ಜೈಪುರದ 3,500 ಕ್ಕೂ ಹೆಚ್ಚು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಿದ್ದಾರೆ ವಿಮಲ್ ದಾಗಾ

ಕಳೆದ 10 ವರ್ಷಗಳಲ್ಲಿ, 35 ವರ್ಷದ ವಿಮಲ್ ಅವರು 3,500 ಕ್ಕೂ ಹೆಚ್ಚು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರೋಗ್ರಾಮಿಂಗ್ ಮತ್ತು ಇತರ ಸಂಯೋಜಿತ ತಂತ್ರಜ್ಞಾನಗಳನ್ನು ಕಲಿಸುವ ಮೂಲಕ ಉದ್ಯೋಗಕ್ಕೆ ಸಿದ್ಧವಾಗುವಂತೆ ಮಾಡಿದ್ದಾರೆ.

ಜೈಪುರದ 3,500 ಕ್ಕೂ ಹೆಚ್ಚು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಿದ್ದಾರೆ ವಿಮಲ್ ದಾಗಾ

Wednesday November 20, 2019,

4 min Read

ಉತ್ತಮ ಶಿಕ್ಷಕನು ಮೇಣದ ಬತ್ತಿಯಂತೆ ಎಂಬ ಮಾತಿದೆ - ಮೇಣದ ಬತ್ತಿ ಹೇಗೆ ಇತರರಿಗೆ ಬೆಳಕು ನೀಡಲು ತಾನೇ ಉರಿಯುತ್ತದೆಯೋ ಹಾಗೆಯೇ ಶಿಕ್ಷಕರು ಎಂಬುದನ್ನು ನಿರೂಪಿಸಿದ್ದಾರೆ, 35 ವರ್ಷದ ವಿಮಲ್ ದಾಗಾ.


ವಿಮಲ್ ರಾಜಸ್ಥಾನದ ಜೈಪುರದಲ್ಲಿ ಲಿನಕ್ಸ್ ವರ್ಲ್ಡ್ ಇನ್ಫಾರ್ಮ್ಯಾಟಿಕ್ಸ್ ಎಂಬ ತಂತ್ರಜ್ಞಾನ ಮತ್ತು ತರಬೇತಿ ಪರಿಹಾರಗಳ ಕಂಪನಿಯನ್ನು ನಡೆಸುತ್ತಿದ್ದಾರೆ. ಆದರೆ ಅದನ್ನು ಹೊರತುಪಡಿಸಿ, ಅವರು ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣವನ್ನು ನೀಡುತ್ತಿದ್ದಾರೆ. ಅವರ ಪ್ರಯತ್ನಗಳ ಹಿಂದಿನ ಏಕೈಕ ಉದ್ದೇಶವೆಂದರೆ ಯುವ ಮನಸ್ಸುಗಳು ತಮ್ಮನ್ನು ತಾವು ಗುರುತಿಸಿಕೊಳ್ಳಲು ಅನುವು ಮಾಡಿಕೊಡುವುದಾಗಿದೆ.


ತಾವು ತರಬೇತಿ ನೀಡಿದ ವಿದ್ಯಾರ್ಥಿಗಳೊಂದಿಗೆ ವಿಮಲ್ ದಾಗಾ.


2009 ರಿಂದ ವಿಮಲ್, ಯುವಜನರನ್ನು ಉದ್ಯೋಗಕ್ಕೆ-ಸಿದ್ಧಗೊಳಿಸುವ ಉದ್ದೇಶದಿಂದ ಭಾರತದ ದ್ವಿತೀಯ ಮತ್ತು ತೃತೀಯ ಶ್ರೇಣಿಯ ಕಾಲೇಜುಗಳಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೊಂದಿಗೆ ತೊಡಗಿಸಿಕೊಂಡಿದ್ದಾರೆ. ಇಂದಿನ ಜಗತ್ತಿನಲ್ಲಿ ತಾಂತ್ರಿಕ ಪರಿಣತಿಯ ಅತ್ಯಂತ ಬೇಡಿಕೆಯ ಕೌಶಲ್ಯಗಳಾದ ಕೋಡಿಂಗ್, ಮೆಷಿನ್ ಲರ್ನಿಂಗ್ (ಎಂಎಲ್), ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ), ಡೀಪ್ ಲರ್ನಿಂಗ್ ಮತ್ತು ಕ್ಲೌಡ್ ಕಂಪ್ಯೂಟಿಂಗ್ ಮುಂತಾದ ಅನೇಕ ಪರಿಕಲ್ಪನೆಗಳಲ್ಲಿ ತರಬೇತಿ ನೀಡುತ್ತಾರೆ ವಿಮಲ್.


