ವಿಶಿಷ್ಟ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡುವ ಮೂಲಕ ಆಹಾರ ಪೂರೈಸುತ್ತಿರುವ ಕೆಫೆಗಳು

ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬದಲಾಗಿ ಉಚಿತ ಊಟ ಮತ್ತು ತಿಂಡಿಗಳನ್ನು ಒದಗಿಸುವುದರಿಂದ ಹಿಡಿದು ರಟ್ಟನ್ನು ಮರುಬಳಕೆ ಮಾಡಿ ಸಂಪೂರ್ಣ ಕೆಫೆಯನ್ನು ನಿರ್ಮಿಸುವವರೆಗೆ ಭಾರತದ ಉನ್ನತ ಸುಸ್ಥಿರ ಮತ್ತು ಪರಿಸರ ಸ್ನೇಹಿ ಕೆಫೆಗಳ ಪಟ್ಟಿ ಇಲ್ಲಿವೆ.

ವಿಶಿಷ್ಟ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡುವ ಮೂಲಕ ಆಹಾರ ಪೂರೈಸುತ್ತಿರುವ ಕೆಫೆಗಳು

Thursday February 27, 2020,

3 min Read

ಭಾರತದಂತಹ ಹೆಚ್ಚಿನ ಜನಸಂಖ್ಯೆ ಹೊಂದಿರುವ ದೇಶದಲ್ಲಿ ತ್ಯಾಜ್ಯ ನಿರ್ವಹಣೆ ಒಂದು ದೊಡ್ಡ ಸಮಸ್ಯೆಯಾಗಿದೆ. ದೇಶವು ಪ್ರತಿದಿನ ಸುಮಾರು 62 ದಶಲಕ್ಷ ಟನ್ ಹಸಿ ಮತ್ತು ಒಣ ತ್ಯಾಜ್ಯವನ್ನು ಉತ್ಪಾದಿಸುತ್ತದೆ. ಹಸಿ ತ್ಯಾಜ್ಯವು ಹೆಚ್ಚಾಗಿ ಸಾವಯವ ಉಳಿದ ತ್ಯಾಜ್ಯವಾಗಿದ್ದರೆ, ಒಣ ತ್ಯಾಜ್ಯವು ಜೈವಿಕ ವಿಘಟನೀಯವಲ್ಲದ ಯಾವುದನ್ನಾದರೂ ಒಳಗೊಂಡಿರುತ್ತದೆ, ವಿಶೇಷವಾಗಿ ಪ್ಲಾಸ್ಟಿಕ್ ಅನ್ನು.


ಆದರೆ ತ್ಯಾಜ್ಯ ನಿರ್ವಹಣಾ ಸಮಸ್ಯೆಯನ್ನು ಒಬ್ಬರು ಹಲವು ವಿಧಗಳಲ್ಲಿ ನಿಭಾಯಿಸಬಹುದು ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ಭೂಮಿಯಲ್ಲಿ ಹುದುಗಿ ಕೊನೆಯಾಗದಂತೆ ತಡೆಯಲು ಕ್ರಮಗಳನ್ನು ತೆಗೆದುಕೊಳ್ಳಬಹುದು. ಇದಲ್ಲದೆ, ತ್ಯಾಜ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಲು ಸರ್ಕಾರ, ಖಾಸಗಿ ಸಂಸ್ಥೆಗಳು ಮತ್ತು ಅನೇಕ ವ್ಯಕ್ತಿಗಳು ಕೆಲವು ಉಪಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಉದಾಹರಣೆಗೆ, ಪ್ಲಾಸ್ಟಿಕ್ ತ್ಯಾಜ್ಯ ಕೊಟ್ಟು ಅದರ ಬದಲಾಗಿ ಒಬ್ಬರು ಉಚಿತ ಊಟವನ್ನು ಪಡೆಯಬಹುದು.


ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಭಾರತದಲ್ಲಿ ಇಂತಹ ಉಪಕ್ರಮಗಳನ್ನು ಜಾರಿಗೆ ತಂದಿರುವ ಕೆಫೆಗಳ ಪಟ್ಟಿಯನ್ನು ಯುವರ್ ಸ್ಟೋರಿ ಸಂಗ್ರಹಿಸಿದೆ:

ಅಂಬಿಕಾಪುರದ ಗಾರ್ಬೇಜ್ ಕೆಫೆ

ಇದು ಭಾರತದಲ್ಲಿಯೇ ಮೊದಲನೆಯದು ಎಂದು ಹೇಳಲಾದ ಗಾರ್ಬೇಜ್ ಕೆಫೆ. ಛತ್ತೀಸ್ಗಢದ ಸೂರತ್ ಜಿಲ್ಲೆಯ ಅಂಬಿಕಾಪುರದಲ್ಲಿರುವ ಈ ಗಾರ್ಬೇಜ್ ಕೆಫೆ, ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬದಲಾಗಿ ಕಸ ಆಯುವವರಿಗೆ ಮತ್ತು ಮನೆಯಿಲ್ಲದವರಿಗೆ ಊಟವನ್ನು ನೀಡುತ್ತದೆ.


ಕೆಫೆಯನ್ನು ಅಂಬಿಕಾಪುರದ ಮುನ್ಸಿಪಲ್ ಕಾರ್ಪೋರೇಶನ್ ನಡೆಸುತ್ತಿದೆ. ಇದು ವ್ಯಕ್ತಿಯು ಒದಗಿಸಬಹುದಾದ ಪ್ರತಿ ಕಿಲೋ ಕಸದ ರಾಶಿಗೆ ಉಚಿತ ಊಟ ಮತ್ತು ಸಂಗ್ರಹಿಸಿದ 500 ಗ್ರಾಂ ತ್ಯಾಜ್ಯಕ್ಕೆ ಉಚಿತ ಉಪಹಾರವನ್ನು ಒದಗಿಸುತ್ತದೆ. ಮುಂದಿನ ದಿನಗಳಲ್ಲಿ ನಾಗರಿಕ ಸಂಸ್ಥೆ ಈ ಜನರಿಗೆ ಆಶ್ರಯ ನೀಡುವ ಗುರಿ ಹೊಂದಿದೆ, ವರದಿ ವೈಸ್.


ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ನಗರದಲ್ಲಿ ರಸ್ತೆಗಳನ್ನು ನಿರ್ಮಿಸಲು ನಿಗಮ ಯೋಜಿಸಿದೆ. ವಾಸ್ತವವಾಗಿ ಈ ನಗರವು ಪ್ಲಾಸ್ಟಿಕ್‌ ತ್ಯಾಜ್ಯವನ್ನು ಮರುಬಳಕೆ ಮಾಡಿರುವುದು ಇದೇ ಮೊದಲಲ್ಲ, ಈ ಹಿಂದೆ ಇದು ಡಾಂಬರಿನೊಂದಿಗೆ ಬೆರೆಸಿದ ಎಂಟು ಲಕ್ಷ ಪ್ಲಾಸ್ಟಿಕ್ ಚೀಲಗಳಿಂದ ಸಂಪೂರ್ಣ ರಸ್ತೆಯನ್ನು ನಿರ್ಮಿಸಿತ್ತು.


ಚಿತ್ರಕೃಪೆ: ಎಎನ್ಐ ಟ್ವಿಟ್ಟರ್


ಒಡಿಸ್ಸಾದ ಗಾರ್ಬೇಜ್ ಕೆಫೆ

ಛತ್ತೀಸ್ಗಢದ ಉಪಕ್ರಮದಿಂದ ಸ್ಫೂರ್ತಿಪಡೆದು, ಒಡಿಶಾ ರಾಜ್ಯ ಇತ್ತೀಚೆಗೆ ಇದೇ ರೀತಿಯ ಕೆಫೆಯೊಂದನ್ನು ಪ್ರಾರಂಭಿಸಿದೆ, ಅಲ್ಲಿ ಒಂದು ಕೆಜಿ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬದಲಾಗಿ 5 ರೂಪಾಯಿಯ ಊಟವನ್ನು ಪಡೆಯಬಹುದು.


