ಬಸ್ ಕಂಡಕ್ಟರ್ ಈಗ ಪಿ.ಎಚ್.ಡಿ ಪದವೀಧರ

ಕಲಿಯಬೇಕೆಂಬ ಛಲ ಮತ್ತು ವಿಶ್ವಾಸವನ್ನು ಹೊಂದಿದ್ದರೆ ಅದಕ್ಕೆ ವಯಸ್ಸು ಹಾಗೂ ಮಾಡುತ್ತಿರುವ ಕೆಲಸ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಮೈಸೂರು ಜಿಲ್ಲೆಯಲ್ಲಿ ಬಸ್ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿರುವ ಎಚ್.ಎಂ. ಮೋಹನ್ ಸಾಕ್ಷಿಯಾಗಿದ್ದಾರೆ. ಕೆಲಸ ಮಾಡುತ್ತಲೇ ಪಿ.ಎಚ್.ಡಿ ಪದವಿಯನ್ನು ಪಡೆದು ಎಲ್ಲರಿಗೂ ಮಾದರಿಯಾಗಿದ್ದಾರೆ.

24th Oct 2019
  • +0
Share on
close
  • +0
Share on
close
Share on
close

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಹಾರೋಹಳ್ಳಿಯವರಾದ ಇವರು ಮೂಲತಃ ಕೃಷಿಕ ಕುಟುಂಬದವರಾಗಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಓದಬೇಕೆಂಬುದು ಅವರ ಕನಸಾಗಿತ್ತು. ಇದಕ್ಕೆ ಅವರ ತಂದೆಯವರಾದ ಕೆ.ಎಸ್.ಮುಕುಂದರವರ ಬೆಂಬಲ ಕೂಡ ಇತ್ತು. ಆದರೆ ಅನೇಕ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ.


ಮೊದಲಿನಿಂದಲೂ ಓದಬೇಕೆಂಬ ಹಂಬಲವನ್ನು ಹೊಂದಿದ್ದ ಇವರು, ಮನೆಯ ಸ್ಥಿತಿ-ಗತಿಯಿಂದ ಸರಿಯಾಗಿ ಓದಲು ಸಾಧ್ಯವಾಗಿರಲಿಲ್ಲ. ಮನೆಯ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸಲು ಪದವಿ ಮುಗಿದ ತಕ್ಷಣವೇ 2006 ರ ಏಪ್ರಿಲ್‍ನಲ್ಲಿ ಕೆ ಎಸ್‍ ಆರ್ ಟಿ ಸಿ ಮೈಸೂರು ವಿಭಾಗಕ್ಕೆ ಚಾಲಕ/ನಿರ್ವಾಹಕ ಕೆಲಸಕ್ಕೆ ಸೇರಿಕೊಂಡರು. 


q

ಪಿ ಎಚ್‌ ಡಿ ಪದವಿಧರ ಎಚ್‌ ಎಂ ಮೋಹನಯುವರ್ ಸ್ಟೋರಿ ಕನ್ನಡ ದೊಂದಿಗೆ ಮಾತನಾಡಿದ ಮೋಹನ್ ಅವರು,


"ಬಸ್‍ನಲ್ಲಿ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಓದುವುದನ್ನು ನೋಡಿದಾಗ ಬಾಲ್ಯದ ಆಸೆ ಮತ್ತೆ ಚಿಗುರೊಡೆಯಿತು. ‘ನಾನು ಯಾಕೆ ಓದಬಾರದು’ ಎಂಬ ಹಂಬಲ ಹೆಚ್ಚಾಯಿತು. ಆಗ ನಂದು ಕೇವಲ ಬಿ.ಎ ಮಾತ್ರ ಮುಗಿದಿತ್ತು, ಇಂಗ್ಲೀಷ್ ವಿಷಯ ಬ್ಯಾಕ್ ಉಳಿದಿತ್ತು, ಮತ್ತೆ ಎಕ್ಸಾಂ ಕಟ್ಟಿ ಅದನ್ನು ಪಾಸ್ ಮಾಡಿಕೊಂಡೆ. ಆನಂತರ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(ಕೆಎಸ್‍ಓಯು) ದಲ್ಲಿ ಇತಿಹಾಸ ವಿಷಯದಲ್ಲಿ ಎಂ.ಎ ಮಾಡಿದೆ. ಅದು ಮುಗಿದಾದ ಮೇಲೆ ಮುಂದೇನೂ ಮಾಡಬೇಕೆಂದು ಯೋಚಿಸುತ್ತಿರುವಾಗ ಅದೇ ಸಮಯಕ್ಕೆ ಮೈಸೂರು ವಿವಿಯಿಂದ ಪಿ.ಎಚ್.ಡಿ ಪ್ರವೇಶ ಪರೀಕ್ಷೆ ಬರೆಯಲು ಅಧಿಸೂಚನೆ ಬಂತು. ಎರಡನೇ ಶ್ರೇಣಿಯೊಂದಿಗೆ ಪಿಎಚ್‍ಡಿ ಅರ್ಹತಾ ಪರೀಕ್ಷೆಯಲ್ಲಿ ಪಾಸ್ ಆದೆ. ಆಗ ಬಾಲಗಂಗಾಧರ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದ ರಾಮಣ್ಣ ಸರ್ ಅವರು ನನಗೆ ತುಂಬಾ ಸಹಾಯ ಮಾಡಿ ಮಾರ್ಗದರ್ಶನ ಮಾಡಿದರು," ಎಂದರು.


