ಇನ್ನು ಬೆರಳತುದಿಯಲ್ಲಿ ಸಿಗುತ್ತದೆ ಹಳ್ಳಿ ಅಡುಗೆ!

ಇಂಗ್ಲೆಂಡಿನಲ್ಲಿ ಸಾಫ್ಟ್ವೇರ್‌ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದ ಲೋವ ರಾಜು ಕಟಾರಿ ಭಾರತಕ್ಕೆ ಬಂದು ರೈತರ ಬಗ್ಗೆ ಅಭ್ಯಸಿಸಿ ವಿಲೇಜ್‌ ದುಕಾನ್‌ ಎಂಬ ಸಂಸ್ಥೆಯನ್ನು ಕಟ್ಟಿದರು. ಇದು ರೈತರು ಮತ್ತು ಗ್ರಾಹಕರ ನಡುವೆ ಮಾಧ್ಯವರ್ತಿಗಳಿಲ್ಲದೆ ಬೆಸೆದ ಸೇತುವೆಯಾಗಿದೆ.

ಇನ್ನು ಬೆರಳತುದಿಯಲ್ಲಿ ಸಿಗುತ್ತದೆ ಹಳ್ಳಿ ಅಡುಗೆ!

Thursday October 31, 2019,

3 min Read

ಇದು ಇಂಟರ್ನೆಟ್‌ ಯುಗ. ಇಲ್ಲಿ ಎಲ್ಲವೂ ಬೆರಳ ತುದಿಯಲ್ಲೇ ಸಿಗುತ್ತವೆ. ಕರಿಬೇವು ಸೊಪ್ಪಿನಿಂದ ಹಿಡಿದು ಬೇವಿನ ಎಣ್ಣೆಯವರೆಗೆ, ನೂರು ರೂಪಾಯಿಯ ಇಯರ್‌ ಫೋನಿನಿಂದ ಹಿಡಿದು ಲಕ್ಷದ ಐಫೋನ್‌, ಟಿವಿ, ಲ್ಯಾಪ್ಟಪ್‌, ಶೂ, ಬಟ್ಟೆ. ಏನು ಬೇಕೋ ಎಲ್ಲಾ ಸಿಗುತ್ತದೆ. ಇತ್ತೀಚೆಗಂತೂ ಊಟವೂ ಮನೆ ಬಾಗಿಲಿಗೆ ಬರುತ್ತದೆ.


21ನೇ ಶತಮಾನದ ಎರಡನೇ ದಶಕವೂ ಮುಗಿಯುತ್ತಾ ಬಂದಿದೆ. ಆದರೆ ನಾವಿನ್ನೂ ಹಳ್ಳಿಗಳನ್ನು ಉದ್ಧಾರ ಮಾಡುತ್ತೇವೆ, ರೈತರಿಗೆ ಸಹಾಯ ಮಾಡುತ್ತೇವೆ ಎಂದು ಹೇಳುತ್ತಲೇ ಇದ್ದೇವೆ ವಿನಃ ಯಾವ ಕಾರ್ಯ ಯೋಜನೆಗಳನ್ನೂ ರೂಪಿಸಿಲ್ಲ, ರೂಪಗೊಂಡಿದ್ದರೂ ಅನುಷ್ಠಾನ ಕನಸಿನ ಮಾತು. ಆದರೆ ಬೇಸತ್ತ ರೈತ ನೇಣು ಕುಣಿಕೆಗೆ ತಲೆಯೊಡ್ಡುತ್ತಿದ್ದಾನೆ. ಸರ್ಕಾರಗಳು ಅವನ ಕುಟುಂಬಕ್ಕೆ ಇಂತಿಷ್ಟು ಪರಿಹಾರ ಘೋಷಿಸಿ ತನ್ನ ಜವಾಬ್ದಾರಿ ಮುಗಿಸಿದಂತೆ ವರ್ತಿಸುತ್ತದೆ. ಇವುಗಳನ್ನು ದಿನನಿತ್ಯ ನೋಡಿ ನೋಡಿ ಶಾಸ್ತ್ರಿಗಳ ಜೈ ಕಿಸಾನ್‌ ಘೋಷಣೆ ಅವರೊಂದಿಗೇ ಹೋಯಿತೇನು ಅನಿಸುವುದಂತೂ ಸುಳ್ಳಲ್ಲ.


