ದೆಹಲಿಯ ಪ್ಲಾಸ್ಮಾ ದಾಣಿಗಳಿಗೆ ಉಚಿತ ಸವಾರಿ ನೀಡಲಿದೆ ಉಬರ್‌

ಅಗತ್ಯದಲ್ಲಿರುವವರಿಗೆ ಸಹಾಯ ಮಾಡಲು ಕೋವಿಡ್‌ನಿಂದ ಗುಣಮುಖರಾದವರು ಮುಂದೆ ಬರಬೇಕು ಎಂಬ ದೆಹಲಿ ಮುಖ್ಯ ಮಂತ್ರಿಗಳ ಮನವಿಗೆ ಈ ನಡೆ ಪ್ರೋತ್ಸಾಹ ನೀಡಲಿದೆ.

ದೆಹಲಿಯ ಪ್ಲಾಸ್ಮಾ ದಾಣಿಗಳಿಗೆ ಉಚಿತ ಸವಾರಿ ನೀಡಲಿದೆ ಉಬರ್‌

Thursday July 09, 2020,

2 min Read

ದೇಶದ ಮೊದಲ ಪ್ಲಾಸ್ಮಾ ಬ್ಯಾಂಕ್ ಹೊಂದಿರುವ ಇನ್ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸಸ್ (ಐಎಲ್ಬಿಎಸ್) ಗೆ ಪ್ಲಾಸ್ಮಾ ದಾನ ಮಾಡಲು ಪ್ರಯಾಣಿಸುವ ದೆಹಲಿಯ ದಾನಿಗಳಿಗೆ ಉಚಿತ ಸವಾರಿ ನೀಡುವುದಾಗಿ ಉಬರ್ ಬುಧವಾರ ತಿಳಿಸಿದೆ.


ಅಗತ್ಯದಲ್ಲಿರುವವರಿಗೆ ಸಹಾಯ ಮಾಡಲು ಕೋವಿಡ್‌ನಿಂದ ಗುಣಮುಖರಾದವರು ಮುಂದೆ ಬರಬೇಕು ಎಂಬ ದೆಹಲಿ ಮುಖ್ಯ ಮಂತ್ರಿಗಳ ಮನವಿಗೆ ಈ ನಡೆ ಪ್ರೋತ್ಸಾಹ ನೀಡಲಿದೆ.


“ಕೊರೊನಾವೈರಸ್‌ ಹರಡುವಿಕೆಯನ್ನು ತಡೆಯಲು ದೆಹಲಿ ಸರ್ಕಾರ ಎಡಬಿಡದೇ ಕೆಲಸ ಮಾಡುತ್ತಿದೆ ಮತ್ತು ಈ ಪಾಲುದಾರಿಕೆ ದೆಹಲಿ ಮತ್ತು ದೆಹಲಿ ಜನತೆಯನ್ನು ಬೆಂಬಲಿಸುವ ನಮ್ಮ ಕೊಡುಗೆಯ ಸಂಕೇತವಾಗಿದೆ. ಮುಂದಿನ ದಿನಗಳಲ್ಲಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡು ತಮ್ಮ ಪ್ಲಾಸ್ಮಾ ದಾಣ ಮಾಡಲು ಬರುವವರಿಗೆ ಉಚಿತವಾದ ಸವಾರಿಗಳನ್ನು ನೀಡಲಿದ್ದೇವೆ,” ಎಂದು ಉಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾ ನಿರ್ದೇಶಕರು, ಕಾರ್ಯಾಚರಣೆಗಳು ಮತ್ತು ನಗರಗಳ ಮುಖ್ಯಸ್ಥರಾದ ಪ್ರಭಜೀತ್ ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




ಕೊರೊನಾವೈರಸ್‌ ಮಹಾಮಾರಿಯ ಆರ್ಭಟ ಶುರುವಾದಾಗಿನಿಂದ ಉಬರ್‌ ಹಲವು ಉಪಕ್ರಮಗಳ ಮೂಲಕ ಸರ್ಕಾರ ಮತ್ತು ದೇಶದ ಸಮುದಾಯಕ್ಕೆ ಬೆಂಬಲ ನೀಡಿದೆ.