ಸಾಮಾನ್ಯವಾಗಿ ನನ್ನ ಕೆಲಸದ ವೇಳೆಯು ಸಾಮಾನ್ಯವಾಗಿ ಬೆಳಿಗ್ಗೆ 5.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಅಥವಾ ಮಧ್ಯಾಹ್ನ 2ರಿಂದ ರಾತ್ರಿ 10 ಗಂಟೆಯವರೆಗೆ ಶಿಫ್ಟ್ ಪ್ರಕಾರವಾಗಿ ಕೆಲಸ ಇರುತ್ತಿತ್ತು ಇದರಿಂದ ಓದಲು ಅನುಕೂಲವಾಗುತ್ತಿತ್ತು. ಕೆಲಸ ಸಮಯ ಹೊರತುಪಡಿಸಿ ಮಿಕ್ಕ ಸಮಯವನ್ನು ಗ್ರಂಥಾಲಯದಲ್ಲಿ, ಅಧ್ಯಯನ ಕೇಂದ್ರಗಳಲ್ಲಿ ಕಳೆದು ನಿತ್ಯ ಆರು ತಾಸು ಓದುತ್ತಿದ್ದೆ ಎನ್ನುತ್ತಾರೆ.


“ಕೆಲಸದೊಂದಿಗೆ ಪಿ.ಎಚ್.ಡಿ ಅಧ್ಯಯನ ಮಾಡುವುದು ಕಷ್ಟವಾಗುತ್ತಿತ್ತು ಆದರೂ ಎರಡನ್ನು ಒಟ್ಟಿಗೆ ನಿಭಾಯಿಸಿದೆ. ಆಗ ಕೆ ಎಸ್‍ ಆರ್ ಟಿ ಸಿ ಯಲ್ಲಿ ನನ್ನೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳು ತುಂಬಾ ಸಹಾಯ ಮಾಡಿದರು ಅವರಿಗೆಲ್ಲ ನಾನು ಆಭಾರಿ” ಎಂದಿದ್ದಾರೆ.


2016 ರಲ್ಲಿ ಪ್ರೊ. ಎನ್.ಸರಸ್ವತಿ ಅವರ ಮಾರ್ಗದರ್ಶನದಲ್ಲಿ “ಹೊಯ್ಸಳ ರಾಜ ಸಂತತಿಯ ಅವನತಿಯ ಒಂದು ಅಧ್ಯಯನ” ಎಂಬ ವಿಷಯದ ಕುರಿತಾದ ಪ್ರಬಂಧಕ್ಕೆ ಪಿಎಚ್‍ಡಿ ಪದವಿ ಲಭಿಸಿದೆ. ಇದರ ನಡುವೆಯೇ ಕೆ-ಸೆಟ್ ಪರೀಕ್ಷೆ ಕೂಡ ಪಾಸ್ ಆಗಿದ್ದು, ನೆಟ್ ಪರೀಕ್ಷೆಗಾಗಿ ಈಗ ತಯಾರಿ ನಡೆಸುತ್ತಿದ್ದಾರೆ. ಜೊತೆಗೆ ದೂರಶಿಕ್ಷಣದ ಮೂಲಕ ಎಂ.ಎ ಕನ್ನಡ ಹಾಗೂ ಮಾನವ ಸಂಪನ್ಮೂಲ ನಿರ್ವಹಣೆ ವಿಷಯದಲ್ಲಿ ಪಿಜಿ ಡಿಪ್ಲೊಮಾ ಮಾಡುತ್ತಿದ್ದಾರೆ. ಅಲ್ಲದೇ ಅನೇಕ ಅಂತರಾಷ್ಟ್ರೀ ಜರ್ನಲ್‍ಗಳಲ್ಲಿ ಲೇಖನಗಳನ್ನು ಬರೆದಿದ್ದಾರೆ. ಪ್ರಕಟವಾಗಿರುವ ಲೇಖನಗಳನ್ನೆಲ್ಲ ಸೇರಿಸಿ ಪುಸ್ತಕ ಮಾಡುವ ಆಸೆಯನ್ನು ಹೊಂದಿದ್ದಾರೆ. 


ವಿದ್ಯೆ ಬದುಕಿಗೆ ಆಧಾರವಾಗುತ್ತದೆ. ವಿದ್ಯೆಯಿಂದ ಎಲ್ಲವನ್ನೂ ಗಳಿಸಬಹುದು. ಕಲಿಯುವ ಹುಮ್ಮಸ್ಸಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂದು ತೋರಿಸಿದ ಇವರಿಗೆ ಉಪನ್ಯಾಸಕನಾಗುವ ಆಸೆಯಿದೆ ಎನ್ನುತ್ತಾರೆ.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, kannada.ys@yourstory.com ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.

  • +0
Share on
close
  • +0
Share on
close
Share on
close
Report an issue
Authors

Related Tags

Our Partner Events

Hustle across India