ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡುವ ಪ್ರಕ್ರಿಯೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ಬೆಂಗಳೂರಿನ ಬೋಸನ್ ವೈಟ್ ವಾಟರ್

ಬೆಂಗಳೂರು ಮೂಲದ ಬೋಸನ್ ವೈಟ್ ವಾಟರ್ ಎಂಬ ಸ್ಟಾರ್ಟಪ್ ಸಂಸ್ಥೆ ಚರಂಡಿ ನೀರು ಸಂಸ್ಕರಣಾ ಘಟಕಗಳಿಂದ ಹೊರಬರುವ ನೀರನ್ನು ಶುದ್ಧೀಕರಿಸಿ ಗೃಹಕೃತ್ಯಗಳಿಗೆ ಬಳಸಬಹುದಾದ ಮತ್ತು ಕುಡಿಯಲೂ ಕೂಡ ಯೋಗ್ಯವಾದ ನೀರನ್ನಾಗಿ ಪರಿವರ್ತಿಸುತ್ತಿದೆ.

11th Sep 2019
  • +0
Share on
close
  • +0
Share on
close
Share on
close

ತಮ್ಮ ಪ್ರಮುಖ ಗ್ರಾಹಕರಾದ ಆರ್ ಜಡ್ ಎಮ್ ಎಕೋವರ್ಲ್ಡ್ ಸಂಸ್ಥೆಯಲ್ಲಿ ಬೋಸನ್ ವೈಟ್ ವಾಟರ್ ಸಂಸ್ಥಾಪಕ ವಿಕಾಸ್ ಬ್ರಹ್ಮಾವರ


ಈಗಾಗಲೇ ಭಾರತವು ಮುಂದಿನ ದಿನಗಳಲ್ಲಿ ಬಳಸಲು ಯೋಗ್ಯವಾದ ನೀರಿನ ಕೊರತೆಯ ಬಿಕ್ಕಟ್ಟನ್ನು ಎದುರಿಸಲು ಸಿದ್ಧವಾಗಬೇಕಾದ ಸ್ಥಿತಿಯಲ್ಲಿದೆ. ನೀತಿ ಆಯೋಗದ ವರದಿಯೊಂದರ ಪ್ರಕಾರ 2020 ನೇ ಇಸವಿಯಷ್ಟರಲ್ಲಿ 21 ನಗರಗಳಲ್ಲಿ ಅಂತರ್ಜಲವು ಬತ್ತಿ ಹೋಗುವ ಸಂಭವವಿದೆ. 2050 ನೇ ಇಸವಿಯಷ್ಟರಲ್ಲಿ ಜನಸಂಖ್ಯೆಯು 1.6 ಶತಕೋಟಿಯನ್ನು ದಾಟುವುದರಿಂದ ನೀರಿನ ಸಮಸ್ಯೆಯು ಮತ್ತಷ್ಟು ಹದಗೆಡುವ ಸಾಧ್ಯತೆಯಿದೆ.


ಭಾರತವು ಎದುರಿಸುತ್ತಿರುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕೆನ್ನುವ ಹಂಬಲದಿಂದ 2008 ರಲ್ಲಿ ಬೋಸನ್ ವೈಟ್ ವಾಟರ್ ಸಂಸ್ಥೆಯ ಸಂಸ್ಥಾಪಕರಾದ ವಿಕಾಸ್ ಬ್ರಹ್ಮಾವರ ಇಂಗ್ಲೇಂಡಿನಿಂದ ಭಾರತಕ್ಕೆ ಮರಳಿದರು.


ಮೊಟ್ಟಮೊದಲಿಗೆ ಅವರು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನೀರಿನ ಗುಣಮಟ್ಟವನ್ನು ಹೆಚ್ಚಿಸುವ ಉತ್ಪನ್ನಗಳನ್ನು ತಯಾರಿಸುವಲ್ಲಿ ನಿರತರಾದರು. ಆದರೆ ಅವರಿಗೆ ತಕ್ಷಣವೇ ದೇಶದಲ್ಲಿ ಬಳಸಲು ಯೋಗ್ಯವಾದ ನೀರಿನ ಕೊರತೆಯಿರುವುದು ಅರಿವಿಗೆ ಬಂದಿತು.


