ಸಾವಯುವ ಕೃಷಿಗೆ ಒತ್ತು ನೀಡುತ್ತಿವೆ ಈ ನಗರ ಕೃಷಿ ನವೋದ್ಯಮಗಳು

ಹೈಡ್ರೋಪೋನಿಕ್ಸ್ ಮತ್ತು ವರ್ಟಿಕಲ್‌ ಕೃಷಿಯಂತಹ ಹೊಸ ತಂತ್ರಜ್ಞಾನಗಳೊಂದಿಗೆ, ಈ ನವೋದ್ಯಮಗಳು ಜನರಿಗೆ ಸಣ್ಣ ನಗರಗಳಲ್ಲಿ ಉತ್ಪನ್ನಗಳನ್ನು ಬೆಳೆಯಲು ಸಹಾಯ ಮಾಡುತ್ತಿವೆ.

ಸಾವಯುವ ಕೃಷಿಗೆ ಒತ್ತು ನೀಡುತ್ತಿವೆ ಈ ನಗರ ಕೃಷಿ ನವೋದ್ಯಮಗಳು

Tuesday April 07, 2020,

4 min Read

50, 60ರ ದಶಕದಲ್ಲಿ ನಡೆದ ಹಸಿರು ಕ್ರಾಂತಿ ನಮ್ಮ ರೈತರಿಗೆ ಒಳ್ಳೆಯ ಬೆಳೆ ಬೆಳೆಯುವಂತೆ ಮಾಡಿದ್ದರೂ, ಅದರೊಟ್ಟಿಗೆ ಅಂದಿನಿಂದ ಬಳಸಿಕೊಂಡು ಬಂದ ಅಗತ್ಯಕ್ಕಿಂತ ಹೆಚ್ಚು ರಾಸಯಾನಿಕಗಳು ಮತ್ತು ಕ್ರಿಮಿನಾಶಕಗಳು ಈಗ ಮಣ್ಣಿನ ಫಲವತ್ತತೆಯ ಮೇಲೆ ಅಡ್ಡಪರಿಣಾಮ ಬೀರುತ್ತಿವೆ.


ನಂತರದ ವರ್ಷಗಳಲ್ಲಿ, ಅವು ಸಾಂಪ್ರದಾಯಿಕ ಕೃಷಿ ವಿಧಾನಗಳಲ್ಲಿ ಅಂತರ್ಗತವಾಗಿಬಿಟ್ಟವು, ಅವು ತಮ್ಮೊಟ್ಟಿಗೆ ಹಲವಾರು ಸಮಸ್ಯೆಗಳನ್ನು ತಂದಿವೆ. ಅವು ಮನುಷ್ಯರಿಗೆ ಕ್ಯಾನ್ಸರ್‌ ತರುವಷ್ಟು ಮಾರಕವಾಗಿರುವುದಷ್ಟೇ ಅಲ್ಲದೆ, ಮಣ್ಣು, ನೀರು, ಗಾಳಿ ಹಾಗೂ ನಾವು ಸೇವಿಸುವ ತರಕಾರಿ, ಹಣ್ಣುಗಳನ್ನೂ ಕಲುಷಿತಗೊಳಿಸಿವೆ ಹಾಗೂ ಪ್ರಾಣಿಗಳಿಗೂ ವಿಷಕಾರಿಯಾಗಿವೆ.


ನಗರ ಕೃಷಿ


ಈಗ, ಅನೇಕ ರೈತರು ಮತ್ತು ನಗರವಾಸಿಗಳು ಸಾವಯವ ಕೃಷಿ ಅಥವಾ ನಗರ ಕೃಷಿಗೆ ಬದಲಾಗಿದ್ದಾರೆ. ಸಾವಯವ ಕೃಷಿ ಚಳುವಳಿಗಳ ಅಂತರರಾಷ್ಟ್ರೀಯ ಒಕ್ಕೂಟ (ಐಎಫ್‌ಒಎಎಂ) ಪ್ರಕಾರ,


