ದಸರಾದಲ್ಲಿ ನೀವು ಮಿಸ್ ಮಾಡಲೇಬಾರದ ಸಂಗತಿಗಳು

ವಿಶ್ವವಿಖ್ಯಾತ ಮೈಸೂರು ದಸರಾ ಕಳೆಕಟ್ಟುತ್ತಿದ್ದು, ಇದಕ್ಕಾಗಿ ಸಾಂಸ್ಕೃತಿಕ ನಗರಿ ನವವಧುವಿನಂತೆ ಸಜ್ಜುಗೊಳುತ್ತಿದೆ. ಪ್ರತಿ ರಸ್ತೆ, ಮರ, ಪಾರಂಪರಿಕ ಕಟ್ಟಡಗಳಿಗೆ ಹೊಸ ಮೆರಗು ಮೂಡಿದ್ದು, ಪ್ರವಾಸಿಗರ ಆಕರ್ಷಣೀಯ ಕೇಂದ್ರವಾದ ವಸ್ತುಪ್ರದರ್ಶನ ಮಳಿಗೆ, ಫಲಪುಷ್ಪ ಪ್ರದರ್ಶನಕ್ಕೂ ಎಲ್ಲ ರೀತಿಯ ಸಿದ್ದತೆ ನಡೆಯುತ್ತಿದೆ.

ದಸರಾದಲ್ಲಿ ನೀವು ಮಿಸ್ ಮಾಡಲೇಬಾರದ ಸಂಗತಿಗಳು

Sunday September 29, 2019,

3 min Read

ಎಲ್ಲೆಲ್ಲಿಯೂ ಹಬ್ಬದ ತಯಾರಿ, ಹೆಂಗಳೆಯರಿಗಂತೂ ನವರಾತ್ರಿ ಸಂಭ್ರಮವೆ ಸರಿ. ದಸರಾಗೆ ಪ್ರಖ್ಯಾತವಾದ ಮೈಸೂರು ಅಕ್ಷರಶಃ ಸ್ವರ್ಗದಂತೆ ಕಂಗೊಳಿಸುತ್ತಿದೆ. ಎಲ್ಲೆಲ್ಲಿಯೂ ಲೈಟು, ಹಾಡು, ಕುಣಿತ, ಹಬ್ಬದ ತಯಾರಿ ದಸರಾ ನೋಡಬೇಕು ಅಂದ್ರೆ‌ ಮೈಸೂರು ಬರಲೇಬೇಕು ಅನ್ನೊ ಹಾಗೆ ಆಗುತ್ತೆ. ಹಾಗಾದ್ರೆ ದಸರಾದಲ್ಲಿ ನೀವು ಮಿಸ್ ಮಾಡಲೇಬಾರದಂತ ಕೆಲವು ಸಂಗತಿಗಳ ಬಗ್ಗೆ ತಿಳಿದುಕೊಳ್ಳಿ.

1) ಮೈಸೂರು ತುಂಬೆಲ್ಲ ಆವರಿಸಿದ ದೀಪಾಲಂಕಾರ

ನಾವು ನೀವೆಲ್ಲರೂ ಮೈಸೂರು ಅನ್ನು ಅರಮನೆ ನಗರಿ, ಮಲ್ಲಿಗೆ ನಗರಿ ಅಂತ ಕರೀತಿವಿ. ಆದ್ರೆ ದಸರಾ ಹಬ್ಬ ಬಂದ್ರೆ ಸಾಕು ಮೈಸೂರು ಚಿನ್ನದ ನಗರಿಯಾಗುತ್ತದೆ. ಮೈಸೂರು ನಗರದ ತುಂಬೆಲ್ಲಾ ಎಲ್ಲೆಲ್ಲಿಯೂ ದೀಪಗಳದೆ ನರ್ತನ. ಮೈಸೂರಿನ ಪ್ರಮುಖ ಬೀದಿಗಳಾದ ಅರಮನೆ ರಸ್ತೆ, ದೇವರಾಜ್ ಅರಸು ರಸ್ತೆ, ಬನ್ನಿಮಂಟಪ, ರಾಮಸ್ವಾಮಿ ಸರ್ಕಲ್, ಯೂನಿವರ್ಸಿಟಿ ರಸ್ತೆ, ಸಯ್ಯಾಜಿ ರಾವ್ ರಸ್ತೆ ಹೀಗೆ ಎಲ್ಲೆಡೆ ಸಂಜೆಯಾದಂತೆ ಬಣ್ಣ ಬಣ್ಣದ ದೀಪಗಳು ನಿಮ್ಮನ್ನು ಸ್ವಾಗತಿಸುತ್ತವೆ. ಮಿಸ್ ಮಾಡದೆ ಮೈಸೂರಿನ ಬೀದಿಗಳಲ್ಲಿ ಒಂದು ರೌಂಡ್ ಹಾಕಿ. ಒಂದು ಕ್ಷಣ ನಿಮಗೆ ವಾವ್! ಅನಿಸದೆ ಇರಲಾರದು.

