ಸೌರಚಾಲಿತ ಇಸ್ತ್ರಿ ಬಂಡಿ ತಯಾರಿಸಿ ಪ್ರಶಸ್ತಿ ಗೆದ್ದ ತಮಿಳುನಾಡಿನ 14ರ ಬಾಲಕಿ

ತಮಿಳುನಾಡಿನ 9 ನೇ ತರಗತಿ ವಿದ್ಯಾರ್ಥಿನಿಯಾದ ವಿನಿಷಾ ಉಮಾಶಂಕರ್‌ ಕಲ್ಲಿದ್ದಲ ಬದಲಿಗೆ ಸೌರ ಶಕ್ತಿಯ ಮೇಲೆ ನಡೆಯುವ ಇಸ್ತ್ರಿ ಬಂಡಿಯನ್ನು ವಿನ್ಯಾಸಗೊಳಿಸಿ ಪ್ರತಿಷ್ಟಿತ ಚಿಲ್ಡ್ರನ್ಸ್‌ ಕ್ಲೈಮೆಟ್‌ ಪ್ರೈಜ್‌ ಪಡೆದಿದ್ದಾಳೆ.

ಸೌರಚಾಲಿತ ಇಸ್ತ್ರಿ ಬಂಡಿ ತಯಾರಿಸಿ ಪ್ರಶಸ್ತಿ ಗೆದ್ದ ತಮಿಳುನಾಡಿನ 14ರ ಬಾಲಕಿ

Monday November 23, 2020,

2 min Read

ಬಟ್ಟೆಗಳನ್ನು ಇಸ್ತ್ರಿ ಮಾಡಿದರೆ ಚೆನ್ನಾಗಿ ಕಾಣುತ್ತವೆ. ಆದರೆ ಅಲ್ಲಿ ಸುಡುವ ಕಲ್ಲಿದ್ದಲು, ಅದರಿಂದುಂಟಾಗುವ ಮಾಲಿನ್ಯದ ಪ್ರಮಾಣ ಎಷ್ಟೆಂದು ತಿಳಿದಿದೆಯೆ?


14 ವರ್ಷದ ವಿನಿಷಾ ಉಮಾಶಂಕರ್‌ ಈ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿದಿದ್ದಲ್ಲದೆ, ಕಲ್ಲಿದ್ದಲ ಬದಲಿಗೆ ಸೋಲಾರ್‌ ಪ್ಯಾನಲ್‌ಗಳನ್ನು ಬಳಸಿ ಚಲಿಸಬಲ್ಲ ಇಸ್ತ್ರಿ ಬಂಡಿಯನ್ನು ತಯಾರಿಸಿದ್ದಾಳೆ. ತಮಿಳುನಾಡಿನ ತಿರುವನ್ನಮಲೈಯ ಖಾಸಗಿ ಶಾಲೆಯಲ್ಲಿ 9 ನೇ ತರಗತಿ ಓದುತ್ತಿರುವ ವಿನಿಷಾ ತನ್ನ ಅನ್ವೇ಼ಷಣೆಗಾಗಿ ಚಿಲ್ಡ್ರನ್ಸ್‌ ಬಹುಮಾನ ಪಡೆದಿದ್ದಾಳೆ.

14 ವರ್ಷದ ವಿನಿಷಾ ಉಮಾಶಂಕರ್‌ (ಚಿತ್ರಕೃಪೆ: ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌)


ಸ್ವೀಡನ್‌ ಮೂಲದ ಚಿಲ್ಡ್ರನ್ಸ್‌ ಕ್ಲೈಮೆಟ್‌ ಫೌಂಡೇಶನ್‌ ವತಿಯಿಂದ ಸ್ವೀಡನ್‌ನ ಪರಿಸರ ಮತ್ತು ಹವಾಮಾನ ಸಚಿವರು ಮತ್ತು ಉಪ ಪ್ರಧಾನ ಮಂತ್ರಿಗಳಾದ ಇಸಾಬೆಲ್ಲಾ ಲವಿನ್‌ ಅವರ ಉಪಸ್ಥಿತಿಯಲ್ಲಿ 1,00,000 ಸ್ವೀಡಿಶ್‌ ಕ್ರೋನಾ (ಸುಮಾರು ರೂ. 8.64 ಲಕ್ಷ)ವನ್ನು ಜತೆಗೆ ಪದಕವನ್ನು ಪಡೆಯಲಿದ್ದಾಳೆ ವಿನಿಷಾ.


ಇದು ಚಿಲ್ಡ್ರನ್ಸ್‌ ಕ್ಲೈಮೆಟ್‌ ಪ್ರೈಜ್‌ನ 5 ನೇ ಆವೃತ್ತಿಯಾಗಿದ್ದು, ಮಕ್ಕಳಿಗಾಗಿರುವ ವಿಶ್ವದ ಅತಿದೊಡ್ಡ ಅಂತರಾಷ್ಟ್ರೀಯ ಹವಾಮಾನ ಪ್ರಶಸ್ತಿಗಳಲ್ಲಿ ಒಂದಾಗಿದೆ.