ಪ್ರಥಮ ದರ್ಜೆ ನಗರಗಳ ಮನೆಗಳ ಬಾಗಿಲಿಗೆ ಬರುವ ಸಾಮಾಗ್ರಿಗಳು ಬೃಹತ್‌ ಉದ್ಯಮದಲ್ಲಿ ತಯಾರಾದವು. ಅಲ್ಲಿ ರೈತನಿಗೆ ಸಿಗುವ ಲಾಭ ಎಳ್ಳಷ್ಟು ಮಾತ್ರ. ನಾವಿಲ್ಲಿ ಹೀಗೆ ಬರೆದು, ಸರ್ಕಾರಗಳನ್ನು ಬೈಯುತ್ತ ಕೂತಿದ್ದರೆ ಅಲ್ಲಿ ಲೋವ ರಾಜು ಕಟಾರಿ ಎಂಬ ಸಾಫ್ಟ್ವೇರ್‌ ಇಂಜಿನಿಯರ್‌ ತಮ್ಮ ‘ವಿಲೇಜ್‌ ದುಕಾನ್‌ʼನಿಂದ ಅತ್ತ ರೈತರಿಗೆ ಸಹಾಯ ಮಾಡುತ್ತಾ ದೊಡ್ಡ ನಗರಗಳಿಗೆ ಹಳ್ಳಿಯಲ್ಲಿ ತಯಾರಾದ ಉತ್ಪನ್ನಗಳನ್ನು, ಆಹಾರ ಸಾಮಾಗ್ರಿಗಳನ್ನು ಹಾಗೂ ಆಹಾರವನ್ನೂ ಮಾರುತ್ತ ದೇಶದ ಆರ್ಥಿಕತೆಗೂ ಸಹಾಯ ಮಾಡುತ್ತಿದ್ದಾರೆ.


ಲಂಡನ್ನಿನಲ್ಲಿದ್ದ ಉದ್ಯೋಗಿ – ರಾಜ್ಮುಂಡ್ರಿಯಲ್ಲಿ ರೈತ ಸ್ನೇಹಿ ನವೋದ್ಯಮ ಸೃಷ್ಟಿಸಿದ

2011-12 ಭಾರತದಲ್ಲಿ ರೈತರ ಆತ್ಮಹತ್ಯೆಯದ್ದೇ ಸುದ್ದಿ. ಭಾರತದ ಅಂದಿನ ಅತಿ ಕ್ರೂರ ವಾಸ್ತವ ಇಂದಿಗೂ ಕಡಿಮೆಯಾಗಿಲ್ಲ. ಮುಂಗಾರು ನಂಬಿಕೊಂಡು ರೈತ ಸಾಲ ಮಾಡಿ ಬಿತ್ತನೆ ಬೀಜ-ಗೊಬ್ಬರ ತರುತ್ತಾನೆ. ಮಳೆ ಬರುವುದಿಲ್ಲ, ಬೆಳೆ ಬರುವುದಿಲ್ಲ. ರೈತ ಸಾಲಗಾರನಾಗುತ್ತಾನೆ. ಬರ ನಾಡು ಸೀಮೆಗಳಲ್ಲಂತೂ ನೂರು ಎಕರೆ ಜಮೀನಿದ್ದವನೂ ಬಡವನಂತಾಗುತ್ತಾನೆ.


ಇಂಗ್ಲೆಂಡಿನಲ್ಲಿ ಕೆಲಸ ಮಾಡುತ್ತಿದ್ದ ರಾಜು ಅವರಿಗೆ ತಮ್ಮ ತಂದೆ ಎಂದೋ ಒಮ್ಮೆ ಓದಿದ್ದ ಸುದ್ದಿಯ ತುಣುಕು ಸದಾ ತಲೆಯಲ್ಲಿ ಓಡಾಡುತ್ತಿರುತ್ತದೆ. “ಚಿಕ್ಕವನಿದ್ದಾಗ ನನಗೆ–ಮಕ್ಕಳಿಗೆ ಶಿಕ್ಷಣ ನೀಡಲು ಬಡ ಪೋಷಕರು ಹೇಗೆ ಕಷ್ಟಪಡುತ್ತಿದ್ದರು ಎಂಬುದನ್ನು ನೋಡಿದ ನೆನಪಿತ್ತು, ಆ ನೆನಪು ಸದಾ ಕಾಡುತ್ತಿತ್ತು. ಅಂತಹ ಬಡ ರೈತ ಕುಟುಂಬಗಳಿಗೆ ಸಹಾಯ ಮಾಡಬೇಕು ಅವರಿಗೆ ಸುಸ್ಥಿರ ಆದಾಯ ಬರುವಂತೆ ಮಾಡಬೇಕೆಂದು ಸದಾ ಯೋಚಿಸುತ್ತಿದ್ದೆ” ಎಂದೆನ್ನುತ್ತಾರೆ ಎಫರ್ಟ್ಸ್‌ ಫಾರ್‌ ಗುಡ್‌ ಜೊತೆ ಮಾತನಾಡುತ್ತಾ ಲೋವ ರಾಜು.


