ನೀರಿನ ಸಮಸ್ಯೆ ಬಗೆಹರಿಸಲು ಬೆಟ್ಟ ಕಡಿದ ಮಧ್ಯ ಪ್ರದೇಶದ ಮಹಿಳೆಯರು

ಮಧ್ಯಪ್ರದೇಶದ ಅಂಗ್ರೋಥ ಗ್ರಾಮದ ಸುಮಾರು 250 ಮಹಿಳೆಯರು ಅರ್ಧ ಕಿಲೋಮೀಟರ್ ಬೆಟ್ಟ ಕಡಿದು ಹಳ್ಳಿಗೆ ನೀರು ಹರಿಸಿದ್ದಾರೆ.

ನೀರಿನ ಸಮಸ್ಯೆ ಬಗೆಹರಿಸಲು ಬೆಟ್ಟ ಕಡಿದ ಮಧ್ಯ ಪ್ರದೇಶದ ಮಹಿಳೆಯರು

Tuesday September 29, 2020,

1 min Read

ಜಲಸಂಪನ್ಮೂಲಗಳ ಪುನರುಜ್ಜೀವನಕ್ಕಾಗಿ ಕೈಗೊಂಡ ಸರ್ಕಾರದ ಹಲವು ಕ್ರಮಗಳ ಹೊರತಾಗಿಯೂ ಮಧ್ಯಪ್ರದೇಶ ಇನ್ನೂ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ.


ಮಧ್ಯಪ್ರದೇಶದ ಅಂಗ್ರೋಥಾ ಹಳ್ಳಿಯ ಜನ ಬಹಳ ಕಾಲದಿಂದ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯನ್ನು ನಿವಾರಿಸಲು ಹಳ್ಳಿಯ 250 ಮಹಿಳೆಯರು ಮುಂದಾಗಿ 18 ತಿಂಗಳುಗಳ ಕಾಲ ಬೆಟ್ಟ ಕಡಿದು ನೀರನ್ನು ಹಳ್ಳಿಗೆ ಹರಿಸಿದ್ದಾರೆ.


ಈ ಉಪಕ್ರಮದಲ್ಲಿ ಒಬ್ಬರಾದ ಬಬಿತಾ ರಜಪುತ್‌ ಎಎನ್‌ಐ ಜತೆ ಮಾತನಾಡುತ್ತಾ, “ನಾವು ಕಳೆದ 18 ತಿಂಗಳಿಂದ ನೀರನ್ನು ಹಳ್ಳಿಗೆ ಹರಿಸಲು ಕೆಲಸ ಮಾಡುತ್ತಿದ್ದೇವೆ, ಏಕೆಂದರೆ ನೀರು ಕಾಡಿಗೆ ಹರಿದು ನಿರುಪಯುಕ್ತವಾಗುತ್ತಿತ್ತು,” ಎಂದರು.


ಹಳ್ಳಿಯ ಮಹಿಳೆಯರೆ ಒಂದು ಗುಂಪನ್ನು ರಚಿಸಿ, ಅರ್ಧ ಕಿ.ಮೀ. ಬೆಟ್ಟವನ್ನು ಕಡಿಯಲು ನಿರ್ಧರಿಸಿ ಹಳ್ಳಿಗೆ ನೀರನ್ನು ಹರಿಸಲು ಮುಂದಾದರು ಎಂದರು ಅವರು.

ಅಗ್ರೋಥಾ ಹಳ್ಳಿಯ ಮಹಿಳೆಯರು ಬೆಟ್ಟ ಕಡಿಯುತ್ತಿರುವುದು (ಚಿತ್ರಕೃಪೆ: ಎಎನ್‌ಐ/ಟ್ವಿಟ್ಟರ್‌)


“ಸುಮಾರು 250 ಮಹಿಳೆಯರು ಸೇರಿ ನೀರನ್ನು ಹಳ್ಳಿಗೆ ಹರಿಸಿದೆವು. ಕೆಲಸ ಪೂರ್ತಿಗೊಳ್ಳಲು 18 ತಿಂಗಳು ಹಿಡಿಯಿತು,” ಎಂದು ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ವಿವಿತಾಬಾಯಿ ಆದಿವಾಸಿ ಹೇಳಿದರು.


ಗ್ರಾಮದ ನೀರಿನ ಬಿಕ್ಕಟ್ಟಿಗೆ ಸಹಾಯ ಮಾಡುವುದರ ಜೊತೆಗೆ ಕೃಷಿ ಚಟುವಟಿಕೆಗಳಿಗೆ ಸಹಾಯ ಮಾಡುವುದು ಮತ್ತು ಜಾನುವಾರುಗಳಿಗೆ ಸಹಾಯ ಮಾಡುವುದು ಈ ಚಟುವಟಿಕೆಯ ಪ್ರಾಥಮಿಕ ಉದ್ದೇಶವಾಗಿತ್ತು.


ಇನ್ನೊಬ್ಬ ಗ್ರಾಮಸ್ಥ ರಾಮ್ ರತನ್ ಸಿಂಗ್ ರಜಪೂತ್, “ಕಳೆದ 18 ತಿಂಗಳುಗಳಿಂದ ಗ್ರಾಮದ ಮಹಿಳೆಯರು ಅಂಗ್ರೊಥಾಗೆ ನೀರು ಹರಿಸುವತ್ತ ಕೆಲಸ ಮಾಡಿದ್ದಾರೆ. ಅವರು ಬೆಟ್ಟವನ್ನು ಕಡಿದು ಜಲಮಾರ್ಗವನ್ನು ಮಾಡಿದ್ದಾರೆ. ನೀರಿನ ಹರಿವಿನ ಹಾದಿಯಲ್ಲಿರುವ ಹಲವಾರು ಕಲ್ಲುಗಳನ್ನು ತೆಗೆದುಹಾಕಿದ್ದಾರೆ,” ಬ್ಯೂಸಿನೆಸ್‌ ವರ್ಲ್ಡ್‌ಗೆ ಹೇಳಿದರು.


ಬಿಹಾರದ 70 ವರ್ಷದ ಲೌಂಗಿ ಭೂಯಾನ್‌ 30 ವರ್ಷ ವ್ಯಯಿಸಿ 3 ಕಿ.ಮೀ. ಉದ್ದದ ಕಾಲುವೆ ತೋಡಿದ್ದರು. ಇತ್ತೀಚೆಗೆ ಆನಂದ ಮಹೀಂದ್ರ ಲೌಂಗಿ ಅವರಿಗೆ ಟ್ರಾಕ್ಟರ್‌ ಅನ್ನು ಉಡುಗೊರೆಯಾಗಿ ನೀಡಿದ್ದರು.