ಕೋವಿಡ್‌-19 ರೋಗಿಗಳ ಸಾಗಾಟಕ್ಕೆ ಸಹಾಯವಾಗುತ್ತಿರುವ ಕಾಸರಗೋಡಿನ ಆಟೋ ರಿಕ್ಷಾ ಚಾಲಕರು

ಹರೀಶ್‌ ಕರುವಾಚೆರಿ ಮತ್ತು ಮಯಿಲ್‌ ರಥೀಶ್‌ ಆಂಬ್ಯೂಲೆನ್ಸ್‌ ರೀತಿಯ ಸೇವೆಯನ್ನು ತಮ್ಮ ಆಟೋದಲ್ಲಿ ನೀಡುತ್ತಿದ್ದು ಕಳೆದ ಎರಡು ತಿಂಗಳಲ್ಲಿ 200 ರೋಗಿಗಳನ್ನು ಸಾಗಿಸಿದ್ದಾರೆ.

ಕೋವಿಡ್‌-19 ರೋಗಿಗಳ ಸಾಗಾಟಕ್ಕೆ ಸಹಾಯವಾಗುತ್ತಿರುವ ಕಾಸರಗೋಡಿನ ಆಟೋ ರಿಕ್ಷಾ ಚಾಲಕರು

Friday October 23, 2020,

2 min Read

ಕೋವಿಡ್‌-19ನ ಭೀಕರತೆ ಮಾರಣಾಂತಿಕವಾಗಿ ಪರಿಣಮಿಸಿರುವ ನಡುವೆ ಕಾಸರಗೋಡಿನ ಇಬ್ಬರು ಆಟೋ ರಿಕ್ಷಾ ಚಾಲಕರು ಆಂಬ್ಯೂಲೆನ್ಸ್‌ಗಳ ಕೊರತೆಯನ್ನು ನೀಗಿಸುತ್ತಿದ್ದಾರೆ.


ಕಳೆದ ಎರಡು ತಿಂಗಳಿಂದ ಕಾಸರಗೋಡಿನ ಹರೀಶ್‌ ಕರುವಾಚೆರಿ (47) ಮತ್ತು ಮಯಿಲ್‌ ರಥೀಶ್‌ (42) ತಮ್ಮ ಆಟೋ ರಿಕ್ಷಾವನ್ನು ತಾತ್ಕಾಲಿಕ ಆಂಬ್ಯುಲೆನ್ಸ್‌ನಂತೆ ಬಳಸಿಕೊಂಡು ಕೋವಿಡ್‌-19 ರೋಗಿಗಳನ್ನು ಮತ್ತು ಲಕ್ಷಣರಹೀತ ರೋಗಿಗಳನ್ನು ಹತ್ತಿರದ ಪರೀಕ್ಷಾ ಕೇಂದ್ರ ಮತ್ತು ಆಸ್ಪತ್ರೆಗಳಿಗೆ ಸಾಗಿಸುತ್ತಿದ್ದಾರೆ.


“ನಾವು ಯಾವುದೇ ರೀತಿಯ ಆಂಬ್ಯುಲೆನ್ಸ್‌ ಸೇವೆ ನಡೆಸುತ್ತಿಲ್ಲ. ನಿಲೇಶ್ವರದಲ್ಲಿ ಆಂಬ್ಯುಲೆನ್ಸ್‌ಗಳು ಕಡಿಮೆ ಇರುವುದರಿಂದ ನಾವು ಕೇವಲ ಲಕ್ಷಣರಹಿತ ರೋಗಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ತಲುಪಿಸುತ್ತಿದ್ದೇವೆ,” ಎಂದು ಹರೀಶ್‌ ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ಹೇಳಿದರು.


ಕಳೆದೆರೆಡು ತಿಂಗಳಲ್ಲಿ ಇವರು 200 ಕ್ಕೂ ಅಧಿಕ ರೋಗಿಗಳನ್ನು ಸಾಗಿಸಿದ್ದಾರೆ. ಈ ಅವಧಿಯಲ್ಲಿ ಎರಡು ಬಾರಿ ಕೋವಿಡ್‌-19 ಪರೀಕ್ಷೆಗೆ ಒಳಗಾದರು ವರದಿ ನಕಾರಾತ್ಮಕವಾಗಿ ಬಂದಿದೆ.


ನಿಲೇಶ್ವರ ತಾಲ್ಲೂಕು ಆಸ್ಪತ್ರೆ ಹೆಚ್ಚುತ್ತಿರುವ ರೋಗಿಗಳ ಓಡಾಟಕ್ಕೆ ಆಂಬ್ಯುಲೆನ್ಸ್‌ ಸಾಲದಾದಾಗ ಇವರಿಬ್ಬರನ್ನು ನಿಯೋಜಿಸಿದೆ.


