ಆರೋಗ್ಯ ರಾಯಭಾರಿಗಳಾದ ವಿದ್ಯಾರ್ಥಿಗಳು

ತಮಿಳುನಾಡಿನ ರಾಜಧಾನಿ ಚೆನ್ನೈಮಹಾನಗರವು ಜನರಲ್ಲಿ ಸ್ವಚ್ಚತೆಯ ಕುರಿತು ಅರಿವು ಮೂಡಿಸಲು, 20,000 ಕಾರ್ಪೊರೇಷನ್ ಶಾಲಾ ವಿದ್ಯಾರ್ಥಿಗಳನ್ನು ನಗರದ ಆರೋಗ್ಯ ರಾಯಭಾರಿಗಳನ್ನಾಗಿ ನೇಮಿಸಿದೆ.

ಆರೋಗ್ಯ ರಾಯಭಾರಿಗಳಾದ ವಿದ್ಯಾರ್ಥಿಗಳು

Tuesday October 29, 2019,

2 min Read

ಮಳೆಗಾಲದಲ್ಲಿ ರಸ್ತೆಗಳಲ್ಲಿ, ನಗರಗಳ ಒಳ ಚರಂಡಿಗಳಲ್ಲಿ ನೀರು ಕೊಳಚೆ ತುಂಬಿಕೊಂಡು ಸಾಂಕ್ರಾಮಿಕ ಕಾಯಿಲೆಗಳು ಹರಡುವುದು ಸಾಮಾನ್ಯ. ಇದರಿಂದ ಜನರನ್ನು ರಕ್ಷಿಸಲು ಜನರಲ್ಲಿ ಈ ಕುರಿತು ಅರಿವನ್ನು ಮೂಡಿಸಲು ಚೆನ್ನೈ ಮಹಾನಗರದ ಕಾರ್ಪೊರೇಷನ್ ತಮ್ಮ ವ್ಯಾಪ್ತಿಯಲ್ಲಿ ಬರುವ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನೇ ಆರೋಗ್ಯ ರಾಯಭಾರಿಗಳನ್ನಾಗಿ ನೇಮಿಸಿ ಅವರ ಮೂಲಕ ಜನರಲ್ಲಿ ಸ್ವಚ್ಛತೆಯ ಕುರಿತು ಆರೋಗ್ಯದ ಕುರಿತು ಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿಯನ್ನು ಮೂಡಿಸುತ್ತಿದೆ.


ಕಾರ್ಪೊರೇಷನ್ ಶಾಲೆಗಳ ಎಲ್ಲಾ ವಿದ್ಯಾರ್ಥಿಗಳು ನೈರ್ಮಲ್ಯವನ್ನು ಸುಧಾರಿಸಲು ಮತ್ತು ಸಾರ್ವಜನಿಕ ಆರೋಗ್ಯವನ್ನು ಉತ್ತೇಜಿಸುವ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ನಗರದ ಪ್ರತಿ 200 ವಾರ್ಡ್‌ಗಳಲ್ಲಿ ವಿದ್ಯಾರ್ಥಿಗಳು ತಮ್ಮ ನೆರೆಹೊರೆಯಲ್ಲಿ ಆರೋಗ್ಯ ರಾಯಭಾರಿಗಳ ಪಾತ್ರವನ್ನು ವಹಿಸಲಿದ್ದು, ತಮ್ಮ ನೆರೆಹೊರೆಗಳನ್ನು ಸ್ವಚವಾಗಿಡುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ.


"ಅಭಿಯಾನದ ಭಾಗವಾಗಿ 281 ಕಾರ್ಪೊರೇಷನ್ ಶಾಲೆಗಳ ಎಲ್ಲಾ 20,000 ವಿದ್ಯಾರ್ಥಿಗಳು 33,000 ಕ್ಕೂ ಹೆಚ್ಚು ಬೀದಿಗಳಿಗೆ ಭೇಟಿ ನೀಡುತ್ತಾರೆ"

ಎಂದು ಅಧಿಕಾರಿಯೊಬ್ಬರು ದಿ ಹಿಂದೂ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.


ಚೆನ್ನೈ ಕಾರ್ಪೊರೇಷನ್ ಆಯುಕ್ತ ಪ್ರಕಾಶ್ ಅವರ ಸಲಹೆಯ ಆಧಾರದ ಮೇಲೆ, "ಕ್ಲೀನ್ ಚೆನ್ನೈ, ಹೆಲ್ಥಿ ಚೆನ್ನೈ" ಅಭಿಯಾನದ ಅಂಗವಾಗಿ ಕಳೆದ ತಿಂಗಳು ನಗರದ ವಿವಿಧ ಶಿಕ್ಷಣ ಸಂಸ್ಥೆಗಳಿಂದ ವಿದ್ಯಾರ್ಥಿ ಆರೋಗ್ಯ ರಾಯಭಾರಿಗಳನ್ನು ಆಯ್ಕೆ ಮಾಡಲಾಯಿತು.


ಇದೊಂದು ವಿಶೇಷ ರೀತಿಯ ಯೋಜನೆಯಾಗಿದ್ದು, ಚೆನ್ನೈ ಕಾರ್ಪೊರೇಷನ್ ಶಾಲೆಯ 20 ಸಾವಿರ ವಿದ್ಯಾರ್ಥಿಗಳು ಆರೋಗ್ಯ ರಾಯಭಾರಿಗಳಾಗಿ ಇತ್ತೀಚೆಗೆ ಮಹಾನಗರದ ಕಾರ್ಪೊರೇಷನ್ ಬಿಡುಗಡೆಗೊಳಿಸಿದ ವಿಡಿಯೋ ಒಂದರಲ್ಲಿ ಸ್ವಚ್ಛತೆಗಾಗಿ ಜನರಿಗೆ ತಮ್ಮ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.


