ಕೋವಿಡ್‌-19 ನಡುವೆಯು ಸಾಗಿದೆ ಹಿಮಾಚಲ ಪ್ರದೇಶದ ಏಕೈಕ ಮಹಿಳಾ ಬಸ್‌ ಚಾಲಕಿಯ ಪ್ರಯಾಣ

ಹಿಮಾಚಲ ಪ್ರದೇಶ ರಸ್ತೆ ಸಾರಿಗೆ ನಿಗಮದ 8,813 ನೌಕರರಲ್ಲಿರುವ ಏಕೈಕ ಮಹಿಳಾ ಚಾಲಕಿಯಾಗಿರುವ ಸೀಮಾ ಠಾಕುರ್‌ ಪ್ರತಿದಿನ ಲಿಂಗ ತಾರತಮ್ಯವನ್ನು ಮುರಿದು ಎಲ್ಲರೂ ಸಮಾನರೆಂದು ಸಾರುತ್ತಿದ್ದಾರೆ.

ಕೋವಿಡ್‌-19 ನಡುವೆಯು ಸಾಗಿದೆ ಹಿಮಾಚಲ ಪ್ರದೇಶದ ಏಕೈಕ ಮಹಿಳಾ ಬಸ್‌ ಚಾಲಕಿಯ ಪ್ರಯಾಣ

Wednesday September 09, 2020,

2 min Read

ಲೇಖಕ, ಹೋರಾಟಗಾರ ಮತ್ತು ಕಾನೂನು ವಿದ್ವಾಂಸ ಬೊಸಾ ಸೆಬೆಲೆ, “ದೃಢನಿಶ್ಚಯದಿಂದ ಮೇಲೆರಬೇಕೆಂದುಕೊಂಡ ಮಹಿಳೆಗಿಂತ ಯಾವ ದೊಡ್ಡ ಶಕ್ತಿಯು ಇಲ್ಲ,” ಎಂದಿದ್ದರು.


ಈ ವಾಕ್ಯಕ್ಕೆ ಉದಾಹರಣೆಯಂತಿದ್ದಾರೆ ಹಿಮಾಚಲ ಪ್ರದೇಶದ ಸೀಮಾ ಠಾಕುರ್‌. ಹಿಮಾಚಲ ಪ್ರದೇಶ ರಸ್ತೆ ಸಾರಿಗೆ ನಿಗಮದ 8,813 ನೌಕರರಲ್ಲಿರುವ ಏಕೈಕ ಮಹಿಳಾ ಚಾಲಕಿಯಾಗಿರುವ ಸೀಮಾ ಠಾಕುರ್‌ ಪ್ರತಿದಿನ ಲಿಂಗ ತಾರತಮ್ಯವನ್ನು ಮುರಿದು ಎಲ್ಲರೂ ಸಮಾನರೆಂದು ಸಾರುತ್ತಿದ್ದಾರೆ.


ಹಿಮಾಚಲ ಪ್ರದೇಶ ರಸ್ತೆ ಸಾರಿಗೆ ನಿಗಮದ ಏಕೈಕ ಮಹಿಳಾ ಚಾಲಕಿ ಸೀಮಾ ಠಾಕುರ್‌

ಚಿತ್ರಕೃಪೆ: ಎಎನ್‌ಐ



ಬೆಳಿಗ್ಗೆ ಬೇಗನೆಯೆಳುವುದರಿಂದ ಹಿಡಿದು ಶಿಮ್ಲಾದ ಒರಟಾದ ರಸ್ತೆಗಳಲ್ಲಿ ಕುಶಲತೆಯಿಂದ ಬಸ್‌ ಓಡಿಸುತ್ತಾ ಎಲ್ಲವನ್ನು ನಿಭಾಯಿಸುತ್ತಿದ್ದಾರೆ ಸೀಮಾ. ಕೊರೊನಾವೈರಸ್‌ ಸಾಂಕ್ರಾಮಿಕದ ನಡುವೆ ಅವರು ತಮ್ಮ ಕೆಲಸಕ್ಕೆ ಹಾಜಾರಾಗಿ ಜನರಿಗೆ ನೆರವಾಗುತ್ತಿದ್ದಾರೆ.


