ಹಳ್ಳಿಯಲ್ಲಿ ನೆಟವರ್ಕ್‌ ಸರಿಯಾಗಿ ಸಿಗುತ್ತಿಲ್ಲವೆಂದು ಮರವೇರಿ ಆನ್‌ಲೈನ್‌ ಪಾಠಮಾಡುತ್ತಿದ್ದಾರೆ ಈ ಶಿಕ್ಷಕ

ಪಶ್ಚಿಮ ಬಂಗಾಳದ ಶಿಕ್ಷಕರೊಬ್ಬರು ತಮ್ಮ ಹಳ್ಳಿಯಲ್ಲಿ ನೆಟವರ್ಕ್‌ ಸಿಗದೆ ಮರವೇರಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪಾಠ ಮಾಡುತ್ತಿದ್ದಾರೆ.

ಹಳ್ಳಿಯಲ್ಲಿ ನೆಟವರ್ಕ್‌ ಸರಿಯಾಗಿ ಸಿಗುತ್ತಿಲ್ಲವೆಂದು ಮರವೇರಿ ಆನ್‌ಲೈನ್‌ ಪಾಠಮಾಡುತ್ತಿದ್ದಾರೆ ಈ ಶಿಕ್ಷಕ

Wednesday April 22, 2020,

2 min Read

ಶಿಕ್ಷಣ ನೀಡುವುದಕ್ಕಾಗಿ ಹಲವಾರು ಶಿಕ್ಷಕರು ತಮ್ಮ ಕರ್ತವ್ಯದ ಕಟ್ಟುಪಾಡುಗಳನ್ನು ದಾಟಿ ಸೇವೆ ಸಲ್ಲಿಸಿದ್ದಾರೆ. ಒಬ್ಬರು ಶಿಕ್ಷಕರು ಬಡ ಮಕ್ಕಳಿಗಾಗಿ ದೆಹಲಿಯಲ್ಲಿ ಬ್ರಿಡ್ಜ್‌ ಕೆಳಗೆ ಶಾಲೆ ಆರಂಭಿಸಿದರೆ, ಇನ್ನೊಬ್ಬರು ಹಳ್ಳಿಯ ಸರ್ಕಾರಿ ಶಾಲೆಯನ್ನು ವರ್ಣಮಯಗೊಳಿಸಿ ವಿದ್ಯಾರ್ಥಿಗಳನ್ನು ಶಾಲೆಗೆ ಬರುವಂತೆ ಮಾಡಿದ್ದಾರೆ.


ಅದೇ ರೀತಿ ಇಲ್ಲೊಬ್ಬರು ಶಿಕ್ಷಕರು ತಮ್ಮ ಹಳ್ಳಿಯಲ್ಲಿ ಮನೆಯಿಂದಲೇ ಆನ್‌ಲೈನ್‌ ಪಾಠ ಮಾಡಲು ನೆಟವರ್ಕ್‌ ಸಿಗದಿದ್ದಾಗ, ಮರವೇರಿ ಪಾಠ ಮಾಡುತ್ತಿದ್ದಾರೆ.


ಕೊಲ್ಕತ್ತಾದ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡುವ 36ರ ಸುಬ್ರತಾ ಪಾತಿಯವರು, ಕೊರೊನಾವೈರಸ್‌ ಪಿಡುಗಿನಿಂದ ಹೇರಲಾಗಿರುವ ಲಾಕ್‌ಡೌನ್‌ ನಿಮಿತ್ತ ತಮ್ಮ ಊರಾದ ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಆಹಾಂದಾ ಹಳ್ಳಿಗೆ ಮರಳಿದ್ದಾರೆ. ಆದರೆ ಅವರಿರುವಲ್ಲಿ ನೆಟವರ್ಕ್‌ ಸರಿಯಾಗಿ ಸಿಗುವುದಿಲ್ಲ.


‌ಮರದ ಮೇಲೆ ಶಿಕ್ಷಕ ಸುಬ್ರತಾ ಪಾತಿ (ಚಿತ್ರಕೃಪೆ: ಟ್ವಿಟರ್)


“ಕೋವಿಡ್-19‌ ಬಿಕ್ಕಟ್ಟಿನ ನಡುವೆ ನನ್ನ ಕುಟುಂಬದ ಜೊತೆಗಿರಲು ತಾತ್ಕಾಲಿಕವಾಗಿ ನಾನು ಕೊಲ್ಕಾತ್ತಾದದಿಂದ ರಾಜ್ಯದ ಜಂಗಲಮಲಾಲ್‌ ಪ್ರದೇಶಕ್ಕೆ ಸೇರುವ ಅಹಾಂದಾ ಹಳ್ಳಿಗೆ ಬಂದಿದ್ದೇನೆ. ಹೀಗೆ ಊರಿಗೆ ಬಂದಿದ್ದೇನೆಂದು ನನ್ನ ವೃತ್ತಿಯ ಕರ್ತವ್ಯಗಳನ್ನು ನಾನು ಬಿಡಲಾಗುವುದಿಲ್ಲ. ನಾನಿರುವಲ್ಲಿ ಇಂಟರ್ನೆಟ್‌ ಸಂಪರ್ಕ ಸರಿಯಾಗಿ ಸಿಗುವುದಿಲ್ಲ, ಅದಕ್ಕೊಂದು ಉಪಾಯ ಹುಡುಕಲೆಬೇಕಿತ್ತು,” ಎನ್ನುತ್ತಾರೆ ಶಿಕ್ಷಕ ಸುಬ್ರತಾ ಪಾತಿ, ವರದಿ ಎನ್‌ಡಿಟಿವಿ.

