ಸಂಬಲುಪುರ ಮೀಸಲು ಅರಣ್ಯ ಪ್ರದೇಶವನ್ನು ಕಟ್ಟಿಗೆ ಮಾಫಿಯಾದಿಂದ ಕಾಪಾಡುತ್ತಿರುವ ಮಹಿಳೆಯರು

ವನ ಸುರಖ್ಯ ಸಮಿತಿಯ ಸದಸ್ಯರು ಕಟ್ಟಿಗೆ ಮಾಫಿಯಾ ಮತ್ತು ಕಳ್ಳ ಬೇಟೆಗಾರರಿಂದ ಕಾಡನ್ನು ರಕ್ಷಿಸಲು ಲಂಡಾಕೋಟ್‌ ಮೀಸಲು ಅರಣ್ಯ ಪ್ರದೇಶದಲ್ಲಿ ಕಾವಲಿಗೆ ನಿಂತಿದ್ದಾರೆ.

ಸಂಬಲುಪುರ ಮೀಸಲು ಅರಣ್ಯ ಪ್ರದೇಶವನ್ನು ಕಟ್ಟಿಗೆ ಮಾಫಿಯಾದಿಂದ ಕಾಪಾಡುತ್ತಿರುವ ಮಹಿಳೆಯರು

Thursday November 26, 2020,

2 min Read

ಸಂಪೂನ್ಮಲಗಳಿಂದ ತುಂಬಿರುವ ನೈಸರ್ಗಿಕ ಕಾಡುಗಳು ವಿಶ್ವದೆಲ್ಲೆಡೆ ಎಷ್ಟೊ ಬುಡಕಟ್ಟು ಜನಾಂಗಗಳಿಗೆ ಆಸರೆ ನೀಡಿವೆ. ಚಿಪ್ಕೊ ಅಥವಾ ಅಪ್ಪಿಕೊ ಚಳುವಳಿಯ ಮೂಲಕ ಜನರು ಕಾಡನ್ನು ರಕ್ಷಿಸುವಲ್ಲಿ ಮುಂದಾಗಿರುವ ಹಲವು ನಿದರ್ಶನಗಳು ನಮ್ಮ ಮುಂದಿವೆ.


ಒಡಿಶಾದ ಸಂಬಲಪುರ ಜಿಲ್ಲೆಯ ಗರಿಖಮನ ಹಳ್ಳಿಯಲ್ಲಿಯೂ ಇದೇ ರೀತಿಯ ಚಳುವಳಿಯೊಂದು ರೂಪ ಪಡೆದುಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಅಲ್ಲಿ ಮಹಿಳೆಯರ ತಂಡವೊಂದು ಕಟ್ಟಿಗೆ ಮಾಫಿಯಾ ಮತ್ತು ಕಳ್ಳ ಬೇಟೆಗಾರರಿಂದ ಕಾಡನ್ನು ರಕ್ಷಿಸಲು ಲಂಡಾಕೋಟ್‌ ಮೀಸಲು ಅರಣ್ಯ ಪ್ರದೇಶದಲ್ಲಿ ಕಾವಲಿಗೆ ನಿಂತಿದೆ.


ಅಮಾ ಜಂಗಲ್‌ ಯೋಜನೆಯಡಿ ರಾಜ್ಯ ಸರ್ಕಾರ ಗರಿಖಮನ್‌ ಹಳ್ಳಿಯ 15 ಹೆಂಗಸರನ್ನು ಆರಿಸಿ ವನ ಸುರಖ್ಯ ಸಮಿತಿ(ವಿಎಸ್‌ಎಸ್‌) ಅನ್ನು ನಿರ್ಮಿಸಿದೆ, ಇದರ ಮುಖ್ಯ ಗುರಿ 50 ಹೆಕ್ಟೆರ್‌ ಅರಣ್ಯ ಪ್ರದೇಶವನ್ನು ರಕ್ಷಿಸುವುದು ಮತ್ತು ಪುನಃಸ್ಥಾಪಿಸುವುದಾಗಿದೆ. ಮಹಿಳೆಯರ ಈ ಕಾವಲು ಸೇವೆಗೆ ಸರ್ಕಾರ ದಿನಕ್ಕೆ 298 ರೂ. ವೇತನ ನೀಡುತ್ತದೆ.