ದೇಶದ ಹಲವಾರು ಎಂಜಿನಿಯರಿಂಗ್ ಕಾಲೇಜುಗಳು, ವಿಶೇಷವಾಗಿ ಶ್ರೇಣಿ II ಮತ್ತು III ರಲ್ಲಿರುವ ಕಾಲೇಜುಗಳು, ವಿದ್ಯಾರ್ಥಿಗಳನ್ನು ಸರಿಯಾದ ಕೌಶಲ್ಯದಿಂದ ಸಜ್ಜುಗೊಳಿಸುವ ವಿಷಯದಲ್ಲಿ ಹಿಂದುಳಿಯುತ್ತವೆ. ಉದಾಹರಣೆಗೆ, ತಾರ್ಕಿಕ ಮತ್ತು ಪರಿಮಾಣಾತ್ಮಕ ಸಾಮರ್ಥ್ಯ ಮತ್ತು ಕಂಪ್ಯೂಟರ್ ಪ್ರೋಗ್ರಾಮಿಂಗ್‌ನಂತಹ ತಾಂತ್ರಿಕ ಅಂಶಗಳನ್ನು ಸಂಪೂರ್ಣವಾಗಿ ನೀಡಲಾಗುವುದಿಲ್ಲ. ವಿದ್ಯಾರ್ಥಿಗಳ ಉದ್ಯೋಗದ ಮೇಲೆ ಇದು ಪರಿಣಾಮ ಬೀರುತ್ತದೆ. ನಾನು ಇದನ್ನು ಗುರುತಿಸಿದ ಕೂಡಲೇ, ಅಂತಹವರನ್ನು ಕೌಶಲ್ಯಯುತರನ್ನಾಗಿಸಲು ಏನಾದರೂ ಮಾಡಬೇಕೆಂದು ನಿರ್ಧರಿಸಿದೆ” ಎಂದು ಲಿನಕ್ಸ್ ವರ್ಲ್ಡ್ ಇನ್ಫಾರ್ಮ್ಯಾಟಿಕ್ಸ್ ಸ್ಥಾಪಕ ಮತ್ತು ಅಧ್ಯಕ್ಷ ವಿಮಲ್ ದಾಗಾ ಸೋಶಿಯಲ್ ಸ್ಟೋರಿಗೆ ತಿಳಿಸಿದ್ದಾರೆ.


ಕಳೆದ 10 ವರ್ಷಗಳಲ್ಲಿ, ವಿಮಲ್ 3,500 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕಲಿಕೆಯ ರೇಖೆಯನ್ನು ಹೆಚ್ಚಿಸಿದ್ದಾರೆ ಮತ್ತು ಉದ್ಯೋಗಾವಕಾಶಗಳಿಗೆ ಒಡ್ಡಿಕೊಳ್ಳಲು ಸಹಾಯ ಮಾಡಿದ್ದಾರೆ. ಅವರ ಕಾರ್ಯನಿರತ ವೇಳಾಪಟ್ಟಿಯ ಹೊರತಾಗಿಯೂ, ಅವರು ಪ್ರತಿವರ್ಷ ಮೂರು ತಿಂಗಳುಗಳನ್ನು ವಿದ್ಯಾರ್ಥಿಗಳ ತರಬೇತಿಗಾಗಿ ಮೀಸಲಿಡುವ ಮೂಲಕ ಇದನ್ನು ಸಾಧಿಸಿದರು.


ನಡೆದು ಬಂದ ದಾರಿ

ಜೈಪುರದಲ್ಲಿ ಹುಟ್ಟಿ ಬೆಳೆದ ವಿಮಲ್ ಅವರು ಶಿಕ್ಷಣದಲ್ಲಿ ಹೆಚ್ಚು ಪ್ರವೀಣರಾಗಿರಲಿಲ್ಲ ಮತ್ತು ಶಾಲೆಯಲ್ಲಿ ಕೆಲವು ಸಮಸ್ಯೆಗಳನ್ನು ಹೊಂದಿದ್ದರು. ಅವರು 19 ವರ್ಷದವರಾಗಿದ್ದಾಗ, ಅವರ ತಂದೆ ತಮ್ಮ ಫಾರ್ಮಾ ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸಿದರು ಮತ್ತು ಅಂತಿಮವಾಗಿ ಅದನ್ನು ಮುಚ್ಚಬೇಕಾಯಿತು.