“ಸಾವಯವ ಕೃಷಿ ಎನ್ನುವುದು ಉತ್ಪಾದನಾ ವ್ಯವಸ್ಥೆಯಾಗಿದ್ದು, ಅದು ಮಣ್ಣು, ಪರಿಸರ ವ್ಯವಸ್ಥೆಗಳು ಮತ್ತು ಜನರ ಆರೋಗ್ಯವನ್ನು ಉಳಿಸಿಕೊಳ್ಳುತ್ತದೆ. ಇದು ಪ್ರತಿಕೂಲ ಪರಿಣಾಮಗಳನ್ನು ಹೊಂದಿರುವ ಆಂಶಗಳ ಬಳಕೆಗಿಂತ ಸ್ಥಳೀಯ ಪರಿಸ್ಥಿತಿಗಳಿಗೆ ಹೊಂದಿಕೊಂಡ ಪರಿಸರ ಪ್ರಕ್ರಿಯೆಗಳು, ಜೀವವೈವಿಧ್ಯತೆ ಮತ್ತು ಚಕ್ರಗಳನ್ನು ಅವಲಂಬಿಸಿದೆ.”


ಕೆಲವೇ ವರ್ಷಗಳ ಹಿಂದೆ, ನಗರಗಳಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು ಅಸಾಧ್ಯವೆಂದು ಭಾವಿಸಲಾಗುತ್ತಿತ್ತು. ಆದರೆ ಹೊಸ ತಂತ್ರಜ್ಞಾನಗಳಾದ ಹೈಡ್ರೋಪೋನಿಕ್ಸ್ ಮತ್ತು ಲಂಬ(ವರ್ಟಿಕಲ್) ಕೃಷಿಯು ಸಣ್ಣ ನಗರ ಸ್ಥಳಗಳಲ್ಲಿ ಉತ್ಪನ್ನಗಳನ್ನು ಬೆಳೆಯಲು ಸಾಧ್ಯವಾಗಿಸಿದೆ.


ಭಾರತದಲ್ಲಿ ಸುಸ್ಥಿರ ಕೃಷಿ ಪದ್ಧತಿಗಳನ್ನು ತರಲು ತಮ್ಮ ಪಾತ್ರವಹಿಸಿದ ಆರು ನಗರ ಕೃಷಿ ನವೋದ್ಯಮಗಳು ಇಲ್ಲಿವೆ:


ಯುಜಿಎಫ್ ಫಾರ್ಮ್ಸ್

ಲಿನೇಶ್ ನಾರಾಯಣ್ ಪಿಳ್ಳೈ ಅವರು 2017 ರಲ್ಲಿ ಪ್ರಾರಂಭಿಸಿದ ಅರ್ಬನ್ ಗ್ರೀನ್ ಫೇಟ್ (ಯುಜಿಎಫ್) ಫಾರ್ಮ್ಸ್, ಬಳಕೆಯಾಗದ ಸ್ಥಳಗಳನ್ನು ಲೈವ್ ಫುಡ್ ಗಾರ್ಡನ್‌ಗಳಾಗಿ ಪರಿವರ್ತಿಸುತ್ತದೆ. ಲೈವ್ ಫುಡ್ ಗಾರ್ಡನ್‌ಗಳನ್ನು ಕಟ್ಟಡಗಳಿಗೆ ಯಾವುದೇ ರಚನಾತ್ಮಕ ಹಾನಿಯಾಗದಂತೆ ನಿರ್ಮಿಸಲಾಗಿದೆ. ಮುಂಬೈ ಮೂಲದ ನವೋದ್ಯಮವು, ಭಾರೀ ಮಣ್ಣಿಗೆ ಬದಲಾಗಿ ಸಾವಯವ ಕೊಕೊ ಪೀಟ್‌ನಲ್ಲಿ ಬೆಳೆಯಲು ನಿವಾಸಿಗಳಿಗೆ ಮೈಕ್ರೊಗ್ರೀನ್‌ಗಳನ್ನು (ಮೊದಲ ಎಲೆಗಳನ್ನು ಬೆಳೆದ ನಂತರದ ತರಕಾರಿ ಸೊಪ್ಪು) ಮಡಕೆಗಳಲ್ಲಿ ಕಳುಹಿಸುತ್ತದೆ. ಬಳಕೆದಾರರು ಮಾಡಬೇಕಾಗಿರುವುದು, ಗ್ರೀನ್ಸ್ ಅನ್ನು ಲೈವ್ ಪ್ಲಾಂಟ್‌ನಿಂದ ಅವರಿಗೆ ಅಗತ್ಯವಿರುವಾಗ ಕತ್ತರಿಸುವುದು.


