ದೆಹಲಿಯ ಸಣ್ಣ ಮಳಿಗೆಯಲ್ಲಿ ಆರಂಭವಾದ ಯುಬೊನ್, ಇಂದು ಭಾರತದ 3,000 ನಗರಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ

ಮೊಬೈಲ್ ಪರಿಕರಗಳ ಮಾರುಕಟ್ಟೆಯಲ್ಲಿ ಬೆಳವಣಿಗೆಯನ್ನು ಹೆಚ್ಚಿಸಲು ಡಿಮೊನಿಟೈಸೇಶನ್‌ನಂತಹ ಕಠಿಣ ಸಮಯವನ್ನು ಯುಬೊನ್ ಎದುರಿಸಿ ಭಾರತದಾದ್ಯಂತ 100 ಪಾಲುದಾರರ ಸದೃಢವಾದ ವಿತರಣಾ ಜಾಲವನ್ನು ನಿರ್ಮಿಸಿದೆ.

ದೆಹಲಿಯ ಸಣ್ಣ ಮಳಿಗೆಯಲ್ಲಿ ಆರಂಭವಾದ ಯುಬೊನ್, ಇಂದು ಭಾರತದ 3,000 ನಗರಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ

Wednesday April 08, 2020,

3 min Read

ಭಾರತದಲ್ಲಿ ಮೊಬೈಲ್ ಪರಿಕರಗಳ ಉದ್ಯಮವು ಕೆಲವೇ ವರ್ಷಗಳಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿದೆ. ಪವರ್ ಬ್ಯಾಂಕುಗಳು, ಮೊಬೈಲ್ ಚಾರ್ಜರ್‌ಗಳಿಂದ ಹಿಡಿದು ಇಯರ್‌ಫೋನ್ ಮತ್ತು ಹ್ಯಾಂಡ್‌ಸೆಟ್‌ಗಳವರೆಗೆ ಅವುಗಳಿಗೆ ಅಪಾರ ಬೇಡಿಕೆ ಇದೆ. ರಿಸರ್ಚ್ ಪ್ಲಾಟ್‌ಫಾರ್ಮ್ ರಿಸರ್ಚ್ ನೆಸ್ಟರ್‌ನ ವರದಿಯ ಪ್ರಕಾರ, 2024 ರ ಅಂತ್ಯದ ವೇಳೆಗೆ ಭಾರತೀಯ ಮೊಬೈಲ್ ಫೋನ್ ಪರಿಕರಗಳ ಮಾರುಕಟ್ಟೆ $3.54 ಬಿಲಿಯನ್ ತಲುಪುವ ನಿರೀಕ್ಷೆಯಿದೆ.


ಮಂದೀಪ್ ಅರೋರಾ ಅವರ ತಂದೆ ದೆಹಲಿಯ ಹಳೆಯ ಮತ್ತು ಬೃಹತ್‌ ಮಾರುಕಟ್ಟೆಗಳಲ್ಲಿ ಒಂದಾದ ಲಜಪತ್ ರೈ ಮಾರುಕಟ್ಟೆಯಲ್ಲಿ ವಾಕ್‌ಮ್ಯಾನ್‌ಗಳಿಗಾಗಿ ಇಯರ್‌ಫೋನ್‌ಗಳಂತಹ ಮೊಬೈಲ್ ಪರಿಕರಗಳನ್ನು ಮಾರಾಟಮಾಡುವ ವ್ಯಾಪಾರದಲ್ಲಿದ್ದರು. ಮಂದೀಪ್‌ 1998ರಲ್ಲಿ ಸಗಟು ವ್ಯವಹಾರವನ್ನು ಆರಂಭಿಸಿದರು ಮತ್ತು ಎಲೆಕ್ಟ್ರಾನಿಕ್ಸ್ ಉದ್ಯಮದಲ್ಲಿ ಸಾಕಷ್ಟು ಅಂತರವಿರುವುದನ್ನು ಗಮನಿಸಿದರು.


ಮಾರುಕಟ್ಟೆಯಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಮಾರಾಟ ಮಾಡುವ ಬೆಲೆಗೂ, ಅದರ ಗುಣಮಟ್ಟಕ್ಕೂ ಸಾಕಷ್ಟು ವ್ಯತ್ಯಾಸವಿತ್ತು. ಅವರ ತಂದೆಯೊಂದಿಗೆ ಕೆಲಸ ಮಾಡುವುದರಿಂದ ಅವರಿಗೆ ಉದ್ಯಮದ ಬಗ್ಗೆ ವ್ಯಾಪಕವಾದ ಜ್ಞಾನ, ಅನುಭವ ಮತ್ತು ಒಳನೋಟ ದೊರೆಯಿತು.


