ಪ್ರಾಣವತ್ತೆಯಿಟ್ಟು ಕಾಡು ರಕ್ಷಿಸಲು ಸಜ್ಜಾದ ಜಮುನಾ ತುಡು ಮತ್ತು ಅವರ ವನ ಸುರಕ್ಷ ಸಮಿತಿ

By Team YS Kannada|9th Jan 2020
ಅರಣ್ಯನಾಶದ ವಿರುದ್ಧ ಹೋರಾಡಲು ಗುಂಪೊಂದನ್ನು 38 ವರ್ಷದ ಜಮುನಾ ತುಡು ಅವರು ತಮ್ಮ ಜೀವನದ ಕಳೆದ ಎರಡು ದಶಕಗಳಿಂದ ಕಟ್ಟಿಬೆಳೆಸಿದ್ದಾರೆ.
Clap Icon0 claps
 • +0
  Clap Icon
Share on
close
Clap Icon0 claps
 • +0
  Clap Icon
Share on
close
Share on
close

ಜಾರ್ಖಂಡ್‌ನ ಪುರ್ಬಿ ಸಿಂಗ್‌ಭೂಮ್ ಜಿಲ್ಲೆಯ ಮುತೂರ್‌ಖಾಮ್ ಗ್ರಾಮದ ಬುಡಕಟ್ಟು ಮಹಿಳೆಯರು ತಮ್ಮ ವಾಸಸ್ಥಳವನ್ನು ಸುತ್ತುವರೆದಿರುವ ಸಾಲ್ ಅರಣ್ಯವನ್ನು ಮುತ್ತಿಗೆ ಹಾಕಿದರು. ಅವರ ಗುರಿ ಟಿಂಬರ್ ಮಾಫಿಯಾದಿಂದ ಅರಣ್ಯವನ್ನು ರಕ್ಷಿಸುವುದಾಗಿತ್ತು.


ಜಮುನಾ ತುಡು (ಚಿತ್ರ ಕೃಪೆ: Gaonconnection)


ತಮ್ಮ ಸುರಕ್ಷತೆಗಾಗಿ ಕೇವಲ ನಾಯಿಯೊಂದರ ಜೊತೆಯಲ್ಲಿ, ಈ ದೃಢ ಮನಸ್ಸಿನ ಮಹಿಳೆಯರು ದಟ್ಟ ಕಾಡಿನಲ್ಲಿ ಆಗಾಗ್ಗೆ ಚಾರಣಕ್ಕೆ ಹೊರಡುತ್ತಾರೆ. ಇವರ ಈ ನಿರ್ಧಾರದಿಂದ, 50 ಹೆಕ್ಟೇರ್ ಅರಣ್ಯ ಭೂಮಿಯನ್ನು ಯಶಸ್ವಿಯಾಗಿ ಸಂರಕ್ಷಿಸಲು ಸಾಧ್ಯವಾಯಿತು.


ಸರ್ಕಾರಿ ಪಡೆಗಳು ಮತ್ತು ಎಡಪಂಥೀಯ ಉಗ್ರಗಾಮಿಗಳ ನಡುವಿನ ಯುದ್ಧ ವಲಯವಾಗಿರುವ ಭೂಪ್ರದೇಶದ ಹೃದಯಭಾಗದಲ್ಲಿ ಸಸ್ಯ ಮತ್ತು ಪ್ರಾಣಿಗಳ ಪ್ರಭೇದ ಬಹಳಷ್ಟಿದೆ. ಇವುಗಳ ಸಂರಕ್ಷಣೆಗಾಗಿ ಹೋರಾಡಲು ಗುಂಪೊಂದನ್ನು 38 ವರ್ಷದ ಜಮುನಾ ತುಡು ಅವರು ತಮ್ಮ ಜೀವನದ ಕಳೆದ ಎರಡು ದಶಕಗಳಿಂದ ಕಟ್ಟಿಬೆಳೆಸಿದ್ದಾರೆ.


