ಐಎಎಫ್‌ ಅಕ್ಯಾಡೆಮಿಯಲ್ಲಿ ಅಗ್ರ ಸ್ಥಾನಗಳಿಸಿದ ಚಹಾ ಮಾರುವವರ ಮಗಳು

23 ವರ್ಷದ ಆಂಚಲ್ ಗಂಗ್ವಾಲ್ ಐಎಎಫ್ ಅಕಾಡೆಮಿಯಲ್ಲಿ ಅಗ್ರಸ್ಥಾನ ಗಳಿಸಿದ್ದು, ಹೈದರಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷೀಯ ಫಲಕವನ್ನು ಪಡೆದರು. ಚಹಾ ಮಾರುತ್ತಿದ್ದ ಇವರ ತಂದೆ ತಮ್ಮ ಮೂರು ಮಕ್ಕಳನ್ನು ಬೆಳೆಸಲು ಅನೇಕ ಕಷ್ಟಗಳನ್ನು ಎದುರಿಸಿದ್ದಾರೆ.

ಐಎಎಫ್‌ ಅಕ್ಯಾಡೆಮಿಯಲ್ಲಿ ಅಗ್ರ ಸ್ಥಾನಗಳಿಸಿದ ಚಹಾ ಮಾರುವವರ ಮಗಳು

Wednesday June 24, 2020,

2 min Read

ಶನಿವಾರ ಸುರೇಶ್‌ ಗಂಗ್ವಾಲ್‌ ತಮ್ಮ ಮಗಳು ಅಂಚಲ್‌ ಗಂಗ್ವಾಲ್‌ ಅವರನ್ನು ದೂರದರ್ಶನದಲ್ಲಿ ಮೊದಲ ಬಾರಿಗೆ ಹೆಮ್ಮೆಯಿಂದ ನೋಡಿದರು. ಅಕ್ಯಾಡೆಮಿಯಲ್ಲಿ ಅಗ್ರ ಸ್ಥಾನಗಳಿಸಿದ್ದಕ್ಕೊಸ್ಕರ ಅಂಚಲ್‌ ಅವರಿಗೆ ಹೈದರಾಬಾದ್‌ ಭಾರತೀಯ ವಾಯು ದಳ ಅಕ್ಯಾಡೆಮಿಯಲ್ಲಿ ನಡೆದ ಸಂಯೋಜಿತ ಪದವಿ ಸಮಾರಂಭದಲ್ಲಿ ಅಧ್ಯಕ್ಷೀಯ ಫಲಕವನ್ನು ನೀಡಲಾಯಿತು.


ಇವರ ತಂದೆ ಮಧ್ಯಪ್ರದೇಶದ ನೀಮುಚ್‌ನಲ್ಲಿ ಚಹಾ ಮಾರುತ್ತ ಜೀವನ ಸಾಗಿಸುತ್ತಿದ್ದರೂ, ತಮ್ಮ ಮಕ್ಕಳಿಗೆ ಯಾವುದೇ ಕೊರತೆ ಎದುರಾಗದಂತೆ ಬೆಳೆಸಿದ್ದಾರೆ.


ಚಿತ್ರ: ಶೀ ದಿ ಪೀಪಲ್




ಅಂಚಲ್‌ ಯಾವಾಗಲೂ ತಮ್ಮನ್ನು ಯೋಧರೆಂದೆ ತಿಳಿದಿದ್ದಾರೆ ಮತ್ತು ರಕ್ಷಣಾ ಪಡೆಗಳನ್ನು ಸೇರಿ ಕಾರ್ಯನಿರ್ವಹಿಸಬೇಕೆಂಬುದು ಅವರ ಬಯಕೆಯಾಗಿತ್ತು. ಅವರು ಮಧ್ಯಪ್ರದೇಶದ ಪೊಲೀಸ್‌ ಇಲಾಖೆಯಲ್ಲಿ ಸಬ್‌-ಇನ್ಸ್ಪೆಕ್ಟರ್‌ ಆಗಿ ಸೇರಿದರು, ಲೇಬರ್‌ ಇನ್ಸ್ಪೆಕ್ಟರ್‌ ಆಗಿ ಕಾರ್ಯನಿರ್ವಹಿಸಿದ ನಂತರ ಅವರು ಕೆಲಸವನ್ನು ತೊರೆದರು.