ಇದಲ್ಲದೆ, ಯುಜಿಎಫ್ ಹಸಿವು, ಅಪೌಷ್ಟಿಕತೆ, ಆಹಾರ ಮಾಲಿನ್ಯ ಮತ್ತು ಆಹಾರ ಅಭದ್ರತೆಯ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಶಾಲೆಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳೊಂದಿಗೆ ಸಹಕರಿಸುವ ಮೂಲಕ ಅವರ ಸಿಎಸ್ಆರ್ ಉಪಕ್ರಮಗಳ ಭಾಗವಾಗಿ ದುರ್ಬಲ ಸಮುದಾಯಗಳಿಗೆ ಕೆಲಸ ಮಾಡುತ್ತದೆ.


ಯುಜಿಎಫ್‌ ಫಾರ್ಮ್ಸ್




ಪ್ರಾರಂಭದಿಂದಲೂ, ನವೋದ್ಯಮವು 10,000 ಕೆಜಿ ಮೈಕ್ರೊಗ್ರೀನ್‌ಗಳನ್ನು ನೆಟ್ಟಿದೆ. ದೆಹಲಿ ಮತ್ತು ಮುಂಬೈನ ಅನೇಕ ಸ್ಥಳಗಳಲ್ಲಿ 150 ಕ್ಕೂ ಹೆಚ್ಚು ಕಾರ್ಯಾಗಾರಗಳಲ್ಲಿ 4,000 ಜನರಿಗೆ ತಮ್ಮ ಮನೆಗಳಲ್ಲಿ ಆಹಾರವನ್ನು ಬೆಳೆಸುವ ಮತ್ತು ಸಾವಯವಕ್ಕೆ ಬದಲಾಗುವ ಮಹತ್ವದ ಬಗ್ಗೆ ಶಿಕ್ಷಣ ನೀಡಿದೆ.


ಬ್ಯಾಕ್‌ ಟು ಬೇಸಿಕ್ಸ್‌

ಬ್ಯಾಕ್ 2 ಬೇಸಿಕ್ಸ್, ಎಸ್ ಮಧುಸೂಧನ್ ಅವರ ಕನಸಿನ ಕೂಸು. 2015 ರಲ್ಲಿ ಪ್ರಾರಂಭವಾದ ಇದು ಬೆಂಗಳೂರಿನ ಸುತ್ತಮುತ್ತಲಿನ 200 ಎಕರೆ ಪ್ರದೇಶದಲ್ಲಿ ಹರಡಿರುವ ಸಾವಯವ ಕೃಷಿಯಾಗಿದ್ದು, ಉತ್ತಮ ಗುಣಮಟ್ಟದ ಸಾವಯವ ಹಣ್ಣುಗಳು ಮತ್ತು ತರಕಾರಿಗಳನ್ನು ಉತ್ಪಾದಿಸುತ್ತದೆ.


ತಂದೆ-ಮಗಳು ನಡೆಸುತ್ತಿರುವ ಬ್ಯಾಕ್ 2 ಬೇಸಿಕ್ಸ್ ಬೆಂಗಳೂರಿನಲ್ಲಿ ಕಿರಾಣಿ ಸರಪಳಿಗಳು, ಚಿಲ್ಲರೆ ವ್ಯಾಪಾರಿಗಳು, ಸಾವಯವ ಮಳಿಗೆಗಳು ಮತ್ತು ಗೇಟೆಡ್ ಸಮುದಾಯಗಳಿಗೆ ಉತ್ಪನ್ನಗಳನ್ನು ಪೂರೈಸುತ್ತದೆ. ಇದರ ಉತ್ಪನ್ನಗಳನ್ನು ಸಾವಯವ ಆಹಾರ ಪೂರೈಕೆ ಸರಪಳಿಗಳು ಮತ್ತು ವಿಶ್ವದ ಇತರ ಭಾಗಗಳಲ್ಲಿನ ಚಿಲ್ಲರೆ ವ್ಯಾಪಾರಿಗಳಿಗೆ ರಫ್ತು ಮಾಡಲಾಗುತ್ತದೆ.


