಷಣದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದಂತೆ ಅವರು ನೋಡಿಕೊಂಡರು. ಸ್ಟೆಮ್ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ) ನಲ್ಲಿ ಸುಹೇಲ್ ಅವರ ತೀವ್ರ ಆಸಕ್ತಿಯು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರೇರೇಪಿಸಿತು.


ಸುಹೇಲ್‌ ಮತ್ತವರ ಸ್ನೇಹಿತ ಸ್ವಸ್ತಿಕ್ ಪದ್ಮಾ ಅವರು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಜೈವಿಕ ಎಂಜಿನಿಯರಿಂಗ್ ಪ್ರಾಧ್ಯಾಪಕರಾದ ಮನು ಪ್ರಕಾಶ್ ಅವರ ಕಾಗದವನ್ನು ಬಳಸಿ ಜೀವ ಉಳಿಸುವ ರೋಗನಿರ್ಣಯ ಸಾಧನಗಳ ಬಗೆಗಿನ ಟೆಡ್‌ ಟಾಲ್ಕ್‌ ಕೇಳಿದಾಗ ರೋಗನಿರ್ಣಯದ ಸಾಧನಗಳೆಡೆ ಇವರ ಆಸಕ್ತಿ ಬೆಳೆಯಿತು.


ಅದೇ ವರ್ಷ, ಸುಹೇಲ್ ಮತ್ತು ಸ್ವಸ್ತಿಕ್ ಅವರು ವಿಶ್ವದ ಅತಿದೊಡ್ಡ ಅಂತರರಾಷ್ಟ್ರೀಯ ಪದವಿ ಪೂರ್ವ ಕಾಲೇಜು ವಿಜ್ಞಾನ ಸ್ಪರ್ಧೆಗಳಲ್ಲಿ ಒಂದಾದ ಇಂಟೆಲ್ ಇಂಟರ್ನ್ಯಾಷನಲ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ಫೇರ್ (ಐಎಸ್ಇಎಫ್)ನಲ್ಲಿ ಭಾಗವಹಿಸಲು ನಿರ್ಧರಿಸಿದರು.


“ನಾನು ಓದುತ್ತಿದ್ದ ಸಮಯದಲ್ಲಿ, ಡಬ್ಲೂಎಚ್‌ಓ ನ ಒಂದು ವರದಿಯನ್ನು ಓದಿದೆ, ಅದರಿಂದ ಜಗತ್ತಿನಾದ್ಯಂತ ಸುಮಾರು 45 ಪ್ರತಿಶತದಷ್ಟು ಮಕ್ಕಳ ಸಾವುಗಳು ಅಪೌಷ್ಟಿಕತೆಯಿಂದ ಸಂಭವಿಸಿವೆ ಎಂದು ತಿಳಿಯಿತು. ಹಾಗೂ ನಾನು ಜಗತ್ತಿನಲ್ಲಿನ ರೋಗನಿರ್ಣಯ ಸಾಧನಗಳ ಬೆಳವಣಿಗೆಗಳನ್ನು ನಾನು ಗಮನಿಸಿದಾಗ, ಪರಿಮಾಣಾತ್ಮಕ ವಿಧಾನಗಳ ಕೊರತೆಯಿದೆ ಎಂದು ನನಗೆ ತಿಳಿಯಿತು. ಆದ್ದರಿಂದ, ಜಾಸ್ತಿ ಯೋಚಿಸದೆ, ನಾನು ಸ್ವಸ್ತಿಕ್ ಅವರೊಂದಿಗೆ ಆ ಆಯಾಮದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ ಮತ್ತು ಹಲವಾರು ತಿಂಗಳುಗಳನ್ನು ವಿವಿಧ ಪ್ರಕ್ರಿಯೆಗಳನ್ನು ಪರೀಕ್ಷಿಸಲು ಮತ್ತು ಪರಿಶೀಲಿಸಲು ಕಳೆದಿದ್ದೇನೆ. ಇದು ಕಠಿಣವಾದ ಕೆಲಸವಾಗಿದೆ, ಆದರೆ ನಾವು ಅದನ್ನು ಮುಂದುವರೆಸಿದ್ದೇವೆ," ಎನ್ನುತ್ತಾರೆ ಸುಹೇಲ್‌.