2) ವಸ್ತು ಪ್ರದರ್ಶನ ಮೇಳ

ನಿಮಗೆ ಒಂದೇ ಕಡೆ ಆಟ, ಮನೋರಂಜನೆ, ಊಟ, ಶಾಪಿಂಗ್ ಎಲ್ಲಾ ಒಂದೇ ಕಡೆ ಸಿಗಬೇಕೆಂದರೆ ನೀವು ವಸ್ತು ಪ್ರದರ್ಶನ ಮೇಳಕ್ಕೆ ಹೋಗಲೇಬೇಕು, ವಿವಿಧ ಆಟಗಳು, ತರೇವಹಾರಿ ತಿಂಡಿಗಳು, ಡಿಸ್ಕೌಂಟ್ ಅಲ್ಲಿ ಬಟ್ಟೆಗಳು ಒಂದೇ ಎರಡೇ? ಎಕ್ಸಿಬಿಷನ್ ಅನ್ನು ನಿಮ್ಮ ಲಿಸ್ಟ್ ಅಲ್ಲಿ ಸೇರಿಸಿಕೊಳ್ಳಿ.

3) ಆಹಾರ ಮೇಳ

ಮೈಸೂರು ದಸರಾದ ಮತ್ತೊಂದು ವಿಶೇಷತೆ ಅಂದರೆ ಆಹಾರ ಮೇಳ. ಒಂದೆಡೆ ಎಲ್ಲ ಬಗೆಯ ತರೇಹವಾರಿ ತಿಂಡಿಗಳು ಸಿಗುವುದು. ಸಸ್ಯಾಹಾರಿ, ಮಾಂಸಹಾರಿ ಪ್ರಿಯರಿಗೂ ಇದು ಇಷ್ಟವಾಗುತ್ತದೆ. ಜೊತೆಗೆ ಈ ಬಾರಿ ವಿದೇಶಿಯರೊಬ್ಬರು ಮಳಿಗೆ ಹಾಕುತ್ತಿರುವುದು ವಿಶೇಷ. ನೀವು ಒಂದೇ ಕಡೆ ಇಡೀ ಕರ್ನಾಟಕದ ತಿಂಡಿ, ತಿನಿಸುಗಳನ್ನು ಸವಿಯಬಹುದು. ಮೈಸೂರಿನ ಆಹಾರದ ರುಚಿ ನೋಡಬಹುದು.

4) ಸಿನಿಮಾ ಪ್ರಿಯರಿಗೆ ಚಲನ ಚಿತ್ರೋತ್ಸವ

ಸಿನಿಮಾ ಅನ್ನು ಇಷ್ಟ ಪಡೋರಿಗೆ ದಸರಾದ ಭಾಗವಾಗಿ ದಸರಾ ಫಿಲ್ಮ್ ಫೆಸ್ಟಿವಲ್ ಕೂಡ ಇರುತ್ತೆ. ಕನ್ನಡ, ಪನೋರಮಾ ಹಾಗೂ ಅಪರೂಪವಾಗಿ ಫೆಸ್ಟಿವಲ್ ನಲ್ಲಿ ಮಾತ್ರ ದೊರೆಯುವ ಜಗತ್ತಿನ ಸಿನಿಮಾಗಳನ್ನೆಲ್ಲ ಐದು ದಿನಗಳ ಕಾಲ ನೀವು ಕಣ್ತುಂಬಿಸಿಕೊಳ್ಳಬಹುದು. ಸಿನಿಮಾ ಪ್ರಿಯರಿಗೆ ಇದೊಂದು ಹಬ್ಬವೇ ಸರಿ.

5) ಸಾಂಸ್ಕೃತಿಕ ಸಂಜೆ

ನಮಗೆ ಇದ್ಯಾವುದು ಬೇಡ ನಾವು ನೃತ್ಯ, ಸಂಗೀತವನ್ನು ಇಷ್ಟ ಪಡುತ್ತೇವೆ ಎನ್ನುವವರಿಗೆ ಸಾಂಸ್ಕ್ರತಿಕ ಸಂಜೆ ಇದೆ. ಅರಮನೆಯ ಅಂಗಳದಲ್ಲಿ ನೃತ್ಯ, ಸಂಗೀತ ಕಾರ್ಯಕ್ರಮ ಜರುಗುತ್ತವೆ. ಇಲ್ಲಿ ಸಂಜೆಯ ಕಂಪಲ್ಲಿ ಸಂಗೀತವನ್ನು ಮೆಲುಕು ಹಾಕಬಹುದು.