2012ರಲ್ಲಿ ಭಾರತಕ್ಕೆ ಹಿಂದಿರುಗಿದ ರಾಜು ಇಲ್ಲಿನ ಹಳ್ಳಿಗಳನ್ನು ಶೋಧಿಸತೊಡಗಿದರು. ಇಲ್ಲಿನ ರೈತರ ಬಗ್ಗೆ ಅವರ ಜೀವನದ ಬಗ್ಗೆ ಅವರ ಆರ್ಥಿಕ ಪರಿಸ್ಥಿತಿಯ ಬಗ್ಗೆ ತಿಳಿದುಕೊಂಡರು.


ಭತ್ತದ ಗದ್ದೆಯಲ್ಲಿ ವಿಲೇಜ್‌ ದುಕಾನ್‌ (ಚಿತ್ರ ಕೃಪೆ : ಎಫರ್ಟ್ಸ್‌ ಫಾರ್‌ ಗುಡ್‌)


ಸತತ ಮೂರು ವರ್ಷಗಳ ಕಾಲ ಆಂಧ್ರದ ರೈತರ ಬಗ್ಗೆ ಅಧ್ಯಯನ ನಡೆಸಿದ ರಾಜು “ವಿಲೆಜ್‌ ದುಕಾನ್‌ನ” ಕಲ್ಪನೆಯೊಂದಿಗೆ ರೈತರ ಬಳಿಗೆ ಹೋದರು.


“ನನ್ನ ಪರಿಕಲ್ಪನೆ ಖಂಡಿತವಾಗಿಯೂ ಸೋಲುತ್ತದೆಂದೂ, ನಾನು ಇದನ್ನು ಇಲ್ಲಿಗೇ ಬಿಟ್ಟರೆ ಸಾಲಗಾರನಾಗುವುದಿಲ್ಲವೆಂದು ಬಹಳಷ್ಟು ಜನ ಹೆದರಿಸಿದರು” ಎನ್ನುತ್ತ ರಾಜು ತಮ್ಮ ನವೋದ್ಯಮದ ಆರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಆರಂಭದ ದಿನಗಳೆಂಬ ಕಷ್ಟದ ಸರಮಾಲೆ

“ಆಗೆಲ್ಲ ನಾನು ಬೆಳಗ್ಗಿನ 4 ಗಂಟೆಗೆ ಎದ್ದು ವೆಬ್‌ಸೈಟ್‌ ಡೆವಲಪ್‌ ಮಾಡುತ್ತಿದ್ದೆ, 8 ಗಂಟೆಗೆ ಮತ್ತೆ ಆಫೀಸಿಗೆ ತೆರಳುತ್ತಿದ್ದೆ. ತಡರಾತ್ರಿಯಲ್ಲಿ ಮತ್ತೆ ವೆಬ್‌ ಸೈಟ್‌ ಡೆವಲಪ್‌ ಮಾಡುತ್ತಿದ್ದೆ. ಸತತ ಎರಡು ವರ್ಷಗಳ ಕಾಲ ನನಗೆ ನಿದ್ದೆ, ರಜೆ ಹಾಗೂ ವಾರಾಂತ್ಯಗಳೇ ಮರೆತು ಹೋಗಿದ್ದವು” ಎನ್ನುತ್ತಾರೆ ರಾಜು.


30 ಉತ್ಪನ್ನಗಳೊಂದಿಗೆ ಆರಂಭಗೊಂಡಿದ್ದ ವಿಲೇಜ್‌ ದುಕಾನ್‌ ಎರಡೇ ತಿಂಗಳಲ್ಲಿ 700 ಉತ್ಪನ್ನಗಳನ್ನು ಮಾರಾಟ ಮಾಡಲು ಶುರು ಮಾಡಿತು. ಆರು ತಿಂಗಳಲ್ಲಿ ನೀರಿಕ್ಷೆಗೂ ಮೀರಿ ನಾಗಲೋಟದಿಂದ ಬೆಳೆದಿದ್ದ ವಿಲೇಜ್‌ ದುಕಾನ್‌ ಪೂರ್ಣಾವಧಿ ಕೆಲಸಗಾರರನ್ನು ನೇಮಕ ಮಾಡಿಕೊಳ್ಳಲು ಪ್ರಾರಂಭಿಸಿತು. ರಾಜಮುಂಡ್ರಿ ಅಷ್ಟೇ ಅಲ್ಲದೆ ಇದು ಈಗ ಹೈದರಬಾದ, ಪುನೆ, ಮುಂಬೈ ಹಾಗೂ ಬೆಂಗಳೂರಿಗೂ ತನ್ನ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ.


ವಿಲೇಜ್‌ ದುಕಾನ್‌ನ ಗೆಲುವಿನ ಗುಟ್ಟು!