“ನಾನಿರುವ ರಸ್ತೆಯಲ್ಲಿ ಒಂದು ಇಸ್ತ್ರಿ ಬಂಡಿ ಇದೆ, ಕಲ್ಲಿದ್ದಲು ಬಳಸಿ ಅವರು ಇಸ್ತ್ರಿ ಮಾಡುತ್ತಾರೆ. ಅವರ ಪತ್ನಿಯು ಇಸ್ತ್ರಿ ಮಾಡುತ್ತಾರೆ. ಇಸ್ತ್ರಿ ಆದಮೇಲೆ ಸುಟ್ಟ ಕಲ್ಲಿದ್ದಲನ್ನು ತಣ್ಣಗಾಗಿಸಲು ನೆಲದ ಮೇಲೆ ಹರಡಲಾಗುತ್ತದೆ, ನಂತರ ಕಸದೊಂದಿಗೆ ಎಸೆಯಲಾಗುತ್ತದೆ. ಇದು ನನಗೆ ಭಾರತದಲ್ಲಿ ಎಷ್ಟು ಇಸ್ತ್ರಿ ಬಂಡಿಗಳಿವೆ, ಎಷ್ಟು ಕಲ್ಲಿದ್ದಲನ್ನು ಸುಡಲಾಗುತ್ತದೆ ಮತ್ತು ಅದರಿಂದಾಗುವ ಮಾಲಿನ್ಯದ ಬಗ್ಗೆ ಯೋಚಿಸುವಂತೆ ಮಾಡಿತು. ಹಾಗಾಗಿ ನಾನು ಇದಕ್ಕೆ ಪರಿಹಾರ ಏನು ಎಂದು ಶೋಧಿಸುತ್ತಿರುವಾಗ ಕಲ್ಲಿದ್ದಲ ಬದಲಿಗೆ ಇಸ್ತ್ರಿ ಕಾಯಿಸಲು ಸೌರ ಶಕ್ತಿ ಬಳಸುವುದು ಒಳ್ಳೆಯದೆಂದು ಯೋಚಿಸಿದೆ,” ಎಂದು ವಿನಿಷಾ ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ಹೇಳಿದರು.


ಅಂದಾಜಿನ ಪ್ರಕಾರ ಭಾರತದಲ್ಲಿ 10 ದಶಲಕ್ಷ ಇಸ್ತ್ರಿ ಬಂಡಿಗಳಿವೆ, ಮತ್ತು ಪ್ರತಿ ಬಂಡಿಗಳು ದಿನಕ್ಕೆ 5 ಕೆಜಿಗಿಂತಲೂ ಹೆಚ್ಚಿನ ಕಲ್ಲಿದ್ದಲನ್ನು ಸುಡುತ್ತವೆ. ಇದರಿಂದ ಪರಿಸರಕ್ಕಾಗುತ್ತಿರುವ ಹಾನಿಯ ಬಗ್ಗೆ ವಿನಿಷಾ ಚಿಂತೆಗೀಡಾಗಿದ್ದಾಳೆ. ಆದ್ದರಿಂದ ಇಸ್ತ್ರಿ ಬಂಡಿಯನ್ನು ತಯಾರಿಸಿ ಮೇಲ್ಛಾವಣಿಗೆ 100 ಎಎಚ್‌ನ ಬ್ಯಾಟರಿಯೊಂದನ್ನು ಅಳವಡಿಸಿದ್ದಾಳೆ.


ಉತ್ತಮ ಬಿಸಿಲಿದ್ದರೆ ಪ್ಯಾನೆಲ್‌ಗಳು 250 ವ್ಯಾಟ್‌ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುತ್ತವೆ. ಬ್ಯಾಟರಿಯನ್ನು(1200 ವ್ಯಾಟ್‌) ಸಂಪೂರ್ಣವಾಗಿ ಚಾರ್ಜ್‌ ಮಾಡಲು 5 ಗಂಟೆಯ ಬಿಸಿಲು ಸಾಕಾಗುತ್ತದೆ, ಮತ್ತು 6 ಗಂಟೆಗಳಷ್ಟು ಇಸ್ತ್ರಿ ಕೆಲಸ ಮಾಡುತ್ತದೆ.


ಹೆಚ್ಚಿನ ಆದಾಯಕ್ಕಾಗಿ, ಬಂಡಿಗೆ ಮೊಬೈಲ್‌ ಚಾರ್ಜಿಂಗ್‌ ಪಾಯಿಂಟ್‌ಗಳನ್ನು ಅಳವಡಿಸಿ, ನಾಣ್ಯ ಹಾಕಿ ಚಾರ್ಜ್‌ ಮಾಡಿಕೊಳ್ಳುವಂತೆಯು ಮಾಡಬಹುದು ಎನ್ನುತ್ತಾಳೆ ವಿನಿಷಾ.


ತಮಿಳುನಾಡಿನ ಮುಖ್ಯಮಂತ್ರಿ ಪಳನಿಸ್ವಾಮಿ ಇತ್ತೀಚೆಗೆ ವಿನಿಷಾಳ ಸಾಧನೆಯ ಬಗ್ಗೆ ಟ್ವೀಟ್‌ ಮಾಡಿದ್ದರು.

18 ವರ್ಷದ ಒಳಗಿನ ವಿದ್ಯಾರ್ಥಿಗಳಿಗೆ ನೀಡುವ ಭಾರತದ ಅತ್ಯುನ್ಯತ ಪ್ರಶಸ್ತಿಯಾದ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಬಾಲ ಶಕ್ತಿ ಪುರಸ್ಕಾರ 2021ಕ್ಕೂ ವಿನಿಷಾಳ ಹೆಸರನ್ನು ಪಟ್ಟಿ ಮಾಡಲಾಗಿದೆ. ಇಸ್ತ್ರಿ ಬಂಡಿಯ ರೂಪ ಕೊಟ್ಟು ವಿನ್ಯಾಸಗೊಳಿಸಲು ಎರಡು ತಿಂಗಳು ವ್ಯಯಿಸಿರುವ ವಿನಿಷಾ ಈಗ ತನ್ನ ಅನ್ವೇಷಣೆಗೆ ಪೇಟೆಂಟ್‌ ಪಡೆಯಲು ಕಾಯುತ್ತಿದ್ದಾಳೆ.