ಬ್ಯಾಕ್ 2 ಬೇಸಿಕ್ಸ್


ನವೋದ್ಯಮವು ಹಣ್ಣುಗಳು, ತರಕಾರಿಗಳು, ಸೊಪ್ಪುಗಳು ಮತ್ತು ಎಕ್ಸೊಟಿಕ್ಸ್ ಎಂಬ ನಾಲ್ಕು ವಿಭಾಗಗಳಲ್ಲಿ 90 ಕ್ಕೂ ಹೆಚ್ಚು ಬಗೆಯ ಕಾಲೋಚಿತ ಉತ್ಪನ್ನಗಳನ್ನು ನಿರ್ವಹಿಸುತ್ತದೆ. ಜಮೀನಿಗೆ ಭೇಟಿ ನೀಡಲು ಮತ್ತು ಕೃಷಿಯಲ್ಲಿ ಕೈ ಹಾಕಲು ಬಯಸುವ ಗ್ರಾಹಕರಿಗೆ ಇದು ಸುಮಾರು ಮೂರರಿಂದ ನಾಲ್ಕು ಎಕರೆಗಳನ್ನು ಕಾಯ್ದಿರಿಸಿದೆ.


ಇದು 100 ಪ್ರತಿಶತ ಸಾವಯವ ಉತ್ಪನ್ನಗಳನ್ನು ಉತ್ಪಾದಿಸುತ್ತದೆ. ತರಕಾರಿಗಳ ಬಣ್ಣ ಮತ್ತು ವಿನ್ಯಾಸದ ಮೇಲೆ ಉತ್ಪಾದಕರಿಗೆ/ಬೆಳೆಗಾರನಿಗೆ ಸಂಪೂರ್ಣ ನಿಯಂತ್ರಣವಿರುತ್ತದೆ, ಅವು ಆರೋಗ್ಯಕರವಾಗಿ ಮತ್ತು ರುಚಿಯಾಗಿರುತ್ತವೆ.


ಪಿಂಡ್‌ಫ್ರೆಶ್

ನ್ಯೂಯಾರ್ಕ್‌ನಿಂದ ಭಾರತಕ್ಕೆ ಹಿಂತಿರುಗಿದ ಸೋಮವೀರ್ ಸಿಂಗ್ ಆನಂದ್ ಅವರಿಗೆ, ಯುಜಿಎಫ್ ಫಾರ್ಮ್ಸ್ನ ಲಿನೇಶ್ ಅವರಂತೆಯೇ ಭಾರತದಲ್ಲಿ ಸಾವಯವ ಆಹಾರವನ್ನು ಪಡೆಯುವುದು ಅಸಾಧ್ಯವೆಂಬುದು ಅರಿವಾಯಿತು.


ಪಿಂಡ್‌ಫ್ರೆಶ್


ಈ ಸಮಸ್ಯೆಯನ್ನು ಪರಿಹರಿಸಲು, ಸೋಮವೀರ್ ಭಾರತೀಯ ಹವಾಮಾನ ಪರಿಸ್ಥಿತಿಗಳಿಗೆ ಸೂಕ್ತವಾದ ಒಳಾಂಗಣ ಹೈಡ್ರೋಪೋನಿಕ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದರು ಮತ್ತು ಚಂಡೀಗಡದಲ್ಲಿ 2016 ರಲ್ಲಿ ಪಿಂಡ್‌ಫ್ರೆಶ್ ಅನ್ನು ಪ್ರಾರಂಭಿಸಿದರು. ಸ್ಟಾರ್ಟ್ಅಪ್ ಭಾರತದಾದ್ಯಂತ ತಂತ್ರಜ್ಞಾನವನ್ನು ಬಳಸಿಕೊಂಡು ಕೃಷಿ ಮಾಡಲು ಬಯಸುವ ಜನರಿಗೆ ಒಳಾಂಗಣ ಮತ್ತು ಹೊರಾಂಗಣ ಹೈಡ್ರೋಪೋನಿಕ್ ಸಸ್ಯಗಳನ್ನು ಸ್ಥಾಪಿಸಿಕೊಡುತ್ತದೆ.