2004 ರಲ್ಲಿ, ಮಂದೀಪ್, ಅವರ ತಂದೆ ಓಂ ಪ್ರಕಾಶ್ ಅರೋರಾ ಮತ್ತು ಅವರ ಸಹೋದರ ಲಲಿತ್ ಅರೋರಾ ದೆಹಲಿಯಲ್ಲಿ ಯುಬೊನ್ ಎಂಬ ಮೊಬೈಲ್ ಪರಿಕರಗಳ ಕಂಪನಿಯನ್ನು ಸಹ-ಸ್ಥಾಪಿಸಿದರು.


ಮಂದೀಪ್‌ ಅರೋರ, ಯುಬೊನ್‌ ನ ಸಹ ಸ್ಥಾಪಕ




ಯುಬೊನ್‌ನ ಎಷ್ಟು ವಹಿವಾಟು ನಡೆಸುತ್ತಿದ್ದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸದ ಮಂದೀಪ್‌, ಮುಂದಿನ ಮೂರು ವರ್ಷಗಳಲ್ಲಿ 1000 ಕೋಟಿ ರೂಪಾಯಿಗಳ ವಹಿವಾಟನ್ನು ನಡೆಸುವ ಗುರಿಯನ್ನು ಹೊಂದಿರುವುದರ ಜೊತೆಗೆ, ಪ್ರತಿ ವರ್ಷವೂ 20-25 ಪ್ರತಿಶತದಷ್ಟು ಬೆಳವಣಿಗೆಯ ಗುರಿ ತಲುಪಲು ಪ್ರಯತ್ನಿಸುತ್ತಿದ್ದಾರೆ.


ಎಸ್‌ಎಮ್‌ಬಿ ಸ್ಟೋರಿಯೊಂದಿಗೆ ಮಾತನಾಡಿದ ಸಂದೀಪ ಯುಬೊನ್‌ನ ವ್ಯವಹಾರದ ಬಗ್ಗೆ ಹಾಗೂ ಏಕೆ ಅವರು ಅಪನಗದೀಕರಣವು ಕೊರೊನಾವೈರಸ್‌ಗಿಂತಲೂ ದುರಂತವಾಗಿತ್ತು ಎಂದು ಹೇಳಿದ್ದಾರೆ.


ಸಂದರ್ಶನದ ಆಯ್ದ ಭಾಗಗಳು:

ಎಸ್‌ಎಮ್‌ಬಿ ಸ್ಟೋರಿ (ಎಸ್‌ಎಮ್‌ಬಿಎಸ್‌): ವ್ಯವಹಾರವನ್ನು ಸ್ಥಾಪಿಸುವ ಮತ್ತು ಅದನ್ನು ನಡೆಸುವ ನಿಮ್ಮ ಪ್ರಯಾಣದ ಕಷ್ಟದ ಕ್ಷಣಗಳು ಯಾವುವು?

ಮಂದೀಪ್ ಅರೋರಾ (ಎಂ ಎ): ಆರಂಭದಲ್ಲಿ, ಉತ್ಪನ್ನವನ್ನು ಮಾರಾಟ ಮಾಡುವ, ವ್ಯಾಪಾರವನ್ನು ವಿಸ್ತರಿಸುವ ಅಥವಾ ಸಮ ಆಸಕ್ತಿಯುಳ್ಳ ಪಾಲುದಾರರನ್ನು ಹುಡುಕುವ ಹಾಗೂ ಇತರೆ ಬಹಳಷ್ಟು ಸವಾಲುಗಳಿದ್ದವು. ಆದರೆ ನಾವೀಗ ಒಂದು ಸ್ಥಾಪಿತ ಸದೃಢ ಸಂಸ್ಥೆಯನ್ನು ಹೊಂದಿದ್ದೇವೆ. ನಾವು ಆರಂಭಿಸಿದಾಗ ಭಾರತೀಯ ಎಲೆಕ್ಟ್ರಾನಿಕ್ಸ್‌ ಉದ್ಯಮವಿನ್ನೂ ಶೈಶವಾವಸ್ಥೆಯಲ್ಲಿತ್ತು.