“ಇಲ್ಲಿಗೆ ಬಂದ ಮೇಲೆ, ಸಂಸ್ಕರಿಸಿ ಮರುಬಳಕೆ ಮಾಡದೇ ಬಹಳಷ್ಟು ಗಾತ್ರದ ನೀರನ್ನು ಪ್ರತಿದಿನವೂ ಚರಂಡಿಗಳಿಗೆ ಬಿಡಲಾಗುತ್ತಿದೆ ಎಂಬ ಸತ್ಯದ ಅರಿವಾಯಿತು. ಇದನ್ನು ಬದಲಾಯಿಸುವ ಯಾವುದಾದರೂ ದಾರಿಯನ್ನು ಹುಡುಕಬೇಕೆಂಬ ಸಂಕಲ್ಪ ಮೂಡಿತು” ಎಂದು ವಿಕಾಸ್ ವಿವರಿಸುತ್ತಾರೆ.

ಮುಂದಿನ ದಿನಗಳಲ್ಲಿ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡಲೇಬೇಕಾದ ಅನಿವಾರ್ಯತೆ ಇದೆ ಎಂಬುದನ್ನು ಅವರು ಒತ್ತಿ ಹೇಳುತ್ತಾರೆ.


2011 ನೇ ಇಸವಿಯಲ್ಲಿ ಸ್ಥಾಪಿತವಾದ ಬೋಸನ್ ವೈಟ್ ವಾಟರ್ ಸಂಸ್ಥೆ ಚರಂಡಿ ನೀರು ಸಂಸ್ಕರಣಾ ಘಟಕಗಳಿಂದ (ಎಸ್ ಟಿ ಪಿ) ಹೊರಬರುವ ನೀರನ್ನು ಶೌಚಾಲಯ, ಮನೆಯ ಮುಂದಿನ ಉದ್ಯಾನವನ (ತಾಂತ್ರಿಕವಾಗಿ ಕುಡಿಯಲೂ ಕೂಡ) ಮುಂತಾದ ಗೃಹಕೃತ್ಯಗಳಿಗೆ ಬಳಸಲು ಯೋಗ್ಯವಾದ ನೀರನ್ನಾಗಿ ಪರಿವರ್ತಿಸುತ್ತದೆ.


ಕೇಂದ್ರ ಹವಾನಿಯಂತ್ರಣ ವ್ಯವಸ್ಥೆ ಹೊಂದಿರುವ ಮಾಲುಗಳು ಮತ್ತು ಐಟಿ ಪಾರ್ಕುಗಳಲ್ಲಿ ನೀರಿನ ಟ್ಯಾಂಕರುಗಳಿಂದ ನೀರನ್ನು ಖರೀದಿಸಿ ಅದನ್ನು ಸ್ಥಳದಲ್ಲಿಯೇ ಸಂಸ್ಕರಿಸಿ ಕೂಲಿಂಗ್ ಟವರುಗಳಿಗೆ ಬಳಸುವುದು ಸಾಮಾನ್ಯವಾಗಿದೆ. ಆದರೆ ಬೋಸನ್ ವೈಟ್ ವಾಟರ್ ನಿರ್ಮಿಸಿರುವ ಮಾದರಿಯಲ್ಲಿ ಗ್ರಾಹಕರು ಸಂಸ್ಕರಿಸಿದ ನೀರಿಗೆ ಮಾತ್ರ ಹಣ ನೀಡುತ್ತಾರೆ ಮತ್ತು ಅದು ಟ್ಯಾಂಕರ್ ನೀರಿಗಿಂತ ಕಡಿಮೆ ವೆಚ್ಚದ್ದಾಗಿರುತ್ತದೆ. ಬೋಸನ್ ವೈಟ್ ವಾಟರ್ ಸಂಸ್ಥೆಯು ಸ್ಥಾಪನಾ ಮತ್ತು ನಿರ್ವಹಣಾ ವೆಚ್ಚಗಳನ್ನು ಭರಿಸುತ್ತದೆ. ಇದರಿಂದಾಗಿ ಟ್ಯಾಂಕರ್ ನೀರಿನ ಮೇಲಿನ ಅವಲಂಬನೆ ತಪ್ಪುತ್ತದೆ ಮತ್ತು ಬಳಸಿದ ನೀರು ನಿರಂತರವಾಗಿ ಸಂಸ್ಕರಣೆಗೊಂಡು ಮರುಬಳಕೆಯಾಗುತ್ತಲೇ ಇರುತ್ತದೆ. ಸಂಸ್ಥೆಯು ತನ್ನ ಗ್ರಾಹಕರು ನೀರಿನ ಗುಣಮಟ್ಟ ಮತ್ತು ಗಾತ್ರವನ್ನು ಯಾವಾಗ ಬೇಕಾದರೂ ಪರೀಕ್ಷಿಸಲು ಅನುವಾಗುವಂತೆ ಆನ್ಲೈನ್ ಡ್ಯಾಶ್ ಬೋರ್ಡ್ ವ್ಯವಸ್ಥೆಯೊಂದನ್ನು ಮಾಡಿದೆ.