ಈ ಮೈಕ್ರೊಗ್ರೀನ್‌ಗಳು ಬೆಳೆಯಲು ಎಲ್ಲಾ ಸಮಯದಲ್ಲೂ ಬೆಳಕು, ತೇವಾಂಶ ಮತ್ತು ತಾಪಮಾನವನ್ನು ನಿಯಂತ್ರಿಸಲಾಗುತ್ತದೆ. ಮತ್ತು ಆ ಪರಿಣಾಮಕ್ಕಾಗಿ, ಪಿಂಡ್‌ಫ್ರೆಶ್ ಗುಣಮಟ್ಟದ ನಿಯಂತ್ರಿತ ಕೊಳವೆಗಳು, ದೀಪಗಳು ಮತ್ತು ಹೈಡ್ರೋಪೋನಿಕ್ ಸ್ಥಾವರವನ್ನು ಸ್ಥಾಪಿಸಲು ಬೇಕಾದ ಎಲ್ಲಾ ಉಪಕರಣಗಳನ್ನು ತಯಾರಿಸುತ್ತದೆ.


ಗ್ರೋಯಿಂಗ್ ಗ್ರೀನ್ಸ್

ಗ್ರೋಯಿಂಗ್ ಗ್ರೀನ್ಸ್ ಎಂಬ ಹೈಡ್ರೋಪೋನಿಕ್ ಫಾರ್ಮ್ ಅನ್ನು ಪ್ರಾರಂಭಿಸಲು ಮಾಜಿ ಇನ್ಫೋಸಿಸ್ ಉದ್ಯೋಗಿಗಳಾದ ಹಮ್ಸಾ ವಿ ಮತ್ತು ನಿತಿನ್ ಸಾಗಿ ಪಾಲುದಾರರಾದರು. ಬೆಂಗಳೂರು ಮೂಲದ ಬಿ 2 ಬಿ ಸ್ಟಾರ್ಟ್ಅಪ್ ಮೈಕ್ರೊಗ್ರೀನ್ಸ್, ಸಲಾಡ್ ಎಲೆಗಳು, ಮೊಗ್ಗುಗಳು, ಖಾದ್ಯ ಹೂವುಗಳು ಮತ್ತು ಗಿಡಮೂಲಿಕೆಗಳನ್ನು ನಗರದ ಉನ್ನತ ಮಟ್ಟದ ರೆಸ್ಟೋರೆಂಟ್‌ಗಳಿಗೆ ಮಾರಾಟ ಮಾಡುತ್ತದೆ.


ಗ್ರೋಯಿಂಗ್ ಗ್ರೀನ್ಸ್




ಒಂದರಿಂದ ಮೂರು ಇಂಚು ಎತ್ತರವಿರುವ ಈ ಮೈಕ್ರೊಗ್ರೀನ್‌ಗಳನ್ನು ಹೆಚ್ಚಾಗಿ ಆಹಾರವನ್ನು ಅಲಂಕರಿಸಲು ಬಳಸಲಾಗುತ್ತದೆ. ಅವು ಸಾಮಾನ್ಯ ಗಾತ್ರದ ಉತ್ಪನ್ನಗಳಿಗಿಂತ ಸುಮಾರು 40 ಪಟ್ಟು ಹೆಚ್ಚಿರುವ ಪೋಷಕಾಂಶಗಳ ಮಟ್ಟವನ್ನು ಕೇಂದ್ರೀಕರಿಸಿದೆ.


ವ್ಯವಹಾರಕ್ಕೆ ಇಳಿಯುವ ಮೊದಲು ಅವರ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳಲು ವಿವಿಧ ಬಾಣಸಿಗರೊಂದಿಗೆ ಮಾತನಾಡುವ ಮೂಲಕ ಇವರಿಬ್ಬರು ಸಂಪೂರ್ಣ ಸಂಶೋಧನೆ ನಡೆಸಿದರು.


ಸಣ್ಣ ಟೆರೇಸ್‌ನಲ್ಲಿ 2012 ರಲ್ಲಿ ಪ್ರಾರಂಭವಾದ ಈ ಸ್ಟಾರ್ಟ್ಅಪ್ ಪ್ರಸ್ತುತ ನಾಲ್ಕು ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದು, ಇದನ್ನು 10 ಎಕರೆಗೆ ವಿಸ್ತರಿಸಲು ಯೋಜಿಸಿದೆ.


