ಟಿಕ್‌ಟಾಕ್‌ ಸುತ್ತಲೂ ಹರಡುತ್ತಿದೆ ನಕರಾತ್ಮಕ ಭಾವನೆ

ಟಿಕ್‌ಟಾಕ್‌ ಮತ್ತೊಮ್ಮೆ ವಿವಾದ ಹುಟ್ಟುಹಾಕಿದ್ದು, ಆ್ಯಪ್ ವಿರುದ್ಧ ಜನರಲ್ಲಿ ನಕಾರಾತ್ಮಕ ಭಾವನೆ ಗಾಢವಾಗುತ್ತಿದೆ.

ಟಿಕ್‌ಟಾಕ್‌ ಸುತ್ತಲೂ ಹರಡುತ್ತಿದೆ ನಕರಾತ್ಮಕ ಭಾವನೆ

Tuesday May 26, 2020,

2 min Read

ಕಳೆದ ಎರಡು ತಿಂಗಳಲ್ಲಿ ಟಿಕ್‌ಟಾಕ್‌ ಆ್ಯಪ್ ಡೌನ್‌ಲೋಡ್‌ ಮಾಡಿಕೊಳ್ಳುವವರ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡಿದ್ದು, ಹಲವರು ಅದರಲ್ಲಿರುವ ವಿಡಿಯೋಗಳನ್ನು ಆಕ್ಷೇಪಾರ್ಹವೆಂದು ದೂರಿದ್ದಾರೆ. ಈ ವರ್ಷದ ಪ್ರಾರಂಭದಲ್ಲಿ ಆ್ಯಪ್ 2 ಬಿಲಿಯನ್‌ ಡೌನ್‌ಲೋಡ್‌ ಗಳ ಸಂಖ್ಯೆಯನ್ನು ದಾಟಿತ್ತು, ಆದರೆ ಅದರ ವಿರುದ್ಧದ ಟೀಕೆ ಆರೋಪಗಳಿಗೆ ಕೊನೆಯಿಲ್ಲದಂತಾಗಿದೆ.


ಬೈಟ್‌ಡ್ಯಾನ್ಸ್‌ ಮಾಲೀಕತ್ವದ ಈ ಆ್ಯಪ್ ನ ರೇಟಿಂಗ್‌ ಏಪ್ರಿಲ್‌ನಲ್ಲಿ ಶೇ. 34 ರಷ್ಟು ಮತ್ತು ಮೇ ನಲ್ಲಿ ಶೇ. 28 ರಷ್ಟು ಕುಸಿದಿದೆ ಎಂದು ವರದಿಗಳು ತಿಳಿಸಿವೆ. ಟಿಕ್‌ಟಾಕ್‌ ನ ಬಹುದೊಡ್ಡ ಮಾರುಕಟ್ಟೆಯಾದ ಭಾರತದಲ್ಲಿ ಇದರ ಪರಿಣಾಮ ತೀವ್ರವಾಗಿದ್ದು, ಟಿಕ್‌ಟಾಕ್‌ ವಿರುದ್ಧದ ಕೂಗುಗಳು ಸಾಮಾಜಿಕ ಮಾಧ್ಯಮದಲ್ಲಿ ಕೇಳಿ ಬರುತ್ತಿವೆ.


ಸೆನ್ಸರ್‌ ಟವರ್‌ ಭಾರತದಲ್ಲಿ ಸುಮಾರು ಶೇ. 90 ರಷ್ಟು ಬಳಕೆದಾರರು ಆ್ಯಪ್ ಬಗ್ಗೆ ನಕಾರಾತ್ಮಕ ಭಾವನೆಯನ್ನು ತಳೆದಿದ್ದಾರೆ ಎಂದು ಸೂಚಿಸುತ್ತದೆ. ಮಾರ್ಚ್‌ ಮತ್ತು ಮೇ ತಿಂಗಳಲ್ಲಿ ಜಾಗತಿಕವಾಗಿ ಟಿಕ್‌ಟಾಕ್‌ನ ಡೌನ್‌ಲೋಡ್‌ ಸಂಖ್ಯೆಗಳು ಅರ್ದದಷ್ಟು ಕುಸಿದಿರುವುದು, ಆ್ಯಪ್ ಸುತ್ತಲೂ ಹರಡಿರುವ ನಕರಾತ್ಮಕ ಭಾವನೆಗಳು ಸೇರಿ ಕಾಕತಾಳಿಯವೆಂಬಂತಿದೆ.


ಭಾರತದ ಟಿಕ್‌ಟಾಕ್‌ ಬಳಕೆದಾರರ ಭಾವನೆಗಳು (ಮೇ 21 ರ ವರೆಗೆ)


ಕೆಲವು ವಾರಗಳಿಂದ ಭಾರತದಲ್ಲಿ ಆ್ಯಪ್ನ ರೇಟಿಂಗ್‌ ಭಾರಿ ಪ್ರಮಾಣದಲ್ಲಿ ಕುಸಿಯುತ್ತಲಿದೆ.


ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಟಿಕ್‌ಟಾಕ್‌ ರೇಟಿಂಗ್‌ 4.7 ರಿಂದ 1.2 ಕ್ಕೆ ಕೆಲವೆ ದಿನಗಳಲ್ಲಿ ಕುಸಿದಿದೆ. ಗೂಗಲ್‌ ಲಕ್ಷಾಂತರ ಬಳಕೆದಾರರ ರೀವಿವ್‌ ಅಳಿಸಿದ ಮೇಲೆ ರೇಟಿಂಗ್‌ 1.6 ಕ್ಕೆ ಬಂದಿತು. ಪ್ರಸ್ತುತ ಅದರ ರೇಟಿಂಗ್‌ 1.4 ಕ್ಕೆ ಬಂದು ನಿಂತಿದೆ.


ಆಸಿಡ್‌ ದಾಳಿ, ಅತ್ಯಾಚಾರ, ಪ್ರಾಣಿಗಳ ವಿರುದ್ಧ ಹಿಂಸೆಯನ್ನು ಒಳಗೊಂಡಿರುವ ವಿಡಿಯೋಗಳನ್ನು ಆ್ಯಪ್ ಪ್ರಚಾರ ಮಾಡುತ್ತಿರುವುದಕ್ಕಾಗಿ ಬಳಕೆದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಭಾರತದಲ್ಲಿ ಟಿಕ್‌ಟಾಕ್‌ ವಿರುದ್ಧ #ಟಿಕ್‌ಟಾಕ್‌ಬ್ಯಾನ್‌, #ಅನ್‌ಇನ್ಸಟಾಲ್‌ಟಿಕ್‌ಟಾಕ್‌ ಎಂಬ ಹ್ಯಾಶ್‌ಟ್ಯಾಗ್‌ಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿವೆ.


ಕಳೆದ ವಾರ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಟಿಕ್ ಟಾಕ್‌ ಅನ್ನು ನಿಷೇಧಿಸುವಂತೆ ಭಾರತ ಸರ್ಕಾರಕ್ಕೆ ಕರೆ ನೀಡಿದ್ದರು.




“ಟಿಕ್‌ಟಾಕ್‌ ಅನ್ನು ಭಾರತದಲ್ಲಿ ನಿಷೇಧಿಸಿಬೇಕು, ನಾನು ಭಾರತ ಸರ್ಕಾರಕ್ಕೂ ಪತ್ರ ಬರೆಯುತ್ತೇನೆ. ಅದರಲ್ಲಿ ಇಂತಹ ಆಕ್ಷೇಪಾರ್ಹ ವಿಡಿಯೋಗಳಿರುವುದಲ್ಲದೆ, ಇದು ಯುವಜನತೆಯನ್ನು ಕೆಲವು ಫಾಲೋವರ್‌ಗಳನ್ನು ಗಳಿಸಿಕೊಳ್ಳುವುದಕ್ಕಾಗಿ ಕ್ರಿಯಾತ್ಮಕವಲ್ಲದ, ಅನುಪಯುಕ್ತ ಜೀವನಕ್ಕೆ ತಳ್ಳುತ್ತಿದೆ,” ಎಂದು ಶರ್ಮಾ ಅವರು ಟ್ವೀಟ್‌ ಮಾಡಿದ್ದಾರೆ.


ಪ್ಲಾಟ್‌ಫಾರ್ಮ್‌ನಲ್ಲಿ ಆಕ್ಷೇಪಾರ್ಹ ವಿಡಿಯೋವನ್ನು ನಿಗ್ರಹಿಸಲು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಟಿಕ್‌ಟಾಕ್ ಇಂಡಿಯಾ ಯುವರ್‌ಸ್ಟೋರಿಗೆ ತಿಳಿಸಿದೆ. ಇದು ಬಳಕೆದಾರರ ಭಾವನೆಗಳನ್ನು ನೋಯಿಸುವ ವೀಡಿಯೊಗಳನ್ನು ತೆಗೆದುಹಾಕುತ್ತಿರುವುದಲ್ಲದೆ, ಅದರ ಸೇವಾ ನಿಯಮಗಳು ಮತ್ತು ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ಖಾತೆಗಳನ್ನು ಸಹ ಅಮಾನತುಗೊಳಿಸುತ್ತಲಿದೆ.


"ನೀತಿಯ ಪ್ರಕಾರ, ಇತರರ ಸುರಕ್ಷತೆಗೆ ಅಪಾಯವನ್ನುಂಟುಮಾಡುವ, ದೈಹಿಕ ಹಾನಿಯನ್ನು ಉತ್ತೇಜಿಸುವ ಅಥವಾ ಮಹಿಳೆಯರ ಮೇಲಿನ ದೌರ್ಜನ್ಯವನ್ನು ವೈಭವೀಕರಿಸುವ ವಿಡಿಯೋಗಳನ್ನು ನಾವು ಅನುಮತಿಸುವುದಿಲ್ಲ. ನಮ್ಮ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ವಿಡಿಯೋಗಳನ್ನು ನಾವು ತೆಗೆದುಹಾಕಿದ್ದೇವೆ, ಅಷ್ಟೇ ಅಲ್ಲದೆ ಅಂತವರ ಖಾತೆಯನ್ನು ಅಮಾನತುಗೊಳಿಸಿದ್ದೇವೆ," ಎಂದು ಟಿಕ್ ಟಾಕ್ ಇಂಡಿಯಾ ವಕ್ತಾರರು ಯುವರ್‌ ಸ್ಟೋರಿಗೆ ತಿಳಿಸಿದ್ದಾರೆ.