ಕೋವಿಡ್‌-19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ 42‌ ಕುಟುಂಬಗಳಿಗೆ ಮನೆ ನೀಡಿದ ಸೂರತ್‌ನ ಬಿಲ್ಡರ್‌

ಸೂರತ್‌ನ ಬಿಲ್ಡರ್‌ ಪ್ರಕಾಶ ಭಲನಿ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ 42 ಕ್ಕೂ ಅಧಿಕ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಿ ಸಹಾಯಮಾಡುತ್ತಿದ್ದಾರೆ.

ಕೋವಿಡ್‌-19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ 42‌ ಕುಟುಂಬಗಳಿಗೆ ಮನೆ ನೀಡಿದ ಸೂರತ್‌ನ ಬಿಲ್ಡರ್‌

Thursday September 17, 2020,

1 min Read

ಕಳೆದ ಕೆಲವು ತಿಂಗಳಿಂದ ಭಾರತದ ಹಲವು ವಲಸೆ ಕಾರ್ಮಿಕರು ಮತ್ತು ದಿನಗೂಲಿ ನೌಕರರು ಕೆಲಸವಿಲ್ಲದೆ ಜೀವನ ನಡೆಸಲು ಕಷ್ಟಪಡುವಂತಾಗಿದೆ. ಕೋವಿಡ್‌-19 ನಿಂದ ಕೆಳಗೆ ಹೋಗುತ್ತಿರುವ ಆರ್ಥಿಕತೆ ಒಂದೆಡೆಯಾದರೆ ಉದ್ಯೋಗ ನಷ್ಟವು ಜನರನ್ನು ಮತ್ತಷ್ಟು ಬಡತನದ ಪ್ರಪಾತಕ್ಕೆ ದೂಡಿದೆ.


ನಗರ ಪ್ರದೇಶಗಳಲ್ಲಿ ವಾಸಿಸುವ ಕಡಿಮೆ ಆದಾಯ ಹೊಂದಿರುವ ಕುಟುಂಬಗಳು ಬಾಡಿಗೆ ಕಟ್ಟಲು ಕಷ್ಟ ಪಡುವ ಪರಿಸ್ಥಿತಿ ಎದುರಾಗಿದೆ.

42 ಕುಟುಂಬಗಳಿಗೆ ವಸತಿ ಸೌಲಭ್ಯ ಒದಗಿಸಿದ್ದಾರೆ ಭಲನಿ (ಬಲ)

ಚಿತ್ರಕೃಪೆ: ಎಎನ್‌ಐ/ಟ್ವಿಟ್ಟರ್‌

ಕಷ್ಟದಲ್ಲಿರುವ ಜನರಿಗೆ ಸಹಾಯವಾಗಲೆಂದು ಸೂರತ್‌ನ ಬಿಲ್ಡರ್‌ ಪ್ರಕಾಶ್‌ ಭಲನಿ ತಮ್ಮ ಸ್ವಂತ ಅಪಾರ್ಟ್‌ಮೆಂಟ್‌ ಕಟ್ಟಡದಲ್ಲಿ 1,500 ರೂ.ಗಳ ಅತ್ಯಲ್ಪ ನಿರ್ವಹಣಾ ಶುಲ್ಕವನ್ನು ವಿಧಿಸಿ ವಸತಿ ಸೌಕರ್ಯವನ್ನು ಕಲ್ಪಿಸಿಕೊಡುತ್ತಿದ್ದಾರೆ. ಸಮಾಜಕ್ಕೆ ಏನಾದರೂ ಮಾಡಬೇಕು ಎಂದು ನಂಬುವ ಪ್ರಕಾಶ್‌ ಜನರು ತಾವು ಇಷ್ಟ ಬಂದಷ್ಟು ದಿನ ಇಲ್ಲಿರಬಹುದು ಎಂದಿದ್ದಾರೆ.


“ಅನ್‌ಲಾಕ್‌-1ರ ಸಮಯದಲ್ಲಿ ಜನ ಕೆಲಸಕ್ಕಾಗಿ ಇನ್ನು ಪರದಾಡುತ್ತಿದ್ದರು. ಹಲವರಿಗೆ ಕೆಲಸವೆ ಇರಲಿಲ್ಲ. ಜೀವನ ನಡೆಸಲು ಅವರು ಇನ್ನೂ ಕಷ್ಟ ಪಡುತ್ತಿದ್ದಾರೆ. ಹಲವರಿಗೆ ಬಾಡಿಗೆ ನೀಡಲು ಸಾಧ್ಯವಾಗುತ್ತಿಲ್ಲ,” ಎಂದು ಭಲನಿ ಎಎನ್‌ಐಗೆ ಹೇಳಿದರು.

ಸೂರತ್‌ನ ನಿವಾಸಿಯೊಬ್ಬರು ತಮ್ಮ ಹಳ್ಳಿಗೆ ಹೋಗುವಾಗ ಬ್ಯಾಗ್‌ ಇಡಲು ರೂಮ್‌ ಬೇಕೆಂದು ಭಲನಿಯವರನ್ನು ಮೊದಲ ಬಾರಿಗೆ ಸಂಪರ್ಕಿಸಿದ್ದರು, ಅದಕ್ಕೆ ಅವರು ಒಪ್ಪಿದರು. ಇವರಂತೆ ಇನ್ನೂ ಹಲವರಿಗೆ ವಸತಿಯ ಅವಷ್ಯಕತೆಯಿದೆ ಎಂದು ಭಲನಿಯವರಿಗೆ ಆಗ ಅರ್ಥವಾಯಿತು.


ಭಲನಿಯವರ ರುದ್ರಾಕ್ಷ ಲೇಕ್‌ ಪ್ಯಾಲೆಸ್‌ ನಲ್ಲಿ ವಾಸವಾಗಿರುವ ಆಶಾ ನಿಮಾವತ್‌,


“ನನ್ನ ಪತಿಯ ಉದ್ಯೋಗ ಸರಿಯಾಗಿ ನಡೆಯುತ್ತಿರಲಿಲ್ಲ ಹಾಗಾಗಿ ನಾವು ಬಾಡಿಗೆ ಕಟ್ಟಲಾಗಲಿಲ್ಲ. ಮಾಲೀಕರು ಮನೆ ಬಿಡಲು ಹೇಳಿದರು. ನಾವು ಇನ್ನೆನೂ ಮನೆ ಬಿಟ್ಟು ಹಳ್ಳಿಗೆ ಹೋಗಬೇಕೆಂದುಕೊಳ್ಳುವಾಗ ರುದ್ರಾಕ್ಷ ಲೇಕ್‌ ಪ್ಯಾಲೆಸ್‌ ನ ಜಾಹೀರಾತು ನೋಡಿ, ಅವರನ್ನು ಸಂಪರ್ಕಿಸಿದೆವು,” ಎಂದರು


ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿಯ ಪ್ರಕಾರ ಈವರೆಗೂ ಭಲನಿಯವರು 42 ಕ್ಕೂ ಅಧಿಕ ಕುಟುಂಬಗಳಿಗೆ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಲು ಅವಕಾಶ ಮಾಡಿಕೊಟ್ಟಿದ್ದಾರೆ.


ಒಟ್ಟು 92 ಫ್ಲಾಟ್‌ಗಳಿವೆ, ಅಗತ್ಯವಿದ್ದವರಿಗೆ ಅವುಗಳನ್ನು ನೀಡಲಾಗುವುದು ಎನ್ನುತ್ತಾರೆ ಭಲನಿ.