ಆದ್ದರಿಂದ, ಉತ್ತಮ ಗುಣಮಟ್ಟದ ಮತ್ತು ಸರಿಯಾದ ಕಚ್ಚಾ ವಸ್ತುಗಳನ್ನು ಹುಡುಕುವುದು ಸಹ ಒಂದು ದೊಡ್ಡ ಸವಾಲಾಗಿತ್ತು. ಆರಂಭದಲ್ಲಿ, ನಮ್ಮ ಬಹುಪಾಲು ಕಚ್ಚಾ ವಸ್ತುಗಳು ಚೀನಾದಿಂದ ಬರುತ್ತಿದ್ದವು, ಆದರೆ ಕ್ರಮೇಣ ನಾವು ಅವುಗಳನ್ನು ಆಮದು ಮಾಡುವುದನ್ನು ನಿಲ್ಲಿಸಿದ್ದೇವೆ. ಇಂದು, ನಾವು 99 ಪ್ರತಿಶತ ಉತ್ಪನ್ನಗಳನ್ನು ನಮ್ಮಲ್ಲೇ ತಯಾರಿಸುತ್ತಿದ್ದೇವೆ. ನಾವು ಈಗ ಕೇವಲ ಯುಎಸ್‌ಬಿ ಕೇಬಲ್‌ನ ಪಿನ್ ಅನ್ನು ಮಾತ್ರ ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ.


ಡೆಮೋನಿಟೈಸೇಶನ್ ನಮಗೆ ಅತ್ಯಂತ ಕಠಿಣ ಅವಧಿ. ನಮ್ಮದು ಸಾಲವನ್ನು ನೀಡದ ರೀತಿಯ ಕಂಪನಿ. ಆಗ, ನಮಗೆ ಕೊಡಲು, ಪಾವತಿಸಲು ಜನರ ಬಳಿ ಹಣವಿರಲಿಲ್ಲ ಮತ್ತು ನಮಗೆ ದೊಡ್ಡ ಬಿಕ್ಕಟ್ಟು ಎದುರಾಯಿತು. ಅದು ದುಃಸ್ವಪ್ನದಂತಿತ್ತು ಅಂತಹದ್ದೇನಾದರೂ ಸಂಭವಿಸಬಹುದು ಎಂದು ಊಹಿಸಲೂ ಸಾಧ್ಯವಿರಲಿಲ್ಲ.


ಡೆಮೋನಿಟೈಸೇಷನ್‌ಗೆ ಹೋಲಿಸಿದರೆ ಕೊರೊನಾವೈರಸ್‌ನಿಂದಾದ ಲಾಕ್‌ಡೌನ್‌ ಸಮಯ ನಮನ್ನು ಭಯಗೊಳಿಸುತ್ತಿಲ್ಲ. ಕರೋನವೈರಸ್ ಹರಡುವ ಸಮಯದಲ್ಲಿ, ಕನಿಷ್ಠ ನಮ್ಮನ್ನು ನಾವು ತಯಾರಿ ಮಾಡಿಕೊಳ್ಳಲು ಸಮಯವಿದೆ. ಡಿಮೋನಿಟೈಸೇಶನ್ ಸಮಯದಲ್ಲಿ, ನಾವು ಪರಿಸ್ಥಿತಿಯನ್ನು ಗಮನಿಸಲೂ ಸಾಧ್ಯವಾಗಲಿಲ್ಲ. ಕ್ರಮೇಣ, ನಾವು ಕ್ರಮಗಳನ್ನು ತೆಗೆದುಕೊಂಡೆವು ಮತ್ತು ನಮ್ಮ ಮಾರ್ಗವನ್ನು ಕಂಡುಕೊಂಡೆವು.




ಎಸ್‌ಎಮ್‌ಬಿಎಸ್‌: ನಿಮ್ಮ ಕಾರ್ಖಾನೆಗಳನ್ನು ಎಲ್ಲೆಲ್ಲಿ ಸ್ಥಾಪಿಸಿದ್ದೀರಿ?

ಎಂಎ: ದೆಹಲಿ ಮತ್ತು ನೊಯ್ಡಾದಲ್ಲಿ ನಮ್ಮ ಉತ್ಪಾದನಾ ಕಾರ್ಖಾನೆಗಳಿವೆ. ಬ್ಲೂಟೂತ್‌ ಸ್ಪೀಕರ್‌ಗಳನ್ನು ತಯಾರಿಸಲು ಇನ್ನೊಂದು ಕಾರ್ಖಾನೆಯನ್ನು ಆರಂಭಿಸಲು ತಯಾರಿ ನಡೆಸುತ್ತಿದ್ದೇವೆ.


