ನದಿಯಲ್ಲಿ 600 ಮೀಟರ್ ಈಜಿ ಜಾಗೃತಿ ಮೂಡಿಸಿದ 11 ವರ್ಷದ ದೃಷ್ಟಿಹೀನ ಬಾಲಕ

ಕೇರಳದ ಪೆರಿಯಾರ್ ನದಿಯಲ್ಲಿ 30 ನಿಮಿಷಗಳಲ್ಲಿ 600 ಮೀಟರ್ ಈಜುವ ಮೂಲಕ ಮುಳುಗುವ ಘಟನೆಗಳನ್ನು ತಡೆಗಟ್ಟುವ ಬಗ್ಗೆ ಮನೋಜ್ ಜಾಗೃತಿ ಮೂಡಿಸುತ್ತಿದ್ದಾನೆ.

ನದಿಯಲ್ಲಿ 600 ಮೀಟರ್ ಈಜಿ ಜಾಗೃತಿ ಮೂಡಿಸಿದ 11 ವರ್ಷದ ದೃಷ್ಟಿಹೀನ ಬಾಲಕ

Monday February 24, 2020,

2 min Read

ಇದು ಅನುಕರಿಸಲು ಕಷ್ಟಕರವಾದ ಸಾಧನೆಯಾಗಿದೆ. 11 ವರ್ಷದ ಆರ್. ಮನೋಜ್ ತನ್ನ ದೃಷ್ಟಿಹೀನತೆಗೆ ಸವಾಲಾಗಿ ದಾಖಲೆಯ ಸಮಯದಲ್ಲಿ ನದಿಗೆ ಅಡ್ಡಲಾಗಿ ಈಜಿಸಾಧನೆ ಮಾಡಿದ್ದಾನೆ ಹಾಗೂ ಈ ಸಾಧನೆಯನ್ನು ಒಂದು ನಿರ್ದಿಷ್ಟ ಕಾರಣಕ್ಕಾಗಿ ಮಾಡಿದ್ದಾನೆ.‌


ದೇಶದಲ್ಲಿ ಹೆಚ್ಚುತ್ತಿರುವ ಮುಳುಗುವ ಘಟನೆಗಳಿಂದ ಆತಂಕಗೊಂಡ ಮನೋಜ್, ಈಜುವಿಕೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಕೈಗೆತ್ತಿಕೊಂಡನು. ಈಜುವುದನ್ನು ಕಲಿಯುವುದರ ಮೂಲಕ ಅನೇಕ ಜೀವಗಳನ್ನು ಉಳಿಸಬಹುದು ಎಂಬ ಸಂದೇಶವನ್ನು ನೀಡಲು ಅವನು ಬಯಸಿದ್ದನು.


ಮನೋಜ್ ಕೇರಳದ ಪೆರಿಯಾರ್ ನದಿಯಲ್ಲಿ 30 ನಿಮಿಷಗಳಲ್ಲಿ 600 ಮೀಟರ್ ಈಜಿದ್ದಾನೆ. ಅದ್ವೈತ ಆಶ್ರಮದಿಂದ ಬೆಳಿಗ್ಗೆ 8:10 ಕ್ಕೆ ನದಿಯಲ್ಲಿ ಈಜಲು ಪ್ರಾರಂಭಿಸಿದ ಮನೋಜ್‌ ಬೆಳಿಗ್ಗೆ 8: 40 ಕ್ಕೆ ಅಲುವಾ ಮನಪ್ಪುರಂ ತಲುಪಿದನು.


ಚಿತ್ರಕೃಪೆ: ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌




ಅದ್ವೈತ ಆಶ್ರಮದ ಮುಖ್ಯಸ್ಥ ಸ್ವಾಮಿ ಸ್ವರೂಪಾನಂದ ಸ್ವಾಮಿಕಲ್ ಈಜಿಗೆ ಚಾಲನೆ ನೀಡಿದರು.


ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಮನೋಜ್, “ನನ್ನ ಹಿರಿಯರಲ್ಲಿ ಒಬ್ಬರಾದ ನವನೀತ್, 2015 ರಲ್ಲಿ ಪೆರಿಯಾರ್ ನದಿಗೆ ಅಡ್ಡಲಾಗಿ ಈಜಿದ ಮೊದಲ ದೃಷ್ಟಿ ಹೀನ ವ್ಯಕ್ತಿ, ನಂತರ ಅವರು ಈಜು ಕಲಿಯಲು ನನಗೆ ಸ್ಫೂರ್ತಿಯಾದರು,” ಎಂದು ಹೇಳಿದನು.

“ನಾವು ಮುಳುಗಿದ ಅನೇಕ ಪ್ರಕರಣಗಳ ಬಗ್ಗೆ ಕೇಳುತ್ತೇವೆ. ನಮಗೆ ಈಜು ತಿಳಿದಿದ್ದರೆ ನೀರಿನಲ್ಲಿ ಅಪಘಾತಗಳನ್ನು ತಪ್ಪಿಸಬಹುದು. ಈಜುವಿಕೆಯ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ನನ್ನ ಉದ್ದೇಶವಾಗಿದೆ. ಆರಂಭಿಕ ತರಬೇತಿ ತರಗತಿಗಳಲ್ಲಿ ನನಗೆ ಕಷ್ಟವಾಯಿತು. ಸಾಜಿ ಸರ್ ನನ್ನನ್ನು ಪ್ರತಿದಿನ ಬಹಳ ದೂರ ಈಜುವಂತೆ ಮಾಡಿದರು ಮತ್ತು ನಾನು ಪ್ರಯತ್ನವನ್ನು ಅನಾಯಾಸವಾಗಿ ಪೂರ್ಣಗೊಳಿಸಿದೆ,” ಎಂದರು.


ಮನೋಜ್ ಅವರ ತರಬೇತುದಾರ ಸಾಜಿ ವಲಸೆರಿಲ್ 30 ದಿನಗಳ ಕಾಲ ತರಬೇತಿ ನೀಡಿದರು. ಸಾಜಿ ಇದುವರೆಗೆ 3,000 ಜನರಿಗೆ ಈಜಲು ತರಬೇತಿ ನೀಡಿದ್ದಾರೆ. ಮನೋಜ್ ಅವರ ಹಿರಿಯ ನವನೀತ್ ಅವರಿಗೂ ಸಾಜಿ ತರಬೇತಿ ನೀಡಿದ್ದಾರೆ, ವರದಿ ದಿ ಲಾಜಿಕಲ್ ಇಂಡಿಯನ್.

ಸಾಜಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆ ಮಾತನಾಡುತ್ತಾ, “ಮನೋಜ್‌ಗೆ ತರಬೇತಿ ನೀಡುವುದು ತುಂಬಾ ಸುಲಭ. ಅವರು ಶಾಂತ ಮನಸ್ಥಿತಿಯಲ್ಲಿ ಈಜುತ್ತಿದ್ದರಿಂದ ಮುಗಿಸಲು 30 ನಿಮಿಷಗಳನ್ನು ತೆಗೆದುಕೊಂಡರು. ವಿಭಿನ್ನ ಸಾಮರ್ಥ್ಯದ ಮಕ್ಕಳ ಪೋಷಕರು ತರಬೇತಿ ಪಡೆಯಲು ಅವರನ್ನು ಪ್ರೋತ್ಸಾಹಿಸಬೇಕಾಗಿದೆ. ವಾಸ್ತವವಾಗಿ ಶಾಲಾ ಪಠ್ಯಕ್ರಮದಲ್ಲಿ ಈಜನ್ನು ಸೇರಿಸಬೇಕು,” ಎಂದರು.