1998 ರಲ್ಲಿ, ಜಮುನಾ ತನ್ನ ಮದುವೆಯ ನಂತರ, ಗ್ರಾಮಸ್ಥರ ಸಹಭಾಗಿತ್ವವನ್ನು ಅಭಿವೃದ್ಧಿಪಡಿಸುವ ಮೂಲಕ ಅರಣ್ಯವನ್ನು ಸಂರಕ್ಷಿಸುವ ಈ ಸವಾಲನ್ನು ಕೈಗೆತ್ತಿಕೊಂಡರು. ಇಂದು, ಅವರ ವನ ಸುರಕ್ಷ ಸಮಿತಿ (ಅರಣ್ಯ ಸಂರಕ್ಷಣಾ ಗುಂಪು) ಸುಮಾರು 60 ಸಕ್ರಿಯ ಮಹಿಳಾ ಸದಸ್ಯರನ್ನು ಹೊಂದಿದ್ದು, ದಿನಕ್ಕೆ ಮೂರು ಬಾರಿ ಪಾಳಿಯಲ್ಲಿ ಗಸ್ತು ತಿರುಗುತ್ತಾರೆ: ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ, ಮತ್ತು ಕೆಲವೊಮ್ಮೆ ರಾತ್ರಿಯೂ ಕೂಡ. ಮಾಫಿಯಾದವರು ಕಾಡುಗಳಿಗೆ ಬೆಂಕಿ ಹಚ್ಚದಂತೆ ಕಾಳಜಿ ವಹಿಸುತ್ತಾರೆ.


ಜಮುನಾ ಅವರ ಈ ಹೋರಾಟಕ್ಕೆ, ಅವರ ಈ ಸಂರಕ್ಷಣಾ ಪ್ರಯತ್ನಕ್ಕೆ ಭಾರತದ ರಾಷ್ಟ್ರಪತಿಗಳು ಸಹ ಗೌರವಿಸಿದ್ದಾರೆ.


"ನನ್ನ ಮದುವೆಯ ಕೆಲವು ದಿನಗಳ ನಂತರ, ನನ್ನ ಅತ್ತೆ, ಅತ್ತಿಗೆ ಮತ್ತು ಹಳ್ಳಿಯ ಕೆಲವು ಮಹಿಳೆಯರು ನನ್ನನ್ನು ಮರವನ್ನು ಕತ್ತರಿಸಿ ಉರುವಲಾಗಿ ಬಳಕೆಮಾಡಲು ಕಾಡಿಗೆ ಕರೆದೊಯ್ದಾಗ, ನಾವು ಈ ರೀತಿ ಮರಗಳನ್ನು ಕತ್ತರಿಸುವುದರಿಂದ ನಮ್ಮ ಎಲ್ಲಾ ಕಾಡುಗಳು ನಾಶವಾಗುತ್ತವೆ ಎಂಬುವುದು ನನ್ನ ಅರಿವಿಗೆ ಬಂದಿತು ಎಂದು ಜಮುನಾ ಸಂದರ್ಶನವೊಂದರಲ್ಲಿ ಐಎಎನ್‌ಎಸ್‌ಗೆ ಹೇಳಿದ್ದಾರೆ.


ತನ್ನ ಅನ್ವೇಷಣೆಯಲ್ಲಿ, ಕಾನೂನು ಅಥವಾ ಮರಗಳನ್ನು ಕಡಿಯುವುದನ್ನು ನಿಷೇಧಿಸುವ ಬುಡಕಟ್ಟು ಸಂಪ್ರದಾಯವನ್ನು ಮೀರಿ ತಮ್ಮ ಅಮೂಲ್ಯವಾದ ಸಾಲ್ ಮರಗಳನ್ನು ಕಡಿಯುವ ಮಾಫಿಯಾ ವಿರುದ್ಧ ಅವರು ಹೋರಾಡಬೇಕಾಯಿತು.


ಅವರು ಅಧಿಕಾರಿಗಳಿಂದ ಅಲ್ಪ ಸಹಾಯವನ್ನು ಪಡೆದುಕೊಂಡು, ಮಾಫಿಯಾದ ವಿರುದ್ಧ ಹೋರಾಟಕ್ಕೆ ಸಜ್ಜಾದರು. ಅವರು ಹಳ್ಳಿಯ ಕೆಲವು ಮಹಿಳೆಯರೊಂದಿಗೆ ಮಾತನಾಡಿದಾಗ, ಅವರು ಕೈಗೊಂಡ ಕಾರ್ಯದ ಬಗ್ಗೆ ಸಾಕಷ್ಟು ಮಹಿಳೆಯರು ಗಾಬರಿಗೊಂಡು, "ನಾವು ಅದನ್ನು ಮಾಡುವುದಿಲ್ಲ; ಹಳ್ಳಿಯ ಪುರುಷರೊಂದಿಗೆ ಹೋರಾಡಲು ನಾವು ತಯಾರಿಲ್ಲ," ಎಂದಿದ್ದರು.