ಎಸ್‌ಎಮ್‌ಬಿಎಸ್‌: ನಿಮ್ಮ ಆನ್‌ಲೈನ್ ಮತ್ತು ಆಫ್‌ಲೈನ್ ಉಪಸ್ಥಿತಿಯ ಬಗ್ಗೆ ಏನಾದರೂ ಹೇಳಬಹುದೇ?

ಎಂಎ: ಲಜಪತ್ ರೈ ಮಾರುಕಟ್ಟೆಯಲ್ಲಿನ ಒಂದು ಸಣ್ಣ ಸಗಟು ಅಂಗಡಿಯಿಂದ ಆರಂಭಿಸಿ ಇತ್ತೀಚೆಗೆ ಕರೋಲ್ ಬಾಗ್‌ನ ಟಿಪ್ ಟಾಪ್ ಮಾರುಕಟ್ಟೆಯಲ್ಲಿ ವಿಶೇಷ ಶೋ ರೂಂ ತೆರೆಯುವವರೆಗೆ, ನಾವು ಬಹಳ ದೂರ ಕ್ರಮಿಸಿದ್ದೇವೆ ಎಂದು ನಾನು ಭಾವಿಸುತ್ತೇನೆ. ಇದಲ್ಲದೆ, ಇಂದು ನಾವು ಭಾರತದ 3,000 ನಗರಗಳಲ್ಲಿ ಆಫ್‌ಲೈನ್ ಉಪಸ್ಥಿತಿಯನ್ನು ಹೊಂದಿದ್ದೇವೆ.


ನಾವು 2014 ರಿಂದ ಚಾರ್ಜರ್‌ಗಳು, ಪವರ್ ಬ್ಯಾಂಕುಗಳು ಮತ್ತು ಡೇಟಾ ಕೇಬಲ್‌ಗಳು ಮತ್ತು ಸ್ಕ್ರೀನ್ ಗಾರ್ಡ್‌ಗಳನ್ನು ಉತ್ಪಾದಿಸುತ್ತಿದ್ದೇವೆ. 100 ಕ್ಕೂ ಹೆಚ್ಚು ಪಾಲುದಾರರು, ಪೂರೈಕೆದಾರರು, ಚಿಲ್ಲರೆ ವ್ಯಾಪಾರಿಗಳು ಮತ್ತು ಹೆಚ್ಚಿನ ಪ್ಯಾನ್-ಇಂಡಿಯಾ ವಿತರಣಾ ಜಾಲವನ್ನು ರಚಿಸಲು ನಾವು ಶ್ರಮಿಸಿದ್ದೇವೆ.


ಲಜಪತ್‌ ರೈ ಮಾರುಕಟ್ಟೆಯಲ್ಲಿ ಮತ್ತೊಂದು ಮಳಿಗೆಯನ್ನು ತೆರೆದಿದ್ದೇವೆ. ಅದರೊಟ್ಟಿಗೆ, ಅಮೇಜಾನ್‌, ಫ್ಲಿಪ್‌ಕಾರ್ಟ್‌ ಹಾಗೂ ಇನ್ಸ್ಟಾಗ್ರಾಂನಲ್ಲಿ ಸಹ ಆನ್‌ಲೈನ್‌ ಮಾರುಕಟ್ಟೆಯನ್ನು ಹೊಂದಿದ್ದೇವೆ.


ಎಸ್‌ಎಮ್‌ಬಿಎಸ್‌: ನಿಮ್ಮ ಭವಿಷ್ಯದ ಯೋಜನೆಗಳೇನು?

ಎಮ್‌ಎ: ಈ ಉದ್ಯಮವೂ ಇನ್ನೂ ಸಹ ಶೈಶವಾವಸ್ಥೆಯಲ್ಲಿದೆ. ಆದರೆ ಮುಂಬರುವ ವರ್ಷಗಳಲ್ಲಿ ಇದು ಮಾರುಕಟ್ಟೆಯನ್ನು ದೊಡ್ಡದಾಗಿ ಆವರಿಸಲಿದೆ. ಈ ಉದ್ಯಮಕ್ಕೆ ಬೇಡಿಕೆ ಹೆಚ್ಚಿರುವುದರಿಂದಲೇ ಬಹಳಷ್ಟು ನವೋದ್ಯಮಿಗಳು ಇತ್ತಲೇ ಮುಖಮಾಡುತ್ತಿದ್ದಾರೆ.