ಸಮರ್ಪಕವಾದ ಇಂಟರ್ನೆಟ್‌ ಸಂಪರ್ಕ ಸಿಗದೆ ಹೇಗೆ ಪಾಠ ಮಾಡಬೇಕೆಂದು ಚಿಂತೆಗೀಡಾಗಿದ್ದ ಶಿಕ್ಷಕರಿಗೆ ಬೇವಿನ ಮರವೇರಿದರೆ ನೆಟವರ್ಕ್‌ ಸಿಗಬಹುದೇನೋ ಎಂಬ ಯೋಚನೆ ಹೊಳೆದಿದೆ. ಅವರ ಯೋಚನೆ ನಿಜವಾಗಿತ್ತು, ಮರದ ಮೇಲೆ ಯಾವುದೇ ಅಡೆತಡೆಯಿಲ್ಲದ ಸಮರ್ಪಕವಾದ ನೆಟವರ್ಕ್‌ ಸಿಕ್ಕಿತು. ಈಗ ಪ್ರತಿದಿನ ಬೆಳಿಗ್ಗೆ ಸುಬಾತ್ರಾ ಅವರ ಪಾಠ ಯಾವುದೇ ತೊಂದೆರೆಯಿಲ್ಲದೆ ನಡೆಯುತ್ತಲಿದೆ, ವರದಿ ಎನ್‌ಡಿಟಿವಿ.


ಕೂರಲು ಸುಲಭವಾಗಲೆಂದು ಬಾಂಬೂ, ಗೋಣಿ ಚೀಲ ಬಳಸಿ ಗಿಡದ ಟೊಂಗೆಯ ಮೇಲೊಂದು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಒಂದೇ ಬಾರಿ ಎರಡು ಮೂರು ತರಗತಿಗಳನ್ನು ತೆಗೆದುಕೊಳ್ಳಬೇಕಾಗಿರುವುದರಿಂದ ಗಿಡವನ್ನೇರುವಾಗ ಊಟ, ನೀರನ್ನು ಜೊತೆಗೆ ತೆಗೆದುಕೊಂಡೆ ಹೋಗುತ್ತಾರೆ.


“ಕೆಲವೊಮ್ಮೆ ಬಿಸಿಲಿನಿಂದ ತೊಂದರೆಯಾಗುತ್ತದೆ. ಆದರೆ ನಾನು ಹೊಂದಿಕೊಳ್ಳಲು ಪ್ರಯತ್ನಿಸುತ್ತೇನೆ. ಕೆಲವೊಮ್ಮೆ ಬಿರುಗಾಳಿ, ಚಂಡಮಾರುತಗಳು ನಾನು ಕೂರುವ ಜಾಗವನ್ನು ಕೆಡಿಸಿಬಿಡುತ್ತವೆ, ಅವನ್ನೆಲ್ಲ ಸರಿಪಡಿಸಿಕೊಳ್ಳುತ್ತಿದ್ದೇನೆ. ಯಾವುದೇ ಕಾರಣಕ್ಕೂ ನನ್ನ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು,” ಎನ್ನುತ್ತಾರವರು.


ಸುಬ್ರತಾ ಪಾತಿಯವರು ನನಗೆ ಸ್ಪೂರ್ತಿ. ಅವರು ತಮ್ಮ ವಿದ್ಯಾರ್ಥಿಗಳಿಗಾಗಿ ಏನು ಮಾಡುತ್ತಾರೆ ಎಂಬುದು ಮಾದರಿಯಾಗಿದೆ. ನಾನು ಅಥವಾ ನನ್ನ ಸ್ನೇಹಿತರೂ ಯಾರೂ ಅವರ ತರಗತಿಗಳನ್ನು ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ. ವಾಸ್ತವವಾಗಿ, ಅವರು ನಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಸಮಯ ತೆಗೆದುಕೊಳ್ಳುತ್ತಾರೆ. ಅವರ ತರಗತಿಗಳಿಗೆ ಹಾಜರಾತಿ ಸಾಮಾನ್ಯವಾಗಿ ಶೇಕಡಾ 90 ರಷ್ಟಿರುತ್ತದೆ ಎಂದು ಅವರ ವಿದ್ಯಾರ್ಥಿಗಳಲ್ಲೊಬ್ಬರಾದ ಬುದ್ಧಾದೆಬ್‌ ಮೈತಿ ಹೇಳುತ್ತಾರೆ.


ಸಾಮಾನ್ಯವಾಗಿ ಇವರ ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆಯು ಹೆಚ್ಚಿರುತ್ತದೆ.

"ವಿದ್ಯಾರ್ಥಿಗಳು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಲೇ ಇರುತ್ತಾರೆ, ಅವರು ಯಾವಾಗಲೂ ಬಹಳ ಬೆಂಬಲ ನೀಡುತ್ತಾರೆ. ಅವರು ನನ್ನ ವಿಷಯದಲ್ಲಿ ಉತ್ತಮ ಅಂಕಗಳನ್ನು ತೆಗೆಯಲು ಹೆಚ್ಚು ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ," ಎಂದು ಖುಷಿಯಿಂದ ಹೇಳುತ್ತಾರೆ ಪಾತಿ, ವರದಿ ಬ್ಯುಸಿನೆಸ್‌ಇನ್ಸೈಡರ್‌.