ಹರ್ಬಿವೋರ್‌ ಫಾರ್ಮ್ಸ್

24ರ ವಯಸ್ಸಿನ ಅನೇಕರು ಉತ್ತಮವಾಗಿ ಸಂಬಳ ಪಡೆಯುವ ಉದ್ಯೋಗಗಳನ್ನು ಕೈಬಿಟ್ಟು ವ್ಯವಸಾಯ ಮಾಡಲು ಒಪ್ಪುವುದು ಅಸಾಧ್ಯವೇ. ಆದರೆ 2017 ರಲ್ಲಿ ಪುದುಚೇರಿಯ ಅರೋವಿಲ್ಲೆಗೆ ಭೇಟಿ ನೀಡಿದ ನಂತರ, ಮುಂಬೈ ಮೂಲದ ಜೋಶುವಾ ಲೂಯಿಸ್ ಮತ್ತು ಸಕಿನಾ ರಾಜ್‌ಕೋಟ್ವಾಲಾ ಅವರು ಸಂಗೀತಗಾರ ಮತ್ತು ಸಾವಯವ ಕೃಷಿಕ ಕೃಷ್ಣ ಮೆಕೆಂಜಿ ಅವರಿಂದ ಪ್ರೇರಿತರಾದರು, ಅವರು "ಸ್ಥಳೀಯ ಆಹಾರದ ಮೂಲಕ ಪ್ರಕೃತಿ ಮಾತೆಯನ್ನು ಗೌರವಿಸುವ" ಉದ್ದೇಶದಿಂದ ಸಾಲಿಟ್ಯೂಡ್ ಫಾರ್ಮ್ ಅನ್ನು ಪ್ರಾರಂಭಿಸಿದರು.


ಹರ್ಬಿವೋರ್‌ ಫಾರ್ಮ್ಸ್


ಮುಂಬೈನ ಮೊದಲ ಹೈಪರ್‌ಲೋಕಲ್, ಹೈಡ್ರೋಪೋನಿಕ್ ಫಾರ್ಮ್ ಹರ್ಬಿವೋರ್ ಫಾರ್ಮ್ಸ್ ಜೊತೆ ಇವರಿಬ್ಬರು ವ್ಯವಹಾರವನ್ನು ಆರಂಭಿಸಿದರು. ಇಂದು, ಈ ಫಾರ್ಮ್ 1,000 ಚದರ ಅಡಿ ವಿಸ್ತೀರ್ಣದಲ್ಲಿ 2,500 ಸಸ್ಯಗಳನ್ನು ಬೆಳೆಸುತ್ತದೆ. ಇದು ತಾಪಮಾನ-ನಿಯಂತ್ರಿತ ಒಳಾಂಗಣ ವ್ಯವಸ್ಥೆಯಿಂದ ಮುಂಬೈನಾದ್ಯಂತ ಗ್ರಾಹಕರಿಗೆ ತಾಜಾ, ಸಾವಯವ ತರಕಾರಿಗಳನ್ನು ಮಾರಾಟ ಮಾಡುತ್ತದೆ.


ತರಕಾರಿಗಳನ್ನು ಶೂನ್ಯ ಕೀಟನಾಶಕಗಳೊಂದಿಗೆ ಸ್ವಚ್ಚ ಹಾಗೂ ಬರಡಾದ ವಾತಾವರಣದಲ್ಲಿ ಬೆಳೆಯಲಾಗುತ್ತದೆ. ಸಾಂಪ್ರದಾಯಿಕ ಕೃಷಿ ವಿಧಾನಗಳಿಗೆ ಹೋಲಿಸಿದರೆ, ಈ ವ್ಯವಸ್ಥೆಯು "ನೀರಾವರಿ ವ್ಯವಸ್ಥೆಯನ್ನು ಮರುಬಳಕೆ ಮಾಡುವುದರಿಂದ," ಉತ್ಪನ್ನಗಳನ್ನು ಬೆಳೆಯಲು 80 ಪ್ರತಿಶತ ಕಡಿಮೆ ನೀರನ್ನು ಉಪಯೋಗಿಸುತ್ತದೆ.


ಕಟಾವು ಮಾಡಿದ ತರಕಾರಿಗಳನ್ನು ಗ್ರಾಹಕರ ಮನೆಗಳಿಗೆ ಕೆಲವೇ ಗಂಟೆಗಳಲ್ಲಿ ತಲುಪಿಸಲಾಗುತ್ತದೆ, ಅವುಗಳ ತಾಜಾತನ, ಪೋಷಣೆ ಮತ್ತು ಪರಿಮಳವನ್ನು ಕಾಪಾಡಿಕೊಳ್ಳುವಲ್ಲಿ ನವೋದ್ಯಮವು ಮಹತ್ವದ ಪಾತ್ರವಹಿಸುತ್ತದೆ.