ತನ್ನೂರಿನ ಕೆರೆಯನ್ನು ಪುನರುಜ್ಜೀವನಗೊಳಿಸಲು ದುಬೈನ ಕೆಲಸ ತೊರೆದ ಯುವಕ

ಎಂದಿಗೂ ಬಗೆಹರಿಯುವಂತೆ ಕಾಣದ ಕಾವೇರಿ ಗಲಾಟೆ ನಡೆಯುತ್ತಲೇ ಇರುತ್ತದೆ. ಅಂತಹದರಲ್ಲಿ ಕಾವೇರಿ ಕೊಳ್ಳಕ್ಕೆ ಹರಿದ ನೀರು ಸರಿಯಾಗಿ ಸಂರಕ್ಷಣೆಗೊಳುತ್ತಿಲ್ಲ ಎಂಬುದನ್ನು ಮನಗಂಡ ನಿಮಲ್‌ ರಾಘವನ್ ಸುಮ್ಮನೆ ಹರಿದು ದಂಡವಾಗುತ್ತಿದ್ದ 150 ಟಿಎಂಸಿ ನೀರನ್ನು ಹಿಡಿದಿಡುವ ಸಾಮರ್ಥ್ಯಯುಳ್ಳ ತಮ್ಮೂರಿನ ಕೆರೆಯನ್ನು ಪುನರುಜ್ಜೀವನಗೊಳಿಸಿದ್ದಾರೆ.

ತನ್ನೂರಿನ ಕೆರೆಯನ್ನು ಪುನರುಜ್ಜೀವನಗೊಳಿಸಲು ದುಬೈನ ಕೆಲಸ ತೊರೆದ ಯುವಕ

Wednesday October 23, 2019,

2 min Read

ಅದು 2018 ರ ಡಿಸೆಂಬರ್‌ ತಿಂಗಳು, ಇಡೀ ತಮಿಳುನಾಡು, ದಕ್ಷಿಣ ಕರ್ನಾಟಕದ ಹಲವು ಭಾಗಗಳು ತತ್ತರಿಸುವಂತೆ ಗಾಜಾ ಚಂಡಮಾರುತ ದಾಳಿಯಿಟ್ಟಿತ್ತು. ಗಾಳಿ ಸಹಿತ ಭಾರೀ ಮಳೆಗೆ ಕೃಷಿ ಜಮೀನು ಕೊಚ್ಚಿ ಹೋಗಿದ್ದವು. ಅದೇ ಸಮಯದಲ್ಲಿ ದುಬೈನ ಪ್ರಮುಖ ಬ್ಯಾಂಕೊಂದರಲ್ಲಿ ಸಾಫ್ಟ್‌ ವೇರ್ ಡೆವಲಪರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ 31ರ ನಿಮಲ್‌ ರಾಘವನ್‌ ತಮ್ಮ ಹುಟ್ಟೂರಾದ ಪುಡುಕೋಟೈಗೆ ಬರುತ್ತಾರೆ. ಅಲ್ಲಿ ಹಾಳಾದ ಕೃಷಿ ಭೂಮಿಯನ್ನು ನೋಡಿ, ಅದನ್ನ ಸರಿಪಡಿಸಲಾರದೆ ಉದ್ಯೋಗವನ್ನರಸಿ ನಗರಗಳಿಗೆ ವಲಸೆ ಹೋಗುತ್ತಿದ್ದ ರೈತರನ್ನು ಕಾಣುತ್ತಾರೆ. ಅವನ್ನೆಲ್ಲಾ ನೋಡಿ ಆ ಯುವಕನಿಗೆ ಏನನ್ನಿಸಿತ್ತೋ ಏನೋ ಊರಿಗೆ ಬಂದ ಅದೇ ರಾತ್ರಿ ತಮ್ಮ ಕೆಲಸಕ್ಕೆ ರಾಜಿನಾಮೆ ನೀಡುತ್ತಾರೆ! ಅವರ ಮುಂದಿನ ಗುರಿ ಇದ್ದದ್ದು ತಮ್ಮೂರಿನ ಪೆರುವುರಾನಿ ಎಂಬ ಬೃಹತ್‌ ಕೆರೆಯನ್ನು ಪುನರುಜ್ಜೀವನಗೊಳಿಸಿ, ಅಂತರ್ಜಲ ಮಟ್ಟವನ್ನು ಹೆಚ್ಚಿಸಿ ರೈತರಿಗೆ ಮತ್ತೆ ತಮ್ಮ ನೆಲೆ ಕಂಡುಕೊಳ್ಳುವುದಕ್ಕೆ ಸಹಾಯ ಮಾಡುವುದೇ ಆಗಿತ್ತು.


