ಈ ಸರ್ಚ್ ಎಂಜಿನ್ ನೀವು ಬ್ರೌಸ್ ಮಾಡಿದಾಗಲೆಲ್ಲಾ ಗಿಡಗಳನ್ನು ನೆಡುತ್ತದೆ

ಎಕೋಸಿಯಾ ಎಂಬ ಸರ್ಚ್ ಎಂಜಿನ್ ತನ್ನ ಲಾಭದ 80 ಪ್ರತಿಶತವನ್ನು ಗಿಡ ನೆಡಲು ಮೀಸಲಿಟ್ಟಿದೆ, ಪ್ರತಿ ಬಾರಿ ನೀವು ಬ್ರೌಸ್‌ ಮಾಡಿದಾಗ ಕಂಪನಿ ಗಿಡಗಳನ್ನು ನೆಡುತ್ತದೆ.

ಈ ಸರ್ಚ್ ಎಂಜಿನ್ ನೀವು ಬ್ರೌಸ್ ಮಾಡಿದಾಗಲೆಲ್ಲಾ ಗಿಡಗಳನ್ನು ನೆಡುತ್ತದೆ

Thursday November 21, 2019,

2 min Read

ಹಾಗೇ ಕಲ್ಪಿಸಿಕೊಳ್ಳಿ, ನೀವು ಇಲ್ಲಿ ಮೊಬೈಲ್, ಕಂಪ್ಯೂಟರ್‌ನಲ್ಲಿ ಅಂತರ್ಜಾಲದಲ್ಲಿ ಏನಾದರು ಹುಡುಕುತ್ತಿದ್ದೀರಿ, ಇತ್ತ ನೀವು ಹುಡುಕುತ್ತಿರುವಾಗ, ಅತ್ತ ಯಾರಾದರೂ, ನೀವು ಹುಡುಕಿದ್ದಕ್ಕೆ ಗಿಡ ನೆಟ್ಟರೆ ಹೇಗಾದೀತು? ಭಾರತವೊಂದರಲ್ಲೇ ಇಂಟರ್ನೆಟ್ ಬಳಕೆದಾರರು 525 ಮಿಲಿಯನ್‌ಗೂ ಹೆಚ್ಚಿದ್ದಾರೆ, ಇಡಿಯ ಪ್ರಪಂಚದಲ್ಲಿ ಎಷ್ಟಿರಬಹುದು? ಅಷ್ಟೂ ಜನ 'ಎಕೊಸಿಯಾ' ಎಂಬ ಸರ್ಚ್‌ ಎಂಜಿನ್‌‌ನಲ್ಲಿ ಹುಡುಕಾಟ ನಡೆಸಿದರೆ ಅಷ್ಟೂ ಜನರ ಪರವಾಗಿ ಆ ಕಂಪನಿ ಗಿಡ ನೆಡುತ್ತಿದೆ.


ಎಕೋಸಿಯಾ 2009 ರಲ್ಲಿ ಬರ್ಲಿನ್ ಮೂಲದ ಉದ್ಯಮಿ ಕ್ರಿಶ್ಚಿಯನ್ ಕ್ರಾಲ್ ಸ್ಥಾಪಿಸಿದ ಸರ್ಚ್ ಎಂಜಿನ್ ಕಂಪನಿ. ಬಿಸಿನೆಸ್ ಅಡ್ಮಿನಿಸ್ಟ್ರೇಶನ್‌ನಲ್ಲಿ ಪದವಿ ಪಡೆದ ನಂತರ ದಕ್ಷಿಣ ಅಮೆರಿಕಾ ಮತ್ತು ನೇಪಾಳದಲ್ಲಿ ಪ್ರಯಾಣಿಸಿದ ಕ್ರಾಲ್‌ಗೆ, ಜಾಗತಿಕವಾಗಿ ಬಡತನ ಮತ್ತು ಅರಣ್ಯನಾಶ ಎಷ್ಟು ತೀವ್ರವಾಗಿದೆ ಎಂಬುದನ್ನು ಕಂಡು ಆಘಾತವಾಯಿತು, ಮತ್ತು ಅದಕ್ಕೆ, ಗಿಡಮರಗಳನ್ನ ಬೆಳೆಸುವುದೆ ಬಹಳ ಸರಳ ಪರಿಹಾರವೆಂದು ಅರಿತುಕೊಂಡರು.