ಆದರೆ ಹತ್ತನೇ ತರಗತಿಯವರೆಗೆ ಅಧ್ಯಯನ ಮಾಡಿದ ಜಮುನಾ, ತನ್ನನ್ನು ಮತ್ತು ತನ್ನ ಸಮುದಾಯವನ್ನು ಉಳಿಸಿಕೊಳ್ಳಲು ಅಥವಾ ರಕ್ಷಿಸಲು ಯಾವುದೇ ಮರಗಳು ಮತ್ತು ಕಾಡುಗಳಿಲ್ಲದ ಭವಿಷ್ಯದ ಬಗ್ಗೆ ಜನರಿಗೆ ತಿಳಿಸಿದರು. "ಜಂಗಲ್ ನಹಿ ರಹೇಗಾ ತೋಹ್ ಪರ್ಯಾವರನ್ ಕೈಸ್ ಬಚೆಗಾ (ಅರಣ್ಯ ನಾಶವಾದರೆ ಪರಿಸರ ಹೇಗೆ ರಕ್ಷಣೆಯಾಗುತ್ತದೆ)?" ಎಂದು ಅವರು ಕೇಳಿದರು.ಈ ವಿಷಯದ ಬಗ್ಗೆ ಜಮುನಾ ಅವರ ಸ್ಪಷ್ಟ ತಿಳುವಳಿಕೆಯು ಶೀಘ್ರದಲ್ಲೇ ಇತರ ಮಹಿಳೆಯರು ಅವರೊಂದಿಗೆ ಕೈಜೋಡಿಸುವಂತೆ ಮಾಡಲು ಸಹಕರಿಸಿತು.


"ನಾನು ಪ್ರಕೃತಿಯ ಬಗ್ಗೆ ಪ್ರೀತಿ ಮತ್ತು ಗೌರವದಿಂದ ಬೆಳೆದವಳು. ನನ್ನ ತಂದೆ ಒಡಿಶಾದ ನಮ್ಮ ಹೊಲಗಳಲ್ಲಿ ಹಲವಾರು ಮರಗಳನ್ನು ನೆಡುತ್ತಿದ್ದರು. ಅಲ್ಲಿಯೇ ನಾನು ಪರಿಸರದ ಮಹತ್ವವನ್ನು ಕಲಿತಿದ್ದೇನೆ," ಎಂದು ಅವರು ಹೇಳಿದರು.


ತಮ್ಮ ಮದ್ಯಪಾನದ ಅಗತ್ಯಗಳಿಗೆ ಹಣ ಒದಗಿಸಲು ಮಾಫಿಯಾವು ಮುತೂರ್‌ಖಾಮ್‌ನಿಂದ ಮರವನ್ನು ಹೇಗೆ ಬಳಸಿಕೊಳ್ಳುತ್ತಿದೆ ಎಂಬುದನ್ನು ತೋರಿಸುತ್ತಾ, ಸಮುದಾಯದ ಆವಾಸಸ್ಥಾನವು ನಿಧಾನವಾಗಿ ನಾಶವಾಗುತ್ತಿರುವಾಗ ಸಮುದಾಯದ ನಿಷ್ಕ್ರಿಯ ಪ್ರತಿಕ್ರಿಯೆಯಿಂದ ಅವರು ದಿಗ್ಭ್ರಮೆಗೊಂಡಿದ್ದಾರೆ ಎಂದು ಹೇಳಿದರು.