“ಸೇನೆಗೆ ಸೇರುವ ಮೊದಲು ಅಲ್ಲಿ 8 ತಿಂಗಳು ಕೆಲಸಮಾಡಿದ್ದೇನೆ,” ಎಂದು ಅಂಚಲ್‌ ದಿ ಹಿಂದೂ ಪತ್ರಿಕೆಗೆ ಹೇಳಿದ್ದಾರೆ.


ಅಂಚಲ್‌ ನೀಮುಚ್‌ನ ಸಿತಾರಾಂ ಜಾಜು ಸರ್ಕಾರಿ ಹೆಣ್ಣು ಮಕ್ಕಳ ಕಾಲೇಜಿನಿಂದ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಪದವಿ ಪಡೆದಿದ್ದಾರೆ. ಅವರ ಪೋಷಕರು ಯಾವಾಗಲೂ ಅವರಿಗೆ ಬೆಂಬಲವಾಗಿ ನಿಂತಿದ್ದರು ಎನ್ನುತ್ತಾರವರು.


ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ಜತೆ ಮಾತನಾಡಿದ ಅಂಚಲ್‌, “ನಾನು ಸೇನೆಗೆ ಸೇರುತ್ತೇನೆ ಎಂದು ಮೊದಲ ಬಾರಿಗೆ ಪಾಲಕರ ಬಳಿ ಹೇಳಿದಾಗ, ಅವರು ತುಸು ಚಿಂತಿತರಾಗಿದ್ದರು. ಆದರೆ ಅವರು ನನ್ನನ್ನು ತಡೆಯಲು ಯಾವತ್ತೂ ಪ್ರಯತ್ನಿಸಲಿಲ್ಲ. ನಿಜ ಹೇಳಬೇಕೆಂದರೆ ಅವರೆ ನನ್ನ ಶಕ್ತಿ,” ಎಂದರು.


ಕೊರೊನಾ ಕಾರಣದಿಂದ ಐಎಎಫ್‌ ಪದವಿಧರರ ಪೋಷಕರು ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ.


“ನಾನು ಯಾವಗಲೂ ಈ ದಿನದ ಬಗ್ಗೆ ಕನಸು ಕಾಣುತ್ತಿದ್ದೆ. ಸಮವಸ್ತ್ರ ಧರಿಸಿ ನನಗಾಗಿ ಇಷ್ಟು ವರ್ಷ ಕಷ್ಟಪಟ್ಟು ಈ ಸ್ಥಾನಕ್ಕೆ ಏರಿಸಿದ ನಮ್ಮ ತಂದೆ ತಾಯಿಯರೆದುರು ನಿಲ್ಲಬೇಕೆಂದು. ಕೋವಿಡ್‌-19 ಕಾರಣದಿಂದ ಅದು ನೆರವೆರಲಿಲ್ಲ. ಆದರೆ ಕಾರ್ಯಕ್ರಮವನ್ನು ಅವರು ದೂರದರ್ಶನದಲ್ಲಿ ನೋಡಿದ್ದಾರೆಂದು ನನಗೆ ಖುಷಿಯಿದೆ,” ಎಂದರು ಅವರು.


ಹೊಸದಾಗಿ ನಿಯೋಜಿತ ಐಎಎಫ್ ಅಧಿಕಾರಿಗಳು ವಿರಾಮಕ್ಕಾಗಿ ಮನೆಗೆ ಹೋಗದೆ ನೇರವಾಗಿ ಆಯಾ ಘಟಕಗಳಿಗೆ ತೆರಳಲಿದ್ದಾರೆ ಎಂದು ಪರೇಡ್‌ ನಡೆಯುತ್ತಿರುವಾಗ ಏರ್ ಚೀಫ್ ಮಾರ್ಷಲ್ ಆರ್‌ಕೆಎಸ್ ಭದೌರಿಯಾ ಹೇಳಿದರು. ಅವರಿಗೆ ತಮ್ಮ ತಮ್ಮ ಕರ್ತವ್ಯಗಳು ಮತ್ತು ಜವಾಬ್ದಾರಿಗಳು ಮತ್ತು ಪ್ರಮುಖ ಕಾರ್ಯಗಳಿಗೆ ನಿಯೋಜಿಸಲಾಗುತ್ತದೆ.