ಉದಾರತೆ ಮತ್ತು ಜವಾಬ್ದಾರಿಯುತವಾದ ವಿನಿಮಯ ವ್ಯವಸ್ಥೆಗೆ ನಿಂತಿರುವ ಈ ಉಪಕ್ರಮವನ್ನು ರಾಜ್ಯ ಸರ್ಕಾರದ ಆಹಾರ ಯೋಜನೆಯಡಿ ರೂಪಿಸಲಾಗಿದೆ ಮತ್ತು ಕೊರಪುಟ್ ಜಿಲ್ಲೆಯ ಕೋಟ್‌ಪ್ಯಾಡ್ ಅಧಿಸೂಚಿತ ಪ್ರದೇಶ ಮಂಡಳಿ (ಎನ್‌ಎಸಿ) ಇದಕ್ಕೆ ಚಾಲನೆ ನೀಡಿದೆ. ಕೈಮಗ್ಗ ಉತ್ಪನ್ನಗಳಿಗೆ ಹೆಸರುವಾಸಿಯಾದ ಪಟ್ಟಣ ಕೊರಪುತ್, ರಾಜ್ಯದಲ್ಲಿ ಈ ಯೋಜನೆಯನ್ನು ಮುನ್ನಡೆಸುತ್ತಿದೆ.


ಈ ಕೆಫೆಯ ಫಲಾನುಭವಿಗಳು ಪಾಲಿಥೀನ್ ಚೀಲಗಳು, ಪ್ಲಾಸ್ಟಿಕ್ ಬಾಟಲಿಗಳು ಮತ್ತು ಕಪ್ ಗಳನ್ನು ಸಂಗ್ರಹಿಸಿ, ಊಟಕ್ಕಾಗಿ ಕೆಫೆಗೆ ಕೊಡುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



ಸಾಂದರ್ಭಿಕ ಚಿತ್ರ


ಗುಜರಾತ್ ನ ವಿಶಿಷ್ಟ ಕೆಫೆ

ಗುಜರಾತ್‌ನ ಬುಡಕಟ್ಟು ಪ್ರಾಬಲ್ಯದ ದಾಹೋಡ್ ಜಿಲ್ಲೆಯಲ್ಲಿರುವ ವಿಶಿಷ್ಟ ಕೆಫೆಯೂ ಒಂದು ಕಿಲೋಗ್ರಾಂ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಉಚಿತ ತಿಂಡಿಗಳನ್ನು ನೀಡುತ್ತದೆ. ನೀವು ಅರ್ಧ ಕಿಲೋಗ್ರಾಂಗಳಷ್ಟು ಪ್ಲಾಸ್ಟಿಕ್ ಅನ್ನು ನೀಡಿದರೆ ಒಂದು ಕಪ್ ಚಹಾವನ್ನು ಉಚಿತವಾಗಿ ಪಡೆಯಬಹುದಾಗಿದೆ.


ಸರ್ಕಾರದ ನೇತೃತ್ವದ ಸ್ವಚ್ಛ ಭಾರತ ಅಭಿಯಾನ ಯೋಜನೆಯನ್ನು ಗ್ರಾಮೀಣ ಪ್ರದೇಶಗಳಿಗೆ ಕೊಂಡೊಯ್ಯುವುದು ಮತ್ತು ಜನರು ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡಲು ಪ್ರೋತ್ಸಾಹಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.


ಕೆಫೆಯು ಈ ಉಪಕ್ರಮವನ್ನು ಪ್ರಾರಂಭಿಸಿದಾಗಿನಿಂದ ಗಣನೀಯ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯವನ್ನು ಪಡೆಯುತ್ತಿದೆ. ನಂತರ ಪ್ಲಾಸ್ಟಿಕ್ ಅನ್ನು ಮರುಬಳಕೆಗಾಗಿ ಕಳುಹಿಸಲಾಗುತ್ತದೆ. ಕೆಫೆ ಯಶಸ್ವಿಯಾದರೆ ಈ ಮಾದರಿಯನ್ನು ಜಿಲ್ಲೆಯ ಇತರ ಸ್ಥಳಗಳಲ್ಲಿ ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.