ತಾವು ನಿರ್ಮಿಸಿದ ನೀರು ಶುದ್ಧೀಕರಣ ಘಟಕವನ್ನು ಗ್ರಾಹಕರಿಗೆ ನೀಡುವ ಮೊದಲು ಪರೀಕ್ಷಿಸುವ ಸ್ಥಳದಲ್ಲಿ ಬೋಸನ್ ವೈಟ್ ವಾಟರ್ ಸಂಸ್ಥೆಯ ಸಂಸ್ಥಾಪಕ ವಿಕಾಸ್ ಬ್ರಹ್ಮಾವರ


ತಪ್ಪು ಕಲ್ಪನೆಗಳ ನಿವಾರಣೆ


ಯಾವುದೇ ಒಂದು ಹೊಸ ರೀತಿಯ ಉದ್ಯಮಕ್ಕೆ ಬರಬಹುದಾದ ಎಲ್ಲಾ ಅಡ್ಡಿ ಆತಂಕಗಳು ಪ್ರಾರಂಭದಲ್ಲಿ ಬೋಸನ್ ವೈಟ್ ವಾಟರ್ ಸಂಸ್ಥೆಗೂ ಎದುರಾದವು. ಇಸ್ರೇಲ್, ನಮೀಬಿಯಾ, ಸಿಂಗಪೂರ್ ದೇಶಗಳಲ್ಲಿ ವಿಕಾಸ್ ಮತ್ತು ಅವರ ತಂಡದವರು ನೀರಿನ ನಿರ್ವಹಣಾ ಮಾದರಿಗಳನ್ನು ಅಧ್ಯಯನ ಮಾಡಿ ಹಲವಾರು ಪ್ರಯೋಗಗಳ ನಂತರ ಭಾರತದ ನಗರಗಳಿಗೆ ಅನ್ವಯಿಸಬಹುದಾದ ಪ್ರೋಟೊ ಟೈಪ್ ಮಾದರಿಯನ್ನು ಅಭಿವೃದ್ಧಿಪಡಿಸಿದರು. ಆದರೂ ಗ್ರಾಹಕರು ಸುಲಭ ದರದಲ್ಲಿ ಸಂಸ್ಕರಿಸಿದ ನೀರನ್ನು ಮರುಬಳಕೆ ಮಾಡುವ ಸಂಸ್ಥೆಯ ಉದ್ದೇಶವನ್ನು ಅರಿಯಲು ಸಾಕಷ್ಟು ಸಮಯ ತೆಗೆದುಕೊಂಡರು.


ಮೊದಲ ದಿನಗಳಲ್ಲಿ ಚರಂಡಿ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬ ಸಾಮಾನ್ಯ ತಪ್ಪುಕಲ್ಪನೆಯನ್ನು ನಿವಾರಿಸುವುದು ಬಹಳಷ್ಟು ಕಷ್ಟಕರವಾಯಿತು. ದೊಡ್ಡ ಬಹುಮಹಡಿ ಕಟ್ಟಡ ಸಂಕೀರ್ಣಗಳು, ವಾಣಿಜ್ಯ ಕಟ್ಟಡಗಳಲ್ಲಿ ಚರಂಡಿ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವುದು ಕಡ್ಡಾಯವಾಗಿದ್ದರೂ ಕೂಡ ಅವುಗಳಿಂದ ಬರುವ ನೀರು ತುಸು ಬಣ್ಣ ಕಳೆದುಕೊಂಡಿರುವುದು ಮತ್ತು ಸ್ವಲ್ಪ ಕೆಟ್ಟ ವಾಸನೆಯಿಂದಾಗಿ ಆ ನೀರಿನ ಮರುಬಳಕೆಗೆ ಪ್ರತಿರೋಧ ವ್ಯಕ್ತವಾಗುತ್ತದೆ.