ಏರಿಳಿತಗಳನ್ನು ತುಂಬಿದ ಪ್ರಯಾಣ

ಸುಹೇಲ್ ಅವರು ಸಾಧನಗಳ ಬಗ್ಗೆ ಕಲಿಯುವುದರಲ್ಲಿ ಮತ್ತು ವಿವಿಧ ವಿಷಯಗಳಲ್ಲಿ ಜ್ಞಾನವನ್ನು ಗಳಿಸುವುದರಲ್ಲಿ ನಂಬಿಕೆ ಹೊಂದಿದ್ದರಿಂದ, ಅವರು ತರಗತಿಗಳಿಗೆ ಹಾಜರಾಗಲಿಲ್ಲ. ಬದಲಾಗಿ, ಅವರು ಹೊಸ ವಿಷಯಗಳನ್ನು ಓದುವುದಕ್ಕೆ ಮತ್ತು ಸಂಶೋಧನೆಗೆ ಸಮಯ ಕಳೆದರು ಮತ್ತು ಕೇವಲ ಪರೀಕ್ಷೆಗಳಿಗೆ ಮಾತ್ರ ಹಾಜರಾಗುತ್ತಿದ್ದರು. ಇವರು 7 ನೇ ತರಗತಿಯಿಂದ 11 ರವರೆಗೆ ನಾಲ್ಕು ಶಾಲೆಗಳನ್ನು ಬದಲಾಯಿಸಿದ್ದಾರೆ.


19 ವರ್ಷದ ಮೊಹಮ್ಮದ್ ಸುಹೇಲ್


“ನಾನು ಆ ಸಮಯದಲ್ಲಿ ಬಹಳಷ್ಟು ಟೀಕೆಗಳನ್ನು ಮತ್ತು ಮಾತುಗಳನ್ನು ಎದುರಿಸಬೇಕಾಗಿ ಬಂತು. ಶಾಲೆಗೆ ಹೋಗದಿರುವುದರಿಂದ ಎಲ್ಲರೂ ನನ್ನ ವಿರುದ್ಧವಾಗಿದ್ದರು. ನಾನು ನನ್ನ ಜೀವನವನ್ನು ಹಾಳು ಮಾಡುತ್ತಿದ್ದೇನೆ ಎಂದು ಅವರು ಭಾವಿಸಿದ್ದರು. ನಾನು ಸಂಪೂರ್ಣವಾಗಿ ಖಿನ್ನತೆಗೆ ಒಳಗಾದ ಒಂದು ಸಮಯ ಕೂಡ ಇತ್ತು. ಅದೃಷ್ಟವಶಾತ್, ನನ್ನ ಪೋಷಕರು ಬೆಂಬಲ ಮತ್ತು ತಿಳುವಳಿಕೆಯನ್ನು ನೀಡಿದರು,” ಎಂದು ಸುಹೇಲ್ ಹೇಳುತ್ತಾರೆ.


2018 ರಲ್ಲಿ, ಮತ್ತೊಮ್ಮೆ, ಸುಹೇಲ್ ಅವರು ಐಎಸ್ಇಎಫ್‌ನಲ್ಲಿ ಭಾಗವಹಿಸುವುದೋ ಅಥವಾ ಮಂಗಳೂರಿನ ಸೇಂಟ್ ಅಲೋಶಿಯಸ್ ಪಿಯು ಕಾಲೇಜಿನಿಂದ ಗ್ರೇಡ್ 12ನೇ ತರಗತಿಯನ್ನು ಅನ್ನು ಪಾಸ್ ಮಾಡಿಕೊಳ್ಳುವುದೋ ಎಂದು ಆಯ್ಕೆ ಮಾಡಿಕೊಳ್ಳಬೇಕಾಗಿತ್ತು. ಸುಹೇಲ್ ಐಎಸ್ಇಎಫ್‌ನಲ್ಲಿ ಭಾಗವಹಿಸಿದರು