ಆರೋಗ್ಯ ಕಾರ್ಯಕರ್ತರ ಸಾಗಾಟಕ್ಕೆ ನೆರವಾಗುವಂತೆ ಏಪ್ರಿಲ್‌ನಲ್ಲಿ ಉಬರ್‌ ರೂ. 75 ಲಕ್ಷ ಮೌಲ್ಯದ ಉಚಿತ ಸವಾರಿಗಳನ್ನು ದೆಹಲಿ ಸರ್ಕಾರಕ್ಕೆ ನೀಡಿತ್ತು. ಮತ್ತು ಕೋವಿಡ್‌ ಸೋಂಕಿಲ್ಲದ ರೋಗಿಗಳನ್ನು ಸಾಗಿಸಲು 200 ಉಬರ್‌ಮೆಡಿಕ್‌ ಕಾರುಗಳನ್ನು ಸಿಎಟಿಎಸ್‌ ಆಂಬ್ಯುಲೆನ್ಸ್‌ ಸಹಾಯವಾಣಿಯ ಜತೆ ಸೇರಿ ನೀಡಿತ್ತು.


ಸುರಕ್ಷತೆ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಎಲ್ಲ ಉಬರ್‌ಮೆಡಿಕ್‌ ಕಾರುಗಳಒಳಗೆ ಹಿಂದಿನ ಸೀಟುಗಳು ಮತ್ತು ಚಾಲಕರ ಸೀಟಿನ ನಡುವೆ ಮೇಲಿನಿಂದ ಕೆಳಗಿನವರೆಗೆ ಪ್ಲಾಸ್ಟಿಕ್‌ ಹಾಕಿ ಚಾಲಕರು ಮತ್ತು ಪ್ರಯಾಣಿಕರು ಪರಸ್ಪರ ಸಂಪರ್ಕ ಬರದಂತೆ ಅಂತರ ಕಲ್ಪಿಸಲಾಗಿದೆ.


ಮೇ ತಿಂಗಳಲ್ಲಿ ಉಬರ್‌ ಕನೆಕ್ಟ್‌ ಎಂಬ ಪ್ಯಾಕೆಜ್‌ ಡೆಲಿವರಿ ಸೇವೆಯನ್ನು ನವದೆಹಲಿ, ನೋಯ್ಡಾ, ಹೈದರಾಬಾದ್‌, ಚೆನ್ನೈ ಮತ್ತು ಚಂದೀಗಡ್‌ದಲ್ಲಿಯೂ ಆರಂಭಿಸಿದೆ.


ಈ ಮೊದಲು ಕೊಲ್ಕತ್ತಾ, ಜೈಪುರ್‌, ಗುವಾಹಟಿ ಮತ್ತು ಗುರುಗ್ರಾಂನಲ್ಲಿ ನಗರಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದ ಈ ಸೇವೆಯಲ್ಲಿ ಜನರು ನಗರದ ಒಳಗೆ ವಸ್ತುಗಳನ್ನು ಯಾರಿಗಾದರೂ ಕಳುಹಿಸಬಹುದಾಗಿದೆ.


ಜತೆಗೆ ವಾಹನ ಚಾಲಕರಿಗೆ ಸುರಕ್ಷತಾ ಕಿಟ್‌ಅನ್ನು ನೀಡಲಾಗಿದ್ದು, ಅದರಲ್ಲಿ ಮುಖಗವಸು, ಸ್ಯಾನಿಟೈಸರ್‌, ಕೈಗವಸು ಮತ್ತು ರೋಗನಿವಾರಕಗಳನ್ನು ಇರಿಸಲಾಗಿದ್ದು, ಇದರಿಂದ ಪ್ರತಿ ಸವಾರಿಯ ನಂತರ ಶುಚಿಗೊಳಿಸಬಹುದು ಎಂದು ಉಬರ್‌ ಹೇಳಿದೆ.


ಕೋವಿಡ್‌-19 ನಿಂದ ಗುಣಮುಖರಾದವರಲ್ಲಿ 18 ರಿಂದ 60 ವರ್ಷದ ಒಳಗಿನ 50 ಕೆ.ಜಿ.ಗಿಂತ ಅಧಿಕ ತೂಕ ಹೊಂದಿರುವವರು ಪ್ಲಾಸ್ಮಾ ದಾಣ ಮಾಡಬಹುದಾಗಿದೆ.


ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ ಮಹಿಳೆಯರು ಮತ್ತು ಇತರ ರೋಗಗಳನ್ನು ಹೊಂದಿರುವವರು ಪ್ಲಾಸ್ಮಾ ದಾಣಮಾಡುವಂತಿಲ್ಲ.