ಒಬ್ಬನೇ ಮಗನಾಗಿದ್ದರಿಂದ, ತನ್ನ ಮೂವರು ಸಹೋದರಿಯರ ಜವಾಬ್ದಾರಿಯನ್ನು ತೆಗೆದುಕೊಳ್ಳುವುದರ ಜೊತೆಗೆ ಮನೆ ನಡೆಸುವುದನ್ನು ಬಿಟ್ಟು ಅವರಿಗೆ ಬೇರೆ ದಾರಿಯಿರಲಿಲ್ಲ.


ವಿಮಲ್ ದಾಗಾ ಭಾರತದ ಯುವಜನರನ್ನು ಉದ್ಯೋಗಕ್ಕೆ-ಸಿದ್ಧಗೊಳಿಸುತ್ತಿದ್ದಾರೆ.


“ನನ್ನ ಬಾಲ್ಯ ಮತ್ತು ಬೆಳವಣಿಗೆಯ ವರ್ಷಗಳು ತುಂಬಾ ಕಷ್ಟಕರವಾಗಿದ್ದವು. ನಾನು ಅಕಾಡೆಮಿಕ್‌ಗಳಲ್ಲಿ ಅಷ್ಟು ಉತ್ತಮವಾಗಿಲ್ಲದ ಕಾರಣ, ಬಹಳಷ್ಟು ಜನರು ನನ್ನನ್ನು ಕೀಳಾಗಿ ನೋಡುತ್ತಿದ್ದರು. ಇದಕ್ಕೆ ಮತ್ತಷ್ಟು ಸೇರಿಸುವಂತೆ, ನನ್ನ ತಂದೆ ವ್ಯವಹಾರದಲ್ಲಿ ಸಾಕಷ್ಟು ಹಣವನ್ನು ಕಳೆದುಕೊಂಡರು. ನಾವು ಕುಟುಂಬದಲ್ಲಿ ಆರು ಜನರಿದ್ದೆವು ಮತ್ತು ದಿನಕ್ಕೆ ಮೂರು ಹೊತ್ತು ಊಟ ಮಾಡಲು ನಾವು ಹೆಣಗಾಡುತ್ತಿದ್ದೆವು. ನನ್ನ ಕುಟುಂಬಕ್ಕೆ ಸಹಾಯ ಮಾಡುವ ಉದ್ದೇಶದಿಂದ, ನನ್ನ ಸೀಮಿತ ಜ್ಞಾನದಿಂದ, ನಾನು 11 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ಟ್ಯೂಷನ್ ತೆಗೆದುಕೊಳ್ಳಲು ಪ್ರಾರಂಭಿಸಿದೆ. ಆಗ ಶಿಕ್ಷಕನಾಗಿ ನನ್ನ ನಿಲುವು ಪ್ರಾರಂಭವಾಯಿತು," ಎಂದು ವಿಮಲ್ ನೆನಪಿಸಿಕೊಳ್ಳುತ್ತಾರೆ.


2005 ರಲ್ಲಿ, ವಿಮಲ್ ಜೈಪುರ ಎಂಜಿನಿಯರಿಂಗ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ (ಜೆಇಸಿಆರ್ಸಿ) ಎಂಜಿನಿಯರಿಂಗ್ ವಿಷಯದಲ್ಲಿ ಎರಡನೇ ವರ್ಷ ಓದುತ್ತಿದ್ದಾಗ, ಅವರು ತಮ್ಮದೇ ಆದ ಒಂದು ಉದ್ಯಮವನ್ನು ಸ್ಥಾಪಿಸಿದರು: ಲಿನಕ್ಸ್ ವರ್ಲ್ಡ್ ಇನ್ಫಾರ್ಮ್ಯಾಟಿಕ್ಸ್. ವಿಮಲ್ ತಮ್ಮ ಸ್ನೇಹಿತರಿಂದ 15 ಸಾವಿರ ರೂ. ಗಳನ್ನು ಎರವಲು ಪಡೆಯುವ ಮೂಲಕ ಕಂಪನಿಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಹಣದ ಕೊರತೆಯಿರುವ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ವಿಮಲ್ ಅವರ ಉದ್ದೇಶವಾಗಿತ್ತು. ಮತ್ತು ಅದೇ, ಅವರನ್ನು ವಿಶಿಷ್ಟ ಹಾದಿಯಲ್ಲಿ ನಡೆಯುವಂತೆ ಪ್ರೇರೇಪಿಸಿತು.