ಪ್ರಸ್ತುತ, ಸುಹೇಲ್ ಅವರು ಖಾನ್ ಅಕಾಡೆಮಿ, ಆನ್‌ಲೈನ್ ಟ್ಯುಟೋರಿಯಲ್ ಮತ್ತು ಪಠ್ಯಪುಸ್ತಕಗಳಿಂದ ಮನೆಯಲ್ಲಿಯೇ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಮತ್ತು ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಯಲ್ಲಿ ಅವರು ಜೈವಿಕ ಎಂಜಿನಿಯರಿಂಗ್‌ನಲ್ಲಿ ಪದವಿಪೂರ್ವ ಶಿಕ್ಷಣಕ್ಕಾಗಿ ಅರ್ಜಿ ಸಲ್ಲಿಸಿ, ಉತ್ತರಕ್ಕಾಗಿ ಕಾಯುತ್ತಿದ್ದಾರೆ.


ಅಪೌಷ್ಟಿಕತೆಗೆ ಪರಿಹಾರವನ್ನು ಹುಡುಕುವುದು

ಅನೇಕ ವರ್ಷಗಳಿಂದ, ರಕ್ತ ಪರೀಕ್ಷೆಯು ಅಪೌಷ್ಟಿಕತೆಯನ್ನು ಗುರುತಿಸುವ ಏಕೈಕ ಖಚಿತವಾದ ಮಾರ್ಗವಾಗಿದೆ ಮತ್ತು ಬಿಎಮ್‌ಐ ಸೂಚ್ಯಂಕ ಪಟ್ಟಿ, ತೋಳು-ಸುತ್ತಳತೆ ಮಾಪಕಗಳಂತಹ ಸಾಧನಗಳನ್ನು ಅದನ್ನು ಗುಣಾತ್ಮಕವಾಗಿ ಅರ್ಥಮಾಡಿಕೊಳ್ಳಲು ಬಳಸಲಾಗುತ್ತದೆ. ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಪತ್ತೆಹಚ್ಚಲು ಪರಿಮಾಣಾತ್ಮಕ ವಿಧಾನವನ್ನು ಕಂಡುಹಿಡಿಯುವ ಹಿಂದಿನ ಸುಹೇಲ್ ಅವರ ಆಲೋಚನೆಯೆಂದರೆ ಮಕ್ಕಳಿಗೆ ಸರಿಯಾದ ಮತ್ತು ಅಗತ್ಯವಿರುವ ಆಹಾರವನ್ನು ನೀಡುವ ಮೂಲಕ ಈ ಸ್ಥಿತಿಗೆ ಚಿಕಿತ್ಸೆ ನೀಡುವುದಕ್ಕೆ ಸಹಾಯ ಮಾಡುವುದು.


“ನಾವು ನಮ್ಮ ಸಂಶೋಧನೆಯನ್ನು ಪ್ರಾರಂಭಿಸಿದಾಗ, ನಮ್ಮ ಉದ್ದೇಶವು ದೇಹದ ಚರ್ಮವನ್ನು ಸಂಪರ್ಕಿಸದೆ ಪ್ರೋಟೀನ್‌ನ ಪ್ರಮಾಣವನ್ನು ಮತ್ತು ದೇಹದೊಳಗಿನ ಕಿಣ್ವದ ಚಟುವಟಿಕೆಯನ್ನು ಕಂಡುಹಿಡಿಯುವ ಮಾರ್ಗವನ್ನು ಹುಡುಕುವುದಾಗಿತ್ತು, ಪರೀಕ್ಷೆಗಳನ್ನು ನಡೆಸಲು ನಾವು ಬೆವರು, ಉಗುರುಗಳು ಮತ್ತು ಚರ್ಮದ ಮಾದರಿಗಳನ್ನು ಬಳಸಿದ್ದೇವೆ. ಆದರೆ, ಇವೆಲ್ಲವೂ ವಿಫಲವಾಗಿ ನಾವು ಮತ್ತೆ ಮೊದಲಿನಿಂದ ಪ್ರಾರಂಭಿಸಬೇಕಾಯಿತು,” ಎಂದು ಸುಹೇಲ್ ಹೇಳುತ್ತಾರೆ.