Q

ನಿಮಲ್‌ ರಾಘವನ್‌ (ಚಿತ್ರಕೃಪೆ :ಮಿಲಾಪ್)


“ನಮಗೆ ನೀರು ಬೇಕೆಂದರೆ ಒಂದೋ ಪಕ್ಕದ ರಾಜ್ಯವನ್ನ ಆಶ್ರಯಿಸಬೇಕು ಅಥವಾ ದೇವರಮೊರೆ ಹೋಗಬೇಕು. ನಮಗೆ ಅಗತ್ಯವಿರುವುದರಲ್ಲಿ ಕೇವಲ 50-60% ಮಾತ್ರ ಸಿಗುತ್ತದೆ. ನೀರನ್ನು ಶೇಖರಿಸಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಅದರಲ್ಲೂ ನಾವು 150 ಟಿಎಂಸಿ ನೀರನ್ನು ನದಿಮುಖಜ ಭೂವಲಯದಲ್ಲೇ ಕಳೆದುಕೊಳ್ಳುತ್ತೇವೆ. ಕೈಫಾ ಪರಿಕಲ್ಪನೆಯ ಮೂಲಕ ನಾವು ಸ್ಥಳೀಯ ನೀರಿನ ಮೂಲಗಳನ್ನ, ಕೆರೆ, ಚೆಕ್‌ ಡ್ಯಾಮ್‌ಗಳನ್ನ ಪುನರುಜ್ಜೀವನಗೊಳಿಸುವ ಕೆಲಸ ಮಾಡುತ್ತಿದ್ದೇವೆ” ಎನ್ನುತ್ತಾರೆ ನಿಮಲ್‌ ರಾಘವನ್‌, ವರದಿ ಮಿಲಾಪ್.


ತಮ್ಮ ಸ್ನೇಹಿತರೊಂದಿಗೆ ಒಂದು ತಂಡವನ್ನು ಕಟ್ಟಿಕೊಂಡು ಸುತ್ತಲಿನ ಹಳ್ಳಿಗಳಿಗೆ ಭೇಟಿಯಿತ್ತ ನಿಮಲ್‌, ಅಲ್ಲಿನ ಜನರೊಂದಿಗೆ ಸುಸಜ್ಜಿತವಾಗಿ, ಸುಸ್ಥಿರವಾಗಿ ಹೇಗೆ ಜಲ ಸಂರಕ್ಷಣೆ ಮಾಡಬಹುದು ಎಂಬುದನ್ನು ಚರ್ಚಿಸಿದರು. ಎಲ್ಲರೂ ಸೇರಿ ಕೆಎಐಏಫ್‌ಎ – ಕಾಡೈಮಾಡೈ ಎರಿಯಾ ಇಂಟೆರ್ಗ್ರೇಟೆಡ್‌ ಫಾರ್ಮರ್ಸ್‌ ಅಸೋಷಿಯೇಷನ್‌ ಅನ್ನು ಸ್ಥಾಪಿಸಿದರು.


ಕೆರೆ ಹೂಳೆತ್ತುತಿರಿವುದು (ಚಿತ್ರಕೃಪೆ : ದಿ ಬೆಟರ್‌ ಇಂಡಿಯಾ)




ತಾಂಜಾವೂರಿನಿಂದ 70 ಕಿಮಿ ದಕ್ಷಿಣದಲ್ಲಿರುವ ಪೆರುವುರಾನಿ ಕೆರೆಯು 564 ಎಕರೆಯಷ್ಟಿದ್ದು, ಸುಮಾರು 6000 ಎಕರೆ ಕೃಷಿ ಭೂಮಿಗೆ ನೀರುಣಿಸುತ್ತದೆ. ನಿಮಲ್‌ ಹೇಳುವ ಪ್ರಕಾರ ಪ್ರಾರಂಭಿಕ ಬಂಡವಾಳ ಕೇವಲ 20,000 ವಿತ್ತು ನಂತರ ಯಂತ್ರೋಪಕರಣಗಳಿಗೆ ಭರಿಸಬೇಕಾದ ವೆಚ್ಚವೇ ದಿನವೊಂದಕ್ಕೆ ಸುಮಾರು 40,000 ದಿಂದ 60,000 ರೂಪಾಯಿಗಳವರೆಗೆ ತಗಲುತ್ತಿತ್ತು.