“ಹಿಮಾಚಲ ಪ್ರದೇಶದ ಮೊದಲ ಮಹಿಳಾ ಬಸ್‌ ಚಾಲಕಿ ನಾನು. ಮೇ 5, 2016 ರಂದು ನಾನು ಎಚ್‌ಆರ್‌ಟಿಸಿಯಲ್ಲಿ ಬಸ್‌ ಚಾಲಕಿಯಾಗಿ ಸೇರಿಕೊಂಡೆ. ಕೋವಿಡ್‌-19 ನಡುವೆ ನಾನು ಕೆಲಸ ಮಾಡುತ್ತಿದ್ದೆನೆ. ವೈದ್ಯರು, ದಾದಿಯರು ಮತ್ತು ಮಹಿಳಾ ಪೊಲೀಸರು ಈಗ ಕೆಲಸ ಮಾಡುತ್ತಿದ್ದಾರೆ. ನಾನು ಅವರಂತೆ ಕರ್ತವ್ಯ ನಿರ್ವಹಿಸುತ್ತೆದ್ದೆನೆ ಎಂದುಕೊಳ್ಳುತ್ತೇನೆ,” ಎಂದು ಸೀಮಾ ಎಎನ್‌ಐ ಗೆ ಹೇಳಿದರು.


ತಂದೆ, ತಾಯಿ, ಸಹೋದರನೊಂದಿಗೆ ವಾಸವಾಗಿರುವ ಸೀಮಾ ವಾಹನ ಓಡಿಸುವುದರಿಂದ ನನಗೆ ತೃಪ್ತಿ ಸಿಗುತ್ತದೆ ಎನ್ನುತ್ತಾರೆ.


“ಜನರಿಗೆ ಬಸ್‌ ಚಾಲಕಿಯಾಗಿ ಸೇವೆ ಮಾಡಲು ಖುಷಿಯಾಗುತ್ತದೆ. ಕೆಲಸ ಮುಗಿಸಿ ಮನೆಗೆ ಹೋಗುವಾಗ ನನಗೂ ಭಯವಾಗುತ್ತದೆ, ಆದರೆ ನಾವು ಎಲ್ಲ ರೀತಿಯ ಮುಂಜಾಗೃತಾ ಕ್ರಮಗಳನ್ನು ಪಾಲಿಸುತ್ತಿದ್ದೇವೆ. ಕೊರೊನಾದಿಂದ ಸುರಕ್ಷಿತವಾಗಿರಲು ನಾವೆಲ್ಲರೂ ವೈಯಕ್ತಿಕ ಶಿಸ್ತು ಕ್ರಮಗಳನ್ನು ಪಾಲಿಸಬೇಕು,” ಎಂದು ಅವರು ತಿಳಿಸಿದರು.


ಲಾಕ್‌ಡೌನ್ ಜಾರಿಯಿದ್ದಾಗ ಮತ್ತು ಅದರ ನಂತರವೂ, ರಾಜ್ಯ ಸಾರಿಗೆ ನಿಗಮದಿಂದ ಅಗತ್ಯವಾದ ಅನುಮತಿಯನ್ನು ಪಡೆದ ನಂತರ ನಾಗರಿಕರ ಪ್ರಯಣಕ್ಕೆ ನೆರವಾಗಲು ಸೀಮಾ ಮುಂದಾದರು. ಹಲವು ಸ್ಥಳೀಯರು ಮತ್ತು ದೈನಂದಿನ ಪ್ರಯಾಣಿಕರು ಅವರ ಧೈರ್ಯ ಮತ್ತು ಪುರುಷ ಪ್ರಾಬಲ್ಯದ ವೃತ್ತಿಯಲ್ಲಿ ಕೆಲಸ ಮಾಡುವ ನಿರ್ಧಾರವನ್ನು ಮೆಚ್ಚಿ, ಗುರುತಿಸಿದ್ದಾರೆ.


ಮೀನಾ ಅಧಿಕಾರಿ ಎಂಬ ಹಿರಿಯ ಪ್ರಯಾಣಿಕರೊಬ್ಬರು ಅವರ ಬಗ್ಗೆ ಹೀಗೆಂದಿದ್ದಾರೆ,

“ಕೋವಿಡ್‌-19 ನಡುವೆ ಯುವತಿಯೊಬ್ಬಳು ಜನರಿಗೆ ಸಹಾಯ ಮಾಡುತ್ತಿರುವುದನ್ನು ನೋಡಿ ನನಗೆ ಬಹಳ ಹೆಮ್ಮೆಯೆನಿಸುತ್ತದೆ. ಅವಳು ಧೈರ್ಯವಂತೆ ಮತ್ತು ಈ ಭಾಗದ ಏಕೈಕ ಮಹಿಳಾ ಚಾಲಕಿ. ನಾನು ಇತರಿರಿಗೂ ಮುಂದೆ ಬಂದು ಜನರಿಗೆ ಸಹಾಯ ಮಾಡಿ, ಹಿಮಾಚಲ ಪ್ರದೇಶಕ್ಕೆ ಹೆಮ್ಮೆ ತರಬೇಕು ಎಂದು ಕೇಳಿಕೊಳ್ಳುತ್ತೇನೆ.”