ವಿಡಿಯೋ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ ತಮಿಳುನಾಡು ಪುರಸಭೆ ಆಡಳಿತ ಸಚಿವ ಎಸ್ ಪಿ ವೇಲುಮಣಿ ವಿದ್ಯಾರ್ಥಿ ರಾಯಭಾರಿಗಳನ್ನು ಭೇಟಿಯಾಗಿ ಅಭಿನಂದಿಸಿದರು ಮತ್ತು ಅವರಿಗೆ ಗುರುತಿನ ಚೀಟಿಗಳನ್ನು ನೀಡಿದರು. ವಿದ್ಯಾರ್ಥಿ ರಾಯಭಾರಿಗಳಿಗೆ ಸ್ವಚ್ಛತೆ, ನೈರ್ಮಲ್ಯ ಮತ್ತು ತಮ್ಮ ನೆರೆಹೊರೆಯಲ್ಲಿರುವ ಡೆಂಗ್ಯೂ ಮತ್ತು ಇತರ ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸುವಂತೆ ಅವರು ಆಗ್ರಹಿಸಿದರು.


q

ಸ್ವಚ್ಛತೆಯಲ್ಲಿ ನಿರತರಾದ ರಾಯಭಾರಿಗಳು( ಚಿತ್ರಕೃಪೆ: ಎಡೆಕ್ಸ್ ಲೈವ್)




ರಾಯಭಾರಿಗಳಾಗಿ ವಿದ್ಯಾರ್ಥಿಗಳು

ರಾಯಭಾರಿಗಳಾಗಿ ವಿದ್ಯಾರ್ಥಿಗಳು ಮಳೆಗಾಲದಲ್ಲಿ ಸೊಳ್ಳೆಯಿಂದ ಹರಡುವ ರೋಗಗಳ ತಡೆಗಟ್ಟುವಿಕೆ, ಮುಕ್ತ ಮಲವಿಸರ್ಜನೆ ಆಗುವ ದುಷ್ಪರಿಣಾಮ, ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸುವುದು, ನೀರಿನ ನಿಲ್ಲುವಿಕೆಯನ್ನು ತಡೆಯುವುದು, ಒಳಚರಂಡಿ ಅಥವಾ ಶುದ್ಧ ನೀರು ಮತ್ತು ಮಳೆನೀರು ಕೊಯ್ಲು ಮೊದಲಾದ ಕಾರ್ಯಕರ್ಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ತಮ್ಮ ಶಾಲೆಗಳ ಸಮೀಪ ಬೀದಿಗಳಲ್ಲಿ ಮೆರವಣಿಗೆಗಳನ್ನು ನಡೆಸುತ್ತಾರೆ ಮತ್ತು ಈ ಸಂದೇಶಗಳೊಂದಿಗೆ ಕರಪತ್ರಗಳು ವಿತರಿಸುತ್ತಾರೆ. ಮಾತ್ರವಲ್ಲದೆ ಪ್ರತಿ ಮನೆಗಳಿಗೆ ಭೇಟಿಕೊಟ್ಟು ಮನೆ ಹಾಗೂ ತಮ್ಮ ಬೀದಿಗಳನ್ನು ಸ್ವಚ್ಛವಾಗಿಡುವಂತೆ ಸಾರ್ವಜನಿಕರಿಗೆ ತಿಳಿಹೇಳುತ್ತಾರೆ. ಮುಂಗಾರಿನಲ್ಲಿ ಮಳೆ ನೀರಿನಿಂದ ಕೊಳಚೆ ಶೇಕರಣೆಯಾಗಿ ಹರಡುವ ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಈ ವಿದ್ಯಾರ್ಥಿಗಳು ನಿರ್ವಹಿಸುತ್ತಿದ್ದಾರೆ.


ಅಂದಾಜು 18 ಲಕ್ಷ ಕೊಳೆಗೇರಿ ನಿವಾಸಿಗಳಲ್ಲಿ ಸ್ವಚ್ಚತೆ ಮತ್ತು ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಲು ನಾಗರಿಕ ಸಂಸ್ಥೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಎಲ್ಲಾ 200 ವಾರ್ಡ್‌ಗಳಲ್ಲಿ ನೋಂದಾಯಿತ ನಿವಾಸಿಗಳ ಸಂಘಗಳಿಗೆ ವಿದ್ಯಾರ್ಥಿ ರಾಯಭಾರಿಗಳು ನಾಗರಿಕ ವಿಷಯಗಳ ಬಗ್ಗೆ ಮಾಹಿತಿ ಪಡೆಯಲು ಸಹಾಯ ಮಾಡುತ್ತಾರೆ.


ಸೊಳ್ಳೆ ಸಂತಾನೋತ್ಪತ್ತಿ ಮೂಲಗಳನ್ನು ಕಡಿಮೆ ಮಾಡಲು ನಗರದ ಎಲ್ಲಾ 12 ಲಕ್ಷ ವಸತಿ ಮತ್ತು ವಾಣಿಜ್ಯ ಆಸ್ತಿಗಳನ್ನು ಸ್ವಚ ವಾಗಿಡಲು ಈ ಅಭಿಯಾನವು ಪ್ರಯತ್ನಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ವರದಿ ದಿ ಹಿಂದೂ.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.