“ಮೊದಮೊದಲು ಹಲವರು ನಮ್ಮನ್ನು ಧೃತಿಗೆಡಿಸಲು ಪ್ರಯತ್ನಿಸಿದರು, ಸಮಯ ಕಳೆದಂತೆ ಯುವಕರು ಮೈಮುರಿಯುವಂತೆ ಕೆಲಸ ಮಾಡಿ, ತಮ್ಮ ಗುರಿಯೆಡೆಗೆ ತಲುಪಿದರು. ಪೊಂಗಡು ಮತ್ತು ಪಝಾಯದ ಹಳ್ಳಿಗರು ಮನೆಯಿಂದ ಮನೆಗೆ ಹೋಗಿ 2 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದರು. ಅವರ ಈ ಕಾರ್ಯ ಮೆಚ್ಚುವಂತದ್ದು, ಇದು ನಮ್ಮ ಕಂಗಳಲ್ಲಿ ನೀರು ತರಿಸಿತು” ಎನ್ನುತ್ತಾರೆ ನಿಮಲ್, ವರದಿ ದಿ ಬೆಟರ್‌ ಇಂಡಿಯಾ.


ಹಳ್ಳಿಗರಿಗೆ ಕೆರೆ ಪುನರುಜ್ಜೀವನ ಕಾರ್ಯವು ಉದ್ಯೋಗವನ್ನು ಒದಗಿಸಿರುವುದು (ಚಿತ್ರಕೃಪೆ : ದಿ ಬೆಟರ್‌ ಇಂಡಿಯಾ)




ಪ್ರಭಾವ

ಕೇವಲ 104 ದಿನಗಳಲ್ಲಿ ನಿಮಲ್‌ ಹಾಗೂ ಕೈಫಾ 250 ಎಕರೆ ಹೂಳೆತ್ತಿಸಿ, ಒಂದು ಕಡೆ 4 ಕಿಮೀ ಹಾಗೂ ಮತ್ತೊಂದು ಭಾಗದಲ್ಲಿ 12.5 ಕಿಮೀ ಉದ್ದದ 4-5 ಮೀಟರ್‌ ಎತ್ತರದ ಏರಿ ಹಾಕಿಸಿದರು. ಕೆರೆಯ ಮಧ್ಯದಲ್ಲಿ ಮೂರು ದ್ವೀಪಗಳನ್ನು ನಿರ್ಮಿಸಿರುವ ಅವರು ಸುಮಾರು 25,000 ಗಿಡಗಳನ್ನು ನೆಟ್ಟಿದ್ದಾರೆ.


ಇದರ ಬಗ್ಗೆ ದಿ ಬೆಟರ್‌ ಇಂಡಿಯಾ ಜೊತೆ ಮಾತನಾಡುತ್ತಾ ನಿಮಲ್‌,


“ಈಗಾಗಲೆ ಕೆರೆ 70% ನೀರನ್ನು ಶೇಖರಿಸಿಯಾಗಿದೆ. ಅಂದರೆ ದಂಡವಾಗುತ್ತಿದ್ದ 150 ಟಿಎಂಸಿ ನೀರನ್ನು ನಾವು ಇದರಲ್ಲಿ ಶೇಖರಿಸಿದರೆ ನೀರಿನ ಸದುಪಯೋಗವಾಗುತ್ತದೆ. ಇದರ ಸಂಪೂರ್ಣ ಗೆಲುವು ಎರಡು ದಶಕಗಳಿಂದ ಇದಕ್ಕಾಗಿ ಕಾದಿದ್ದ ಸುತಲಿನ ಹಳ್ಳಿಯ ಜನರದ್ದು.” ಎಂದರು


ಪೆರುರಾನಿ ಕೆರೆ ಪುನರುಜ್ಜೀವನಗೊಂಡ ನಂತರ (ಚಿತ್ರಕೃಪೆ : ದಿ ಬೆಟರ್‌ ಇಂಡಿಯಾ)


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.