ಮೊಹಮ್ಮದ್ ಸುಹೇಲ್ ಟೆಡ್ಎಕ್ಸ್‌ ನಲ್ಲಿ ಭಾಷಣ ಮಾಡುತ್ತಿರುವುದು.




ಅಂತಿಮವಾಗಿ, ಸುಹೇಲ್ ಲಾಲಾರಸವನ್ನು ಮೂಲವಾಗಿ ಬಳಸಲು ಪ್ರಯತ್ನಿಸಿದರು. ಅವರು ಲಾಲಾರಸದೊಂದಿಗೆ ಕಾಗದದ ಪಟ್ಟಿಗಳನ್ನು ಬಳಸಿ ಸ್ಟಾರ್ಚ್-ಅಯೋಡಿನ್ ಪರೀಕ್ಷೆಯನ್ನು ಮಾಡಿದಾಗ ಮ್ಯಾಜಿಕ್ ನಡೆಯಿತು. ಪ್ರೋಟೀನ್‌ನಲ್ಲಿನ ಕಿಣ್ವಕ ಚಟುವಟಿಕೆಯಿಂದಾಗಿ ಹೊಸ ಮಾದರಿಯನ್ನು ತೆಗೆದುಕೊಂಡಾಗಲೆಲ್ಲಾ ಉಗುಳಿನ ಬಣ್ಣವು ಬದಲಾಗುತ್ತದೆ ಎಂಬುದನ್ನು ಅವರು ಗಮನಿಸಿದರು. ಆಟೋಎಂಎಲ್ ವೈಶಿಷ್ಟ್ಯವನ್ನು ಬಳಸಿಕೊಂಡು, ಸ್ಟಾರ್ಚ್ ಅಯೋಡಿನ್-ಲಾಲಾರಸದ ಬಣ್ಣ ಬದಲಾವಣೆಯ ಆಧಾರದ ಮೇಲೆ ವ್ಯಕ್ತಿಯ ದೇಹದಲ್ಲಿನ ಪ್ರೋಟೀನ್ ಮಟ್ಟವನ್ನು ಊಹಿಸುವ ವಿಧಾನವನ್ನು ಸುಹೈಲ್ ಅಭಿವೃದ್ಧಿಪಡಿಸಿದರು. ಈ ಪರೀಕ್ಷೆಗೆ ತಗಲುವ ಸಂಪೂರ್ಣ ವೆಚ್ಚವು ಕೇವಲ 2 ರೂ, ಅಲ್ಲದೇ ಇದನ್ನು ಸುಲಭವಾಗಿ ನಿರ್ವಹಿಸಬಹುದು.


ಅವರ ಈ ನೂತನ ವಿಧಾನಕ್ಕಾಗಿ, ಸುಹೇಲ್ 2018 ರಲ್ಲಿ ಟ್ರಾನ್ಸ್ಲೇಷನಲ್ ವೈದ್ಯಕೀಯ ವಿಜ್ಞಾನ ವಿಭಾಗದಲ್ಲಿ ಐಎಸ್‌ಇಎಫ್‌ನ ಎರಡನೇ ಜಾಗತಿಕ ಗ್ರ್ಯಾಂಡ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.


“ಅದು ನನ್ನ ಜೀವನದ ಅತ್ಯುತ್ತಮ ದಿನಗಳಲ್ಲಿ ಒಂದು. ನನ್ನ ಸಂತೋಷಕ್ಕೆ ಯಾವುದೇ ಮಿತಿಯಿರಲಿಲ್ಲ. ನಾನು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಬರೆಯದೆ ಇದ್ದದ್ದು ಒಳ್ಳೆಯದಾಯಿತು ಎಂದು ಅನಿಸುತ್ತದೆ,” ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಅನೇಕರಿಗೆ ಸ್ಫೂರ್ತಿ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 52 ಮಿಲಿಯನ್ ಮಕ್ಕಳು ಕಷ್ಟವನ್ನು ಅನುಭವಿಸುತ್ತಾರೆ, ಅಥವಾ ಅವರ ಎತ್ತರಕ್ಕೆ ಕಡಿಮೆ ತೂಕವಿರುತ್ತಾರೆ ಮತ್ತು ಅವರಲ್ಲಿ 155 ಮಿಲಿಯನ್ ಜನರು ಆರೋಗ್ಯ ಸಮಸ್ಯೆಯಿಂದ ಕುಗ್ಗಿದ್ದಾರೆ.