ತರಬೇತಿ ಕೇಂದ್ರವಾಗಿ ಪ್ರಾರಂಭವಾದ ಲಿನಕ್ಸ್, ವರ್ಷಗಳಲ್ಲಿ ಅಧಿಕವಾಗಿ ಬೆಳೆದಿದೆ. ಇಂದು, ಇದು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕೋರ್ಸ್‌ಗಳನ್ನು ಒದಗಿಸುತ್ತದೆ - ಪ್ರಮಾಣೀಕರಣಗಳು ಮತ್ತು ಕಾರ್ಯಾಗಾರಗಳಿಂದ ಹಿಡಿದು ಇಂಟರ್ನ್‌ಶಿಪ್ ಕಾರ್ಯಕ್ರಮಗಳವರೆಗೆ ಅವರನ್ನು ಕಾರ್ಪೊರೇಟ್ ಜಗತ್ತಿಗೆ ಹೆಜ್ಜೆ ಇಡಲು-ಸಿದ್ಧವಾಗಿಸುತ್ತದೆ.


ವಿದ್ಯಾರ್ಥಿಗಳನ್ನು ಕೌಶಲ್ಯಯುತವಾಗಿಸುತ್ತ

2009 ರಲ್ಲಿ, ವಿಮಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಲಿಸಲು ಪ್ರತಿವರ್ಷ ಮೂರು ತಿಂಗಳುಗಳನ್ನು ಮೀಸಲಿಡಲು ಪ್ರಾರಂಭಿಸಿದರು, ಮತ್ತು ಕಾಲೇಜುಗಳಲ್ಲಿನ ತಾಂತ್ರಿಕ ಕೌಶಲ್ಯಗಳ ಬಗ್ಗೆ ಗಮನ ಹರಿಸದಿರುವುದನ್ನು ಅರಿತುಕೊಂಡರು. ಜೈಪುರ ಮತ್ತು ಸುತ್ತಮುತ್ತಲಿನ ಹಲವಾರು ಕಾಲೇಜುಗಳ ವಿದ್ಯಾರ್ಥಿಗಳು ವಿಮಲ್ ಅವರ ಕಾರ್ಯಾಗಾರಕ್ಕೆ ಬರತೊಡಗಿದರು.


ಜೈಪುರದ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಬೋಧಿಸುತ್ತಿರುವ ವಿಮಲ್.


"ನನ್ನ ತರಬೇತಿ ಅವಧಿಗಳು ಸಾಮಾನ್ಯವಾಗಿ ಸಾಕಷ್ಟು ಕಠಿಣವಾಗಿವೆ ಮತ್ತು ದಿನಕ್ಕೆ ಸುಮಾರು 12 ಗಂಟೆಗಳ ಕಾಲ ಇರುತ್ತವೆ. ನಾನು ಅವುಗಳನ್ನು ಎರಡು ಬ್ಯಾಚ್‌ಗಳಲ್ಲಿ ನಡೆಸುತ್ತಿದ್ದೇನೆ - ಪ್ರತಿಯೊಂದೂ ಒಂದೂವರೆ ತಿಂಗಳವರೆಗೂ ನಡೆಯುತ್ತವೆ. 2017 ರಲ್ಲಿ, ನನ್ನ ಕೆಲಸಕ್ಕೆ ಒಂದು ಗುರುತನ್ನು ರಚಿಸಲು ಸಂಘವನ್ನು ಔಪಚಾರಿಕವಾಗಿ ಸ್ಥಾಪಿಸಲು ನಾನು ನಿರ್ಧರಿಸಿದೆ. ನಾನು ಇದನ್ನು ಇಂಡಿಯನ್ ಇನ್ನೋವೇಶನ್ ಮತ್ತು ಎಂಟರ್‌ಪ್ರೆನ್ಯೂರ್‌ಶಿಪ್ ಕಮ್ಯುನಿಟಿ (ಐಐಇಸಿ) ಎಂದು ಹೆಸರಿಸಿದ್ದೇನೆ ಏಕೆಂದರೆ ಅದು ನನ್ನ ಅನೇಕ ವಿದ್ಯಾರ್ಥಿಗಳು ತಂತ್ರಜ್ಞಾನ ಜಾಗದಲ್ಲಿ ಹೊಸತನವನ್ನು ಮತ್ತು ಉದ್ಯಮಶೀಲತೆಯತ್ತ ವಾಲುವಂತೆ ಮಾಡಿತು,” ಎನ್ನುತ್ತಾರೆ ವಿಮಲ್.