6) ಟಾಂಗಾ ಸವಾರಿ

ಇಂದೂ ಟಾಂಗಾ ಅಥವಾ ಕುದುರೆ ಸವಾರಿ ಅಪರೂಪವಾಗುತ್ತಿದ್ದು, ಮೈಸೂರಿನಲ್ಲಿ ಇನ್ನೂ ಟಾಂಗಾ ಸವಾರಿ ಚಾಲ್ತಿಯಲ್ಲಿದೆ. ಟಾಂಗಾದಲ್ಲಿ ಕೂತು ಮೈಸೂರಿನ ಹಸಿರು ಸೊಬಗನ್ನು, ದಸರಾದ ಸಂಭ್ರಮವನ್ನು‌ ಕಣ್ಣಾಡಿಸುತ್ತಾ ಊರು ಸುತ್ತುವುದೇ ಒಂದು ಸಂಭ್ರಮದ ಸಂಗತಿ. ದಸರಾದ ಸಮಯದಲ್ಲಿ ಟಾಂಗಾದಲ್ಲಿ ಊರು ಸುತ್ತೊದನ್ನ ನಿಮ್ಮ ಪಟ್ಟಿಯಲ್ಲಿ ಸೇರಿಸಿಕೊಳ್ಳಿ.

7) ಬೊಂಬೆ‌ ಪ್ರದರ್ಶನ

ದಸರಾದ ಮತ್ತೊಂದು ವಿಶೇಷವೆಂದರೆ ಬೊಂಬೆ ಕೂರಿಸುವುದು ಅಥವಾ ಬೊಂಬೆ ಪ್ರದರ್ಶನ. ನವನವೀನ ಬೊಂಬೆಗಳು ಮನೆಯನ್ನು ಶೋಭಿಸಿ, ಮನೆಮಂದಿಯಲ್ಲಿ ಹರ್ಷವನ್ನುಂಟು ಮಾಡುತ್ತವೆ. ಬಣ್ಣ-ಬಣ್ಣದ ಗೊಂಬೆಗಳನ್ನು ನೊಡುವುದೇ ಕಣ್ಣಿಗೆ ಹಬ್ಬ. ಒಂದೊಂದು ಬಗೆಯ ವೈವಿಧ್ಯ ವಿಷಯವನ್ನಿಟ್ಟುಕೊಂಡು ಬೊಂಬೆಯನ್ನು ಕೂರಿಸಲಾಗುತ್ತದೆ. ಇಲ್ಲಿ ಪುರಾಣ, ದೇವಲೋಕವೇ ಧರೆಗಿಳಿದಿರುತ್ತದೆ.

8) ಮಾರ್ಕೆಟ್ ಟೂರ್

ಮೈಸೂರು ಬಂದಾಗ ಮಿಸ್ ಮಾಡದೆ ಮಾರ್ಕೆಟ್ ಅಲ್ಲಿ ಒಂದು ಟೂರ್ ಹಾಕಿ. ಮೊದಲ ಬಾರಿ ಕರ್ನಾಟಕದಲ್ಲಿ ಯೋಜನಾಬದ್ಧವಾಗಿ ದೇವರಾಜ ಮಾರುಕಟ್ಟೆ ರಚಿತವಾಗಿದೆ. ಒಂದೇ ಕಡೆ ಎಲ್ಲ ವಸ್ತುಗಳ ಸಿಗುತ್ತವೆ. ಹಬ್ಬದ ಸಮಯದಲ್ಲಿ ಮಾರುಕಟ್ಟೆ ತನ್ನ ರಂಗಿನ ಮೂಲಕ ಇನ್ನಷ್ಟೂ ಕಳೆಗಟ್ಟುತ್ತದೆ.

9) ಊರು ತುಂಬಾ ಸೈಕಲ್ ನಲ್ಲಿ ಸುತ್ತಾಡಿ

ಮೈಸೂರು ಅಲ್ಲಿ 'ಟ್ರಿನ್ ಟ್ರಿನ್' ಎಂಬ ಸೈಕಲ್ ಯೋಜನೆ ಇದ್ದು, ದಸರಾಗೆಂದು ಆಗಮಿಸುವ ಪ್ರವಾಸಿಗರಿಗೆ ಇದಂತೂ ಉಪಯುಕ್ತ ಯೋಜನೆ. ಸೈಕಲ್ ಅಲ್ಲಿ ಸುತ್ತಾಡ್ತಾ ಮೈಸೂರಿನ ಅಗಲವಾದ ಬೀದಿಗಳಲ್ಲಿ, ಅಕ್ಕ-ಪಕ್ಕದ ಮರಗಳ ಹಸಿರನ್ನು ನೋಡುತ್ತಾ, ಊರಿನ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಿ. ಇದು ಸುಲಭವಾಗಿ ಲಭ್ಯವಾಗುತ್ತದೆ.