ಮೀರುತ್‌ನ ವೆಸ್ಟ್‌ ಟು ಫುಡ್‌ ಕೆಫೆ

ಭಾರತದ ಮೊದಲ ಸ್ವ-ಸುಸ್ಥಿರ ಗಾರ್ಬೇಜ್ ಕೆಫೆಯೆಂದು ಹೆಸರಿಸಲ್ಪಟ್ಟ, ಸ್ವಚ್ಛತಾ ಮೀರುತ್‌ನ ವೆಸ್ಟ್‌ ಟು ಫುಡ್ ಕೆಫೆ ಒಂದು ಅನನ್ಯ ವಿನಿಮಯ ವ್ಯವಸ್ಥೆಯ ಮೇಲೆ ಕಾರ್ಯನಿರ್ವಹಿಸುತ್ತದೆ, ಅದು ತ್ಯಾಜ್ಯ ವಸ್ತುಗಳನ್ನು ಉಚಿತ ಊಟ ನೀಡಲು ವಿನಿಮಯ ಮಾಡಿಕೊಳ್ಳುತ್ತದೆ.


ನಗರದ ತ್ಯಾಜ್ಯವನ್ನು ಸ್ವಚ್ಛಗೊಳಿಸುವ ಬಡ ಮತ್ತು ಮನೆಯಿಲ್ಲದ ಕುಟುಂಬಗಳ ಕಸ ಆಯುವವರನ್ನು ಕೆಫೆ ಸ್ವಚ್ಚತಾ ಮಿಷನ್‌ನ ಸದ್ದಿಲ್ಲದೆ ಕಾರ್ಯನಿರ್ವಹಿಸುವ ಯೋಧರು ಎಂದು ಪರಿಗಣಿಸುತ್ತದೆ ಮತ್ತು ಅವರಿಗೆ ಆರೋಗ್ಯಕರ ಆಹಾರವನ್ನು ಒದಗಿಸುತ್ತದೆ.


ಪ್ಲಾಸ್ಟಿಕ್, ಪೇಪರ್, ರಟ್ಟು, ಟಿನ್ ಕ್ಯಾನ್, ಗಾಜಿನ ವಸ್ತುಗಳು ಮುಂತಾದ ಅರ್ಧ ಕಿಲೋ ತ್ಯಾಜ್ಯ ವಸ್ತುಗಳಿಗೆ ಒಂದು ಪ್ಲೇಟ್ ಊಟವನ್ನು ಹಾಗೂ ಒಂದು ಕಿಲೋಗ್ರಾಂ ತ್ಯಾಜ್ಯಕ್ಕೆ ಎರಡು ಪ್ಲೇಟ್ ಊಟವನ್ನು ಪಡೆಯಬಹುದು.


ಈ ಕೆಫೆ ರಾಷ್ಟ್ರದ ಎರಡು ದೊಡ್ಡ ಸಮಸ್ಯೆಗಳಾದ ತ್ಯಾಜ್ಯ ನಿರ್ವಹಣೆ ಮತ್ತು ಹಸಿವನ್ನು ಪರಿಹರಿಸುತ್ತಿದೆ. ಸ್ವಚ್ಚತಾ ಮೀರುತ್ ಎನ್ನುವುದು ತ್ಯಾಜ್ಯವನ್ನು ತೆಗೆದುಕೊಳ್ಳುವವರು, ಸಮಾಜವಾದಿಗಳು ಮತ್ತು ಪ್ರತಿಯೊಬ್ಬ ವ್ಯಕ್ತಿಯು ಸಮಗ್ರ ತ್ಯಾಜ್ಯ ನಿರ್ವಹಣೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಒಂದು ಉಪಕ್ರಮವಾಗಿದೆ. ಇದು “ಸ್ವಚ್ಛ ಭಾರತ ಮಿಷನ್”, ಮತ್ತು “ಫೈಟ್‌ ಅಗೆನ್ಸ್ಟ್‌ ಹಂಗರ್” ಯೋಜನೆಗಳನ್ನು ಬೆಂಬಲಿಸುತ್ತದೆ.