ವಿಲೇಜ್‌ ದುಕಾನ್‌ ಕಾಳು-ಕಡ್ಡಿ, ಜೇನುತುಪ್ಪ ಹಾಗೂ ಗೃಹಕೈಗಾರಿಕೆಯಲ್ಲಿ ತಯಾರಾದ ಉಪ್ಪಿನಕಾಯಿ, ಚಟ್ನಿಗಳು, ಜಾಮ್‌ ಹಾಗೂ ಸಿಹಿ ತಿಂಡಿಗಳನ್ನು ತನ್ನ ಎಂಟು ಜನ ಡೆಲಿವೆರಿ ಉದ್ಯೋಗಿಗಳಿಂದ ಮನೆಬಾಗಿಲಿಗೆ ತಲುಪಿಸುತ್ತದೆ. ಅಷ್ಟೇ ಅಲ್ಲದೆ ಹಳೆ ಪದ್ಧತಿಯ ಆಂಧ್ರ ಶೈಲಿಯ ಅಡಿಗೆಗಳೇ ವಿಲೇಜ್‌ ದುಕಾನ್‌ನ ಗೆಲುವಿನ ಗುಟ್ಟಾಗಿದೆ.


ತಮ್ಮ ಕಾರ್ಯಶೈಲಿಯನ್ನು ವಿವರಿಸುತ್ತ ಲೊವ ರಾಜು ತಮ್ಮ ಬಳಗಕ್ಕೆ ಇತ್ತೀಚೆಗೆ ಸೇರಿಕೊಂಡ ಭತ್ತ ಬೆಳೆವ ರೈತನ ಕುರಿತು ಹೇಳುತ್ತ, “ಆ ರೈತನು 2019ರ ಚಳಿಗಾಲದ ಬೆಳೆಯನ್ನು 70 ಕೆಜಿಗಳಿಗೆ 1400 ರೂಪಾಯಿಗಳಿಗೆ ಮಾರುತ್ತೇನೆಂದು ಹೇಳಿದ್ದ. ವಿಲೇಜ್‌ ದುಕಾನ್‌ ಆತನಿಗೆ ಅದೇ ತೂಕಕ್ಕೆ 1700 ರೂ ಬೆಲೆಯನ್ನು ನಿಗದಿಪಡಿಸಿತು. ಉಳಿದ ಮುನ್ನೂರು ರುಪಾಯಿಗಳಿಂದ ರೈತನಿಗೆ ಭತ್ತವನ್ನು ಅಕ್ಕಿಯಾಗಿ ಮಾಡುವಂತೆ ಹೇಳಲಾಯಿತು, ಆ ಅಕ್ಕಿ ಈಗ ವಿಲೇಜ್‌ ದುಕಾನ್‌ ಜಾಲತಾಣದಲ್ಲಿ ಮುಂಗಡ ಆರ್ಡರ್‌ಗೆ ಸಿಗುತ್ತಿದೆ” ಎಂದರು.


ವಿಲೇಜ್‌ ದುಕಾನ್‌ನ ಧ್ಯೆಯೋದ್ದೇಶ

2017ರಲ್ಲಿ ಶುರುವಾದ ದುಕಾನ್‌, ಸಕ್ರಿಯ ಕಾರ್ಯಾರಂಭ ಮಾಡಿದ್ದು 2 ಮೇ 2018ರಂದು. ಹಳ್ಳಿಯ ಉತ್ಪಾದಕರನ್ನು ನಗರದ ಗ್ರಾಹಕರಿಗೆ ಯಾವುದೇ ಮಧ್ಯವರ್ತಿಗಳಿಲ್ಲದೆ ಪರಿಚಯಿಸುವುದು, ಅದರಿಂದ ಹಳ್ಳಿಯ ಜನರ ಏಳ್ಗೆ ಮಾಡುವುದು ಇದರ ಉದ್ದೇಶವಾಗಿದೆ. ಇಲ್ಲಿ ರೈತರೇ ನೇರವಾಗಿ ವಿಲೇಜ್‌ ದುಕಾನ್‌ ಮೂಲಕ ಗ್ರಾಹಕರಿಗೆ ತಲುಪಿಸುವುದರಿಂದ ಮಧ್ಯವರ್ತಿಗಳಿಗೆ ಹಂಚಿಹೋಗುತ್ತಿದ್ದ ದುಡ್ಡು ರೈತರಿಗೇ ಸಿಗುತ್ತಿದೆ. ಹಾಗೆಯೇ ಗ್ರಾಹಕರಿಗೂ ಕಡಿಮೆ ದರದಲ್ಲಿ ಉತ್ಪನ್ನಗಳು ದೊರೆಯುತ್ತವೆ.