"ನೀವು ಜನರಿಗೆ ಸಾಕಷ್ಟು ಆದಾಯ ಬರುವಂತೆ ಮಾಡಬಹುದು ಮತ್ತು ಮರಗಳನ್ನು ನೆಡುವುದರ ಮೂಲಕ ನೀವು ನಿಜವಾಗಿಯೂ ಅಮೂಲ್ಯವಾದ ಪರಿಸರ ವ್ಯವಸ್ಥೆಗಳನ್ನು ರಚಿಸಬಹುದು, ಅದಕ್ಕಾಗಿಯೇ ನಾನು ಮರಗಳನ್ನು ನೆಡಲು ಬಯಸುತ್ತೇನೆ ಎಂದು ಭಾವಿಸಿದೆವು, ಆದರೆ ಹಣವನ್ನು ಹೇಗೆ ಪಡೆಯುವುದು ಎಂದು ನನಗೆ ತಿಳಿದಿರಲಿಲ್ಲ" ಎಂದು ಕ್ರೋಲ್ ವಿವರಿಸಿದರು.


ಪ್ರಸ್ತುತ 7 ದಶಲಕ್ಷಕ್ಕೂ ಹೆಚ್ಚು ಜನರು ಎಕೋಸಿಯಾವನ್ನು ತಮ್ಮ ಸರ್ಚ್ ಇಂಜಿನ್ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ, ಮತ್ತು ಆ 7 ಮಿಲಿಯನ್ ಜನರು 54,000,000 ಮರಗಳನ್ನು ನೆಡಲು ಸಹಾಯ ಮಾಡಿದ್ದಾರೆ. ಈ ಮರಗಳು ಪೆರುವಿನ ಸ್ಯಾನ್ ಮಾರ್ಟಿನ್ ಪ್ರದೇಶವನ್ನು ಮರು ಅರಣ್ಯಗೊಳಿಸುವುದರಿಂದ ಹಿಡಿದು ಕೀನ್ಯಾದ ಗ್ರೀನ್ ಬೆಲ್ಟ್ ಆಂದೋಲನದಲ್ಲಿ ಪಾಲ್ಗೊಳ್ಳುವವರೆಗೆ, ಪರಿಸರ ವ್ಯವಸ್ಥೆಯನ್ನು ಪುನಃಸ್ಥಾಪಿಸಲು ಮತ್ತು ಜೀವವೈವಿಧ್ಯತೆಯನ್ನು ಸಂರಕ್ಷಿಸಲು ಸ್ಥಳೀಯ ಮಹಿಳೆಯರಿಗೆ ಅಧಿಕಾರ ನೀಡುತ್ತದೆ.


ಯಾವುದೇ ಲಾಭವು ನೇರವಾಗಿ ಹೂಡಿಕೆದಾರರಿಗೆ ಹೋಗುವ ಬದಲು, ಎಕೋಸಿಯಾದ 80% ಲಾಭವು ನೇರವಾಗಿ ಮರಗಳನ್ನು ನೆಡುವ ಕಾರ್ಯಕ್ಕೆ ಹೋಗುತ್ತದೆ. ಜಾಹೀರಾತು ಆದಾಯದ ಮೂಲಕ ಲಾಭವನ್ನು ಗಳಿಸಲಾಗುತ್ತದೆ, ಆದ್ದರಿಂದ ನೀವು ಹೆಚ್ಚು ಹುಡುಕಿದಾಗ ಹೆಚ್ಚು ಮರಗಳನ್ನು ನೆಡಲಾಗುತ್ತದೆ. ವಾಸ್ತವವಾಗಿ, ಇಕೋಸಿಯಾ ಪ್ರಕಾರ ಮರವನ್ನು ನೆಡಲು ಸರಿಸುಮಾರು 45 ಬಾರಿ ಹುಡುಕಬೇಕಾಗುತ್ತವೆ. ಇಕೋಸಿಯಾ ಸಾಮಾನ್ಯವಾಗಿ ದಿನಕ್ಕೆ 25,000 ಇನ್ಸ್ಟಾಲ್‌ಗಳನ್ನು ಗಳಿಸುತ್ತದೆ, ಆದರೆ ಆಗಸ್ಟ್ 22 ರಂದು ಅದು 250,000ಕ್ಕಿಂತ ಹೆಚ್ಚಾಗಿದೆ ಎಂದು ಕಂಪನಿ ತಿಳಿಸಿದೆ.