ಬೋಸನ್ ವೈಟ್ ವಾಟರ್ ಮಾಡಿದ ಒಂದು ಆಂತರಿಕ ಅಧ್ಯಯನದಲ್ಲಿ ಕಂಡುಬಂದ ಅಂಶವೆಂದರೆ, ಪ್ರತಿಶತಃ ಕೇವಲ 20 ರಿಂದ 30 ರಷ್ಟು ನೀರು ಮಾತ್ರ ಇಂತಹ ಕಟ್ಟಡಗಳಲ್ಲಿ ಬಳಕೆಯಾಗುತ್ತಿದೆ ಮತ್ತು ಉಳಿದ ನೀರು ಸುಮ್ಮನೆ ವ್ಯಯವಾಗುತ್ತಿದೆ. ಬೆಂಗಳೂರು ನಗರದಲ್ಲಿ ಒಂದು ಅಂದಾಜಿನ ಪ್ರಕಾರ 5,000 ದೊಡ್ಡ ಅಪಾರ್ಟ್ ಮೆಂಟುಗಳು ಮತ್ತು ಐಟಿ ಕಾಂಪ್ಲೆಕ್ಸುಗಳಿವೆ. ಇವು ಪ್ರತಿದಿನ ಸರಾಸರಿ ಸುಮಾರು ಮೂರು ಲಕ್ಷ ಲೀಟರ್ ನೀರನ್ನು ಉಪಯೋಗಿಸುತ್ತವೆ. ಈ ಅಂಕಿಅಂಶಗಳು ಬಹಳಷ್ಟು ಗಾತ್ರದ ನೀರು ಒಳಚರಂಡಿಗಳನ್ನು ಸೇರುತ್ತಿದೆ ಎಂಬುದನ್ನು ದೃಢಪಡಿಸುತ್ತವೆ. ಇದನ್ನು ಬೋಸನ್ ವೈಟ್ ವಾಟರ್ ಸಂಸ್ಥೆ ಉಳಿಸಬಲ್ಲದಾಗಿದೆ.


ದೂರ ಸಂವೇದಿ ಡಾಟಾದ ಸಹಾಯದಿಂದ ಸ್ಥಳವನ್ನು ಭೌತಿಕವಾಗಿ ಪರೀಕ್ಷೆಗೆ ಒಳಪಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವುದು. ಚಿತ್ರಕೃಪೆ: ಬೊಸನ್‌ ವೈಟ್‌ ವಾಟರ್


ನೀರು, ನೀರು, ಎಲ್ಲೆಲ್ಲಿಯೂ ನೀರು....

ಕಂಪೆನಿಯು ಬೆಂಗಳೂರಿನಲ್ಲಿ ವಕೀಲ್ ಸ್ಯಾಟಲೈಟ್ ಟೌನ್ ಶಿಪ್, ಆರ್ ಎಮ್ ಜಡ್ ಎಕೋವರ್ಲ್ದ್ ಮತ್ತು ಸೋಲ್ ಸ್ಪೇಸ್ ಅರೆನಾ ಮಾಲ್ ಮುಂತಾದ ದೊಡ್ಡ ಅಪಾರ್ಟಮೆಂಟ್ ಸಂಕೀರ್ಣಗಳಲ್ಲಿ ಮತ್ತು ಐಟಿ ಪಾರ್ಕುಗಳಲ್ಲಿ ತನ್ನ ಘಟಕಗಳನ್ನು ಸ್ಥಾಪಿಸಿದೆ. ಇದರಿಂದಾಗಿ ತಿಂಗಳಿಗೆ 35 ರಿಂದ 45 ಲಕ್ಷ ಲೀಟರುಗಳಷ್ಟು ನೀರು ಉಳಿತಾಯವಾಗುತ್ತಿದೆ. ಇದು 6,000 ಲೀಟರ್ ಸಾಮರ್ಥ್ಯದ 500 ರಿಂದ 600 ನೀರಿನ ಟ್ಯಾಂಕರುಗಳಿಗೆ ಸಮನಾಗಿದೆ.