"ನಾನು ಹಳ್ಳಿಯ ಕೆಲವು ಮಹಿಳೆಯರೊಂದಿಗೆ ಮಾತನಾಡಲು ಹೋಗಿದ್ದೆ. ಸುಂದರವಾದ ಕಾಡುಗಳನ್ನು ರಕ್ಷಿಸಲು ನಮ್ಮ ಅಗತ್ಯವಿದೆ ಎಂದು ಅವರಿಗೆ ಮನವರಿಕೆ ಮಾಡಿಕೊಡಲು ನಾನು ಅವರೊಂದಿಗೆ ಹಲವಾರು ಬಾರಿ ಸಭೆ ನಡೆಸಿದೆ," ಎಂದರು.


ಕ್ರಮೇಣ, ಅವರು ಹಳ್ಳಿಯ 25 ಮಹಿಳೆಯರ ಗುಂಪನ್ನು ಬಿಲ್ಲು ಮತ್ತು ಬಾಣಗಳು, ಬಿದಿರಿನ ಕೋಲುಗಳು ಮತ್ತು ಈಟಿಗಳಿಂದ ಶಸ್ತ್ರಸಜ್ಜಿತಗೊಳಿಸಿ, ಅರಣ್ಯ ಕೊಳ್ಳೆಹೊಡೆಯುವವರನ್ನು ಹಿಮ್ಮೆಟ್ಟಿಸಲು ಕಾಡಿಗೆ ಮೆರವಣಿಗೆ ಹೋದರು. ಸಮಯದೊಂದಿಗೆ, ಅನೇಕ ಪುರುಷರು ಸಹ ಅರಣ್ಯನಾಶದ ವಿರುದ್ಧದ ಅಭಿಯಾನದ ಭಾಗವಾದರು, ಆದರೆ ಹೆಚ್ಚಿನ ಪ್ರಯತ್ನಗಳು ಮಹಿಳೆಯರಿಂದಲೇ ಮುಂದುವರೆದಿದೆ ಎಂದು ಜಮುನಾ ಹೇಳುತ್ತಾರೆ.


ಇವರ ಎದುರು ಅನೇಕ ಭಯಾನಕ ಸವಾಲುಗಳಿವೆ, ಆದರೆ ಅವರ ಧೃಢ ಮನಸ್ಸು ಮತ್ತು ಪರಿಸರ ಪ್ರೀತಿ ಇವೆಲ್ಲವನ್ನೂ ಗೌಣವಾಗಿಸಿದೆ.


"ಆರಂಭದಲ್ಲಿ ಹಳ್ಳಿಯ ಜನರೊಂದಿಗೆ ಹಲವಾರು ವಾಗ್ವಾದಗಳು ನಡೆದವು... ಮಾಫಿಯಾದೊಂದಿಗೆ ಅನೇಕ ಗಲಾಟೆಗಳಾದವು... ಮತ್ತು ನಾನು ನನ್ನ ತಂಡದ ಮಹಿಳೆಯರಿಗೆ ಈ ಪ್ರಯಾಣದಲ್ಲಿ ನಾವು ಒಳ್ಳೆಯ ಮತ್ತು ಕೆಟ್ಟ ಸಮಯಗಳನ್ನು ಎದುರಿಸುತ್ತೇವೆ ಎಂದು ಮೊದಲೇ ಹೇಳಿದ್ದೆ. ಆದರೆ ನಾವು ಅರಣ್ಯವನ್ನು ಉಳಿಸಿಕೊಳ್ಳಲು ಹೋರಾಡಲೇಬೇಕಾಗಿತ್ತು", ಎಂದು ಜಮುನಾ ಹೇಳಿದರು.


ಲೂಟಿ ಮಾಡಿದ ಮರವನ್ನು ರಫ್ತು ಮಾಡುವುದನ್ನು ತಡೆಯಲು ಗುಂಪು ರೈಲ್ವೆ ಅಧಿಕಾರಿಗಳಿಗೆ ಮನವರಿಕೆ ಮಾಡಿತು.


"2008-09ರಲ್ಲಿ, ಮಾಫಿಯಾ ನಮ್ಮ ಮೇಲೆ ಕ್ರೂರವಾಗಿ ಹಲ್ಲೆನಡೆಸಿದವು. ನಾವು ಸ್ಟೇಷನ್ ಮಾಸ್ಟರ್ ಅವರೊಂದಿಗೆ ಮಾತನಾಡಿದ ನಂತರ ರೈಲ್ವೆ ನಿಲ್ದಾಣದಿಂದ ಹಿಂತಿರುಗುತ್ತಿದ್ದಾಗ ಅವರು ನಮ್ಮ ಮೇಲೆ ಕಲ್ಲು ಹೊಡೆದರು. ಎಲ್ಲರೂ ಗಾಯಗೊಂಡರು," ಎಂದು ಅವರು ಹೇಳಿದರು.