ನಮ್ಮ ಬಲವಾದ ಗ್ರಾಹಕರ ನೆಲೆಯನ್ನು ಹೊಂದಿರುವುದರ ಹೊರತಾಗಿಯೂ, ನಮ್ಮ ಸಾಮರ್ಥ್ಯದ ಕೇವಲ ಒಂದು ಪ್ರತಿಶತದಷ್ಟನ್ನು ಮಾತ್ರ ನಾವು ಬಳಸಿಕೊಳ್ಳುತ್ತಿದ್ದೇವೆ ಮತ್ತು ನಾವು ಇನ್ನೂ ಬಹಳ ದೂರ ಸಾಗಬೇಕಾಗಿದೆ ಎಂದು ನಾವು ನಂಬುತ್ತೇವೆ. ಆದ್ದರಿಂದ, ನಾವು ಉದ್ಯಮವನ್ನು ವೈವಿಧ್ಯಗೊಳಿಸಲು ಮತ್ತು ವಿಸ್ತರಿಸಲು ಯೋಜಿಸುತ್ತಿದ್ದೇವೆ.


ಉದಾಹರಣೆಗೆ, ಇಂದಿನ ಯುವಕರ ಜೀವನಶೈಲಿಯನ್ನು ಪರಿಗಣಿಸಿ, ಜನರು ಸದೃಢವಾಗಿರಲು ಸಹಾಯ ಮಾಡಲು ನಾವು ನವೀನ ಉತ್ಪನ್ನಗಳನ್ನು ವಿನ್ಯಾಸಗೊಳಿಸುವ ಕಾರ್ಯದಲ್ಲಿದ್ದೇವೆ. ನಾವು ಸ್ಮಾರ್ಟ್ ವಾಚ್‌ಗಳು, ಫಿಟ್‌ನೆಸ್ ಟ್ರ್ಯಾಕರ್‌ಗಳು ಮತ್ತು ವರ್ಚುವಲ್ ರಿಯಾಲಿಟಿ ಮತ್ತು ಆಗ್‌ಮೆಂಟೆಡ್‌ ರಿಯಾಲಿಟಿ ಹೆಡ್‌ಸೆಟ್‌ಗಳನ್ನು ವಿನ್ಯಾಸಗೊಳಿಸಲು ಮತ್ತು ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿದ್ದೇವೆ.


ಎಸ್‌ಎಂಬಿಎಸ್: ಈಗ ಕರೋನವೈರಸ್ ಎಲ್ಲೆಡೆ ಹಬ್ಬಿರುವುದರಿಂದ, ಕಚ್ಚಾ ವಸ್ತುಗಳ ಅತಿದೊಡ್ಡ ರಫ್ತುದಾರ ರಾಷ್ಟ್ರವಾಗಿರುವ ಚೀನಾದ ಮೇಲೆ ವಿಶ್ವದ ಗಮನ ಬದಲಾಗಿದೆ, ಭಾರತವು ಈ ಅವಕಾಶವನ್ನು ಹೇಗೆ ಬಳಸಿಕೊಳ್ಳಬಹುದು?

ಎಂ.ಎ: ಈ ಪರಿಸ್ಥಿತಿ ಭಾರತಕ್ಕೆ ಆಶೀರ್ವಾದಂತಿದೆ. ಕಚ್ಚಾ ವಸ್ತುಗಳ ಮಾದರಿಗಳಿಗಾಗಿ ಯುಎಸ್‌ನಿಂದ ಬಹಳಷ್ಟು ಕಂಪನಿಗಳು ನಮ್ಮ ಬಳಿಗೆ ಬರುತ್ತವೆ ಏಕೆಂದರೆ ಅಮೆರಿಕಾದ ಕಂಪನಿಗಳು ಇನ್ನು ಮುಂದೆ ಚೀನಾದಿಂದ ಆಮದು ಮಾಡಲು ಇಷ್ಟಪಡುವುದಿಲ್ಲ.


ಆದ್ದರಿಂದ, ನಾವು ತಯಾರಿಸಿದ ಪವರ್ ಬ್ಯಾಂಕುಗಳು, ಕೇಬಲ್‌ಗಳು, ಚಾರ್ಜರ್‌ಗಳು ಮತ್ತು ಇಯರ್‌ಫೋನ್‌ಗಳ ಮಾದರಿಗಳನ್ನು ಅವರಿಗೆ ಕಳುಹಿಸಿದ್ದೇವೆ. ಇದು ಎಲ್ಲಾ ಸಂದರ್ಭದಲ್ಲೂ ನಾವು ಹತೋಟಿ ಸಾಧಿಸಬೇಕಾದ ಒಂದು ಅವಕಾಶ ಎಂದು ನಾನು ಭಾವಿಸುತ್ತೇನೆ.