ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಸೇನಾ ತುಕಡಿಯನ್ನು ಮುನ್ನಡೆಸಲಿರುವ ಮೊದಲ ಮಹಿಳಾ ಸೇನಾಧಿಕಾರಿ ತಾನಿಯಾ ಶೇರ್ಗಿಲ್

ತನ್ನ ಕುಟುಂಬದ ನಾಲ್ಕನೇ ತಲೆಮಾರಿನ ಸೇನಾಧಿಕಾರಿಯಾದ ತಾನಿಯಾ‌ ಇತ್ತೀಚೆಗೆ ಸೇನಾ ದಿನದ ಪರೇಡ್‌‌ನಲ್ಲಿ ಪರೇಡ್‌ನ್ನು ಮುನ್ನಡೆಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಸೇನಾ ತುಕಡಿಯನ್ನು ಮುನ್ನಡೆಸಲಿರುವ ಮೊದಲ ಮಹಿಳಾ ಸೇನಾಧಿಕಾರಿ ತಾನಿಯಾ ಶೇರ್ಗಿಲ್

Saturday January 18, 2020,

2 min Read

ಕ್ಯಾಪ್ಟನ್ ತಾನಿಯಾ ಶೇರ್ಗಿಲ್ ಜನವರಿ 26ರಂದು‌ ಪರೇಡ್‌ನಲ್ಲಿ ಅಜುಟಂಟ್ ಆಗಿ ಗಣರಾಜ್ಯೋತ್ಸವದ ಮೆರವಣಿಗೆಯನ್ನು ಮುನ್ನಡೆಸಲಿದ್ದಾರೆ. ಮೆರವಣಿಗೆಯನ್ನು ನಿರ್ದೇಶಿಸುವ ಮತ್ತು ಮುನ್ನಡೆಸುವ ಜವಾಬ್ದಾರಿಯನ್ನು ಪರೇಡ್ ಅಜುಟಂಟ್ ವಹಿಸಿಕೊಂಡಿರುತ್ತಾರೆ. ಜನವರಿ 15ರಂದು ದೆಹಲಿ ಕಂಟೋನ್ಮೆಂಟ್‌ನ ಕರಿಯಪ್ಪ ಪರೇಡ್ ಮೈದಾನದಲ್ಲಿ ನಡೆದ ಸೇನಾ ದಿನದ ಪರೇಡ್‌ನಲ್ಲಿ ಮೊದಲ ಮಹಿಳಾ ಪರೇಡ್ ಅಜುಟಂಟ್ ಆಗಿ ಎಲ್ಲ ಪುರುಷರ ತಂಡವನ್ನು ಮುನ್ನಡೆಸಿದ್ದಾರೆ.


ಕ್ಯಾಪ್ಟನ್ ತಾನಿಯಾ ಶೇರ್ಗಿಲ್ ಸೇನಾ ದಿನಾಚರಣೆಯ ಸಮಾರಂಭದಲ್ಲಿ ಮೆರವಣಿಗೆಯನ್ನು ಮುನ್ನಡೆಸಿದ್ದು


"ಇದು ಬಹಳ ಹೆಮ್ಮೆಯ ಭಾವನೆ ಹಾಗೂ ಶುದ್ಧ ಆಶೀರ್ವಾದವಾಗಿದೆ," ಎಂದು ಸಮಾರಂಭದ ನಂತರ ಶೇರ್ಗಿಲ್ ಪಿಟಿಐಗೆ ತಿಳಿಸಿದರು.


26ರ ಹರೆಯದ ಇವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಅವರ ಕುಟುಂಬದ ನಾಲ್ಕನೇ ತಲೆಮಾರಿನ ಕುಡಿ. ಅವರ ಮುತ್ತಜ್ಜ ಮೊದಲ ಮಹಾಯುದ್ಧದಲ್ಲಿ ಸಿಖ್ ರೆಜಿಮೆಂಟ್‌ನ ಭಾಗವಾಗಿದ್ದರು. ಅವಳ ತಂದೆಯ ಅಜ್ಜ ಕೂಡ ಅದೇ ರೆಜಿಮೆಂಟ್‌ನ ಭಾಗವಾಗಿದ್ದರು ಮತ್ತು ಆಕೆಯ ತಾಯಿಯ ಅಜ್ಜ 14ನೇ ಆರ್ಮರ್ಡ್ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಿದರು. ಆಕೆಯ ತಂದೆ ಫಿರಂಗಿ ರೆಜಿಮೆಂಟ್‌ನಲ್ಲಿ ಇದ್ದರು‌.


ತಾನಿಯಾ ಶೇರ್ಗಿಲ್‌ ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ(ಒಟಿಎ) ಪದವೀಧರರಾಗಿದ್ದಾರೆ ಮತ್ತು ಎಂಜನಿಯರಿಂಗ್ ಅಂತಿಮ ವರ್ಷದಲ್ಲಿರುವಾಗ ಅಕಾಡೆಮಿಗೆ ಅರ್ಜಿ ಸಲ್ಲಿಸಿದರು. ಹೋಶಿಯಾರ್ಪುರ್ ಮೂಲದ ಶೇರ್ಗಿಲ್ ನಾಗ್ಪುರ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯೂನಿಕೇಷನ್ಸ್‌ನಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ‌.


ಒಟಿಎನಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ಅವರನ್ನು 2017ರಲ್ಲಿ ಕಾರ್ಪ್ಸ್ ಆಫ್ ಸಿಗ್ನಲ್‌ನಲ್ಲಿ ನಿಯೋಜಿಸಲಾಯಿತು‌.


"ಪರೇಡ್ ಅಜುಟಂಟ್ಗಾಗಿ ಆಯ್ಕೆ ನಡೆಯುತ್ತಿರಬೇಕಾದರೆ, ನನಗೆ ಗೊತ್ತಿತ್ತು, ನಾನು ಆಯ್ಕೆಯಾದರೆ, ಪರೇಡ್‌ನ ಇತಿಹಾಸದಲ್ಲಿ ಆ ಕೆಲಸವನ್ನು ಮಾಡಿದ ಮೊದಲ ಮಹಿಳೆ ನಾನಾಗುವೆ ಎಂದು," ಎಂದರು.


ಸೇನಾ ದಿನಾಚರಣೆಯ ಸಮಾರಂಭದಲ್ಲಿ ತುಕಡಿಯನ್ನು ಮುನ್ನಡೆಸಿ ಮತ್ತು ನಿರ್ದೇಶಿಸಿದ ಶೇರ್ಗಿಲ್ ಅವರು ಹಿರಿಯ ಅಧಿಕಾರಿಗಳಿಂದ ಸಾಕಷ್ಟು ಪ್ರಶಂಸೆ ಮತ್ತು ಜೋರಾದ ಚಪ್ಪಾಳೆ ಗಿಟ್ಟಿಸಿದರು. ಇವರು ಮೆರವಣಿಗೆಯನ್ನು ಮುನ್ನಡೆಸುವ ವಿಡಿಯೋವನ್ನು ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾರವರು ಟ್ವಿಟರ್‌ನಲ್ಲಿ ಹಂಚಿಕೊಂಡು, "ಇದು ನನಗೆ ರೋಮಾಂಚನವನ್ನುಂಟು ಮಾಡುತ್ತಿದ್ದು, ಇದು ನಿಜಕ್ಕೂ ಸ್ಪೂರ್ತಿದಾಯಕವಾಗಿದ್ದು, ನಾನು ತಾನಿಯಾ ಶೇರ್ಗಿಲ್‌ರವರನ್ನು ನಿಜವಾದ ಸೆಲೆಬ್ರಿಟಿ ಎಂದು ಕರೆಯುತ್ತೇನೆ. ಈ ವಿಡಿಯೋ ಟ್ರೆಂಡಿಂಗ್ ಆಗಿರಬೇಕು. ಟಿಕ್‌ಟಾಕ್ ವಿಡಿಯೋಗಳಲ್ಲ," ಎಂದಿದ್ದಾರೆ.


ತಮ್ಮ ಕನಸುಗಳನ್ನು ಬೆನ್ನಟ್ಟಿರುವ ಮಹಿಳೆಯರಿಗೆ‌ ಸಂದೇಶವೊಂದನ್ನು‌ ನೀಡಲು ಕೇಳಿದಾಗ, ಶೇರ್ಗಿಲ್‌ "ಸಮವಸ್ತ್ರವನ್ನು ಧರಿಸಿದಾಕ್ಷಣ, ನಾವು ಕೇವಲ ಅಧಿಕಾರಿಗಳು ಮಾತ್ರ, ಲಿಂಗ ಅಸಮಾನತೆ ಎಂಬುದು ಗೌಣವಾಗುತ್ತದೆ. ಎಲ್ಲ ವಿಷಯಗಳು ಅರ್ಹತೆ ಪಡೆಯುತ್ತವೆ," ಎಂದು ಹೇಳಿದರು.


"ತಮ್ಮ‌ ಕನಸುಗಳನ್ನು ಬೆನ್ನಟ್ಟಿದ ಹುಡುಗಿಯರು ಮತ್ತು ಮಹಿಳೆಯರು ಮೊದಲು ತಮ್ಮನ್ನು ತಾವು ನಂಬಬೇಕು. ಪುರುಷರಿಗಿಂತ ಕಡಿಮೆ ಎನ್ನುವುದು ಇಲ್ಲಿ ಮುಖ್ಯವಾಗುವುದಿಲ್ಲ. ನಿಮ್ಮ ಗುರಿಗಳ ಮೇಲೆ ಕೇಂದ್ರಿಕರಿಸಿ, ಉತ್ಸಾಹದಿಂದ ಗುರಿಗಳನ್ನು ಮುಂದುವರೆಸಲು ನಾನು ಅವರಿಗೆ ಹೇಳುತ್ತೇನೆ," ಎನ್ನುತ್ತಾರೆ.


ಗಣರಾಜ್ಯೋತ್ಸವದ ಮೆರವಣಿಗೆ 2015ರಿಂದ ಅನೇಕ ಮಹಿಳಾ ತುಕಡಿಗಳನ್ನು ಕಣಕ್ಕಿಳಿಸಿದೆ. 2019ರಲ್ಲಿ, ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಸೈನ್ಯದ ತುಕಡಿಯನ್ನು ಮುನ್ನಡೆಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಲೆಫ್ಟಿನೆಂಟ್ ಭಾವನಾ ಕಸ್ತೂರಿ ಪಾತ್ರರಾಗಿದ್ದಾರೆ.