ಸ್ಪಷ್ಟ ಕಾರಣಗಳಿಗಾಗಿ, ಜಮುನಾ ಅವರ ಈ ಕಾರ್ಯಗಳು ತಮ್ಮ ವ್ಯವಹಾರಕ್ಕೆ ಅಡ್ಡಿಯಾಗುತ್ತಿವೆ, ಎಂದರಿತ ಮಾಫಿಯಾ ತಾನು ನಡೆಸಿದ ಈ ದಾಳಿಯಲ್ಲಿ ಅವರು ಮತ್ತು ಅವರ ಪತಿ ಹೆಚ್ಚು ತೊಂದರೆ ಅನುಭವಿಸುವಂತೆ ಮಾಡಿತು. "ನನ್ನ ಗಂಡ ನನ್ನನ್ನು ಉಳಿಸಲು ಪ್ರಯತ್ನಿಸುತ್ತಿದ್ದಾಗ ಅವನ ತಲೆಗೆ ಪೆಟ್ಟು ಬಿತ್ತು. ಆಗ ಕತ್ತಲೆಯಾಗಿತ್ತು ಮತ್ತು ನಾವು ಹೇಗೋ ಅಲ್ಲಿಂದ ಓಡಿ ಬಂದೇವು. ಆ ದಿನ ನಾವು ಸಾವಿನಿಂದ ಪಾರಾಗಿದ್ದೇವೆ," ಎನ್ನುತ್ತಾರೆ ಜಮುನಾ.


ಆದರೂ ಅವರು ಹಿಂದೆ ಸರಿಯಲ್ಲ. ಸಮುದಾಯದ ಮಾಫಿಯಾ ಮತ್ತು ಪಟ್ಟುಹಿಡಿದ ಪರಿಸರ ಸಂರಕ್ಷಣೆ, ಜಮುನಾ ಮತ್ತು ಅವರು ರಚಿಸಿದ ವನ ಸುರಕ್ಷ ಸಮಿತಿಯೊಂದಿಗೆ 15 ವರ್ಷಗಳಲ್ಲಿ ಎಷ್ಟೋ ಘರ್ಷಣೆಗಳು ಸಂಭವಿಸಿದರು, 50 ಹೆಕ್ಟೇರ್ ಅರಣ್ಯ ಭೂಮಿಯನ್ನು ತನ್ನ ಹಳ್ಳಿಯ ಸುತ್ತಲೂ ಮಾತ್ರವಲ್ಲದೆ ಇತರರ ಸುತ್ತಲೂ ಸಂರಕ್ಷಿಸುವಲ್ಲಿ ಯಶಸ್ವಿಯಾಗಿದೆ.


ಬುಡಕಟ್ಟು ಸಮುದಾಯಗಳು ಮರವಿಲ್ಲದೆ ಬದುಕಲು ಸಾಧ್ಯವಿಲ್ಲ. ಅವರಿಗೆ ವಿವಿಧ ಕೆಲಸಗಳಿಗೆ - ಹೆಚ್ಚಾಗಿ ಆಹಾರವನ್ನು ಬೇಯಿಸುವುದಕ್ಕೆ ಇದು ಅಗತ್ಯವಾಗಿರುತ್ತದೆ. ಆದರೆ ಅವರ ಅವಶ್ಯಕತೆಗಳು ಸುಸ್ಥಿರ ಮಿತಿಯಲ್ಲಿ ಉಳಿಯುವುದನ್ನು ಅವರು ಬಯಸುತ್ತಾರೆ.