ವಿಮಲ್ ಅವರ ಅಧಿವೇಶನಗಳನ್ನು ಸಾಮಾನ್ಯವಾಗಿ ಜೈಪುರದ ಸಭಾಂಗಣಗಳಲ್ಲಿ ನಡೆಸಲಾಗುತ್ತದೆ, ಅದನ್ನು ಅವರು ಮೂರು ತಿಂಗಳು ಬಾಡಿಗೆಗೆ ಪಡೆದುಕೊಳ್ಳುತ್ತಾರೆ. ಪ್ರತಿ ವರ್ಷ, ಸ್ವಯಂಸೇವಕರ ತಂಡವು ಅಧಿವೇಶನಗಳನ್ನು ಆಯೋಜಿಸಲು ಅವರಿಗೆ ಸಹಾಯ ಮಾಡುತ್ತದೆ. ಈ ವರ್ಷ, ಭಾರತದಾದ್ಯಂತ 200 ಎಂಜಿನಿಯರಿಂಗ್ ಕಾಲೇಜುಗಳಿಂದ ಸುಮಾರು 1,000 ವಿದ್ಯಾರ್ಥಿಗಳು ಉಚಿತ ತರಬೇತಿ ಅವಧಿಯಲ್ಲಿ ಭಾಗವಹಿಸಿದ್ದರು.


ಆದಾಗ್ಯೂ, ಈ ವರ್ಷದ ಪ್ರಯತ್ನದ ವಿಶೇಷತೆಯೆಂದರೆ, ವಿಮಲ್‌ ರ ಸೆಷನ್‌ಗಳಿಗೆ ಹಾಜರಾದ ನಂತರ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮದೇ ಆದ ಟೆಕ್-ಚಾಲಿತ ಉದ್ಯಮಗಳನ್ನು ಪ್ರಾರಂಭಿಸಿದರು. ಅವುಗಳಲ್ಲಿ ಕೆಲವು ಇಂತಿವೆ : ಧೋಬಿ-ಘಾಟ್ (ಲಾಂಡ್ರಿ ಸೇವೆಗಳು), ಆರ್ಚ್‌ಮೇಟ್ (ವೈಯಕ್ತಿಕ ವಾಸ್ತುಶಿಲ್ಪ), ಎಂಇಡಿ ಡಿ (ಆನ್‌ಲೈನ್ ವೈದ್ಯಕೀಯ ಅಂಗಡಿ), ಮತ್ತು ಈಸಿ ಮನಿ (ಹಣ ನಿರ್ವಹಣೆ).


ವಿಮಲ್ ದಾಗಾ ಇತ್ತೀಚೆಗೆ ತಮ್ಮ ವಿದ್ಯಾರ್ಥಿಗಳ ಉದ್ಯಮಶೀಲತಾ ಪ್ರಯಾಣವನ್ನು ಆಚರಿಸಲು ಜಜ್ಬಾ ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದರು.


ಆರಂಭಿಕ ಉದ್ಯಮಗಳನ್ನು ಗುರುತಿಸಲು ಮತ್ತು ಅವರ ವಿದ್ಯಾರ್ಥಿಗಳ ಉದ್ಯಮಶೀಲತೆಯ ಪ್ರಯಾಣವನ್ನು ಆಚರಿಸಲು, ವಿಮಲ್ ಇತ್ತೀಚೆಗೆ ಜಜ್ಬಾ ಎಂಬ ಕಾರ್ಯಕ್ರಮವನ್ನು ಆಯೋಜಿಸಿದರು.