10) ಓಪನ್ ಬಸ್ ಟೂರ್:

ಹಬ್ಬದ ಪ್ರಯುಕ್ತ ರಾಜ್ಯ ಪ್ರವಾಸೋದ್ಯಮ ಇಲಾಖೆಯು ಓಪನ್ ಬಸ್ ಟೂರ್ ಅನ್ನು ಆಯೋಜನೆ ಮಾಡಿದ್ದು, ಓಪನ್ ಬಸ್ ಮೂಲಕ ಮೈಸೂರಿನ ಪ್ರಮುಖ ಸ್ಥಳಗಳನ್ನೆಲ್ಲಾ ಆರಾಮಾಗಿ ನೋಡಬಹುದಾಗಿದೆ‌‌. ಈ ಓಪನ್ ಬಸ್ ಇಡೀ ರಾಜ್ಯದಲ್ಲಿ ಒಂದೇ ಇರುವುದು ದಸರಾದ ಪ್ರಯುಕ್ತ ಮೈಸೂರಿಗೆ ಆಗಮಿಸಿತ್ತಿದೆ. ಯಾವುದೇ ಕಟ್ಟಳೆಯಿಲ್ಲದೆ ಆರಾಮಾಗಿ ಬಸ್ ಅಲ್ಲಿ ಊರು ಸುತ್ತಿ.

11) ಯುವ ದಸರಾ

ಯುವಜನತೆಯನ್ನು ಆಕರ್ಷಿಸಲು ಯುವ ದಸರಾ ಕಾರ್ಯಕ್ರಮ ನಡೆಯುತ್ತಿದ್ದು, ಸೆಲೆಬ್ರೆಟಿಗಳ ಇಲ್ಲಿ ಹಾಡು, ಕುಣಿತ ಯುವದಸರಾದ ಪ್ರಮುಖ ಆಕರ್ಷಣೆಯಾಗಿದೆ.

12) ಜಂಬೂಸವಾರಿ

ಇಡೀ ದಸರಾದ ಆಕರ್ಷಣೆ ಅಡಗಿರುವುದೇ ಈ ಜಂಬೂಸವಾರಿಯಲ್ಲಿ. ಚಾಮುಂಡೇಶ್ವರಿ ವಿಗ್ರಹವನ್ನು ಚಿನ್ನದ ಅಂಬಾರಿಯಲ್ಲಿ ಇರಿಸಿ, ಅದನ್ನು ಹೊತ್ತು ಆನೆಯು ಅರಮನೆಯಿದ ಬನ್ನಿ ಮಂಟಪದವರೆಗೂ ಹೆಜ್ಜೆ ಹಾಕುತ್ತದೆ. ಇದನ್ನು ನೋಡಲು ಲಕ್ಷಾಂತರ ಜನರು ಮೈಸೂರಿಗೆ ಆಗಮಿಸುತ್ತಾರೆ. ಜಂಬೂಸವಾರಿಯ ಮೆರವಣಿಗೆಯಲ್ಲಿ ಅನೇಕ ಸ್ತಬ್ಧ ಚಿತ್ರಗಳು ಹಾಗೂ ಕಲಾವಿದರ ಮೇಳ ಇದಕ್ಕೆ ಸಾಥ್ ನೀಡುತ್ತವೆ.

13) ಪಂಜಿನ್ ಕವಾಯತ್

ವಿಜಯದಶಮಿಯಂದು ನಡೆಯುವ ಪಂಜಿನ ಕವಾಯತ್ ದಸರಾದ ಪ್ರಮುಖ ಆಕರ್ಷಣೆಗಳಲ್ಲೊಂದು. ಇಲ್ಲಿ ಪರಿಣಿತರು ಪಂಜಿನ ಕವಾಯತ್ ನಡೆಸುವುದು, ಸಾಹಸ ಕ್ರೀಡೆಗಳನ್ನು ಪ್ರಸ್ತುತ ಪಡಿಸುತ್ತಾರೆ‌. ಇದು ನೋಡುಗರಲ್ಲಿ ರೋಮಾಂಚವನ್ನುಂಟು ಮಾಡುತ್ತದೆ.


ದಸರಾ ಅಂದ್ರೆ ಮೈಸೂರು. ‌ಮೈಸೂರು ಅಂದ್ರೆ ದಸರಾ ಎನ್ನುವಂತೆ ಆಗಿದೆ. ದಸರಾ‌‌ ಸಂದರ್ಭದಲ್ಲಿ ನೀವೆನಾದ್ರೂ ಮೈಸೂರಿಗೆ ಬಂದ್ರೆ‌‌ ಇವುಗಳನ್ನು ಮಿಸ್ ಮಾಡಲೇಬೇಡಿ.