ನಾವು ಉದ್ದೇಶಪೂರ್ವಕವಾಗಿ ಮರಗಳನ್ನು ಕತ್ತರಿಸುವುದಿಲ್ಲ. ಬಿದ್ದ ಮರಗಳು ಮತ್ತು ಕೊಂಬೆಗಳನ್ನು ನಮ್ಮ ಎಲ್ಲ ಅಗತ್ಯಗಳಿಗಾಗಿ ಬಳಸುತ್ತೇವೆ. ಮಳೆಗಾಲದಲ್ಲಿ ನಾವು ಉಳಿಸಲು ಸಾಧ್ಯವಾಗುವ ಮೊತ್ತವು ಇಡೀ ವರ್ಷಕ್ಕೆ ಸಾಕಾಗುತ್ತದೆ ಎಂದು ಜಮುನಾ ಹೇಳಿದರು.


ಅರಣ್ಯ ಇಲಾಖೆ ಈ ಗ್ರಾಮವನ್ನು ‘ದತ್ತು' ತೆಗೆದುಕೊಂಡಿದ್ದು, ಇದು ಮುತೂರ್‌ಖಾಮ್‌ಗೆ ನೀರಿನ ಸಂಪರ್ಕ ಮತ್ತು ಶಾಲೆಯನ್ನು ಪಡೆಯಲು ಕಾರಣವಾಗಿದೆ. 2013 ರಲ್ಲಿ, ಜಮುನಾ ಅವರಿಗೆ ‘ಆಕ್ಟ್ ಆಫ್ ಸೋಷಿಯಲ್ ಕರೇಜ್' ವಿಭಾಗದಲ್ಲಿ ಗಾಡ್ಫ್ರೇ ಫಿಲಿಪ್ಸ್ ಶೌರ್ಯ ಪ್ರಶಸ್ತಿ ನೀಡಲಾಯಿತು. ಮತ್ತು 2017 ರ ಆಗಸ್ಟ್‌ನಲ್ಲಿ ನೀತಿ ಆಯೋಗವು ವೂಮೆನ್‌ ಟ್ರಾನ್ಸ್ಫಾರ್ಮಿಂಗ್‌ ಇಂಡಿಯಾ ಪ್ರಶಸ್ತಿಯನ್ನು ನೀಡಿದೆ. ಅಲ್ಲದೆ ಭಾರತ ಸರ್ಕಾರ ಕಳೆದ ವರ್ಷ 2019 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.


ಇಂದು, ಅವರು ಕೊಲ್ಹಾನ್ ವಿಭಾಗದ ವಿವಿಧ ಅರಣ್ಯ ಸಮಿತಿಗಳ ಮೂಲಕ ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದ್ದಾರೆ. 6,000 ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡ ಜಮುನಾ ರಚಿಸಿದ ಸುಮಾರು 150 ಸಮಿತಿಗಳು ಕಾಡುಗಳನ್ನು ಉಳಿಸುವ ಆಂದೋಲನಕ್ಕೆ ಸೇರಿಕೊಂಡಿವೆ. ಅವರು ಇನ್ನೂ ಹೆಚ್ಚಿನದನ್ನು ಮಾಡಲು ಬಯಸುತ್ತಾರೆ.


ಹೆಚ್ಚಿನ ಬದಲಾವಣೆಯನ್ನು ಮಾಡಲು ನಾನು ಬಯಸುತ್ತೇನೆ, ಆದರೆ ನಾನು ಸೀಮಿತ ಸಂಪನ್ಮೂಲಗಳನ್ನು ಹೊಂದಿದ್ದು ನನ್ನ ರಾಜ್ಯದ ಹಳ್ಳಿಗಳನ್ನು ಮೀರಿ ಹೋಗಲು ನನಗೆ ಅನೇಕ ರೀತಿಯಲ್ಲಿ ಸಾಧ್ಯವಿಲ್ಲ.

"ಆದರೆ ನನಗೆ ಹೆಚ್ಚಿನ ಬೆಂಬಲ ದೊರೆತರೆ, ನಮ್ಮಂತಹ ಇನ್ನೂ ಅನೇಕ ಕಾಡುಗಳನ್ನು ಉಳಿಸಬಹುದು," ಎಂದು ಅವರು ಅಭಿಪ್ರಾಯ ಪಡುತ್ತಾರೆ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, kannada.ys@yourstory.com ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.Clap Icon0 Shares
 • +0
  Clap Icon
Share on
close
Clap Icon0 Shares
 • +0
  Clap Icon
Share on
close
Share on
close