ಕೆಫೆಯು "ಪರ್ಯಾಯ ತ್ಯಾಜ್ಯ ಸಂಗ್ರಹ ಯಾತ್ರೆ" ಯೊಂದಿಗೆ ಪ್ರಾರಂಭವಾಯಿತು. ಇದರಲ್ಲಿ ತ್ಯಾಜ್ಯಗಳನ್ನು ಹೇಗೆ ವಿಲೇವಾರಿ ಮಾಡುವುದು ಎಂದು ಗೊತ್ತಿಲ್ಲದಿರುವವರು ಕೆಫೆಗೆ ಮನೆಯ ತ್ಯಾಜ್ಯ ವಸ್ತುಗಳನ್ನು ಅಥವಾ ಹಳೆಯ ಬಟ್ಟೆ, ಆಟಿಕೆಗಳು, ಪುಸ್ತಕಗಳನ್ನು ತಂದು ಕೊಡಬಹುದು. ಸಂಗ್ರಹಿಸಿದ ಪರ್ಯಾಯ ತ್ಯಾಜ್ಯ ವಸ್ತುಗಳನ್ನು ಕೊಳೆಗೇರಿ ಮಕ್ಕಳ ಉತ್ತಮ ಶಿಕ್ಷಣ ಮತ್ತು ಜೀವನ ಮಟ್ಟವನ್ನು ಸುಧಾರಿಸಲು ವಿತರಿಸಲಾಗುತ್ತದೆ.


ಆಯುಷ್ ಮಿತ್ತಲ್ ಅವರ ಸ್ವಚ್ಛ ಕೆಫೆ


ಮುಂಬೈನ ಕಾರ್ಡ್ ಬೋರ್ಡ್ ಕೆಫೆ

ಅನೇಕ ಕೆಫೆಗಳು ತ್ಯಾಜ್ಯಕ್ಕೆ ಬದಲಾಗಿ ಉಚಿತ ಊಟವನ್ನು ನೀಡುತ್ತಿದ್ದರೆ, ಮುಂಬೈನ ಈ ಕೆಫೆ ತ್ಯಾಜ್ಯದಿಂದಲೇ ತಯಾರಿಸಲ್ಪಟ್ಟಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಸಂಪೂರ್ಣ ಕೆಫೆಯನ್ನು ಮರುಬಳಕೆಯ ರಟ್ಟಿನ ವಸ್ತುಗಳಿಂದ ನಿರ್ಮಿಸಲಾಗಿದೆ.


ಕೆಫೆಯಲ್ಲಿರುವ ಎಲ್ಲ ಪೀಠೋಪಕರಣಗಳು, ಕಟ್ಲರಿಗಳು ಮತ್ತು ಇತ್ಯಾದಿ ವಸ್ತುಗಳನ್ನು ಕಾರ್ಡ್‌ಬೋರ್ಡ್‌ನಿಂದಲೆ ತಯಾರಿಸಲಾಗಿದೆ. 32 ವರ್ಷದ ಲೇಖಕ ಅಮಿತ್ ಧನಾನಿ ಅವರು ಸ್ಥಾಪಿಸಿದ ಈ ಕೆಫೆಯನ್ನು ವಾಸ್ತುಶಿಲ್ಪಿ ನೂರು ಕರೀಮ್ ವಿನ್ಯಾಸಗೊಳಿಸಿದ್ದಾರೆ ಇದು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ನಲ್ಲಿದೆ.


ಚಿತ್ರಕೃಪೆ: ದಿ ಹಿಂದು


ಕಾರ್ಡ್‌ಬೋರ್ಡ್‌ನಿಂದಲೆ ಮಾಡಿದ ಈ ಕಾರ್ಡ್‌ಬೋರ್ಡ್‌ ಕೆಫೆಯು 40,000 ಚದರ ಅಡಿ ವಿಸ್ತೀರ್ಣದಲ್ಲಿದೆ ಮತ್ತು ಇದನ್ನು ಕೇವಲ ಏಳು ತಿಂಗಳಲ್ಲಿ ನಿರ್ಮಿಸಲಾಗಿದೆ. ಇದು ಪರಿಸರ ಸ್ನೇಹಿ ಮತ್ತು ಮರುಬಳಕೆ ಮಾಡಬಹುದಾದ ವಸ್ತುಗಳನ್ನು, ಸಸ್ಯಾಹಾರಿ ಆಹಾರವನ್ನು ಬಳಸುವುದನ್ನು ಉತ್ತೇಜಿಸುತ್ತದೆ.