ವಿದ್ಯಾರ್ಥಿ ಸಮುದಾಯಕ್ಕೆ ವಿಮಲ್ ಅವರ ಕೊಡುಗೆ ಇಲ್ಲಿಗೆ ನಿಲ್ಲುವುದಿಲ್ಲ. ಅನೇಕ ಹಣಕಾಸಿನ ಅಡಚಣೆಗಳನ್ನು ಅನುಭವಿಸಿದ ವಿಮಲ್ ಇತರ ವಿದ್ಯಾರ್ಥಿಗಳು ಅದೇ ರೀತಿ ಕಷ್ಟಗಳನ್ನು ಅನುಭವಿಸಬಾರದೆಂದು ಬಯಸಿದರು. ಇದಕ್ಕಾಗಿಯೇ ಅವರು ದೀನದಲಿತ ವಿದ್ಯಾರ್ಥಿಗಳ ಶಿಕ್ಷಣಕ್ಕೂ ಪ್ರಾಯೋಜಕತ್ವ ನೀಡಲು ನಿರ್ಧರಿಸಿದರು. ಇಲ್ಲಿಯವರೆಗೆ, ಅವರು ತಮ್ಮ ಸಂಬಳದ ಪ್ರಮುಖ ಭಾಗವನ್ನು ನೀಡುವ ಮೂಲಕ ಸುಮಾರು 4,000 ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹಣವನ್ನು ನೀಡಿದ್ದಾರೆ.


ಬದಲಾವಣೆ ಮಾಡುತ್ತ


ವರ್ಷಗಳಲ್ಲಿ, ವಿಮಲ್ ಅವರ ಅಧಿವೇಶನಗಳಿಂದ ಸಾವಿರಾರು ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ. ಸಿದ್ಧಾರ್ಥ್ ಬಿ.ವಿ ಅದರಲ್ಲೋಬ್ಬರು.


"ವಿಮಲ್ ಅವರ ಮಾರ್ಗದರ್ಶನದಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ ಮತ್ತು ಇಂದಿನ ಯುಗದಲ್ಲಿ ಕಂಪ್ಯೂಟರ್ ವಿಜ್ಞಾನ ಮತ್ತು ತಂತ್ರಜ್ಞಾನದ ಅನ್ವಯದ ಬಗ್ಗೆ ಹಲವಾರು ಒಳನೋಟಗಳನ್ನು ಪಡೆದುಕೊಂಡಿದ್ದೇನೆ. ತರಬೇತಿಗೆ ಹಾಜರಾಗುವುದಕ್ಕಿಂತ ಇದು ನನಗೆ ಹೆಚ್ಚಿನ ಅನುಭವವಾಗಿದೆ,” ಎಂದು ಅವರು ಹೇಳುತ್ತಾರೆ.


ವಿಮಲ್‌ರ ವಿದ್ಯಾರ್ಥಿಗಳು ಪ್ರೆಸೆಂಟೇಷನ್‌‌ಗೆ ತಯಾರಾಗುತ್ತಿರುವುದು.


ಈ ಸಮಯದಲ್ಲಿ ವಿಮಲ್ ಅವರ ಏಕೈಕ ಉದ್ದೇಶವೆಂದರೆ ಹೆಚ್ಚು ಹೆಚ್ಚು ವಿದ್ಯಾರ್ಥಿಗಳಿಗೆ ಕಲಿಸುವ ಮೂಲಕ ಮತ್ತು ‘ಕೌಶಲ್ಯ ಅಂತರವನ್ನು’ ನಿವಾರಿಸುವ ಮೂಲಕ ಭಾರತವನ್ನು ಭವಿಷ್ಯಕ್ಕೆ ಸಿದ್ಧಗೊಳಿಸುವುದು.


ಅವರ ಪ್ರೇರಣೆಯ ಬಗ್ಗೆ ಕೇಳಿದಾಗ, ವಿಮಲ್ ಹೀಗೆ ಹೇಳುತ್ತಾರೆ,

“ಬೋಧನೆಯು ನನಗೆ ಅಪಾರ ತೃಪ್ತಿಯನ್ನು ನೀಡುತ್ತದೆ ಮತ್ತು ಜ್ಞಾನವನ್ನು ಹರಡುವ ಕ್ರಿಯೆ ನನ್ನ ಹೃದಯಕ್ಕೆ ಬಹಳ ಹತ್ತಿರವಾಗಿದೆ. ಇದು ನನ್ನನ್ನು ಮುಂದುವರಿಸಿಕೊಂಡು ಹೋಗುತ್ತದೆ”.