ವಕೀಲ್ ಸ್ಯಾಟಲೈಟ್ ಟೌನ್ ಶಿಪ್ಪಿನ ಪಿಯೂಶ್ ಹೇಳುತ್ತಾರೆ, “ಚರಂಡಿ ನೀರು ಸಂಸ್ಕರಣಾ ಘಟಕಗಳಿಂದ ಬರುವ ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡುವ ಬೋಸನ್ ವೈಟ್ ವಾಟರ್ ಸಿಸ್ಟಮ್ ನಮ್ಮ ಬಡಾವಣೆಯಲ್ಲಿ ಸ್ಥಾಪಿತವಾದ ದಿನದಿಂದ ತುಂಬಾ ಹೆಚ್ಚಿನ ಮೊತ್ತದ ನೀರು ಉಳಿತಾಯವಾಗಿದೆ. ನಿರಂತರವಾಗಿ ಉತ್ತಮ ಗುಣಮಟ್ಟದ ನೀರೂ ಸಹ ದೊರೆಯುತ್ತಿದೆ. ಸರಿ ಸುಮಾರು ಪ್ರತಿದಿನ 10,000 ದಿಂದ 20,000 ಲೀಟರ್ ನೀರು ಉಳಿತಾಯವಾಗುತ್ತದೆ.”


2020 ನೇ ಇಸವಿಯ ಹೊತ್ತಿಗೆ ಪ್ರತಿವರ್ಷ 500 ಕೋಟಿ ಲೀಟರ್ ನೀರನ್ನು ಉಳಿತಾಯ ಮಾಡುವ ಮಹಾತ್ವಾಕಾಂಕ್ಷೆಯ ಗುರಿಯನ್ನು ಬೋಸನ್ ವೈಟ್ ವಾಟರ್ ಸಂಸ್ಥೆ ಹೊಂದಿದೆ. ನೀರಿನ ನಿರ್ವಹಣೆ ಮತ್ತು ನೀರಿನ ಉಳಿತಾಯಕ್ಕೆ ಸಂಬಂಧಿಸಿದ ಬೇಡಿಕೆಗಳು ಮುಂದಿನ ದಿನಗಳಲ್ಲಿ ನಿರಂತರವಾಗಿ ಏರುಮುಖವಾಗುತ್ತವೆ ಎಂದು ವಿಕಾಸ್ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ.


ಬಳಸಿದ ನೀರನ್ನು ನಿರ್ವಹಿಸುವ ಬೇಡಿಕೆಯು ಬಾರತದಲ್ಲಿ ಇನ್ನೂ ಶೈಶಾವಸ್ಥೆಯಲ್ಲಿದೆ. ಪ್ರಸ್ತುತ ಕಟ್ಟಡ ನಿರ್ಮಾಣ ಪರವಾನಗಿ ಪಡೆಯಲು ಮಾತ್ರ ಜನರು ಚರಂಡಿ ನೀರಿನ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವುದು ಅನಿವಾರ್ಯವಾಗಿದೆ. ಆದರೆ ಈ ದೃಷ್ಟಿಕೋನ ಇತ್ತೀಚೆಗೆ ಬದಲಾಗುತ್ತಿದೆ. ಈಗ ಜನರಿಗೆ ಕೇವಲ ನಿಯಮಗಳಿಗೋಸ್ಕರವಾಗಿ ಅದನ್ನು ಮಾಡುವುದರ ಬದಲು ನೀರು ಮತ್ತು ಹಣವನ್ನು ಉಳಿಸುವ ಸಲುವಾಗಿ ಮಾಡಬೇಕು ಎನ್ನುವುದು ಅರಿವಾಗಿದೆ. ಬಹಳಷ್ಟು ಜನರು ನೀರಿನ ಉಳಿತಾಯ ಮಾಡುವ ನಮ್ಮ ಧ್ಯೇಯವನ್ನು ಸಾರ್ಥಕಪಡಿಸಲು ನಮ್ಮೊಂದಿಗೆ ಕೈಜೋಡಿಸುತ್ತಾರೆ ಎನ್ನುವ ವಿಶ್ವಾಸವಿದೆ” ಎಂದು ವಿಕಾಸ್ ಆಶಾಭಾವನೆ ವ್ಯಕ್ತಪಡಿಸುತ್ತಾರೆ.
  • +0
Share on
close
  • +0
Share on
close
Share on
close
Report an issue
Authors

Related Tags

Our Partner Events

Hustle across India