ಹರೀಶ್‌ ಅವರ ಮಾನವೀಯ ಸ್ವಭಾವದ ಬಗ್ಗೆ ಗೋತ್ತಿದ್ದ ಜಿಲ್ಲೆಯ ಕೋವಿಡ್‌ ಸರ್ವೈಲನ್ಸ್‌ ನೋಡಲ್‌ ಅಧಿಕಾರಿ ಡಾ. ವಿ ಸುರೇಶನ್‌ ಆಸ್ಪತ್ರೆ ಅಧೀಕ್ಷಕ ಡಾ. ಜಮಾಲ್ ಅಹ್ಮದ್ ಮತ್ತು ಆರೋಗ್ಯ ನಿರೀಕ್ಷಕ ರಾಜೇಶ್ ತೀರ್ಥಂಕರ ಅವರಿಗೆ ಹೇಳಿದಾಗ ಈ ಯೋಚನೆ ಹೊಳೆದಿದೆ.

ಹರೀಶ ಕರುವಾಚೆರಿ ಮತ್ತು ಮಯಿಲ್‌ ರಥೀಶ್‌ (ಚಿತ್ರಕೃಪೆ: ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌)


ಮಯಿಲ್‌ ಅವರು ಹರೀಶ್‌ ಅವರನ್ನು ಕೂಡಿಕೊಂಡು ಈ ಸೇವೆಯನ್ನು ಪ್ರಾರಂಭಿಸಿದರು. ಅವರಿಗೆ ಮಾಸ್ಕ್‌, ಸ್ಯಾನಿಟೈಸರ್‌, ಸ್ಪ್ರೇ ಗನ್ಸ್‌, ಕೈಗವಸು ಮತ್ತು ಶಾಂಪೂ ನೀಡಲಾಗಿತ್ತು. ಆದರೆ ಲಾಜಿಕಲ್‌ ಇಂಡಿಯನ್‌ ವರದಿಯ ಪ್ರಕಾರ ಅವರು ಪಿಪಿಇ ಕಿಟ್‌ ಅನ್ನು ನಿರಾಕರಿಸಿದರು, “ಪ್ರಯಾಣಿಕರು ಮತ್ತು ಚಾಲಕರ ನಡುವೆ ಪ್ಲಾಸ್ಟಿಕ್‌ ಶೀಟ್‌ ಇದೆ. ನಾವು ಅವರ ಸಂಪರ್ಕಕ್ಕೆ ಯಾವತ್ತು ಬಂದಿಲ್ಲ,” ಎಂದರು ಮಯಿಲ್‌.


ಪ್ರತಿ ಟ್ರಿಪ್‌ನ ಬಳಿಕವೂ ಆಟೋವನ್ನು ಶುದ್ಧಗೊಳಿಸಿ, ಸೀಟ್‌ಗಳನ್ನು ಹತ್ತಿ ಬಟ್ಟೆಯಿಂದ ಒರೆಸುತ್ತಾರೆ. ಆ ಬಟ್ಟೆಗಳನ್ನು ಒಂದು ಪ್ಲಾಸ್ಟಿಕ್‌ನಲ್ಲಿಟ್ಟು ಮನೆಗೆ ಹೋದಮೇಲೆ ಸುಟ್ಟು ಹಾಕುತ್ತಾರೆ. ಪ್ರತಿದಿನ ಈ ಜೋಡಿ ಆರು ಅಥವಾ ಏಳು ಬಾರಿ ಕೊರೊನಾ ರೋಗಿಗಳನ್ನು, ಗುಣಮುಖರಾದವರನ್ನು ದೂರದ ಪ್ರದೇಶವೂ ಸೇರಿದಂತೆ ಎಲ್ಲೆಡೆ ಬಿಟ್ಟು ಬರುತ್ತಾರೆ.


“ನಮ್ಮ ಪ್ರಯಾಣಿಕರು ಕೋವಿಡ್‌ ಪೀಡಿತರು ಅಥವಾ ಕೋವಿಡ್‌ ಶಂಕಿತರು ಎಂದು ನಮಗೆ ಗೊತ್ತು. ಕೋವಿಡ್‌-19 ಈಗ ಎಷ್ಟು ಹರಡಿದೆಯೆಂದರೆ ಯಾವ ಪ್ರಯಾಣಿಕರು ಸೋಂಕಿಗೆ ಒಳಗಾಗಬಹುದು ಎಂಬುದೇ ಗೋತ್ತಿಲ್ಲ ಮತ್ತು ಅದು ಚಾಲಕನಿಗೂ ಅಥವಾ ಪ್ರಯಾಣಿಕರ ಗಮನಕ್ಕೆ ಬರದೆ ಹೋಗಬಹುದು,” ಎಂದರು ಮಯಿಲ್‌.


ಬಹುತೇಕ ಪ್ರಯಾಣಿಕರು ದುರ್ಬಲ ವರ್ಗದವರಾಗಿರುವುದರಿಂದ ಅವರ ಬಳಿ ಸಾಮಾನ್ಯವಾದ ಬಾಡಿಗೆಯನ್ನು ಪಡೆಯುತ್ತಾರೆ.