“ಹರಿಖಮನ್‌ನಲ್ಲಿ 32 ಕುಟುಂಬಗಳಿದ್ದು, ಹಳ್ಳಿಯ ಗಂಡಸರು ಜಿಲ್ಲೆಯ ಹೊರಗೆ ದುಡಿಯಲು ವಲಸೆ ಹೋಗುತ್ತಾರೆ ಅಥವಾ ಕೃಷಿ ಮಾಡುತ್ತಾರೆ. ಬೆಟ್ಟ ಗುಡ್ಡದ ಪ್ರದೇಶದಲ್ಲಿ ಹಳ್ಳಿ ಇರುವುದರಿಂದ ನಿಯಮಿತವಾಗಿ ಗಸ್ತು ತಿರುಗಲಾಗುವುದಿಲ್ಲ. ಈ ಕಾರಣಗಳಿಂದ ಕಳ್ಳ ಬೇಟೆಗಾರರಿಗೆ ಮತ್ತು ಕಟ್ಟಿಗೆ ಮಾಫಿಯಾದವರಿಗೆ ಕಾಡಲ್ಲಿ ನುಸುಳುವುದು ಸುಲಭ. ಅರಣ್ಯವನ್ನು ರಕ್ಷಿಸುವುದು ನಮಗೆ ಮುಖ್ಯವಾಗಿದ್ದು, ಅದು ಸರ್ಕಾರದೊಂದಿಗೆ ಸೇರಿ ಕೆಲಸ ಮಾಡುವಂತೆ ಮಾಡಿದೆ,” ಎಂದು ಗರಿಖಮನ್‌ ವಿಎಸ್‌ಎಸ್‌ನ ಉಪಾಧ್ಯಕ್ಷರಾದ ಸರೋಜಿನಿ ಸಮರ್ಥಾ ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ಹೇಳಿದರು.

ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ವಿಎಸ್‌ಎಸ್‌ನ ಮಹಿಳೆಯರು (ಚಿತ್ರಕೃಪೆ: ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌)

ಈ ಮಹಿಳೆಯರು ಥೆಂಗಪಲ್ಲಿ ಎಂಬ ಗಸ್ತು ಸಂಪ್ರದಾಯವನ್ನು ಆರಂಭಿಸಿದ್ದು, ಅಲ್ಲಿ ಇಬ್ಬರು-ಮೂವರು ಕೈಯಲ್ಲಿ ಲಾಠಿ ಹಿಡಿದುಕೊಂಡು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಗಸ್ತು ತಿರುಗುತ್ತಾರೆ. ಕಳೆದ 23 ತಿಂಗಳಿಂದ ಈ ಸಂಪ್ರದಾಯ ಯಾವುದೇ ಅಡೆತಡೆ ಇಲ್ಲದೆ ನಡೆದುಕೊಂಡು ಬಂದಿದೆ ಎನ್ನುತ್ತಾರೆ ಸದಸ್ಯರು.


ಲಂಡಾಕೋಟ್‌ ರಕ್ಷಕರ ಅನುಮತಿಯ ಹೊರತು ಯಾರಿಗೂ ಕಾಡಿನ ಒಳಗೆ ಪ್ರವೇಶವಿಲ್ಲ. ಕಾಡ್ಗಿಚ್ಚು ಮತ್ತು ಗಿಡಗಳು ಬೀಳುವುದು ಹಿಂದೆ ಸಾಮಾನ್ಯವಾಗಿತ್ತು. ಬರಡಾಗಿದ್ದ ಕಾಡಿನ ಪ್ರದೇಶದಲ್ಲೂ ಈಗ ಹಸಿರು ಚಿಗುರಿ ಕಂಗೊಳಿಸುತ್ತಿದೆ.


ಮಹಿಳೆಯರು ನಿಯಮಿತವಾಗಿ ಒಣಗಿದ ಎಲೆಗಳನ್ನು ಕಾಡಿನಿಂದ ಸ್ವಚ್ಛಗೊಳಿಸುವದರಿಂದ ಕಾಡ್ಗಿಚ್ಚು ಹೊತ್ತಿಕೊಳ್ಳುವುದಿಲ್ಲ ಎನ್ನುತ್ತಾರೆ ಗಿರಿಶ್ಚಂದ್ರಪುರದ ಶ್ರೇಣಿ ಅಧಿಕಾರಿ ಸುಸಂತಾ ಬಂಧಾ. “ಕಳೆದ ವರ್ಷದಿಂದ ಅರಣ್ಯದಲ್ಲಿ ಯಾವುದೇ ರೀತಿಯ ಕಾಡ್ಗಿಚ್ಚು ಕಾಣಿಸಿಕೊಂಡಿಲ್ಲ,” ಎಂದು ಅವರು ಇಂಡಿಯಾ ಟೈಮ್ಸ್‌ಗೆ ಹೇಳಿದರು.


ಈ ಯೋಜನೆಯಿಂದ ಮಹಿಳೆಯರಿಗೂ ಮತ್ತು ಅರಣ್ಯ ಇಲಾಖೆಗೂ ಉಪಯೋಗವಾಗಿದೆ.