ಈ ಪರಿಸ್ಥಿತಿಯನ್ನು ಸುಧಾರಿಸಲು ಅವರು ಕೊಡುಗೆ ನೀಡಲು ಬಯಸುತ್ತಾರೆ ಎಂದು ಸುಹೇಲ್ ಹೇಳುತ್ತಾರೆ.


“ವಿವಿಧ ಅಭಿವೃದ್ಧಿಶೀಲ ರಾಷ್ಟ್ರದ ಸರ್ಕಾರಗಳು ಈ ಸಮಸ್ಯೆಯನ್ನು ನಿಭಾಯಿಸಲು ಹಲವಾರು ತಂತ್ರಗಳನ್ನು ರೂಪಿಸುತ್ತಿವೆ. ಆದರೆ ಅಪೌಷ್ಟಿಕತೆಯಿಂದ ಬಳಲುತ್ತಿರುವ ಎಲ್ಲಾ ಮಕ್ಕಳಿಗೆ ಅವರ ದೇಹದಲ್ಲಿನ ಅಪೌಷ್ಟಿಕತೆ ಕಡಿಮೆಯಾಗಲು ಒಂದೇ ಪ್ರಮಾಣಿತ ಆಹಾರವನ್ನು ಶಿಫಾರಸು ಮಾಡಲಾಗುತ್ತಿದೆ. ಇದು ಅಪೇಕ್ಷಿತ ಫಲಿತಾಂಶಗಳನ್ನು ನೀಡದಿರಬಹುದು,” ಎಂದು ಅವರು ಹೇಳುತ್ತಾರೆ.


19 ವರ್ಷದ ಹುಡುಗನ ಈ ಆವಿಷ್ಕಾರವು ಮಕ್ಕಳ ದೇಹದಲ್ಲಿನ ಪ್ರೋಟೀನ್ ಮಟ್ಟವನ್ನು ನಿರ್ಧರಿಸಲು ಜನರಿಗೆ ಸಹಾಯ ಮಾಡಿಕೊಡುವುದರಿಂದ, ಅಗತ್ಯವಾದ ಆಹಾರವನ್ನು ಮತ್ತು ನಿಖರವಾದ ಚಿಕಿತ್ಸೆಗಳನ್ನು ನೀಡಬಹುದು. ಸುಹೇಲ್ ಅವರ ಈ ಸಂಶೋಧನೆ ಇನ್ನೂ ದೊಡ್ಡ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ, ಆದರೆ ಭವಿಷ್ಯದಲ್ಲಿ ಅವರು ಸರ್ಕಾರದೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದಾರೆ.


ಹನ್ನೆರಡನೇ ತರಗತಿಯನ್ನು ಕೈಬಿಡುವುದರಿಂದ ಮತ್ತು ಪರಿಚಯಸ್ಥರಿಂದ ಅಸಹ್ಯವಾದ ಮಾತುಗಳನ್ನು, ಟೀಕೆಗಳನ್ನು ಕೇಳುವುದರಿಂದ ಹಿಡಿದು ಸಂಶೋಧನೆ ಮಾಡಲು ಸಮಯ ನೀಡುವವರೆಗೂ, ಸುಹೇಲ್ ಎಲ್ಲವನ್ನೂ ಮಾಡಿದ್ದಾರೆ. ಅವರ ಈ ದೃಢತೆ ಮತ್ತು ಶ್ರದ್ಧೆ ಅನೇಕರಿಗೆ ಸ್ಫೂರ್ತಿಯಾಗಿದೆ.